
ಬೆಂಗಳೂರು ಹೋಟೆಲ್ ಉದ್ಯಮಕ್ಕೆ 150 ಕೋಟಿ ರೂಪಾಯಿ ನಷ್ಟ
LPG ಕೊರತೆ| ಹೋಟೆಲ್ ಉದ್ಯಮಕ್ಕೆ 150 ಕೋಟಿ ರೂಪಾಯಿ ನಷ್ಟ
ವಾಣಿಜ್ಯ ಗ್ಯಾಸ್ ಕೊರತೆ ಮತ್ತು ವಿಮಾನ ಸೇವೆಗಳ ವ್ಯತ್ಯಯದಿಂದಾಗಿ ಕಳೆದ ಮೂರು ವಾರಗಳಲ್ಲಿ ಬೆಂಗಳೂರಿನ ಹೋಟೆಲ್ ಉದ್ಯಮಕ್ಕೆ ಸುಮಾರು 150 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ.
ಮಧ್ಯ ಏಷ್ಯಾ ಯುದ್ಧದ ಪರಿಣಾಮವಾಗಿ ಎಲ್‌ಪಿಜಿ ಸಿಲಿಂಡರ್ ಕೊರತೆಯಿಂದಾಗಿ ಬೆಂಗಳೂರು ಹೋಟೆಲ್ ಉದ್ಯಮವು ಕಳೆದ ಮೂರು ವಾರಗಳಲ್ಲಿ ಭಾರಿ ಸಂಕಷ್ಟಕ್ಕೆ ಸಿಲುಕಿದ್ದು, ಸುಮಾರು 150 ಕೋಟಿ ರೂಪಾಯಿಗಳಷ್ಟು ದೊಡ್ಡ ಮೊತ್ತದ ನಷ್ಟ ಅನುಭವಿಸಿದೆ ಎಂದು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ ಅಂದಾಜಿಸಿದೆ.
ವಾಣಿಜ್ಯ ಬಳಕೆಯ ಅನಿಲ ಪೂರೈಕೆಯಲ್ಲಿ ಉಂಟಾದ ವ್ಯತ್ಯಯ ಹಾಗೂ ವಿಮಾನ ಪ್ರಯಾಣ ರದ್ದತಿಯಿಂದಾಗಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿರುವುದು ಈ ಆರ್ಥಿಕ ಹೊಡೆತಕ್ಕೆ ಪ್ರಮುಖ ಕಾರಣವಾಗಿದೆ.
ವಾಣಿಜ್ಯ ಅನಿಲ ಸಿಲಿಂಡರ್‌ಗಳ ಕೊರತೆಯಿಂದಾಗಿ ನಗರದ ಬಹುತೇಕ ಹೋಟೆಲ್‌ಗಳು ತಮ್ಮ ಕಾರ್ಯನಿರ್ವಹಣೆಯ ಅವಧಿಯನ್ನು ಕಡಿತಗೊಳಿಸಿವೆ. ಕೆಲವು ಹೋಟೆಲ್‌ಗಳು ದಿನದ ಕೆಲವು ಗಂಟೆಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದರೆ, ಇನ್ನೂ ಕೆಲವು ಹೋಟೆಲ್‌ಗಳು ಸಂಪೂರ್ಣವಾಗಿ ಬಾಗಿಲು ಮುಚ್ಚಿವೆ. ಅನಿಲದ ಅಭಾವದಿಂದಾಗಿ ಹೋಟೆಲ್ ಮೆನುವಿನಲ್ಲಿದ್ದ ಆಹಾರ ಪದಾರ್ಥಗಳ ಆಯ್ಕೆಯನ್ನು ಸಹ ಸೀಮಿತಗೊಳಿಸಲಾಗಿದೆ. ಇದರಿಂದಾಗಿ ಹೋಟೆಲ್‌ಗಳಿಗೆ ಬರುವ ಗ್ರಾಹಕರ ಸಂಖ್ಯೆ ಗಣನೀಯವಾಗಿ ಕುಸಿದಿದೆ ಎಂದು ಸಂಘದ ಅಧ್ಯಕ್ಷ ಪಿ.ಸಿ. ರಾವ್ ತಿಳಿಸಿದ್ದಾರೆ.
ಸಂಪೂರ್ಣ ಅಸ್ತವ್ಯಸ್ತ
ಮಾರ್ಚ್ 7–8ರಿಂದ ಆರಂಭವಾದ ಎಲ್‌ಪಿಜಿ ಕೊರತೆ ಹೋಟೆಲ್‌ಗಳ ದೈನಂದಿನ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ. ಪ್ರತಿ ವಾರ ಸುಮಾರು ರೂ. 50 ಕೋಟಿ ನಷ್ಟ ಉಂಟಾಗಿದೆ. ಎಲ್‌ಪಿಜಿ ಕೊರತೆಯಿಂದ ಅನೇಕ ಹೋಟೆಲ್‌ಗಳು ತಮ್ಮ ಕಾರ್ಯಾಚರಣೆಯನ್ನು ಕಡಿಮೆ ಮಾಡಬೇಕಾಗಿ ಬಂದಿದೆ. ಕೆಲವು ಹೋಟೆಲ್‌ಗಳು ಮೆನುಗಳನ್ನು ಸೀಮಿತಗೊಳಿಸಿದರೆ, ಇನ್ನೂ ಕೆಲವು ಇಂಧನದ ಪರ್ಯಾಯ ಮಾರ್ಗಗಳನ್ನು ಬಳಸಲು ಆರಂಭಿಸಿವೆ. ಇಂಡಕ್ಷನ್ ಸ್ಟೌವ್, ಡೀಸೆಲ್ ಆಧಾರಿತ ಅಡುಗೆ ವ್ಯವಸ್ಥೆಗಳು, ಕೆಲವೆಡೆ ಮರದ ಇಂಧನ ಬಳಸುವ ಪರಿಸ್ಥಿತಿ ಎದುರಾಗಿದೆ ಎಂದು ಅವರು ತಿಳಿಸಿದರು.
ಇದಲ್ಲದೆ, ಕೆಲವು ಹೋಟೆಲ್‌ಗಳು ತಾತ್ಕಾಲಿಕವಾಗಿ ಬಾಗಿಲು ಮುಚ್ಚಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗಿದೆ. ವಿಶೇಷವಾಗಿ ಚೈನೀಸ್ ಹಾಗೂ ಬಿರಿಯಾನಿ ತಿನಿಸುಗಳಿಗೆ ಹೆಸರಾದ ಹೋಟೆಲ್‌ಗಳು ಹೆಚ್ಚು ನಷ್ಟ ಅನುಭವಿಸಿವೆ ಎಂದು ತಿಳಿಸಿದ್ದಾರೆ.
ಕೇವಲ ಅನಿಲದ ಸಮಸ್ಯೆಯಷ್ಟೇ ಅಲ್ಲದೆ, ವಿಮಾನ ಸೇವೆಗಳಲ್ಲಿನ ವ್ಯತ್ಯಯದಿಂದಾಗಿ ಪ್ರವಾಸಿಗರ ಬುಕ್ಕಿಂಗ್‌ಗಳು ರದ್ದಾಗಿವೆ. ಕಾರ್ಪೊರೇಟ್ ವಲಯದ ಕಾರ್ಯಕ್ರಮಗಳು ಮತ್ತು ಬ್ಯಾಂಕ್ವೆಟ್ ಹಾಲ್‌ಗಳ ಬುಕ್ಕಿಂಗ್‌ಗಳು ಸಹ ಕಡಿತಗೊಂಡಿವೆ. ವಿದೇಶಿ ಪ್ರತಿನಿಧಿಗಳು ಬರಲು ಸಾಧ್ಯವಾಗದ ಕಾರಣ ಅನೇಕ ಕಂಪನಿಗಳು ತಮ್ಮ ಕಾರ್ಯಕ್ರಮಗಳನ್ನು ಮುಂದೂಡಿವೆ, ಇದು ಹೋಟೆಲ್ ಮಾಲೀಕರ ಆತಂಕವನ್ನು ಹೆಚ್ಚಿಸಿದೆ.
ಸದ್ಯ ಸರ್ಕಾರವು ಹೋಟೆಲ್‌ಗಳ ಬೇಡಿಕೆಯ ಶೇಕಡಾ 33ರಷ್ಟು ವಾಣಿಜ್ಯ ಅನಿಲವನ್ನು ಪೂರೈಸಲು ಒಪ್ಪಿಕೊಂಡಿರುವುದು ಸ್ವಲ್ಪ ಸಮಾಧಾನ ತಂದಿದ್ದರೂ, ಪೂರ್ಣ ಪ್ರಮಾಣದ ಚೇತರಿಕೆಗೆ ಇದು ಸಾಕಾಗುವುದಿಲ್ಲ. ಶೇ. 33ರಷ್ಟು ಪೂರೈಕೆಯಿಂದ ಹೋಟೆಲ್‌ಗಳನ್ನು ಮೊದಲಿನಂತೆ ಪೂರ್ಣ ಅವಧಿಗೆ ನಡೆಸಲು ಸಾಧ್ಯವಿಲ್ಲದ ಕಾರಣ, ಮುಂಬರುವ ದಿನಗಳಲ್ಲಿ ನಷ್ಟದ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಭೀತಿ ಉದ್ಯಮ ವಲಯದಲ್ಲಿ ಮನೆಮಾಡಿದೆ.

