ಊ ಲಾ ಲಾ ಲಾ ಲೇ ಓ...ಇನ್ಮುಂದೆ ಕಿಂಗ್‌ಫಿಶರ್ ಸ್ವತ್ತು: ಐಕಾನಿಕ್ ಜಿಂಗಲ್‌ಗೆ ಸಿಕ್ಕಿತು ಕಾನೂನು ಮಾನ್ಯತೆ
x

ಕಿಂಗ್‌ಫಿಶರ್ ಬ್ರ್ಯಾಂಡ್‌ನ ಅತ್ಯಂತ ಜನಪ್ರಿಯ 'ಊ ಲಾ ಲಾ ಲಾ ಲೇ ಓ' ಮಧುರ ಧ್ವನಿಗೆ ಭಾರತೀಯ ಟ್ರೇಡ್ ಮಾರ್ಕ್ಸ್ ರಿಜಿಸ್ಟ್ರಿಯಿಂದ ಅಧಿಕೃತ 'ಸೌಂಡ್ ಮಾರ್ಕ್' ನೋಂದಣಿ ಪಡೆದುಕೊಂಡಿದೆ.

ಊ ಲಾ ಲಾ ಲಾ ಲೇ ಓ...ಇನ್ಮುಂದೆ ಕಿಂಗ್‌ಫಿಶರ್ ಸ್ವತ್ತು: ಐಕಾನಿಕ್ ಜಿಂಗಲ್‌ಗೆ ಸಿಕ್ಕಿತು ಕಾನೂನು ಮಾನ್ಯತೆ

ಯುನೈಟೆಡ್ ಬ್ರೂವರೀಸ್ ಲಿಮಿಟೆಡ್ , ತನ್ನ ಕಿಂಗ್‌ಫಿಶರ್ ಬ್ರ್ಯಾಂಡ್‌ನ ಅತ್ಯಂತ ಜನಪ್ರಿಯ 'ಊ ಲಾ ಲಾ ಲಾ ಲೇ ಓ' ಮಧುರ ಧ್ವನಿಗೆ ಭಾರತೀಯ ಟ್ರೇಡ್ ಮಾರ್ಕ್ಸ್ ರಿಜಿಸ್ಟ್ರಿಯಿಂದ ಅಧಿಕೃತ 'ಸೌಂಡ್ ಮಾರ್ಕ್' ನೋಂದಣಿ ಪಡೆದುಕೊಂಡಿದೆ.


Click the Play button to hear this message in audio format

ಯುನೈಟೆಡ್ ಬ್ರೂವರೀಸ್ ಲಿಮಿಟೆಡ್ (UBL) ತನ್ನ ಕಿಂಗ್‌ಫಿಶರ್‌ ಬ್ರೂವರೀಸ್‌ನೊಂದಿಗೆ ಗುರುತಿಸಿಕೊಂಡಿರುವ ವಿಶ್ವಪ್ರಸಿದ್ಧ 'ಊ ಲಾ ಲಾ ಲಾ ಲೇ ಓ' ಜಿಂಗಲ್‌ಗಳ ಅಧಿಕೃತವಾಗಿ ಸೌಂಡ್ ಮಾರ್ಕ್ ನೋಂದಣಿಯನ್ನು ಫೆಬ್ರವರಿ 5 ರಂದು ತನ್ನದಾಗಿಸಿಕೊಂಡಿದೆ. ಈ ಮೂಲಕ ಈ ಐಕಾನಿಕ್ ಧ್ವನಿಗೆ ಬೌದ್ಧಿಕ ಆಸ್ತಿ ಹಕ್ಕಿನ ರಕ್ಷಣೆ ದೊರೆತಂತಾಗಿದೆ.

ಟ್ರೇಡ್ ಮಾರ್ಕ್ಸ್ ರಿಜಿಸ್ಟ್ರಿಯು ಈ ಸೌಂಡ್ ಮಾರ್ಕ್‌ ನೋಂದಣಿ ಪ್ರಮಾಣಪತ್ರವನ್ನು ನೀಡಿದ್ದು, ಇದು ಜನವರಿ 31ರಿಂದಲೇ ಜಾರಿಗೆ ಬಂದಿದೆ. ಫೆಬ್ರವರಿ 5ರಂದು ಈ ಪ್ರಮಾಣಪತ್ರಕ್ಕೆ ಅಧಿಕೃತ ಮುದ್ರೆ ಬಿದ್ದಿದ್ದು, ಈ ನೋಂದಣಿಯು ಮುಂದಿನ ಹತ್ತು ವರ್ಷಗಳವರೆಗೆ ಮಾನ್ಯತೆ ಹೊಂದಿರುತ್ತದೆ ಮತ್ತು ಆನಂತರ ನವೀಕರಿಸಬಹುದಾಗಿದೆ. ಸೌಂಡ್ ಮಾರ್ಕ್ ಎಂಬುದು ಸಾಂಪ್ರದಾಯಿಕವಲ್ಲದ ಟ್ರೇಡ್‌ಮಾರ್ಕ್‌ ಆಗಿದ್ದು, ಇದು ಒಂದು ನಿರ್ದಿಷ್ಟ ಧ್ವನಿಯನ್ನು ವಾಣಿಜ್ಯ ಮೂಲದ ಗುರುತಾಗಿ ರಕ್ಷಿಸುತ್ತದೆ. ಭಾರತದಲ್ಲಿ 1999 ರ ಟ್ರೇಡ್ ಮಾರ್ಕ್ಸ್ ಕಾಯ್ದೆ ಮತ್ತು 2017 ರ ನಿಯಮಗಳ ಅಡಿಯಲ್ಲಿ ಧ್ವನಿಗಳನ್ನು ನೋಂದಾಯಿಸಲು ಅವಕಾಶವಿದೆ.

ಈ ಮಧುರ ಜಿಂಗಲ್‌ಅನ್ನು ಕಂಪನಿಯು ಫೆಬ್ರವರಿ 21, 1996 ರಿಂದಲೂ ಸತತವಾಗಿ ಬಳಸುತ್ತಾ ಬಂದಿದೆ ಎಂದು ತಿಳಿಸಿದೆ. ಈ ನೋಂದಣಿಯು ಕ್ಲಾಸ್ 32 ಮತ್ತು 33 ರ ಅಡಿಯಲ್ಲಿ ಬರುವ ಬಿಯರ್, ಆಲ್ಕೊಹಾಲುಯುಕ್ತ ಮತ್ತು ಆಲ್ಕೊಹಾಲ್ ರಹಿತ ಪಾನೀಯಗಳು ಸೇರಿದಂತೆ ವಿವಿಧ ಉತ್ಪನ್ನಗಳಿಗೆ ಅನ್ವಯಿಸುತ್ತದೆ. ಈ ಅರ್ಜಿಯ ಪರಿಶೀಲನೆಯ ಸಮಯದಲ್ಲಿ ಯಾವುದೇ ರೀತಿಯ ಸಾಮ್ಯತೆ ಇರುವ ಇತರ ಧ್ವನಿಗಳು ಕಂಡುಬರದ ಕಾರಣ ರಿಜಿಸ್ಟ್ರಿಯು ಇದಕ್ಕೆ ಅನುಮೋದನೆ ನೀಡಿದೆ. ಈ ಪ್ರಕ್ರಿಯೆಯಲ್ಲಿ ಯುನೈಟೆಡ್ ಬ್ರೂವರೀಸ್ ಪರವಾಗಿ ಎಲ್.ಎಸ್. ದಾವರ್ ಅಂಡ್ ಕೋ ಸಂಸ್ಥೆಯು ಪ್ರಾತಿನಿಧ್ಯ ವಹಿಸಿತ್ತು.

ಭಾರತದಲ್ಲಿ ಈಗಾಗಲೇ ಯಾಹೂ ಯೋಡೆಲ್, ಐಸಿಐಸಿಐ ಬ್ಯಾಂಕ್ ಜಿಂಗಲ್, ನೋಕಿಯಾ ಟ್ಯೂನ್, ಏರ್ಟೆಲ್ ಸಿಗ್ನೇಚರ್ ಟ್ಯೂನ್ ಮತ್ತು ಬ್ರಿಟಾನಿಯಾ ಮ್ಯೂಸಿಕಲ್ ಲೋಗೋಗಳಂತಹ ಆಯ್ದ ಕೆಲವು ಪ್ರಸಿದ್ಧ ಧ್ವನಿಗಳು ಮಾತ್ರ ಇಂತಹ ಸೌಂಡ್ ಮಾರ್ಕ್ ರಕ್ಷಣೆಯನ್ನು ಪಡೆದುಕೊಂಡಿವೆ. ಈಗ ಈ ಸಾಲಿಗೆ ಕಿಂಗ್ಫಿಶರ್ನ ಈ ಜನಪ್ರಿಯ ಮಧುರ ಧ್ವನಿಯೂ ಸೇರ್ಪಡೆಯಾಗಿದೆ.

ಕಿಂಗ್‌ಫಿಶರ್‌ನ ಟ್ಯಾಗ್‌ಲೈನ್‌ನ ಮೂಲ ಯಾವುದು?

ಖ್ಯಾತ ಉದ್ಯಮಿ ವಿಜಯ್ ಮಲ್ಯ ಇತ್ತೀಚೆಗೆ ರಾಜ್ ಶಮಾನಿ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡುವಾಗ, ಕಿಂಗ್‌ಫಿಶರ್‌ ಸಂಸ್ಥೆಯ ಏರಿಳಿತಗಳ ಬಗ್ಗೆ ಹಲವಾರು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದರು. ಈ ಪೈಕಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದ ಕಿಂಗ್‌ಫಿಶರ್‌ ಬ್ರ್ಯಾಂಡ್‌ನ ಐಕಾನಿಕ್ ಜಿಂಗಲ್ ಹಿಂದಿರುವ ಅಸಲಿ ಕಥೆಯನ್ನು ಅವರು ತಿಳಿಸಿದ್ದರು.

90ರ ದಶಕದಲ್ಲಿ ಹುಟ್ಟಿ ಬೆಳೆದ ಪ್ರತಿಯೊಬ್ಬರಿಗೂ ‘ಊ ಲಾ ಲಾ ಲಾ ಲೇ ಲೇ ಓ’ ಎಂಬ ಈ ಹಾಡು ಖಂಡಿತವಾಗಿಯೂ ನೆನಪಿರುತ್ತದೆ. ಅಂದು ಗುನುಗುವಂತೆ ಮಾಡಿದ್ದ ಈ ರಾಗ ಇಂದಿಗೂ ಅಷ್ಟೇ ಜನಪ್ರಿಯವಾಗಿದೆ. ಈ ಜಿಂಗಲ್ ಹುಟ್ಟಿದ್ದು ಹೇಗೆ ಎಂಬ ಪ್ರಶ್ನೆಗೆ ಮಲ್ಯ ಅವರು ಮೊದಲ ಬಾರಿಗೆ ಉತ್ತರ ನೀಡಿದ್ದರು. ಈ ರಾಗದ ಪ್ರೇರಣೆ ಬೇರೆ ಯಾರೂ ಅಲ್ಲ, ಅದು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಎಂಬ ಅಚ್ಚರಿಯ ವಿಷಯವನ್ನು ಅವರು ಬಹಿರಂಗಪಡಿಸಿದ್ದರು.

ಈ ಕುರಿತು ವಿವರಿಸಿದ್ದ ಮಲ್ಯ ಅವರು, 1996ರ ಅವಧಿಯಲ್ಲಿ ಕಿಂಗ್‌ಫಿಶರ್‌ ಲೋಗೋವನ್ನು ಮೊದಲ ಬಾರಿಗೆ ವೆಸ್ಟ್ ಇಂಡೀಸ್ ತಂಡದ ಮೇಲೆ ಪ್ರದರ್ಶಿಸಲು ನಿರ್ಧರಿಸಿದ್ದರು. ವೆಸ್ಟ್ ಇಂಡೀಸ್ ಕ್ರಿಕೆಟಿಗರ ಜೀವನಶೈಲಿ, ಅವರ ಮೋಜು-ಮಸ್ತಿ, ನೃತ್ಯ ಮತ್ತು ಅವರ ವಿಶಿಷ್ಟವಾದ ಸ್ವಾಗ್ ಕಿಂಗ್‌ಫಿಶರ್‌ ಬ್ರ್ಯಾಂಡ್‌ಗೆ ಸರಿಯಾಗಿ ಹೊಂದಿಕೆಯಾಗುತ್ತದೆ ಎಂದು ಅವರು ಭಾವಿಸಿದ್ದರು. ಕೆರಿಬಿಯನ್ ಆಟಗಾರರ ಆ ಸಂಭ್ರಮದ ಮನಸ್ಥಿತಿಯಿಂದ ಪ್ರೇರಿತರಾಗಿ ಈ ವಿಶಿಷ್ಟ ಜಿಂಗಲ್ ಅನ್ನು ಸಿದ್ಧಪಡಿಸಲಾಯಿತು ಎಂದು ಅವರು ಮಾಹಿತಿ ನೀಡಿದ್ದರು. ಅಂದು ಕೇವಲ ಕ್ರಿಕೆಟ್ ಪ್ರಚಾರಕ್ಕಾಗಿ ಸಿದ್ಧವಾದ ಈ ಸಾಲುಗಳು, ಇಂದು ಬ್ರ್ಯಾಂಡ್‌ನ ಅಳಿಯದ ಗುರುತಾಗಿ ಉಳಿದಿವೆ.

Read More
Next Story