ಯೋಜನೆಯ ಅನುಷ್ಠಾನಕ್ಕಾಗಿ ಬೆಂಗಳೂರಿನಿಂದ ಸುಮಾರು ಎರಡು ಗಂಟೆಗಳ ಪ್ರಯಾಣದ ಅಂತರದಲ್ಲಿರುವ ತುಮಕೂರು, ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ.

Click the Play button to hear this message in audio format

ಎಲೆಕ್ಟ್ರಿಕ್ ವಾಹನ (ಇವಿ) ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಮತ್ತು ರಾಜ್ಯವನ್ನು ಸ್ವಚ್ಛ ಇಂಧನ ವಾಹನಗಳ ತವರು ಎಂದು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಬೆಂಗಳೂರಿನ ಹೊರವಲಯದಲ್ಲಿ ಸುಮಾರು 80 ರಿಂದ 100 ಎಕರೆ ವಿಸ್ತೀರ್ಣದಲ್ಲಿ ಸುಸಜ್ಜಿತ ‘ಇವಿ ಸಿಟಿ’ (EV City) ನಿರ್ಮಿಸಲು ರಾಜ್ಯ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ (ಐಟಿಬಿಟಿ) ಇಲಾಖೆ ಯೋಜನೆ ರೂಪಿಸಿದೆ.

ಈ ಉದ್ದೇಶಿತ ಇವಿ ಸಿಟಿಯು ಎಲೆಕ್ಟ್ರಿಕ್ ವಾಹನಗಳ ಸಂಶೋಧನೆ ಮತ್ತು ಅಭಿವೃದ್ಧಿ (R&D), ಪರೀಕ್ಷೆ, ದೃಢೀಕರಣ (Certification) ಮತ್ತು ಚಾರ್ಜಿಂಗ್ ಮೂಲಸೌಕರ್ಯಗಳನ್ನು ಒಂದೇ ಸೂರಿನಡಿ ಒದಗಿಸುವ ಸಮಗ್ರ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಕೇವಲ ದೊಡ್ಡ ವಾಹನ ತಯಾರಕರಿಗಷ್ಟೇ ಅಲ್ಲದೆ, ಈ ವಲಯದ ಸ್ಟಾರ್ಟಪ್‌ಗಳು ಹಾಗೂ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ (MSMEs) ಅಗತ್ಯವಿರುವ ಎಲ್ಲ ರೀತಿಯ ಬೆಂಬಲ ನೀಡುವುದು ಈ ಯೋಜನೆಯ ಉದ್ದೇಶ. ಆ ಮೂಲಕ ಕ್ಲೀನ್ ಮೊಬಿಲಿಟಿ ಕ್ಷೇತ್ರದಲ್ಲಿ ನಾವೀನ್ಯತೆ ವೇಗಗೊಳಿಸಲು ಸರ್ಕಾರ ನಿರ್ಧರಿಸಿದೆ.

ಹಲವು ಸ್ಥಳಗಳ ಪರಿಶೀಲನೆ

ಯೋಜನೆಯ ಅನುಷ್ಠಾನಕ್ಕಾಗಿ ಬೆಂಗಳೂರಿನಿಂದ ಸುಮಾರು ಎರಡು ಗಂಟೆಗಳ ಪ್ರಯಾಣದ ಅಂತರದಲ್ಲಿರುವ ತುಮಕೂರು, ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಈ ಪೈಕಿ ಒಂದು ಕಡೆ ಇವಿ ಸಿಟಿ ತಲೆ ಎತ್ತಲಿದೆ. ಈಗಾಗಲೇ ರಾಜ್ಯದಲ್ಲಿ ಟೊಯೋಟಾ ಮತ್ತು ಬಾಷ್‌ನಂತಹ ಜಾಗತಿಕ ವಾಹನ ತಯಾರಕಾ ದಿಗ್ಗಜ ಸಂಸ್ಥೆಗಳು ನೆಲೆ ಕಂಡುಕೊಂಡಿವೆ. 2025ರ ಅಂಕಿಅಂಶಗಳ ಪ್ರಕಾರ, ಭಾರತದ ಒಟ್ಟು ಇವಿ ವಾಹನಗಳ ಮಾರಾಟದಲ್ಲಿ ಕರ್ನಾಟಕದ ಪಾಲು ಶೇ.10ಕ್ಕೂ ಹೆಚ್ಚಿದೆ. ರಾಜ್ಯಕ್ಕಿರುವ ಈ ಆಟೋಮೊಬೈಲ್ ಮೇಲುಗೈಯನ್ನು ಸದುಪಯೋಗಪಡಿಸಿಕೊಳ್ಳಲು ಸರ್ಕಾರ ಈ ಹೊಸ ಯೋಜನೆಯನ್ನು ರೂಪಿಸಿದೆ.

2030ರ ವೇಳೆಗೆ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಶೇ.30ರಷ್ಟು ಹೆಚ್ಚಿಸುವ ಭಾರತದ ಗುರಿಗೆ ಪೂರಕವಾಗಿ ಈ ‘ಇವಿ ಸಿಟಿ’ ನಿರ್ಮಾಣವಾಗುತ್ತಿದೆ. ಇದರಿಂದ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದ್ದು, ಹೊಸ ಉದ್ಯಮಿಗಳಿಗೆ ಮಾರುಕಟ್ಟೆ ಪ್ರವೇಶಕ್ಕೆ ಇರುವ ಅಡೆತಡೆಗಳನ್ನು ನಿವಾರಿಸಲು ಇದು ಸಹಕಾರಿಯಾಗಲಿದೆ. ಆದಾಗ್ಯೂ, ಸುಮಾರು 100 ಎಕರೆ ವಿಸ್ತೀರ್ಣದ ಈ ಯೋಜನೆಯನ್ನು ‘ಸಿಟಿ’ ಎಂದು ಕರೆಯಬೇಕೇ ಅಥವಾ ಇದೊಂದು ವಿಶೇಷ ಕೈಗಾರಿಕಾ ವಲಯವೇ ಎಂಬ ಬಗ್ಗೆ ಸಣ್ಣ ಮಟ್ಟದ ಚರ್ಚೆಗಳು ಆರಂಭವಾಗಿದ್ದರೂ, ಯೋಜನೆಯ ಮೂಲ ಉದ್ದೇಶದ ಬಗ್ಗೆ ಉದ್ಯಮ ವಲಯದಲ್ಲಿ ಭಾರಿ ನಿರೀಕ್ಷೆ ಮೂಡಿದೆ.

Next Story