ಜಿಎಸ್‌ಟಿ 2.0 ನಾಳೆಯಿಂದ ಜಾರಿಯಾಗಲಿದ್ದು, ಗ್ರಾಹಕರು ರಶೀದಿ ನೋಡಿ ದರ ಇಳಿಕೆ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಸಲಹೆ ನೀಡಿದ್ದಾರೆ.
ನಾಳೆಯಿಂದ ಪರಿಸ್ಕೃತ ಜಿಎಸ್‌ಟಿ ನಿಯಮಗಳು ದೇಶಾದ್ಯಂತ ಜಾರಿಯಾಗಲಿವೆ. ನವರಾತ್ರಿ ಹಬ್ಬದ ಮೊದಲ ದಿನವಾದ ನಾಳೆ, ನಾಲ್ಕು ಹಂತದ ತೆರಿಗೆ ಬದಲಾಗಿ ಇನ್ನು ಮುಂದೆ 2 ಹಂತದ ತೆರಿಗೆ ಸ್ಲ್ಯಾಬ್ ಜಾರಿಗೆ ಬರಲಿದೆ.
ಎಷ್ಟು ತೆರಿಗೆ ಪದ್ಧತಿಗೆ ಆದ್ಯತೆ?
ಆರೋಗ್ಯ ವಿಮೆ, ಜೀವ ವಿಮೆ ಸೇರಿದಂತೆ ವಿವಿಧ ಉತ್ಪನ್ನಗಳ ಮೇಲೆ ಜಿಎಸ್‌ಟಿ ವಿನಾಯಿತಿ ನೀಡಲಾಗಿದೆ. ಒಟ್ಟಾರೆ, ಜನ ಸಾಮಾನ್ಯರು ಬಳಸುವ 400ಕ್ಕೂ ಹೆಚ್ಚು ಉತ್ಪನ್ನಗಳ ಬೆಲೆ ಕಡಿತವಾಗಲಿದೆ. ಶೇ 5, 12, 18 & 28ರ ತೆರಿಗೆ ಸ್ಲ್ಯಾಬ್ ಕೈಬಿಟ್ಟು, ಸುಧಾರಣೆಯ ಭಾಗವಾಗಿ ಶೇ.5 & 18ರ ತೆರಿಗೆ ಪದ್ಧತಿಯನ್ನಷ್ಟೇ ಉಳಿಸಿಕೊಳ್ಳಲಾಗಿದೆ. ಜಿಎಸ್‌ಟಿ ಪರಿಷ್ಕರಣೆಯಿಂದ ಉತ್ಪನ್ನಗಳ ಬೆಲೆ ಗಣನೀಯವಾಗಿ ಇಳಿಕೆಯಾಗಲಿದ್ದು, ಜನ ಸಾಮಾನ್ಯರಿಗೆ ಅನುಕೂಲಕರವಾಗಿರಲಿದೆ.
ಸಚಿವಾಲಯದ ಸೂಚನೆ
ಈ ಸಂಬಂಧ ಹಣಕಾಸು ಸಚಿವಾಲಯವು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಇದರಲ್ಲಿ ಜಿಎಸ್‌ಟಿ ಸುಧಾರಣಾ ಕ್ರಮವನ್ನು ಸೆ.3ರಂದು ಘೋಷಿಸಲಾಗಿತ್ತು. ಇದು ನಾಳೆಯಿಂದ ಅನುಷ್ಠಾನಕ್ಕೆ ಬರಲಿದೆ. ನಾಳೆ ನವರಾತ್ರಿ ಹಬ್ಬ ಕೂಡ ಆರಂಭವಾಗಲಿದ್ದು, ಗ್ರಾಹಕರು ರಶೀದಿ ನೋಡಿ ದರ ಇಳಿಕೆ ಬಗ್ಗೆ ಖಚಿತಪಡಿಸಿಕೊಳ್ಳಬೇಕೆಂದು ಸೂಚನೆ ನೀಡಿದೆ.
ಯಾವೆಲ್ಲಾ ಉತ್ಪನ್ನಗಳ ದರ ಇಳಿಕೆ?
ಪನೀರ್, ಯುಎಚ್‌ಟಿ ಹಾಲು, ಬಿಸ್ಕತ್ತುಗಳು, ಸಾಸ್‌ಗಳು ಮತ್ತು ಒಣ ಹಣ್ಣುಗಳಂತಹ ಉತ್ಪನ್ನಗಳ ಜಿಎಸ್‌ಟಿ ತೆರಿಗೆಯನ್ನು ಶೇ.5ರಷ್ಟು ಇಳಿಕೆ ಮಾಡಲಾಗಿದೆ. ಕೆಲವು ಉತ್ಪನ್ನಗಳಿಗೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಹೇರ್ ಆಯಿಲ್ ಹಾಗೂ ಟೂತ್‌ಪೇಸ್ಟ್‌ನಂತಹ ವೈಯಕ್ತಿಕ ಆರೈಕೆ ಉತ್ಪನ್ನಗಳ ಮೇಲೆ ಶೇ.5ರಷ್ಟು ಜಿಎಸ್‌ಟಿ ವಿಧಿಸಲಾಗಿದೆ.
ಇನ್ನು ಹವಾ ನಿಯಂತ್ರಕಗಳು, ರೆಫ್ರಿಜರೇಟರ್‌ಗಳು, ದೊಡ್ಡ ಟಿವಿಗಳು ಹಾಗೂ ವಾಷಿಂಗ್ ಮೆಷಿನ್‌ಗಳಂತಹ ಬಾಳಿಕೆ ಬರುವ ವಸ್ತುಗಳ ಮೇಲೆ ಶೇ.28ರಷ್ಟು ತೆರಿಗೆ ವಿಧಿಸಲಾಗಿತ್ತು. ಇದನ್ನು ಇದೀಗ ಶೇ.18ಕ್ಕೆ ಇಳಿಸಲಾಗಿದೆ. 350ಸಿಸಿ ವರೆಗಿನ ಸಣ್ಣ ವಾಹನಗಳು, ಆಟೋ ಬಿಡಿಭಾಗಗಳು ಮತ್ತು ಸಿಮೆಂಟ್ ಈಗ ಶೇ.18ರ ಜಿಎಸ್‌ಟಿ ದರದಲ್ಲಿ ಲಭಿಸಲಿವೆ.
ತೆರಿಗೆ ವಿನಾಯಿತಿ
ಮಧ್ಯಮ ವರ್ಗದಿಂದ ದೀರ್ಘಕಾಲದ ಬೇಡಿಕೆಯಾಗಿರುವ ಆರೋಗ್ಯ ಮತ್ತು ಜೀವ ವಿಮಾ ಪ್ರೀಮಿಯಂಗಳಿಗೆ ಇನ್ನು ಮುಂದೆ ಜಿಎಸ್‌ಟಿಯಿಂದ ಸಂಪೂರ್ಣ ವಿನಾಯಿತಿ ಇರಲಿದೆ. ಇವುಗಳ ಮೇಲೆ ಈ ಹಿಂದೆ ಶೇ.18ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು.
ಜನ ಸಾಮಾನ್ಯರಿಗೆ ಭಾರೀ ಅನುಕೂಲ
ಜಿಎಸ್‌ಟಿ ಕಡಿತದಿಂದ ಸರ್ಕಾರಕ್ಕೆ ಒಟ್ಟು 84,000 ಕೋಟಿ ರೂ. ಹೊರೆಯಾಗಲಿದೆ. ಆದರೆ, ಇದರಿಂದ ಜನ ಸಾಮಾನ್ಯರಿಗೆ ಖಂಡಿತವಾಗಿಯೂ ಅನುಕೂಲವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಸ್ಟೇಪಲ್ಸ್, ಹೆಪ್ಪುಗಟ್ಟಿದ ಆಹಾರಗಳು, ಖಾದ್ಯ ತೈಲ ಮತ್ತು ಪ್ಯಾಕ್ ಮಾಡಿದ ವಸ್ತುಗಳಿಗೆ ಸುಮಾರು10,000 ಖರ್ಚು ಮಾಡುತ್ತಿದ್ದ ಮಧ್ಯಮ ವರ್ಗದ ಕುಟುಂಬ, ಇನ್ಮುಂದೆ ಹೊಸ ತೆರಿಗೆ ನೀತಿ ಪರಿಣಾಮ ತಿಂಗಳಿಗೆ 400-600 ರೂಪಾಯಿ ಉಳಿತಾಯ ಮಾಡಬಹುದಾಗಿದೆ. ಜೀವ & ಆರೋಗ್ಯ ವಿಮೆಗೆ ಜಿಎಸ್‌ಟಿ ವಿನಾಯಿತಿ ನೀಡಿರುವ ಕಾರಣ ಆರೋಗ್ಯ ರಕ್ಷಣೆಗಾಗಿ ಪಾಲಿಸಿ ಮಾಡಿಸಿರುವ ಕುಟುಂಬಗಳು 7000ರಿಂದ 8000 ರೂಪಾಯಿ ಉಳಿತಾಯ ಮಾಡಬಹುದಾಗಿದೆ.
ಸಂಜೆ ಮೋದಿ ಭಾಷಣ
ಸರಕು ಮತ್ತು ಸೇವಾ ತೆರಿಗೆ 2.0 ನಾಳೆಯಿಂದ ಜಾರಿಗೆ ಬರಲಿರುವ ಹಿನ್ನೆಲೆ ಹಾಗೂ ನವರಾತ್ರಿ ಆರಂಭ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ 5 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಮೋದಿ ಅವರು ಯಾವ ವಿಷಯವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂಬ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೆ ಜಿಎಸ್‌ಟಿ 2.0 ಜಾರಿ ಆಗಲಿರುವ ಕಾರಣದಿಂದ ಆ ವಿಷಯದ ಕುರಿತೇ ಮಾತನಾಡಲಿದ್ದಾರೆಂದು ನಿರೀಕ್ಷಿಸಲಾಗಿದೆ. ವ್ಯಾಪಕ ಶ್ರೇಣಿಯ ಉತ್ಪನ್ನಗಳ ಬೆಲೆ ಕಡಿಮೆಯಾಗುವ ಇಂಗಿತವನ್ನು ಪ್ರಧಾನ ಮಂತ್ರಿಗಳು ವ್ಯಕ್ತಪಡಿಸುವ ಸಾಧ್ಯತೆ ಇದೆ.