
ಬೆಂಗಳೂರು ವಿಮಾನ ನಿಲ್ದಾಣಕ್ಕೆ ಜಾಗತಿಕ ಗರಿ: ಸತತ 4ನೇ ಬಾರಿಗೆ 'ಬೆಸ್ಟ್ ಏರ್‌ಪೋರ್ಟ್ ಅಟ್ ಅರೈವಲ್ಸ್' ಪ್ರಶಸ್ತಿ
ಪ್ರಯಾಣಿಕರ ನೈಜ ಸಮಯದ ಪ್ರತಿಕ್ರಿಯೆ ಹಾಗೂ ವಿಮರ್ಶೆಗಳ ಆಧಾರದ ಮೇಲೆ ACI ಈ ಪ್ರತಿಷ್ಠಿತ ASQ (Airport Service Quality) ಪ್ರಶಸ್ತಿಯನ್ನು ನೀಡುತ್ತದೆ.
ಪ್ರಯಾಣಿಕರಿಗೆ ಒದಗಿಸುತ್ತಿರುವ ಅತ್ಯುತ್ತಮ ಸೇವೆ ಹಾಗೂ ಉತ್ತಮ ಪರಿಸರದಿಂದಾಗಿ ಸದಾ ಗಮನ ಸೆಳೆಯುವ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIA) ಮತ್ತೊಂದು ಪ್ರತಿಷ್ಠಿತ ಜಾಗತಿಕ ಗರಿ ಮುಡಿಗೇರಿಸಿಕೊಂಡಿದೆ.
2025ನೇ ಸಾಲಿನ ಪ್ರತಿಷ್ಠಿತ ಏರ್‌ಪೋರ್ಟ್ ಕೌನ್ಸಿಲ್ ಇಂಟರ್‌ನ್ಯಾಷನಲ್ (ACI) ನೀಡುವ 'ಬೆಸ್ಟ್ ಏರ್‌ಪೋರ್ಟ್ ಅಟ್ ಅರೈವಲ್ಸ್ ಗ್ಲೋಬಲಿ' (Best Airport at Arrivals Globally) ಪ್ರಶಸ್ತಿಗೆ ಕೆಂಪೇಗೌಡ ವಿಮಾನ ನಿಲ್ದಾಣ ಭಾಜನವಾಗಿದೆ. ವಿಶೇಷವೆಂದರೆ, ವಿಮಾನ ನಿಲ್ದಾಣವು ಸತತ ನಾಲ್ಕನೇ ವರ್ಷ ಈ ಪ್ರಶಸ್ತಿಗೆ ಪಾತ್ರವಾಗಿದೆ.
ನೈಜ ಪ್ರತಿಕ್ರಿಯೆ ಆಧಾರಿತ ಪ್ರಶಸ್ತಿ
ಪ್ರಯಾಣಿಕರ ನೈಜ ಸಮಯದ ಪ್ರತಿಕ್ರಿಯೆ ಹಾಗೂ ವಿಮರ್ಶೆಗಳ ಆಧಾರದ ಮೇಲೆ ACI ಈ ಪ್ರತಿಷ್ಠಿತ ASQ (Airport Service Quality) ಪ್ರಶಸ್ತಿಯನ್ನು ನೀಡುತ್ತದೆ. ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ಒದಗಿಸುವ ತ್ವರಿತ ಇಮಿಗ್ರೇಷನ್ ಮತ್ತು ಕಸ್ಟಮ್ಸ್ ತಪಾಸಣೆ, ವೇಗದ ಬ್ಯಾಗೇಜ್ ವಿತರಣೆ, ಹೈ-ಸ್ಪೀಡ್ ವೈ-ಫೈ ಹಾಗೂ ಸುಗಮ ಆಗಮನದ ಅನುಭವವು ಈ ಪ್ರಶಸ್ತಿ ಬರಲು ಪ್ರಮುಖ ಕಾರಣವಾಗಿದೆ. ಭಾರತದ ಎರಡನೇ ಅತಿ ಹೆಚ್ಚು ಜನದಟ್ಟಣೆಯ ವಿಮಾನ ನಿಲ್ದಾಣವಾಗಿರುವ ಇದು, ಪ್ರಯಾಣಿಕರ ಅನುಕೂಲಕ್ಕೆ ನಿರಂತರ ಆದ್ಯತೆ ನೀಡುತ್ತಿದೆ.
ಗಮನ ಸೆಳೆಯುವ 'ಬಯೋಫಿಲಿಕ್' (Biophilic) ವಿನ್ಯಾಸ
ಕೆಂಪೇಗೌಡ ವಿಮಾನ ನಿಲ್ದಾಣದ, ಅದರಲ್ಲೂ ವಿಶೇಷವಾಗಿ ಟರ್ಮಿನಲ್-2ರ ವಿನ್ಯಾಸ ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿದೆ. 'ಟರ್ಮಿನಲ್ ಇನ್ ಎ ಗಾರ್ಡನ್' ಎಂಬ ಪರಿಕಲ್ಪನೆಯಡಿ ನಿರ್ಮಿಸಲಾದ ಈ ವಿಮಾನ ನಿಲ್ದಾಣದಲ್ಲಿ ನೈಸರ್ಗಿಕ ಸೌಂದರ್ಯ ಮತ್ತು ಆಧುನಿಕತೆಯ ಅದ್ಭುತ ಸಂಗಮವನ್ನು ಕಾಣಬಹುದು. ಇಲ್ಲಿರುವ ಬೃಹತ್ ಒಳಾಂಗಣ ವರ್ಟಿಕಲ್ ಗಾರ್ಡನ್‌ಗಳು, ಕೃತಕ ಜಲಪಾತಗಳು, ನೇತಾಡುವ ಸಸ್ಯಗಳ ಅಳವಡಿಕೆ ಹಾಗೂ ಟರ್ಮಿನಲ್ ಮತ್ತು ಎಲಿವೇಟೆಡ್ ರಸ್ತೆಗಳ ಉದ್ದಕ್ಕೂ ಇರುವ ಹಚ್ಚ ಹಸಿರಿನ ವಿನ್ಯಾಸವು ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಬದಲಾಗಿ ಉದ್ಯಾನವನದಲ್ಲಿರುವಂತಹ ಆಹ್ಲಾದಕರ ಅನುಭವ ನೀಡುತ್ತದೆ.
ಬೆಂಗಳೂರು ನಗರ ಕೇಂದ್ರದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ದೇವನಹಳ್ಳಿಯಲ್ಲಿರುವ ಈ ವಿಮಾನ ನಿಲ್ದಾಣ, ತನ್ನ ಪರಿಸರ ಸ್ನೇಹಿ ವಿನ್ಯಾಸ ಮತ್ತು ಪ್ರಯಾಣಿಕರ ಸ್ನೇಹಿ ಸೇವೆಗಳಿಗಾಗಿ ವಿಶ್ವಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದೆ.

