LPG ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ: ಇಂದು ರಾಜ್ಯದಾದ್ಯಂತ ಹಲವು ಹೋಟೆಲ್‌ಗಳು ಬಂದ್ ಆಗುವ ಆತಂಕ!
x
ಗ್ಯಾಸ್‌ ಸಿಲಿಂಡರ್‌ ದರ ಏರಿಕೆ(ಸಂಗ್ರಹ ಚಿತ್ರ)

LPG ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ: ಇಂದು ರಾಜ್ಯದಾದ್ಯಂತ ಹಲವು ಹೋಟೆಲ್‌ಗಳು ಬಂದ್ ಆಗುವ ಆತಂಕ!

ವಾಣಿಜ್ಯ ಎಲ್‌ಪಿಜಿ ಪೂರೈಕೆ ವ್ಯತ್ಯಯದಿಂದ ಹೋಟೆಲ್ ಮಾಲೀಕರು ಕಂಗಾಲಾಗಿದ್ದಾರೆ. ದಾಸ್ತಾನು ಖಾಲಿಯಾಗುತ್ತಿರುವುದರಿಂದ ಹೋಟೆಲ್‌ಗಳು ಬಂದ್ ಆಗುವ ಸಾಧ್ಯತೆಯಿದ್ದು, ಸೌದೆಯತ್ತ ಮಾಲೀಕರು ಮುಖ ಮಾಡುತ್ತಿದ್ದಾರೆ.


ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, ಹೋಟೆಲ್ ಉದ್ಯಮವು ಸ್ತಬ್ಧವಾಗುವ ಭೀತಿ ಎದುರಿಸುತ್ತಿದೆ. ಸಿಲಿಂಡರ್‌ಗಳ ದಾಸ್ತಾನು ಖಾಲಿಯಾಗುತ್ತಿರುವುದರಿಂದ ಇಂದು ರಾಜ್ಯದ ಹಲವು ಭಾಗಗಳಲ್ಲಿ ಹೋಟೆಲ್‌ಗಳು ಕಾರ್ಯನಿರ್ವಹಿಸುವುದು ಅನುಮಾನವಾಗಿದೆ.

ಕಳೆದ ಕೆಲವು ದಿನಗಳಿಂದ ಮಾರುಕಟ್ಟೆಯಲ್ಲಿ ವಾಣಿಜ್ಯ ಸಿಲಿಂಡರ್‌ಗಳು ಲಭ್ಯವಾಗುತ್ತಿಲ್ಲ. ಸಿಲಿಂಡರ್‌ಗಳು ಮತ್ತೆ ಯಾವಾಗ ಸರಬರಾಜಾಗುತ್ತವೆ ಎಂಬ ಬಗ್ಗೆ ವಿತರಕರಿಂದ ಯಾವುದೇ ಖಚಿತ ಮಾಹಿತಿ ಸಿಗುತ್ತಿಲ್ಲ. ಬಹುತೇಕ ಹೋಟೆಲ್‌ಗಳಲ್ಲಿ ಇರುವ ಅಲ್ಪಸ್ವಲ್ಪ ಗ್ಯಾಸ್ ದಾಸ್ತಾನು ಇಂದು ಸಂಜೆಯ ವೇಳೆಗೆ ಖಾಲಿಯಾಗುವ ಸಾಧ್ಯತೆಯಿದೆ. ಕೆಲವು ಕಡೆಗಳಲ್ಲಿ ಈಗಾಗಲೇ ನಿನ್ನೆಯೇ ಸಿಲಿಂಡರ್ ಖಾಲಿಯಾಗಿದ್ದು, ಅಡುಗೆ ಕಾರ್ಯ ಸ್ಥಗಿತಗೊಂಡಿದೆ.

ಸಿಲಿಂಡರ್ ಖಾಲಿಯಾದ ತಕ್ಷಣ ಹೋಟೆಲ್ ಬಾಗಿಲು ಮುಚ್ಚುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ ಎಂದು ಹಲವು ಹೋಟೆಲ್ ಮಾಲೀಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಸೌದೆಯತ್ತ ಮುಖ ಮಾಡಿದ ಹೋಟೆಲ್ ಮಾಲೀಕರು

ಗ್ಯಾಸ್ ಇಲ್ಲದೆ ವ್ಯಾಪಾರ ಕಳೆದುಕೊಳ್ಳಬಾರದು ಎಂಬ ಉದ್ದೇಶದಿಂದ ಕೆಲವು ಹೋಟೆಲ್ ಮಾಲೀಕರು ಪರ್ಯಾಯ ಮಾರ್ಗವಾಗಿ ಸೌದೆ ಒಲೆಗಳ ಮೊರೆ ಹೋಗಿದ್ದಾರೆ. ಆದರೆ, ಆಧುನಿಕ ಹೋಟೆಲ್‌ಗಳಲ್ಲಿ ಏಕಾಏಕಿ ಸೌದೆಯಿಂದ ಅಡುಗೆ ಮಾಡುವುದು ತಾಂತ್ರಿಕವಾಗಿ ಮತ್ತು ಕಾರ್ಯಕ್ಷಮತೆಯ ದೃಷ್ಟಿಯಿಂದ ಅತ್ಯಂತ ಕಷ್ಟಕರವಾದ ಕೆಲಸ. "ಸೌದೆಯಿಂದ ಅಡುಗೆ ಮಾಡಲು ಪ್ರಯತ್ನಿಸುತ್ತಿದ್ದೇವೆ, ಆದರೆ ಅದು ಅಷ್ಟು ಸುಲಭವಲ್ಲ" ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.

ಪಿಜಿಗಳಿಗೂ ತಟ್ಟಿದ ಬಿಸಿ

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಕೊರತೆಯ ಬಿಸಿಯು ಈಗ ಪೇಯಿಂಗ್ ಗೆಸ್ಟ್ (ಪಿಜಿ) ಅಡುಗೆ ಮನೆಗಳಿಗೂ ತಟ್ಟಿದ್ದು, ಈ ಕುರಿತು ಮಾತನಾಡಿದ ಪಿಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಡಿಟಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಹೋಟೆಲ್‌ಗಳಿಗೆ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿರುವ ಗಂಭೀರತೆಯನ್ನು ಅರಿತು, ಪಿಜಿ ಅಸೋಸಿಯೇಷನ್‌ನಿಂದ ಈಗಾಗಲೇ ವರ್ಚುವಲ್ ಆಗಿ ಕೋರ್ ಕಮಿಟಿ ಸಭೆ ನಡೆಸಿ ಪರಿಸ್ಥಿತಿಯ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Read More
Next Story