ಉತ್ಪನ್ನಗಳಿಗೆ ಹೊಸ ಸ್ಪರ್ಶ ನೀಡಬೇಕು ಎಂದು ಚಿಂತನೆ ನಡೆಸಿ ಹಲವು ಕ್ರಮಕೈಗೊಳ್ಳಲಾಗಿದೆ. 2025ರ ಆರ್ಥಿಕ ವರ್ಷದಲ್ಲಿ 1,787ಕೋಟಿ ರೂ. ವಹಿವಾಟು ನಡೆಸಿ 481 ಕೋಟಿ ರೂ. ಲಾಭಗಳಿಸಿದೆ ಎಂದು ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದರು.

Click the Play button to hear this message in audio format

ಮೈಸೂರು ಸ್ಯಾಂಡಲ್‌ ಉತ್ಪಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದು 2030 ರ ವೇಳೆಗೆ 5 ಸಾವಿರ ಕೋಟಿ ರೂ. ವಹಿವಾಟು ನಡೆಸುವ ಗುರಿ ಹೊಂದಲಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದರು.

ಮಂಗಳವಾರ(ಫೆ.10) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಉತ್ಪನ್ನಗಳಿಗೆ ಹೊಸ ಸ್ಪರ್ಶ ನೀಡಬೇಕು ಎಂದು ಚಿಂತನೆ ನಡೆಸಿ ಹಲವು ಕ್ರಮಕೈಗೊಳ್ಳಲಾಗಿದೆ. 2025ರ ಆರ್ಥಿಕ ವರ್ಷದಲ್ಲಿ 1,787ಕೋಟಿ ರೂ. ವಹಿವಾಟು ನಡೆಸಿ 481 ಕೋಟಿ ರೂ. ಲಾಭಗಳಿಸಿದೆ. ಕೆಂಪೇಗೌಡ ವಿಮಾನ ನಿಲ್ದಾಣದ ಕಲಾ ಲೋಕದಲ್ಲಿ ಹಲವು ಉತ್ಪನ್ನಗಳನ್ನು ಇಡಲಾಗಿದ್ದು, ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಕ್ರಮವಹಿಸಲಾಗಿದೆ" ಎಂದು ತಿಳಿಸಿದರು.

ಎರಡನೇ ಮಹಾಯುದ್ಧದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಗಂಧ ರಫ್ತಾಗುತ್ತಿಲ್ಲ ಎಂದು ತಿಳಿದು, ದಿವಾನರಾಗಿದ್ದ ಸರ್‌.ಎಂ. ವಿಶ್ವೇಶ್ವರಯ್ಯ , ಶಾಸ್ತ್ರಿಯವರನ್ನು ಲಂಡನ್‌ಗೆ ಕಳುಹಿಸಿದ್ದರು. ಅವರು ತಂತ್ರಜ್ಞಾನ ನೋಡಿಕೊಂಡ ಬಂದ ಮೇಲೆ ಹಲವು ಉತ್ಪನ್ನಗಳ ಉತ್ಪಾದನೆ ಆರಂಭಿಸಲಾಗಿತ್ತು. ಈ ಉದ್ಯಮವು 108 ವರ್ಷಗಳಲ್ಲಿ ಹಲವು ಏಳು ಬೀಳುಗಳ ಕಂಡಿದೆ ಎಂದರು.

ಪ್ರಚಾರ ಹೆಚ್ಚಿಸಲು ನಟಿ ತಮನ್ನಾ ಭಾಟಿಯಾ ಆಯ್ಕೆ

ಮೈಸೂರು ಸ್ಯಾಂಡಲ್ ಸೋಪ್‌ ಹಾಗೂ ಇತರೆ ಉತ್ಪನ್ನಗಳನ್ನು ದೇಶದಾದ್ಯಂತ ಪ್ರಚಾರ ಮಾಡಿ ಮತ್ತೊಮ್ಮೆ ಗತವೈಭವ ಸಾರಲು ಸಮಿತಿಯೊಂದನ್ನು ರಚಿಸಿ, ಸಾಮಾಜಿಕ ಜಾಲತಾಣದಲ್ಲಿ 28.5 ದಶಲಕ್ಷ ಹಿಂಬಾಲಕರನ್ನು ಹೊಂದಿರುವ ಬಹು ಭಾಷಾ ನಟಿ ತಮನ್ನಾ ಭಾಟಿಯಾರನ್ನು ಆಯ್ಕೆಮಾಡಲಾಗಿದೆ. ಒಟ್ಟು 93 ವಿವಿಧ ಉತ್ಪನ್ನಗಳಿದ್ದು, 57 ಉತ್ಪನ್ನಗಳನ್ನು ಇಂದು ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಗುಣಮಟ್ಟದಲ್ಲಿ ರಾಜಿ ಇಲ್ಲ

ಕೆಎಸ್‌ಡಿಎಲ್ ಅಧ್ಯಕ್ಷ ಅಪ್ಪಾಜಿ ನಾಡಗೌಡ ಮಾತನಾಡಿ, "ಶತಮಾನದಿಂದ ಮೈಸೂರು ಸ್ಯಾಂಡಲ್ಸ್‌ ತನ್ನ ಛಾಪು ಮೂಡಿಸಿಕೊಂಡಿದೆ. ಹೊಸ ರೂಪದೊಂದಿಗೆ ಉತ್ಪನ್ನಗಳು ಹೊರ ಬರುತ್ತಿವೆ. ಶುದ್ದತೆಯಲ್ಲಿ ಯಾವುದೇ ರಾಜಿ ಇಲ್ಲ. ಮಾರುಕಟ್ಟೆಗೆ ತಕ್ಕಂತೆ ಉತ್ಪನ್ನಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಉತ್ತಮವಾಗಿ ಮಾರಾಟವಾಗುತ್ತಿದೆ. 135 ಕೋಟಿ ರೂ. ಡಿವಿಡೆಂಟ್ ನೀಡಿದರೆ, 360 ಕೋಟಿ ರೂ. ವಿಶೇಷ ಡಿವಿಡೆಂಟ್ ನೀಡಲಾಗಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಈ ವರ್ಷ 2,000 ಕೊಟಿ ರೂ. ವಹಿವಾಟು ನಡೆಸಲಾಗಿದ್ದು, ಸಾಂಪ್ರದಾಯಿಕ ವಸ್ತುಗಳಿಗೆ ಆಧುನಿಕತೆಯನ್ನು ನೀಡಲು ಕ್ರಮ ವಹಿಸಲಾಗಿದೆ. ನಿಗಮವು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಎರಡು ವರ್ಷದಲ್ಲಿ ಶೇ.14ರಷ್ಟು ಮಾರಾಟ ಹೆಚ್ಚಳವಾಗಿದೆ. ನಟಿ ತಮನ್ನಾ ಭಾಟಿಯಾ ರಾಯಭಾರಿಯಾಗಿರುವುದರಿಂದ ಸಂಸ್ಥೆಯ ಉತ್ಪನ ಹೆಚ್ಚಾಗಿ ಮಾರಾಟವಾಗುವ ನಿರೀಕ್ಷೆಯಿದೆ" ಎಂದು ತಿಳಿಸಿದರು.

ಕನ್ನಡದಲ್ಲೇ ಮಾತು ಆರಂಭಿಸಿದ ತಮನ್ನಾ

ಕನ್ನಡದಲ್ಲಿ ಎಲ್ಲರಿಗೂ ನಮಸ್ಕಾರ ಎಂದು ಹೇಳುವ ಮೂಲಕ ಮಾತು ಆರಂಭಿಸಿದ ರಾಯಭಾರಿ, ನಟಿ ತಮನ್ನಾ ಭಾಟಿಯಾ, " 20 ವರ್ಷಗಳಿಂದ ಚಿತ್ರರಂಗದಲ್ಲಿ ಪ್ರೀತಿ ಗಳಿಸಿದ್ದೇನೆ. ಇದೀಗ ಹೊಸ ಅಧ್ಯಯನ ಪ್ರಾರಂಭವಾಗಿದ್ದು, ರಾಯಭಾರಿಯಾಗಿ ಹೊಸ ಜವಾಬ್ದಾರಿಯನ್ನು ಹೊತ್ತಿದ್ದೇನೆ. ಎಲ್ಲರಿಗೂ ಸೋಪು ಭಾವನಾತ್ಮಕ ಸಂಬಂಧವಾಗಿದೆ. ಮಾರುಕಟ್ಟೆಯಲ್ಲಿ ಹಲವು ಸೋಪುಗಳಿರಬಹುದು. ಆದರೆ ಮೈಸೂರು ಸ್ಯಾಂಡಲ್‌ ಸೋಪನ್ನು ಹಿಂದಕ್ಕಲು ಆಗುವುದಿಲ್ಲ ಎಂದರು.

Next Story