Hubballi Airport: ಹುಬ್ಬಳ್ಳಿ-ಬೆಂಗಳೂರು-ಹೈದರಾಬಾದ್:  ಹೊಸ ವಿಮಾನಯಾನ ಸೇವೆ ಆರಂಭ
x
ಫ್ಲೈ91 ವಿಮಾನದ ಸಾಂದರ್ಭಿಕ ಚಿತ್ರ.

Hubballi Airport: ಹುಬ್ಬಳ್ಳಿ-ಬೆಂಗಳೂರು-ಹೈದರಾಬಾದ್: ಹೊಸ ವಿಮಾನಯಾನ ಸೇವೆ ಆರಂಭ

ಹೊಸ ಯೋಜನೆಯ ಭಾಗವಾಗಿ ಇದೇ ಏಪ್ರಿಲ್ ಎರಡನೇ ವಾರದಿಂದಲೇ ಫ್ಲೈ91 ವಿಮಾನ ಸೇವೆಯು ನಾಗರಿಕರಿಗೆ ಅಧಿಕೃತವಾಗಿ ಲಭ್ಯವಾಗಲಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.


Click the Play button to hear this message in audio format

ವಾಣಿಜ್ಯ ನಗರಿಗಳಾದ ಹುಬ್ಬಳ್ಳಿ, ಬೆಂಗಳೂರು ಮತ್ತು ಹೈದರಾಬಾದ್ ನಡುವೆ ತ್ವರಿತ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷೆಯ ನೂತನ ವಿಮಾನಯಾನ ಯೋಜನೆಯೊಂದು ಶೀಘ್ರದಲ್ಲೇ ಆರಂಭವಾಗಲಿದೆ. ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 'ಫ್ಲೈ91' (fly91) ವಿಮಾನಯಾನ ಸಂಸ್ಥೆಯು ಈ ಹೊಸ ವಿಮಾನ ಸೇವೆಯನ್ನು ಪರಿಚಯಿಸುತ್ತಿದೆ.

ಹೊಸ ಯೋಜನೆಯ ಭಾಗವಾಗಿ ಇದೇ ಏಪ್ರಿಲ್ ಎರಡನೇ ವಾರದಿಂದಲೇ ಫ್ಲೈ91 ವಿಮಾನ ಸೇವೆಯು ನಾಗರಿಕರಿಗೆ ಅಧಿಕೃತವಾಗಿ ಲಭ್ಯವಾಗಲಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಈ ಸಂಸ್ಥೆಯ ದೈನಂದಿನ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಲು ಈಗಾಗಲೇ ಅಗತ್ಯ ಸ್ಥಳಾವಕಾಶ ಒದಗಿಸಲಾಗಿದೆ. ಅಂತೆಯೇ, ವಿಮಾನಯಾನ ಸೇವೆಗೆ ಬೇಕಾದ ಎಲ್ಲ ಪ್ರಾಥಮಿಕ ಸಿದ್ಧತೆಗಳನ್ನು ಹಾಗೂ ಅಗತ್ಯ ಕಾರ್ಯಚಟುವಟಿಕೆಗಳನ್ನು ಫ್ಲೈ91 ಸಂಸ್ಥೆ ಭರದಿಂದ ಆರಂಭಿಸಿದೆ.

ಕೇಂದ್ರ ಸಚಿವರ ವಿಶೇಷ ಕಾಳಜಿ ಹಾಗೂ ಯಶಸ್ವಿ ಪ್ರಯತ್ನ

ಹುಬ್ಬಳ್ಳಿಯಿಂದ ಬೆಂಗಳೂರು ಮತ್ತು ಹೈದರಾಬಾದ್ ನಗರಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ವಿಮಾನಯಾನ ಸೇವೆಯನ್ನು ಆರಂಭಿಸುವಂತೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರು ಈ ಹಿಂದೆ ಏರ್‌ಲೈನ್ಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು. ಸಚಿವರ ಈ ವಿಶೇಷ ಮನವಿಯನ್ನು ಪುರಸ್ಕರಿಸಿದ ಫ್ಲೈ91 ಆಡಳಿತ ಮಂಡಳಿಯು, ಈ ಮೂರು ಪ್ರಮುಖ ನಗರಗಳ ಮಧ್ಯೆ ವಿಮಾನ ಹಾರಾಟಕ್ಕೆ ಯೋಜನೆಯನ್ನು ಕಾರ್ಯಗತಗೊಳಿಸಲು ಮುಂದಾಗಿದೆ.

ಹಾರಾಟದ ವೇಳಾಪಟ್ಟಿ

ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಸಂಸ್ಥೆಯು ವೇಳಾಪಟ್ಟಿಯನ್ನು ಸಹ ಪ್ರಕಟಿಸಿದೆ. ಮಧ್ಯಾಹ್ನ 3. 00 ಗಂಟೆಗೆ ಹೈದರಾಬಾದ್‌ನಿಂದ ಹೊರಡುವ ಐಸಿ3401 (IC3401) ವಿಮಾನವು ಸಂಜೆ 4. 30ಕ್ಕೆ ಹುಬ್ಬಳ್ಳಿಯನ್ನು ತಲುಪಲಿದೆ. ತದನಂತರ, ಹುಬ್ಬಳ್ಳಿಯಿಂದ ಸಂಜೆ 4. 55ಕ್ಕೆ ಐಸಿ3411 (IC3411) ವಿಮಾನವು ಟೇಕಾಫ್ ಆಗಿ ಸಂಜೆ 6. 15ಕ್ಕೆ ಬೆಂಗಳೂರು ತಲುಪಲಿದೆ. ಹಿಂದಿರುಗುವ ಮಾರ್ಗದಲ್ಲಿ, ಐಸಿ3412 (IC3412) ವಿಮಾನವು ಬೆಂಗಳೂರಿನಿಂದ ಸಂಜೆ 6. 45ಕ್ಕೆ ಹೊರಟು ರಾತ್ರಿ 8. 15ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ. ಅಂತಿಮವಾಗಿ, ಹುಬ್ಬಳ್ಳಿಯಿಂದ ರಾತ್ರಿ 8. 35ಕ್ಕೆ ಹೊರಡುವ ಐಸಿ3402 (IC3402) ವಿಮಾನವು ರಾತ್ರಿ 9. 55ಕ್ಕೆ ಹೈದರಾಬಾದ್ ತಲುಪಲಿದೆ.

Read More
Next Story