
ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್: ಬೆಂಗಳೂರಿನಿಂದ ವಿಮಾನ ಟಿಕೆಟ್ ದರ ದುಪ್ಪಟ್ಟು
ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನಗಳ ಟಿಕೆಟ್ ದರ ದಿಢೀರ್ ಏರಿಕೆ
ಯುದ್ಧದ ಕಾರ್ಮೋಡ ವಿಮಾನ ಟ್ರಾವೆಲ್ ಏಜೆನ್ಸಿಗಳ ವ್ಯವಹಾರದ ಮೇಲೂ ಗಂಭೀರ ಪರಿಣಾಮ ಬೀರಿದೆ. ಟಿಕೆಟ್ಗಳು ಭಾರೀ ಪ್ರಮಾಣದಲ್ಲಿ ರದ್ದಾಗುತ್ತಿವೆ ಹಾಗೂ ಬಹುತೇಕ ಮಾರ್ಗಗಳ ಟಿಕೆಟ್ ದರ ದುಪ್ಪಟ್ಟಾಗಿದೆ.
ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಬಿಸಿ ಇದೀಗ ವಿಮಾನಯಾನ ವಲಯಕ್ಕೂಜೋರಾಗಿ ತಟ್ಟಿದೆ. ಪ್ರಮುಖವಾಗಿ ವಾಯು ಮಾರ್ಗಗಳ ಬದಲಾವಣೆ, ಇಂಧನ ಕೊರತೆ ಹಾಗೂ ಬೆಲೆ ಏರಿಕೆಯ ಪರಿಣಾಮವಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (KIA) ಹೊರಡುವ ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳ ಟಿಕೆಟ್ ದರದಲ್ಲಿ ದಿಢೀರ್ ಭಾರೀ ಹೆಚ್ಚಳವಾಗಿದೆ.
ಮಧ್ಯಪ್ರಾಚ್ಯದತ್ತ ಸುಳಿಯದ ವಿಮಾನಗಳು
ಯುದ್ಧದ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಮಧ್ಯಪ್ರಾಚ್ಯ ರಾಷ್ಟ್ರಗಳತ್ತ ಪ್ರಯಾಣಿಸುವವರ ಸಂಖ್ಯೆ ಸಂಪೂರ್ಣ ಕ್ಷೀಣಿಸಿದೆ. ಈ ಕುರಿತು ಮಾಹಿತಿ ನೀಡಿರುವ 'ಸ್ಕೈ ವೇ ಇಂಟರ್ನ್ಯಾಷನಲ್ ಟ್ರಾವೆಲ್ಸ್' ನಿರ್ದೇಶಕ ಎಸ್. ಮಹಾಲಿಂಗಯ್ಯ, "ಮಧ್ಯಪ್ರಾಚ್ಯ ಮಾರ್ಗದಲ್ಲಿ ವಿಮಾನ ಹಾರಾಟ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ದುಬೈಗೆ ತೆರಳುವ ವಿಮಾನ ಸೇವೆಗಳು ಬಹುತೇಕ ಸ್ಥಗಿತಗೊಂಡಿವೆ. ಮಧ್ಯಪ್ರಾಚ್ಯದ ವಿಮಾನಗಳ ಸೇವೆ ಇಲ್ಲದ ಕಾರಣ, ಯುರೋಪಿಯನ್ ಏರ್ಲೈನ್ಗಳು ಏಕಸ್ವಾಮ್ಯ ಸಾಧಿಸಿದ್ದು, ಟಿಕೆಟ್ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿವೆ" ಎಂದು ವಿವರಿಸಿದ್ದಾರೆ.
ಅವರ ಮಾಹಿತಿಯಂತೆ ಅಂತಾರಾಷ್ಟ್ರೀಯ ವಿಮಾನಗಳ (ಎಕಾನಮಿ ಕ್ಲಾಸ್) ದರ ಈ ರೀತಿ ಇದೆ. ಬೆಂಗಳೂರು-ಲಂಡನ್ ನಡುವೆ ಈ ಹಿಂದೆ 80,000 ರೂ. ಇದ್ದ ದರ ಇದೀಗ 1,20,000 ರೂ.ಗೆ ಏರಿಕೆಯಾಗಿದೆ. ಬೆಂಗಳೂರು-ನ್ಯೂಯಾರ್ಕ್ ನಡುವಿನ 1 ಲಕ್ಷ ರೂ. ಇದ್ದ ಟಿಕೆಟ್ ದರ ಈಗ 2 ಲಕ್ಷ ರೂ.ಗೆ (ದುಪ್ಪಟ್ಟು) ಜಿಗಿದಿದೆ. ಬೆಂಗಳೂರು-ಫ್ರಾಂಕ್ಫರ್ಟ್ (ಜರ್ಮನಿ) ನಡುವೆ ಇದ್ದ 80,000 ರೂ. 1,90,000 ರೂ.ಗೆ ದುಬಾರಿಯಾಗಿದೆ.
ಹೆಚ್ಚುತ್ತಿರುವ ಲೇಓವರ್ ಸಮಯ
ಯುದ್ಧದ ಕಾರ್ಮೋಡ ವಿಮಾನ ಟ್ರಾವೆಲ್ ಏಜೆನ್ಸಿಗಳ ವ್ಯವಹಾರದ ಮೇಲೂ ಗಂಭೀರ ಪರಿಣಾಮ ಬೀರಿದೆ. ಟಿಕೆಟ್ಗಳು ಭಾರೀ ಪ್ರಮಾಣದಲ್ಲಿ ರದ್ದಾಗುತ್ತಿವೆ ಹಾಗೂ ಬಹುತೇಕ ಮಾರ್ಗಗಳ ಟಿಕೆಟ್ ದರ ದುಪ್ಪಟ್ಟಾಗಿದೆ. 'ರಿಚ್ವಿ ರಿಚ್ ಹಾಲಿಡೇಸ್ ಟ್ರಾವೆಲ್ಸ್' ಮ್ಯಾನೇಜರ್ ವಿನೀತ್ ಕುಮಾರ್ ವಿ. ಅವರು ಮಾತನಾಡಿ, "ಇಸ್ರೇಲ್-ಇರಾನ್ ಯುದ್ಧದಿಂದಾಗಿ ವಿಮಾನಯಾನ ತೀರಾ ದುಬಾರಿಯಾಗಿದೆ. ದುಬೈ ವಿಮಾನ ನಿಲ್ದಾಣದಿಂದ ವಿಮಾನಗಳ ಸಂಚಾರ ಇಲ್ಲದ ಕಾರಣ, ಪ್ರಯಾಣಿಕರಿಗೆ ಲೇಓವರ್ (Layover) ಸಮಯ ವಿಪರೀತವಾಗಿ ಹೆಚ್ಚಾಗುತ್ತಿದೆ" ಎಂದು ತಿಳಿಸಿದ್ದಾರೆ.
ಅವರ ಪ್ರಕಾರ, ಬೆಂಗಳೂರು-ದುಬೈ ನಡುವೆ ಮುಂಚೆ 12,000 ದಿಂದ 15,000 ರೂ. ಇತ್ತು, ಇದೀಗ 22,000 ರೂ. ಆಗಿದೆ. (ಆದರೆ ಈ ಮಾರ್ಗದ ವಿಮಾನಗಳ ಸಂಚಾರವೇ ಸದ್ಯ ರದ್ದಾಗಿದೆ). ಬೆಂಗಳೂರು ಸಿಂಗಾಪುರ ನಡುವೆ 20,000 ರೂ. ಇದ್ದ ದರ ಈಗ 40,000 ರೂ. ಆಗಿದೆ. ಬೆಂಗಳೂರು ಮತ್ತು ಮಲೇಷಿಯಾ ನಡುವಿನ 20,000 ರೂ. ನಿಂದ 30,000 ರೂ.ಗೆ ಏರಿಕೆಯಾಗಿದೆ. ಬೆಂಗಳೂರು ಮತ್ತು ಅಮೆರಿಕ ನಡುವೆ ಈ ಹಿಂದೆ ಇದ್ದ ಕನಿಷ್ಠ 90 ಸಾವಿರದಿಂದ 2 ಲಕ್ಷ ರೂಪಾಯಿ ತನಕ ಏರಿಕೆಯಾಗಿದೆ.
ವಿಶೇಷವಾಗಿ, ಅಮೆರಿಕಕ್ಕೆ (US) ತೆರಳುವ ಪ್ರಯಾಣಿಕರು ದುಬೈ ಬದಲು ಸಿಂಗಾಪುರ ವಿಮಾನ ನಿಲ್ದಾಣವನ್ನು ಅವಲಂಬಿಸಬೇಕಾಗಿದ್ದು, ಅಲ್ಲಿ 10 ಗಂಟೆಗೂ ಹೆಚ್ಚು ಕಾಲ ಲೇಓವರ್ಗಾಗಿ ಕಾಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ದೇಶೀಯ ವಿಮಾನಯಾನಕ್ಕೂ ಇಂಧನ ಸರ್ಚಾರ್ಜ್ ಬಿಸಿ
ಬೆಂಗಳೂರಿನಿಂದ ದೇಶೀಯ ವಿಮಾನಯಾನದ ಮೇಲೂ ಪರೋಕ್ಷವಾಗಿ ಯುದ್ಧದ ಪ್ರಭಾವ ಬೀರಿದೆ. ವಿಮಾನಗಳ ವಾಯು ಮಾರ್ಗ ಬದಲಾವಣೆಯಿಂದಾಗಿ ಇಂಧನ ಬಳಕೆ ಹೆಚ್ಚಾಗುತ್ತಿದ್ದು, ದೇಶೀಯ ವಿಮಾನ ದರಗಳಲ್ಲಿ ನೇರವಾದ ಭಾರಿ ಏರಿಕೆಯಾಗದಿದ್ದರೂ, ವಿಮಾನಯಾನ ಸಂಸ್ಥೆಗಳು ಇಂಧನ ದರ ಏರಿಕೆಯ ಪ್ರತ್ಯೇಕ ಶುಲ್ಕವನ್ನು ವಿಧಿಸುತ್ತಿವೆ.
ಈ ಬಗ್ಗೆ ಈಗಾಗಲೇ ಟ್ರಾವೆಲ್ ಏಜೆನ್ಸಿಗಳಿಗೆ ಅಧಿಕೃತ ಸಂದೇಶ ರವಾನೆಯಾಗಿದ್ದು, ದೇಶೀಯ ವಿಮಾನಗಳ ಪ್ರತಿ ಟಿಕೆಟ್ ದರದಲ್ಲಿ ಕನಿಷ್ಠ 300 ರಿಂದ 500 ರೂ.ಗಳವರೆಗೆ ಏರಿಕೆಯಾಗಿದೆ. ಮಧ್ಯಪ್ರಾಚ್ಯದಲ್ಲಿನ ಈ ಬಿಕ್ಕಟ್ಟಿನಿಂದಾಗಿ, ಇತ್ತೀಚಿನ ದಿನಗಳಲ್ಲಿ ಏವಿಯೇಷನ್ ಟರ್ಬೈನ್ ಇಂಧನ (ATF) ದರಗಳು ಹೆಚ್ಚಾಗಿರುವುದು ಬೆಂಗಳೂರಿನಿಂದ ಹಾರಾಟ ನಡೆಸುವ ವಿಮಾನಗಳ ಮೇಲೆ ನಿರಂತರವಾಗಿ ಪರಿಣಾಮ ಬೀರುತ್ತಿದೆ.

