Iran-israel War Impact| ಅತಂತ್ರ ಸ್ಥಿತಿಯಲ್ಲಿ ರಾಜ್ಯದ ಸಣ್ಣ ಕೈಗಾರಿಕೆಗಳು, ಆಮದು-ರಫ್ತು ಸ್ತಬ್ಧ
x

Iran-israel War Impact| ಅತಂತ್ರ ಸ್ಥಿತಿಯಲ್ಲಿ ರಾಜ್ಯದ ಸಣ್ಣ ಕೈಗಾರಿಕೆಗಳು, ಆಮದು-ರಫ್ತು ಸ್ತಬ್ಧ

ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶವೊಂದೇ ವಿವಿಧ ವಲಯಗಳಿಂದ 3,500ಕ್ಕೂ ಹೆಚ್ಚು ಎಂಎಸ್‌ಎಂಇಗಳಿವೆ. ಇದು ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶಗಳಲ್ಲಿ ಒಂದು.


Click the Play button to hear this message in audio format

ರಾಜ್ಯದ ಆರ್ಥಿಕತೆಯ ಬೆನ್ನೆಲುಬಾಗಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ಇಸ್ರೇಲ್ ಹಾಗೂ ಇರಾನ್ ಸಂಘರ್ಷದಿಂದ ಕಂಗಾಲಾಗಿವೆ. ಯುದ್ಧದ ಭೀತಿಯಿಂದ ಆಮದು-ರಫ್ತು ಸ್ಥಗಿತಗೊಂಡ ಕಾರಣ ಕರ್ನಾಟಕಕ್ಕೆ ಕೋಟ್ಯಂತರ ರೂ. ಆದಾಯ ನಷ್ಟವಾಗಿದೆ.

ಯುದ್ಧದ ಹಿನ್ನೆಲೆಯಲ್ಲಿ ಸಮುದ್ರ ಮಾರ್ಗ ಅಸುರಕ್ಷಿತವಾಗಿರುವುದರಿಂದ ಕರ್ನಾಟಕದಿಂದ ರಫ್ತಾದ ಕಂಟೈನರ್‌ಗಳು ಅರ್ಧ ದಾರಿಯಿಂದಲೇ ವಾಪಸ್ ಬರುತ್ತಿವೆ. ಈ ಬಗ್ಗೆ ಮಾಹಿತಿ ನೀಡಿದ ಸಣ್ಣ ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ಎಂ. ಹುಸೇನ್, "ರಾಜ್ಯದಿಂದ ರಫ್ತಾಗುವ ಆಟೋಮೊಬೈಲ್ ಬಿಡಿಭಾಗಗಳು, ಏರೋಸ್ಪೇಸ್ ಕಾಂಪೋನೆಂಟ್‌ಗಳು ಮತ್ತು ರಬ್ಬರ್ ಉತ್ಪನ್ನಗಳು ಸದ್ಯ ಬಂದರುಗಳಿಗೆ ಹಿಂತಿರುಗುತ್ತಿವೆ. ಇದು ಉದ್ಯಮಿಗಳಿಗೆ ಭಾರಿ ನಷ್ಟ ಉಂಟು ಮಾಡುತ್ತಿದೆ. ಸದ್ಯಕ್ಕೆ ಎಷ್ಟು ನಷ್ಟ ಆಗಿದೆ ಎಂದು ಲೆಕ್ಕಹಾಕಿಲ್ಲ," ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಚ್ಚಾ ವಸ್ತುಗಳ ಅಭಾವದಿಂದ ಬೆಲೆ ಏರಿಕೆ

ಆಮದು ಪ್ರಕ್ರಿಯೆ ಕುಂಠಿತಗೊಂಡಿರುವುದರಿಂದ ಬಣ್ಣ ಮತ್ತು ಎಲೆಕ್ಟ್ರಿಕಲ್ ಉಪಕರಣಗಳ ತಯಾರಿಕೆಗೆ ಅಗತ್ಯವಿರುವ ಕಚ್ಚಾ ವಸ್ತುಗಳು ಲಭ್ಯವಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ಸಿಗುತ್ತಿರುವ ಅಲ್ಪಸ್ವಲ್ಪ ಕಚ್ಚಾ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಹೆಚ್ಚಿನ ಬೆಲೆ ನೀಡಿ ಕಚ್ಚಾ ವಸ್ತುಗಳನ್ನು ಖರೀದಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಗೆ ದಾರಿಯಾಗುತ್ತಿದೆ ಎಂದು ಉದ್ಯಮಿಗಳು ಅಳಲು ತೋಡಿಕೊಂಡಿದ್ದಾರೆ.

ಹೇಗಿದೆ ಸಣ್ಣ ಕೈಗಾರಿಕೆಗಳ ಆರ್ಥಿಕತೆ?

ದೇಶದ ಜಿಡಿಪಿಯಲ್ಲಿ ಶೇ. 30ರಷ್ಟು ಮತ್ತು ದೇಶದ ರಫ್ತು ಪ್ರಮಾಣದಲ್ಲಿ ಶೇ. 45ರಷ್ಟು ಪಾಲು ಸಣ್ಣ ಕೈಗಾರಿಕೆಗಳದ್ದಾಗಿದೆ. ಕರ್ನಾಟಕವು 8.5 ಲಕ್ಷಕ್ಕೂ ಹೆಚ್ಚು ಎಂಎಸ್‌ಎಂಇಗಳಿಗೆ ನೆಲೆಯಾಗಿದೆ. ಸುಮಾರು 55 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ಒದಗಿಸಿರುವ ಎಂಎಸ್‌ಎಂಇಗಳಲ್ಲಿ ಕಳೆದ 5 ವರ್ಷಗಳಲ್ಲಿ ಸುಮಾರು 4 ಲಕ್ಷ ಕೋಟಿ ರೂ. ಹೂಡಿಕೆಯಾಗಿದೆ.

ಸಣ್ಣ ಕೈಗಾರಿಕೆಗಳಲ್ಲಿ ಬಹುಪಾಲು ಘಟಕಗಳು ಆಹಾರ ಸಂಸ್ಕರಣೆ, ಎಲೆಕ್ಟ್ರಾನಿಕ್ಸ್, ಸಿದ್ಧ ಉಡುಪುಗಳ ತಯಾರಿಕೆ, ಆಟೋಮೊಬೈಲ್ ಮತ್ತು ರಾಸಾಯನಿಕ ಸ್ಥಾವರಗಳಾಗಿವೆ. ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶವೊಂದರಲ್ಲೇ ವಿವಿಧ ವಲಯಗಳ 3,500ಕ್ಕೂ ಹೆಚ್ಚು ಎಂಎಸ್‌ಎಂಇಗಳಿವೆ. ಇದು ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶಗಳಲ್ಲಿ ಒಂದಾಗಿದೆ.

ಆರ್ಥಿಕ ಸಂಕಷ್ಟದಲ್ಲಿ ಸಣ್ಣ ಕೈಗಾರಿಕೆಗಳು

ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸಣ್ಣ ಕೈಗಾರಿಕೆಗಳಿಗೆ ಸಾಕಷ್ಟು ಅಡೆತಡೆಗಳಿವೆ. ಕಡಿಮೆ ಪ್ರಮಾಣದ ಬ್ಯಾಂಕ್ ಸಾಲ ಸೌಲಭ್ಯ ಇರುವುದರಿಂದ ಸಣ್ಣ ಕೈಗಾರಿಕೆಗಳನ್ನು ಮುನ್ನಡೆಸುವುದೇ ಕಷ್ಟಕರವಾಗಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ರಾಜ್ಯ ಸರ್ಕಾರವು ಕ್ರೆಡಿಟ್-ಲಿಂಕ್ಡ್ ಸಬ್ಸಿಡಿ ಯೋಜನೆಯಡಿ ಸಾಲ ಸೌಲಭ್ಯ ನೀಡಿದರೂ, ಹಲವು ನಿಬಂಧನೆಗಳಿಂದಾಗಿ ಪ್ರೋತ್ಸಾಹ ಸಿಗದಂತಾಗಿದೆ.

ಡಾಲರ್ ಎದುರು ರೂಪಾಯಿ ಅಪಮೌಲ್ಯಗೊಂಡಿರುವುದು ಕೂಡ ಸಣ್ಣ ಕೈಗಾರಿಕೆಗಳಿಗೆ ಸಂಕಷ್ಟ ತಂದೊಡ್ಡಿದೆ. ಇದರಿಂದ ಉತ್ಪಾದನಾ ವೆಚ್ಚ ಹೆಚ್ಚಿದೆ. ಕಳೆದ ಆರು ತಿಂಗಳಲ್ಲಿ ಕಚ್ಚಾ ವಸ್ತುಗಳ ಆಮದು ಬಿಲ್‌ಗಳು ಅಂದಾಜು ಶೇ. 20ರಿಂದ 25ರಷ್ಟು ಹೆಚ್ಚಾಗಿವೆ. ಇದಲ್ಲದೆ, ಉತ್ಪನ್ನಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ ಹೆಚ್ಚಿಸಿರುವುದು ಕೂಡ ಎಂಎಸ್‌ಎಂಇಗಳ ಮೇಲೆ ಆರ್ಥಿಕ ಹೊರೆ ಹೆಚ್ಚಿಸಿದೆ. ಇರಾನ್‌-ಇಸ್ರೇಲ್‌ ಕದನ ಮುಂದುವರಿದರೆ ಸಣ್ಣ ಕೈಗಾರಿಕೆಗಳು ಚೇತರಿಸಿಕೊಳ್ಳಲು ಕನಿಷ್ಠ 4 ವರ್ಷಗಳು ಬೇಕಾಗಬಹುದು ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.

ಹೋಟೆಲ್ ಉದ್ಯಮಕ್ಕೆ 'ಗ್ಯಾಸ್' ಸಂಕಷ್ಟ

ಕಾಸಿಯಾ ಮಾಜಿ ಅಧ್ಯಕ್ಷ ಜಾಕೊಬ್ ಕ್ರಾಸ್ತಾ ಮಾತನಾಡಿ, "ಯುದ್ಧದ ಹಿನ್ನೆಲೆಯಲ್ಲಿ ಆಮದು ಹಾಗೂ ರಫ್ತು ಎರಡರ ಮೇಲೂ ಪರಿಣಾಮ ಬೀರಿದೆ. ಕೈಗಾರಿಕೋದ್ಯಮಿಗಳು ಸಭೆ ನಡೆಸಿ ಚರ್ಚಿಸುತ್ತಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಲು ನಿರ್ಧರಿಸಿದ್ದೇವೆ. ವಿಶೇಷವಾಗಿ ಹೋಟೆಲ್ ಉದ್ಯಮಕ್ಕೆ ನೆರವು ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಗ್ಯಾಸ್ ಕೊರತೆಯಿಂದ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದ್ದು, ನೆರವು ನೀಡುವಂತೆ ಮನವಿ ಮಾಡಲಿದ್ದೇವೆ," ಎಂದು ಹೇಳಿದರು.

"ಕೆಲವೊಂದು ವಸ್ತುಗಳನ್ನು ಬೇರೆ ಡೀಲರ್‌ಗಳ ಮೂಲಕ ನಾವು ಹೊರದೇಶಗಳಿಂದ ತರಿಸಿಕೊಳ್ಳುತ್ತೇವೆ. ಈಗ ಆಮದಾಗದೆ ಕಚ್ಚಾ ವಸ್ತುಗಳು ಬರುತ್ತಿಲ್ಲ, ಇದು ಬಹಳ ತೊಂದರೆಯಾಗಿದೆ. ಮಾರುಕಟ್ಟೆಯಲ್ಲಿರುವ ಕಚ್ಚಾವಸ್ತುಗಳ ಬೆಲೆ ಹೆಚ್ಚಾಗಿದೆ. ಈ ಬೆಲೆಗೆ ನಾವು ಕೊಂಡುಕೊಳ್ಳಲು ಆಗಲ್ಲ. ಇದರಿಂದ ಬೆಲೆ ಏರಿಕೆ ಮತ್ತಷ್ಟು ಹೆಚ್ಚಾಗಲಿದೆ. ಆರ್ಥಿಕ ವ್ಯವಸ್ಥೆಯ ಮೇಲೆ ಇದು ಬಹಳ ಪರಿಣಾಮ ಬೀರಲಿದೆ," ಎಂದು ಆತಂಕ ವ್ಯಕ್ತಪಡಿಸಿದರು.

Read More
Next Story