Iran War: ಮದ್ಯಪ್ರಿಯರಿಗೆ ಶಾಕ್, ಬೇಸಿಗೆಯಲ್ಲಿ ಬಿಯರ್​ ಕೊರತೆ, ದರ ಏರಿಕೆ ಭೀತಿ
x
ಸಾಂದರ್ಭಿಕ ಚಿತ್ರ (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)

Iran War: ಮದ್ಯಪ್ರಿಯರಿಗೆ ಶಾಕ್, ಬೇಸಿಗೆಯಲ್ಲಿ ಬಿಯರ್​ ಕೊರತೆ, ದರ ಏರಿಕೆ ಭೀತಿ

ಕಚ್ಚಾ ವಸ್ತುಗಳ ಕೊರತೆ ಮತ್ತು ಸಾಗಾಟ ವೆಚ್ಚದಲ್ಲಿನ ಹೆಚ್ಚಳವನ್ನು ಸರಿದೂಗಿಸಲು ಮದ್ಯ ಉತ್ಪಾದಕರು ದರ ಏರಿಕೆಯ ಮೊರೆ ಹೋಗುವುದು ಅನಿವಾರ್ಯ ಎಂದು ಬ್ರೂವರಿಗಳು ಈಗಾಗಲೇ ಎಚ್ಚರಿಕೆ ಕೊಟ್ಟಿವೆ.


Click the Play button to hear this message in audio format

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್ ಯುದ್ಧದ ಬಿಸಿ ಇದೀಗ ಭಾರತದ ಮದ್ಯಪ್ರಿಯರಿಗೂ ತಟ್ಟುವ ಲಕ್ಷಣಗಳು ಗೋಚರಿಸುತ್ತಿವೆ. ಮುಂಬರುವ ಬೇಸಿಗೆಯ ಬಿರುಬಿಸಿಲಿನಲ್ಲಿ ತಂಪಾದ ಬಿಯರ್​ ಹೀರಲು ಕಾಯುತ್ತಿದ್ದವರಿಗೆ ಭಾರಿ ನಿರಾಸೆಯಾಗುವ ಸಾಧ್ಯತೆಯಿದೆ.

ಕಚ್ಚಾ ವಸ್ತುಗಳ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ದೇಶಾದ್ಯಂತ ಬಿಯರ್​ ಕೊರತೆ ಎದುರಾಗುವ ಆತಂಕ ಸೃಷ್ಟಿಯಾಗಿದ್ದಲ್ಲದೆ, ಉತ್ಪಾದನಾ ಕಂಪನಿಗಳು ಬೆಲೆಯನ್ನು ಶೇಕಡಾ ಹನ್ನೆರಡರಿಂದ ಹದಿನೈದರಷ್ಟು ಹೆಚ್ಚಿಸಲು ಮುಂದಾಗಿವೆ ಎಂಬ ವರದಿಗಳು ಇದೀಗ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿವೆ.

ಕಚ್ಚಾವಸ್ತುಗಳ ಪೂರೈಕೆಯಲ್ಲಿ ತೀವ್ರ ವ್ಯತ್ಯಯ

ರಾಯಿಟರ್ಸ್ ಸುದ್ದಿಸಂಸ್ಥೆಯ ವರದಿಯ ಪ್ರಕಾರ, ಇರಾನ್ ಮತ್ತು ನೆರೆಹೊರೆಯ ರಾಷ್ಟ್ರಗಳ ನಡುವಿನ ಯುದ್ಧ ಹಾಗೂ ಉದ್ವಿಗ್ನತೆಯು ಜಾಗತಿಕ ಪೂರೈಕೆ ಸರಪಳಿಯನ್ನು ತೀವ್ರವಾಗಿ ಅಸ್ತವ್ಯಸ್ತಗೊಳಿಸಿದೆ. ವಿಶೇಷವಾಗಿ ಬಿಯರ್​ ಪ್ಯಾಕಿಂಗ್‌ಗೆ ಬಳಸಲಾಗುವ ಗಾಜಿನ ಬಾಟಲಿಗಳು ಮತ್ತು ಅಲ್ಯೂಮಿನಿಯಂ ಕ್ಯಾನ್‌ಗಳ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಬೇಸಿಗೆಯಲ್ಲಿ ಬೀರ್‌ಗೆ ಬೇಡಿಕೆ ಮಿತಿಮೀರಿರುವ ಕಾರಣ, ಬಾಟಲಿ ಮತ್ತು ಕ್ಯಾನ್‌ಗಳ ಕೊರತೆಯು ನೇರವಾಗಿ ಉತ್ಪಾದನೆ ಹಾಗೂ ಪೂರೈಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಭಾರತದ ಪ್ರಮುಖ ಬ್ರೂವರಿಗಳು ಹೇಳಿವೆ.

ಗ್ರಾಹಕರ ಜೇಬಿಗೆ ಕತ್ತರಿ, ದರ ಏರಿಕೆಗೆ ಸಿದ್ಧತೆ

ಕಚ್ಚಾ ವಸ್ತುಗಳ ಕೊರತೆ ಮತ್ತು ಸಾಗಾಟ ವೆಚ್ಚದಲ್ಲಿನ ಹೆಚ್ಚಳವನ್ನು ಸರಿದೂಗಿಸಲು ಮದ್ಯ ಉತ್ಪಾದಕರು ದರ ಏರಿಕೆಯ ಮೊರೆ ಹೋಗುವುದು ಅನಿವಾರ್ಯವಾಗಿದೆ ಎಂದು ಹೇಳಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಬಿಯರ್​ ಬೆಲೆಯಲ್ಲಿ ಶೇಕಡಾ 12 ರಿಂದ 15 ರಷ್ಟು ಹೆಚ್ಚಳ ಮಾಡಲು ಬ್ರೂವರಿಗಳು ಚಿಂತನೆ ನಡೆಸಿವೆ. ಬೇಸಿಗೆಯ ಸಮಯದಲ್ಲಿಯೇ ಈ ದರ ಏರಿಕೆ ಮತ್ತು ಪೂರೈಕೆ ಕೊರತೆ ಎದುರಾಗುತ್ತಿರುವುದು ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತೆ ಮಾಡಲಿದ್ದು, ಮಾರುಕಟ್ಟೆಯಲ್ಲಿ ಲಭ್ಯವಿರುವ ದಾಸ್ತಾನು ಶೀಘ್ರವೇ ಖಾಲಿಯಾಗುವ ಆತಂಕವನ್ನು ಹುಟ್ಟುಹಾಕಿದೆ.

ಜಾಲತಾಣಗಳಲ್ಲಿ ಆಕ್ರೋಶ ಮತ್ತು ವ್ಯಂಗ್ಯದ ಪ್ರತಿಕ್ರಿಯೆ

ಈ ವಿಚಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಭಾರಿ ಚರ್ಚೆಗೆ ಹಾಗೂ ಟೀಕೆಗೆ ಕಾರಣವಾಗಿದೆ. ಕೆಲವರು ಮಣ್ಣಿನ ಮಡಿಕೆ (ಕುಲ್ಹಡ್) ಅಥವಾ ಪ್ಲಾಸ್ಟಿಕ್ ಕವರ್‌ಗಳಲ್ಲಿ ಬಿಯರ್​ ಕೊಡುವ ಕಾಲ ಬರಬಹುದು ಎಂದು ವ್ಯಂಗ್ಯವಾಡಿದರೆ, ಇನ್ನು ಕೆಲವರು ಬೇಸಿಗೆಗಾಗಿ ವಿಸ್ಕಿ ಸಂಗ್ರಹಿಸಿಟ್ಟುಕೊಳ್ಳುವ ಬಗ್ಗೆ ತಮಾಷೆ ಮಾಡಿದ್ದಾರೆ. ಆದರೆ, ಬಹುತೇಕರು ಭಾರತದ ಉತ್ಪಾದನಾ ಸಾಮರ್ಥ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ 'ಮೇಕ್ ಇನ್ ಇಂಡಿಯಾ' ಎಂದು ಹೇಳಲಾಗುತ್ತಿದ್ದರೂ, ಸಾಮಾನ್ಯ ಗಾಜಿನ ಬಾಟಲಿ ಮತ್ತು ಕ್ಯಾನ್‌ಗಳಿಗಾಗಿ ವಿದೇಶವನ್ನು ಅವಲಂಬಿಸಿರುವುದು ವಿಪರ್ಯಾಸ ಎಂದು ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುದ್ಧದ ನೆಪವೊಡ್ಡಿ ಕಂಪನಿಗಳು ಕೇವಲ ಬೆಲೆ ಏರಿಕೆ ಮಾಡಲು ಈ ತಂತ್ರ ರೂಪಿಸಿವೆ ಎಂಬ ಅನುಮಾನವನ್ನೂ ಹಲವರು ಹೊರಹಾಕಿದ್ದಾರೆ.

Read More
Next Story