
ಮಹಾರಾಷ್ಟ್ರಕ್ಕೆ 'ಬಜಾಜ್ ಗುಡ್‌ಬೈ': ಸಾವಿರಾರು ಕೋಟಿಯ ಹೂಡಿಕೆ; ಕರ್ನಾಟಕದತ್ತ ಚೇತಕ್ ಇ-ವಿ?
ಬಜಾಜ್ ಆಟೋ ತನ್ನ ಅಂಗಸಂಸ್ಥೆಯಾದ ಚೇತಕ್ ಟೆಕ್ನಾಲಜಿ ಲಿಮಿಟೆಡ್ ಮೂಲಕ ಪುಣೆಯ ಅಕುರ್ಡಿ ಘಟಕದಲ್ಲಿ ಇವಿ ಘಟಕಕ್ಕಾಗಿ ಸುಮಾರು 750 ಕೋಟಿ ರೂ. ಹೂಡಿಕೆ ಮಾಡಿದೆ.
ಸಬ್ಸಿಡಿ ಬಾಕಿ ಹಾಗೂ ಆಟೋರಿಕ್ಷಾ ಪರ್ಮಿಟ್ ನಿರ್ಬಂಧಗಳ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರದೊಂದಿಗೆ ಉಂಟಾಗಿರುವ ತೀವ್ರ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ದೇಶದ ಪ್ರಮುಖ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ತಯಾರಕ ಸಂಸ್ಥೆಯಾದ 'ಬಜಾಜ್ ಆಟೋ' ತನ್ನ ಎಲೆಕ್ಟ್ರಿಕ್ ವಾಹನ ಉತ್ಪಾದನಾ ವಿಸ್ತರಣೆ ಯೋಜನೆಯನ್ನು ಮಹಾರಾಷ್ಟ್ರದಿಂದ ನೆರೆಯ ರಾಜ್ಯಗಳಿಗೆ ಸ್ಥಳಾಂತರಿಸಲು ಗಂಭೀರ ಚಿಂತನೆ ನಡೆಸಿದೆ.
ಬಜಾಜ್ ಕಂಪನಿಯು ಕರ್ನಾಟಕ ಸರ್ಕಾರವನ್ನು ಸಂಪರ್ಕಿಸಿದ್ದು, ರಾಜ್ಯದ ಅತ್ಯುತ್ತಮ ತಾಣದಲ್ಲಿ ತನ್ನ ಘಟಕವನ್ನು ಸ್ಥಾಪಿಸಲು ಮುಂದಾಗಿದೆ. ಅದೇ ರೀತಿ ಸಬ್ಸಿಡಿ, ಅಗತ್ಯ ಭೂಮಿ ಹಾಗೂ ಇನ್ನಿತರ ಮೂಲಸೌಕರ್ಯಗಳನ್ನು ಪಡೆಯುವ ಕುರಿತು ಸಚಿವಾಲಯದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ಬಜಾಜ್ ಸಂಸ್ಥೆಯ ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದೊಂದಿಗೆ ಬಿರುಕು ಮೂಡಲು ಕಾರಣವೇನು?
ಬಜಾಜ್ ಆಟೋ ಸಂಸ್ಥೆಗೆ ಮಹಾರಾಷ್ಟ್ರ ಸರ್ಕಾರವು ಬರೋಬ್ಬರಿ 75 ಕೋಟಿ ರೂ.ಗಳ ಸಬ್ಸಿಡಿಯನ್ನು ಪಾವತಿಸಬೇಕಿದೆ. ಆದರೆ, ಸಾರಿಗೆ ಇಲಾಖೆಯು ಈ ಸಬ್ಸಿಡಿ ಮೊತ್ತವನ್ನು ಬಿಡುಗಡೆ ಮಾಡುತ್ತಿಲ್ಲ ಹಾಗೂ ಹೊಸ ಆಟೋರಿಕ್ಷಾ ಪರವಾನಗಿಗಳ ಮೇಲೆ ಸರ್ಕಾರ ಇತ್ತೀಚೆಗೆ ದಿಢೀರ್ ನಿರ್ಬಂಧಗಳನ್ನು ಹೇರಿದೆ. "ಮಾರುಕಟ್ಟೆ ತುಂಬಿ ಹೋಗಿದೆ " ಎಂಬ ಕಾರಣ ನೀಡಿ ಸರ್ಕಾರ ಈ ನಿರ್ಧಾರ ಕೈಗೊಂಡಿರುವುದು ಬಜಾಜ್ ಸಂಸ್ಥೆಯ ಬೇಸರಕ್ಕೆ ಕಾರಣ.
ಮಹಾರಾಷ್ಟ್ರದ ತ್ರಿಚಕ್ರ ವಾಹನ ಮಾರುಕಟ್ಟೆಯಲ್ಲಿ ಬಜಾಜ್ ಶೇಕಡಾ 87ರಷ್ಟು ಸಿಂಹಪಾಲು ಹೊಂದಿದ್ದು, ಸಂಸ್ಥೆಯ ಒಟ್ಟಾರೆ ತ್ರಿಚಕ್ರ ವಾಹನ ಮಾರಾಟದಲ್ಲಿ ಶೇ. 15-17ರಷ್ಟು ಪಾಲು ಮಹಾರಾಷ್ಟ್ರದ್ದೇ ಆಗಿದೆ. ಹೀಗಿರುವಾಗ, ಹೊಸ ಆಟೋ ಪರ್ಮಿಟ್‌ಗಳ ಮೇಲಿನ ನಿರ್ಬಂಧವು ಸಂಸ್ಥೆಯ ವಹಿವಾಟಿಗೆ ದೊಡ್ಡ ಪೆಟ್ಟು ನೀಡಿದೆ. ಇದೇ ಕಾರಣಕ್ಕೆ ಬಜಾಜ್ ಆಟೋ ಎಂಡಿ ರಾಜೀವ್ ಬಜಾಜ್ ಅವರು ಇತ್ತೀಚೆಗಷ್ಟೇ ಮಹಾರಾಷ್ಟ್ರದ ಇವಿ ನೀತಿಯನ್ನು "ಭಾರೀ ವೈಫಲ್ಯ" ಎಂದು ಟೀಕಿಸಿ, "ನನ್ನ 36 ವರ್ಷಗಳ ವೃತ್ತಿಜೀವನದಲ್ಲಿ ಇಂಥಹದೊಂದು ನೀತಿ ವೈಫಲ್ಯ ಕಂಡಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದರು.
ಕರ್ನಾಟಕದ ಪ್ರಯತ್ನ ಜೋರು
ಮಹಾರಾಷ್ಟ್ರದಲ್ಲಿನ ಈ ಅನಿಶ್ಚಿತತೆಯಿಂದ ಬೇಸತ್ತಿರುವ ಬಜಾಜ್ ಆಟೋ, ತನ್ನ ಭವಿಷ್ಯದ ಎಲೆಕ್ಟ್ರಿಕ್ ವಾಹನ ಹೂಡಿಕೆಗಳನ್ನು ಸ್ಪಷ್ಟ ನೀತಿ ಮತ್ತು ಪ್ರೋತ್ಸಾಹದಾಯಕ ವಾತಾವರಣ ಇರುವ ಬೇರೆ ರಾಜ್ಯಗಳತ್ತ ತಿರುಗಿಸಲು ನಿರ್ಧರಿಸಿದೆ. ಈಗಾಗಲೇ ಬಜಾಜ್ ಆಟೋ ಸಂಸ್ಥೆಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು, ಬಜಾಜ್ ಆಟೋ ಆಡಳಿತ ಮಂಡಳಿಯನ್ನು ಸಂಪರ್ಕಿಸಿವೆ ಎನ್ನಲಾಗಿದ್ದು, ಕರ್ನಾಟಕ, ತಮಿಳುನಾಡುಗಳು ತಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನ ನೀಡಿವೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ನೂತನ ಇವಿ ಉತ್ಪಾದನಾ ಘಟಕವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಬಜಾಜ್, ಕರ್ನಾಟಕ ಸರ್ಕಾರದ ಜತೆ ಈಗಾಗಲೇ ಮಾತುಕತೆ ಆರಂಭಿಸಿದೆ. ಹೂಡಿಕೆದಾರರಿಗೆ ಉತ್ತಮ ರಿಯಾಯಿತಿಗಳು ಹಾಗೂ ಉದ್ಯಮ ಸ್ನೇಹಿ ವಾತಾವರಣವನ್ನು ಕಲ್ಪಿಸಿಕೊಡುವ ಭರವಸೆಯನ್ನು ಕರ್ನಾಟಕ ನೀಡಿದೆ ಎನ್ನಲಾಗಿದೆ. ಮಹಾರಾಷ್ಟ್ರದ ಜತೆ ಗಡಿ ಹಂಚಿಕೊಂಡಿರುವ ಕರ್ನಾಟಕದ ಬಜಾಜ್ ಒಲವು ತೋರುವ ಸಾಧ್ಯತೆಗಳು ದಟ್ಟವಾಗಿವೆ.
ಕರ್ನಾಟಕದಲ್ಲಿದೆಯೇ ಪೂರಕ ಇವಿ ನೀತಿ?
ಕರ್ನಾಟಕದಲ್ಲಿ 2017ರಲ್ಲಿ ಎಲೆಕ್ಟ್ರಿಕ್ ವಾಹನ ನೀತಿಯನ್ನು ಜಾರಿಗೆ ತರಲಾಗಿತ್ತು. ಅಂತೆಯೇ ಫೆಬ್ರವರಿ 2025ರಲ್ಲಿ 'ಸ್ವಚ್ಛ ಸಂಚಾರ ನೀತಿ'ಯನ್ನು ಪರಿಚಿಸಿದ್ದು 2025-2030ರ ಅವಧಿಯಲ್ಲಿ ಬ್ಯಾಟರಿ ಚಾಲಿತ ವಾಹನಗಳ ಸಂಖ್ಯೆ ಹೆಚ್ಚಿಸುವ ಗುರಿ ಹೊಂದಿದೆ. ರಾಜ್ಯಾದ್ಯಂತ ಇವಿ ಉತ್ಪಾದನೆ, ಹೈಡ್ರೋಜನ್ ಇಂಧನ ವಾಹನಗಳು ಮತ್ತು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲು ಈ ನೀತಿಯಲ್ಲಿ ಒತ್ತು ನೀಡಲಾಗಿದೆ. 2030ರ ವೇಳೆಗೆ ಸ್ವಚ್ಛ ಸಂಚಾರ ವಲಯದಲ್ಲಿ ಬರೋಬ್ಬರಿ 50,000 ಕೋಟಿ ರೂ. ಬಂಡವಾಳ ಹೂಡಿಕೆ ಹಾಗೂ 1 ವ ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯಿದೆ. ಅಂದ ಹಾಗೆ, 2017ರಲ್ಲಿ ಜಾರಿಗೆ ತಂದಿದ್ದ ನೀತಿಗೆ, ಬಳಕೆ ಮತ್ತು ಉತ್ಪಾದನೆ ಹೆಚ್ಚಿಸಲು 2021ರಲ್ಲಿ ಕೆಲವು ತಿದ್ದುಪಡಿಗಳನ್ನು ತರಲಾಗಿತ್ತು.
ಗ್ರಾಹಕರನ್ನು ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಸರ್ಕಾರ ಭರ್ಜರಿ ಕೊಡುಗೆಗಳನ್ನು ಪ್ರಕಟಿಸಿದೆ. 25 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳಿಗೆ ಶೇ.100ರಷ್ಟು ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕ ವಿನಾಯಿತಿ, 25 ಲಕ್ಷ ರೂ. ಮೇಲ್ಪಟ್ಟ ಪ್ರೀಮಿಯಂ ಇವಿಗಳ ಮೇಲಿನ ಜೀವಿತಾವಧಿ ರಸ್ತೆ ತೆರಿಗೆಯನ್ನು ಕೇವಲ ಶೇ.10ಕ್ಕೆ ನಿಗದಿಪಡಿಸಲಾಗಿದೆ. ರಾಜ್ಯದಲ್ಲಿ ಈಗಾಗಲೇ ಕಾರ್ಯಾಚರಣೆಯಲ್ಲಿರುವ 6,000 ಚಾರ್ಜಿಂಗ್ ಕೇಂದ್ರಗಳ ಜೊತೆಗೆ, ಕೇಂದ್ರ ಸರ್ಕಾರದ 'ಪಿಎಂ ಇ-ಡ್ರೈವ್' ಯೋಜನೆಯಡಿ ಹೆದ್ದಾರಿ ಮತ್ತು ಪ್ರಮುಖ ಸ್ಥಳಗಳಲ್ಲಿ 1,500ಕ್ಕೂ ಹೆಚ್ಚು ಅತ್ಯಾಧುನಿಕ ಫಾಸ್ಟ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವುದಾಗಿ ಭರವಸೆ ನೀಡಿದೆ.
ಮಹಾರಾಷ್ಟ್ರದಲ್ಲಿನ ಎಲ್ಲಿದೆ ಹೂಡಿಕೆ
ಬಜಾಜ್ ಆಟೋ ತನ್ನ ಅಂಗಸಂಸ್ಥೆಯಾದ ಚೇತಕ್ ಟೆಕ್ನಾಲಜಿ ಲಿಮಿಟೆಡ್ ಮೂಲಕ ಪುಣೆಯ ಅಕುರ್ಡಿ ಘಟಕದಲ್ಲಿ ಇವಿ ಘಟಕಕ್ಕಾಗಿ ಸುಮಾರು 750 ಕೋಟಿ ರೂ. ಹೂಡಿಕೆ ಮಾಡಿದೆ. ಇದರ ಜೊತೆಗೆ ಬಿಡಿಭಾಗ ಪೂರೈಕೆದಾರರು 250 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಅಲ್ಲದೆ ಇವಿ ವಲಯಕ್ಕಾಗಿ 420 ಕೋಟಿ ರೂ.ಗಳನ್ನು ಕಾಯ್ದಿರಿಸಿದೆ. ಇದೀಗ ಹೊಸ ಘಟಕವು ಮಹಾರಾಷ್ಟ್ರದಿಂದ ಹೊರಗೆ, ಅದರಲ್ಲೂ ಕರ್ನಾಟಕದಲ್ಲಿ ಸ್ಥಾಪನೆಯಾದರೆ, ಇದು ಮಹಾರಾಷ್ಟ್ರದ ಸ್ಥಳೀಯ ಪೂರೈಕೆದಾರರ ಜಾಲದ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ.

