
ತೈಲ ಗ್ರಾಹಕರಿಗೆ ನಿರಾಳ: ಹಾರ್ಮುಜ್ ಜಲಸಂಧಿ ಮುಕ್ತ, ಕಚ್ಚಾ ತೈಲ ದರ ಇಳಿಕೆ ಸಾಧ್ಯತೆ!
ಸಂಘರ್ಷದ ಸಮಯದಲ್ಲಿ ಹಡಗು ಕಂಪನಿಗಳು ಮಾರ್ಗ ಬದಲಾವಣೆ ಮಾಡಿದ್ದರಿಂದ ಭಾರಿ ವಿಮಾ ಕಂತು ಹಾಗೂ ಸಾರಿಗೆ ವೆಚ್ಚವನ್ನು ಭರಿಸಬೇಕಾಗಿತ್ತು. ಈಗ ಸರಕು ಸಾಗಣೆ ವೆಚ್ಚ ಗಣನೀಯವಾಗಿ ಕಡಿಮೆಯಾಗಲಿದೆ.
ವಿಶ್ವದ ಅತ್ಯಂತ ಪ್ರಮುಖ ಇಂಧನ ಸಾಗಣೆ ಮಾರ್ಗಗಳಲ್ಲಿ ಒಂದಾದ ‘ಹಾರ್ಮುಜ್ ಜಲಸಂಧಿ’ಯನ್ನು ಮತ್ತೆ ತೆರೆಯಲು ಅಮೆರಿಕ ಮತ್ತು ಇರಾನ್ ಮಧ್ಯಂತರ ಒಪ್ಪಂದಕ್ಕೆ ಬಂದಿವೆ. ಈ ಮಹತ್ವದ ಬೆಳವಣಿಗೆಯ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳ ಮೇಲಿನ ಒತ್ತಡ ಮುಂದುವರಿದಿದ್ದು, ಮುಂಬರುವ ದಿನಗಳಲ್ಲಿ ತೈಲ ದರ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಸರಕು ಮಾರುಕಟ್ಟೆ ವಿಶ್ಲೇಷಕ ಅನುಜ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.
ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಯುದ್ಧವನ್ನು ಕೊನೆಗೊಳಿಸುವ ಮತ್ತು ಜಾಗತಿಕ ತೈಲ ಪೂರೈಕೆಯ ಸರಿಸುಮಾರು ಶೇ. 20 ರಷ್ಟು (ಐದನೇ ಒಂದು ಭಾಗ) ಭಾಗವನ್ನು ಹೊತ್ತೊಯ್ಯುವ ಹಾರ್ಮುಜ್ ಜಲಸಂಧಿಯ ಮೂಲಕ ಸಮುದ್ರ ಸಂಚಾರವನ್ನು ಪುನಃಸ್ಥಾಪಿಸುವ ಒಪ್ಪಂದ ಪ್ರಕಟವಾದ ತಕ್ಷಣ, ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ ಸುಮಾರು 82 ಡಾಲರ್‌ಗೆ ಕುಸಿದಿದೆ.
3 ತಿಂಗಳ ಕನಿಷ್ಠ ಮಟ್ಟಕ್ಕೆ ಕಚ್ಚಾ ತೈಲ ಬೆಲೆ!
"ಕಳೆದ ಎರಡು ತಿಂಗಳುಗಳಲ್ಲಿ ಕಚ್ಚಾ ತೈಲ ಬೆಲೆಗಳು ಒಟ್ಟಾರೆ ಶೇ. 27 ರಷ್ಟು ಕುಸಿತ ಕಂಡಿವೆ" ಎಂದು ಅನುಜ್ ಗುಪ್ತಾ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಯುಎಸ್ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗಳ ಘೋಷಣೆಯ ನಂತರವೇ ಕಚ್ಚಾ ತೈಲ ದರ ಶೇ. 7 ರಿಂದ ಶೇ. 8 ರಷ್ಟು ಕುಸಿದಿದ್ದು, ಸದ್ಯ ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ ಎಂದು ಅವರು ವಿವರಿಸಿದ್ದಾರೆ.
ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯುವುದರಿಂದ ಕಚ್ಚಾ ತೈಲ ಲಭ್ಯತೆ ಸುಧಾರಿಸಲಿದೆ. ಇದುವರೆಗೆ ಯುದ್ಧದ ಆತಂಕದಿಂದಾಗಿ ಮಾರುಕಟ್ಟೆಯಲ್ಲಿ ಸೃಷ್ಟಿಯಾಗಿದ್ದ ಪೂರೈಕೆ ಕೊರತೆಯ ಕಳವಳಗಳು ಇದರಿಂದ ದೂರಾಗಲಿವೆ. ಗಲ್ಫ್ ಪ್ರದೇಶದಿಂದ ತೈಲ ರಫ್ತು ಎಂದಿನಂತೆ ಸಹಜ ಸ್ಥಿತಿಗೆ ಮರಳಲಿದೆ ಎಂಬ ನಿರೀಕ್ಷೆಯನ್ನು ಜಾಗತಿಕ ಮಾರುಕಟ್ಟೆಯ ಇಂದಿನ ಪ್ರತಿಕ್ರಿಯೆ ಪ್ರತಿಬಿಂಬಿಸುತ್ತಿದೆ.
ಏಷ್ಯಾದ ದೇಶಗಳಿಗೆ ವರ
ಜಲಮಾರ್ಗ ಮುಕ್ತವಾಗುವುದರಿಂದ ಭಾರತ, ಚೀನಾ ಮತ್ತು ಜಪಾನ್ ಸೇರಿದಂತೆ ಪ್ರಮುಖ ಏಷ್ಯಾದ ಗ್ರಾಹಕ ರಾಷ್ಟ್ರಗಳಿಗೆ ತೈಲ ಸಾಗಣೆ ಗಣನೀಯವಾಗಿ ಚೇತರಿಸಿಕೊಳ್ಳಲಿದೆ. ಒಪ್ಪಂದದಿಂದಾಗಿ ಮಾರುಕಟ್ಟೆಯಲ್ಲಿದ್ದ ಆತಂಕ ದೂರಾಗಿದ್ದರೂ, ಇಂಧನ ಹರಿವು ಸಂಪೂರ್ಣವಾಗಿ ಮೊದಲಿನಂತಾಗಲು ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ ಎಂದು ಗುಪ್ತಾ ಎಚ್ಚರಿಸಿದ್ದಾರೆ. "ಸಮುದ್ರ ಮಾರ್ಗದಲ್ಲಿ ಬಿಕ್ಕಟ್ಟಿನ ಮುಂಚೆ ಇದ್ದ ಪರಿಸ್ಥಿತಿ ಮರಳಬೇಕಾದರೆ, ಅಲ್ಲಿ ಅಳವಡಿಸಲಾಗಿರುವ ಸಮುದ್ರ ಗಣಿಗಳನ್ನು ತೆರವುಗೊಳಿಸಬೇಕಾಗುತ್ತದೆ ಮತ್ತು ಕಾರ್ಯಾಚರಣೆಯ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಬೇಕಾಗುತ್ತದೆ. ಇದಕ್ಕೆ ಕನಿಷ್ಠ ಒಂದರಿಂದ ಎರಡು ತಿಂಗಳು ಬೇಕಾಗಬಹುದು" ಎಂದಿದ್ದಾರೆ.
ಸಂಘರ್ಷದ ಸಮಯದಲ್ಲಿ ಹಡಗು ಕಂಪನಿಗಳು ಮಾರ್ಗ ಬದಲಾವಣೆ ಮಾಡಿದ್ದರಿಂದ ಭಾರಿ ವಿಮಾ ಕಂತು ಹಾಗೂ ಸಾರಿಗೆ ವೆಚ್ಚವನ್ನು ಭರಿಸಬೇಕಾಗಿತ್ತು. ಈಗ ಹಾರ್ಮುಜ್ ಜಲಸಂಧಿ ಮುಕ್ತವಾಗುವುದರಿಂದ ಸರಕು ಸಾಗಣೆ ವೆಚ್ಚ ಗಣನೀಯವಾಗಿ ಕಡಿಮೆಯಾಗಲಿದ್ದು, ಇದು ಕಚ್ಚಾ ತೈಲ ಬೆಲೆ ಇಳಿಕೆಗೆ ಮತ್ತಷ್ಟು ಪೂರಕವಾಗಲಿದೆ.
OPEC+ ರಾಷ್ಟ್ರಗಳ ಮುಂದಿನ ಹೆಜ್ಜೆಯೇನು?
ಮುಂದಿನ ದಿನಗಳಲ್ಲಿ ತೈಲ ಬೆಲೆಯ ಏರಿಳಿತಗಳು 'OPEC+' ಒಕ್ಕೂಟದ ಉತ್ಪಾದನಾ ನಿರ್ಧಾರಗಳ ಮೇಲೆ ಅವಲಂಬಿತವಾಗಿರುತ್ತದೆ. ಪ್ರಸ್ತುತ ಪರಿಸ್ಥಿತಿ ಇನ್ನೂ ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲದ ಕಾರಣ ಒಕ್ಕೂಟದ ಸದಸ್ಯ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಕಡಿತಗೊಳಿಸುವ ಸಾಧ್ಯತೆ ತೀರಾ ಕಡಿಮೆ. ಬದಲಿಗೆ ಯುಎಇ ಸೇರಿದಂತೆ ಪ್ರಮುಖ ದೇಶಗಳು ಉತ್ಪಾದನೆಯನ್ನು ಹೆಚ್ಚಿಸುವ ಇಚ್ಛೆ ವ್ಯಕ್ತಪಡಿಸಿವೆ ಎಂದು ಗುಪ್ತಾ ಹೇಳಿದ್ದಾರೆ.
ಒಪ್ಪಂದವು ಯಶಸ್ವಿಯಾಗಿ ಮುಂದುವರಿದು ಪೂರೈಕೆ ಮಾರ್ಗಗಳು ಸಂಪೂರ್ಣ ಸುಧಾರಣೆಯಾದರೆ, ಮುಂಬರುವ ದಿನಗಳಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 75 ಡಾಲರ್‌ನಿಂದ ರಿಂದ 70 ಡಾಲರ್‌ಗೆ ಕುಸಿಯಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಗಲ್ಫ್ ಪ್ರದೇಶದಲ್ಲಿ ಮತ್ತೆ ಯಾವುದೇ ಸಣ್ಣ ಅಡಚಣೆ ಉಂಟಾದರೂ ಈ ಇಳಿಕೆಯ ಟ್ರೆಂಡ್ ತಲೆಕೆಳಗಾಗಬಹುದು ಎಂದೂ ಅವರು ಎಚ್ಚರಿಸಿದ್ದಾರೆ.

