Petrol Shortage: ದೇಶದಲ್ಲಿ 60 ದಿನಗಳಿಗೆ ಸಾಕಾಗುವಷ್ಟು ಕಚ್ಚಾ ತೈಲ ದಾಸ್ತಾನು ಇದೆ ಎಂದ ಕೇಂದ್ರ ಸರ್ಕಾರ
x

Petrol Shortage: ದೇಶದಲ್ಲಿ 60 ದಿನಗಳಿಗೆ ಸಾಕಾಗುವಷ್ಟು ಕಚ್ಚಾ ತೈಲ ದಾಸ್ತಾನು ಇದೆ ಎಂದ ಕೇಂದ್ರ ಸರ್ಕಾರ

ಕೆಲವು ಸಣ್ಣ ಪಟ್ಟಣಗಳಲ್ಲಿನ ಪೆಟ್ರೋಲ್ ಬಂಕ್ ಮಾಲೀಕರು ಬಂಡವಾಳದ ಕೊರತೆಯಿಂದಾಗಿ ಇಂಧನ ಖರೀದಿಸಲು ಎದುರಿಸುತ್ತಿದ್ದ ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದು ಸರ್ಕಾರ ಹೇಳಿದೆ.


Click the Play button to hear this message in audio format

ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿರುವ ಯುದ್ಧದ ಪರಿಣಾಮವಾಗಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂಬ ವದಂತಿಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಸಾಗಾಟದ ಅಡೆತಡೆಗಳ ನಡುವೆಯೂ ದೇಶದಲ್ಲಿ ಇಂಧನ ಪೂರೈಕೆ ಸುಗಮವಾಗಿದೆ. ಪ್ರಸ್ತುತ ಭಾರತದಲ್ಲಿ ಮುಂದಿನ 60 ದಿನಗಳಿಗೆ ಸಾಕಾಗುವಷ್ಟು ಕಚ್ಚಾ ತೈಲ ಹಾಗೂ ಸಂಪೂರ್ಣ ಒಂದು ತಿಂಗಳಿಗೆ ಆಗುವಷ್ಟು ಎಲ್‌ಪಿಜಿ ದಾಸ್ತಾನು ಲಭ್ಯವಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಗುರುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳನ್ನು ನಂಬಿ ಜನರು ಆತಂಕದಿಂದ ಇಂಧನ ಖರೀದಿಗೆ ಮುಗಿಬೀಳಬಾರದು ಎಂದು ಸರ್ಕಾರ ಮನವಿ ಮಾಡಿದೆ.

ಪೆಟ್ರೋಲ್ ಬಂಕ್‌ಗಳ ಸಾಲದ ಮಿತಿ ಹೆಚ್ಚಳ

ಕೆಲವು ಸಣ್ಣ ಪಟ್ಟಣಗಳಲ್ಲಿನ ಪೆಟ್ರೋಲ್ ಬಂಕ್ ಮಾಲೀಕರು ಬಂಡವಾಳದ ಕೊರತೆಯಿಂದಾಗಿ ಇಂಧನ ಖರೀದಿಸಲು ಎದುರಿಸುತ್ತಿದ್ದ ಸಮಸ್ಯೆಯನ್ನು ಸರ್ಕಾರ ಬಗೆಹರಿಸಿದೆ. ತೈಲ ಕಂಪನಿಗಳು ಬಂಕ್ ಮಾಲೀಕರಿಗೆ ನೀಡುತ್ತಿದ್ದ ಸಾಲದ (ಕ್ರೆಡಿಟ್) ಅವಧಿಯನ್ನು ಒಂದು ದಿನದಿಂದ ಮೂರು ದಿನಗಳಿಗೆ ಹೆಚ್ಚಿಸಿವೆ. ಇದರಿಂದಾಗಿ ಯಾವುದೇ ಪೆಟ್ರೋಲ್ ಬಂಕ್‌ಗಳಲ್ಲಿ ಹಣಕಾಸಿನ ಸಮಸ್ಯೆಯಿಂದ ಪೆಟ್ರೋಲ್ ಅಥವಾ ಡೀಸೆಲ್ ಕೊರತೆ ಉಂಟಾಗುವುದಿಲ್ಲ. ದೇಶಾದ್ಯಂತ ಎಲ್ಲಾ ರಿಟೇಲ್ ಔಟ್‌ಲೆಟ್‌ಗಳಲ್ಲಿ ಸಾಕಷ್ಟು ದಾಸ್ತಾನು ಇದ್ದು, ಯಾವುದೇ ರೇಷನಿಂಗ್ ವ್ಯವಸ್ಥೆ ಇಲ್ಲದೆ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಪರ್ಯಾಯ ಮಾರ್ಗಗಳ ಮೂಲಕ ಭರ್ಜರಿ ಪೂರೈಕೆ

ಭಾರತದ ಆಮದಿನ ಪ್ರಮುಖ ಮಾರ್ಗವಾಗಿದ್ದ ಹಾರ್ಮುಜ್ ಜಲಸಂಧಿಯಲ್ಲಿನ ಬಿಕ್ಕಟ್ಟಿನಿಂದಾಗಿ ಶೇಕಡಾ 50ರಷ್ಟು ಕಚ್ಚಾ ತೈಲ ಪೂರೈಕೆಗೆ ಅಡ್ಡಿಯಾಗಿದೆ ಎಂಬ ವರದಿಗಳ ಬೆನ್ನಲ್ಲೇ ಈ ಅಭಯ ಹೊರಬಿದ್ದಿದೆ. ಈ ಮಾರ್ಗದಲ್ಲಿ ಅಡಚಣೆಯಾಗಿದ್ದರೂ, ಸರ್ಕಾರವು ಈಗಾಗಲೇ ಪರ್ಯಾಯ ಮೂಲಗಳಿಂದ ತೈಲ ಪೂರೈಕೆಯನ್ನು ಖಚಿತಪಡಿಸಿಕೊಂಡಿದೆ. ದೇಶದ ಒಟ್ಟು ತೈಲ ಸಂಗ್ರಹಣಾ ಸಾಮರ್ಥ್ಯ 74 ದಿನಗಳಷ್ಟಿದ್ದು, ಮಧ್ಯಪ್ರಾಚ್ಯ ಬಿಕ್ಕಟ್ಟು ಆರಂಭವಾಗಿ 27 ದಿನಗಳು ಕಳೆದರೂ ಪ್ರಸ್ತುತ 60 ದಿನಗಳಿಗೆ ಸಾಕಾಗುವಷ್ಟು ದಾಸ್ತಾನು (ಕಚ್ಚಾ ತೈಲ, ಸಂಸ್ಕರಿಸಿದ ಉತ್ಪನ್ನಗಳು ಮತ್ತು ಕಾವಲು ಸಂಗ್ರಹ ಸೇರಿ) ಭದ್ರವಾಗಿದೆ. ಜಾಗತಿಕ ಮಟ್ಟದಲ್ಲಿ ಏನೇ ಆದರೂ ಭಾರತೀಯರಿಗೆ ತೈಲದ ಕೊರತೆಯಾಗುವುದಿಲ್ಲ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.

ಶೇ.100ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ರಿಫೈನರಿಗಳು

ಭಾರತವು ಜಾಗತಿಕ ಮಟ್ಟದಲ್ಲಿ ಅತಿ ದೊಡ್ಡ ತೈಲ ಸಂಸ್ಕರಣಾ ಮತ್ತು ರಫ್ತು ರಾಷ್ಟ್ರಗಳಲ್ಲಿ ಒಂದಾಗಿದ್ದು, ದೇಶದ ಪ್ರತಿಯೊಂದು ರಿಫೈನರಿಗಳು ಶೇಕಡಾ 100ಕ್ಕೂ ಹೆಚ್ಚು ಸಾಮರ್ಥ್ಯದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ದೇಶೀಯ ಅಗತ್ಯಗಳನ್ನು ಪೂರೈಸುವ ಜೊತೆಗೆ 150ಕ್ಕೂ ಹೆಚ್ಚು ದೇಶಗಳಿಗೆ ತೈಲ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳು ಕೂಡ ತಮ್ಮ ಇಂಧನ ಕೇಂದ್ರಗಳಲ್ಲಿ ಯಾವುದೇ ಕೊರತೆಯಿಲ್ಲ ಎಂದು ಪ್ರತ್ಯೇಕ ಪ್ರಕಟಣೆಗಳ ಮೂಲಕ ಗ್ರಾಹಕರಿಗೆ ಭರವಸೆ ನೀಡಿವೆ. ರಾತ್ರಿಯಿಡೀ ಕಾರ್ಯನಿರ್ವಹಿಸುವ ಮೂಲಕ ಪೂರೈಕೆಯನ್ನು ಸರಿದೂಗಿಸಲಾಗುತ್ತಿದೆ.

ಎಲ್‌ಪಿಜಿ ಉತ್ಪಾದನೆ ಹೆಚ್ಚಳ ಮತ್ತು ಪಿಎನ್‌ಜಿ ಬಗ್ಗೆ ಸ್ಪಷ್ಟನೆ

ಸಾಗರ ಮಾರ್ಗಗಳ ಅಡಚಣೆಯಿಂದ ಎಲ್‌ಪಿಜಿ ಪೂರೈಕೆಯ ಮೇಲೂ ಒತ್ತಡ ಬಿದ್ದಿದೆಯಾದರೂ, ದೇಶೀಯ ಉತ್ಪಾದನೆ ಮತ್ತು ಆಮದು ಮೂಲಕ ಪೂರೈಕೆಯನ್ನು ಸಮತೋಲನದಲ್ಲಿ ಇಡಲಾಗಿದೆ. ವಿವಿಧ ದೇಶಗಳಿಂದ 8 ಲಕ್ಷ ಟನ್ ಎಲ್‌ಪಿಜಿ ಕಾರ್ಗೋಗಳನ್ನು ಕಾಯ್ದಿರಿಸಲಾಗಿದ್ದು, ಅವು ಸಾಗಾಟದ ಹಾದಿಯಲ್ಲಿವೆ. ದೇಶೀಯ ರಿಫೈನರಿಗಳ ಎಲ್‌ಪಿಜಿ ಉತ್ಪಾದನೆಯನ್ನು ಶೇಕಡಾ 40ರಷ್ಟು ಹೆಚ್ಚಿಸಲಾಗಿದ್ದು, ಪ್ರತಿದಿನ 50,000 ಟನ್ ಉತ್ಪಾದಿಸಲಾಗುತ್ತಿದೆ. ಇದರಿಂದಾಗಿ ದೈನಂದಿನ ಆಮದು ಅವಶ್ಯಕತೆ ಕೇವಲ 30,000 ಟನ್‌ಗಳಿಗೆ ಇಳಿಕೆಯಾಗಿದೆ. ಇದರ ಜೊತೆಗೆ, ಎಲ್‌ಪಿಜಿ ಕೊರತೆಯಿಂದಾಗಿ ಜನರನ್ನು ಪಿಎನ್‌ಜಿ (ಪೈಪ್‌ಡ್ ನ್ಯಾಚುರಲ್ ಗ್ಯಾಸ್) ಬಳಕೆಗೆ ಒತ್ತಾಯಿಸಲಾಗುತ್ತಿದೆ ಎಂಬುದು ಕೇವಲ ವದಂತಿ. ಪಿಎನ್‌ಜಿ ಹೆಚ್ಚು ಅಗ್ಗ ಮತ್ತು ಮನೆಗಳಿಗೆ ಅತ್ಯಂತ ಅನುಕೂಲಕರವಾಗಿರುವ ಕಾರಣಕ್ಕೆ ಅದನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಸಚಿವಾಲಯ ಸ್ಪಷ್ಟನೆ ನೀಡಿದೆ.

Read More
Next Story