ಭಾರತ ಮತ್ತು ಅಮೆರಿಕ ನಡುವೆ ಶನಿವಾರ (ಫೆಬ್ರವರಿ 7, 2026) ಐತಿಹಾಸಿಕ ವ್ಯಾಪಾರ ಒಪ್ಪಂದ ನಡೆದಿದೆ. ಈ ಒಪ್ಪಂದದಿಂದ ಭಾರತಕ್ಕೆ ಮಾತ್ರವಲ್ಲ ಅಮೆರಿಕಕ್ಕೂ ಬಹಳಷ್ಟು ಲಾಭಗಳಿವೆ.

Click the Play button to hear this message in audio format

ಕಳೆದ ವರ್ಷ ರಷ್ಯಾದಿಂದ ತೈಲ ಖರೀದಿಸಿದ ಕಾರಣಕ್ಕೆ ಅಮೆರಿಕವು ಭಾರತದ ಮೇಲೆ ಶೇ. 50ರಷ್ಟು ಭಾರಿ ಸುಂಕ ಹೇರಿತ್ತು. ಇದೀಗ ಭಾರತ ಮತ್ತು ಅಮೆರಿಕ ನಡುವೆ ಶನಿವಾರ (ಫೆಬ್ರವರಿ 7, 2026) ಒಂದು ಐತಿಹಾಸಿಕ ಮಧ್ಯಂತರ ವ್ಯಾಪಾರ ಒಪ್ಪಂದ ನಡೆದಿದ್ದು, ಅಮೆರಿಕವು ಭಾರತೀಯ ಸರಕುಗಳ ಮೇಲಿನ ಆಮದು ಸುಂಕವನ್ನು ಶೇ. 18ಕ್ಕೆ ಇಳಿಸಲು ಒಪ್ಪಿಕೊಂಡಿದೆ. ಇದು ಭಾರತೀಯ ರಫ್ತುದಾರರಿಗೆ ದೊಡ್ಡ ರಿಲೀಫ್ ನೀಡಿದೆ.

ಈ ಸರಕುಗಳ ಮೇಲೆ ಶೂನ್ಯ ಸುಂಕ

ಜೆನೆರಿಕ್ ಔಷಧಗಳು ರತ್ನ ಮತ್ತು ವಜ್ರಗಳು ಹಾಗೂ ವಿಮಾನದ ಬಿಡಿಭಾಗಗಳ ಮೇಲೆ ಸುಂಕವನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ. ಇದರಿಂದ 'ಮೇಕ್ ಇನ್ ಇಂಡಿಯಾ' ಅಭಿಯಾನಕ್ಕೆ ಭಾರಿ ಬಲ ಸಿಗಲಿದೆ.

ಬೃಹತ್ ಖರೀದಿ ಯೋಜನೆ

ಮುಂದಿನ 5 ವರ್ಷಗಳಲ್ಲಿ ಭಾರತವು ಅಮೆರಿಕದಿಂದ 500 ಬಿಲಿಯನ್ ಡಾಲರ್ ಮೌಲ್ಯದ ಇಂಧನ, ವಿಮಾನ ಬಿಡಿಭಾಗಗಳು, ತಂತ್ರಜ್ಞಾನ ಉತ್ಪನ್ನಗಳು ಮತ್ತು ಕಕಿಂಗ್ ಕೋಲ್ ಅನ್ನು ಖರೀದಿಸಲು ಉದ್ದೇಶಿಸಿದೆ. ಅಷ್ಟೇ ಅಲ್ಲದೇ ಗ್ರಾಫಿಕ್ಸ್ ಪ್ರೊಸೆಸಿಂಗ್ ಯುನಿಟ್‌ಗಳು (GPU) ಮತ್ತು ಡೇಟಾ ಸೆಂಟರ್‌ಗಳಲ್ಲಿ ಬಳಸುವ ತಾಂತ್ರಿಕ ಉತ್ಪನ್ನಗಳ ವ್ಯಾಪಾರವನ್ನು ಎರಡೂ ದೇಶಗಳು ಗಣನೀಯವಾಗಿ ಹೆಚ್ಚಿಸಲಿವೆ.

ಭಾರತಕ್ಕೆ ಏನು ಲಾಭ?

ಅಮೆರಿಕವು ಭಾರತದ ಅತಿ ದೊಡ್ಡ ರಫ್ತು ಮಾರುಕಟ್ಟೆಯಾಗಿದೆ. ಸುಂಕ ಇಳಿಕೆಯಿಂದಾಗಿ ಭಾರತದ ಬಟ್ಟೆ, ಚರ್ಮದ ಉದ್ಯಮ, ಪ್ಲಾಸ್ಟಿಕ್ ಮತ್ತು ರಾಸಾಯನಿಕ ವಸ್ತುಗಳು ಅಮೆರಿಕದಲ್ಲಿ ಅಗ್ಗವಾಗಲಿವೆ. ಇದರಿಂದ ಭಾರತದ ರಫ್ತು ಹೆಚ್ಚಾಗಿ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ಅಮೆರಿಕಕ್ಕೆ ಏನು ಲಾಭ?

ಇನ್ನು ಈ ಮಹತ್ವದ ಒಪ್ಪಂದದಿಂದಾಗಿ ಭಾರತಕಷ್ಟೇ ಅಲ್ಲದೇ ಅಮೆರಿಕಕ್ಕೂ ಭಾರೀ ಪ್ರಯೋಜನವಾಗಲಿದೆ. ಅಮೆರಿಕದ ಕೃಷಿ ಉತ್ಪನ್ನಗಳಾದ ಒಣಗಿದ ಧಾನ್ಯಗಳು, ಪಶು ಆಹಾರ (ಕೆಂಪು ಜೋಳ), ಹಣ್ಣುಗಳು, ಸೋಯಾಬೀನ್ ಎಣ್ಣೆ, ವೈನ್ ಮತ್ತು ಸ್ಪಿರಿಟ್ಸ್ ಮೇಲಿನ ಸುಂಕವನ್ನು ಭಾರತ ಕಡಿಮೆ ಮಾಡಲಿದೆ ಅಥವಾ ರದ್ದುಗೊಳಿಸಲಿದೆ. ವೈದ್ಯಕೀಯ ಉಪಕರಣಗಳು ಮತ್ತು ಮಾಹಿತಿ ತಂತ್ರಜ್ಞಾನ (ICT) ಸರಕುಗಳ ಆಮದಿಗೆ ಇರುವ ಅಡೆತಡೆಗಳನ್ನು ನಿವಾರಿಸಲು ಭಾರತ ಒಪ್ಪಿಕೊಂಡಿದೆ.

ಈ ಒಪ್ಪಂದವು 2025ರ ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರಂಭಿಸಿದ ಮಾತುಕತೆಯ ಫಲವಾಗಿದೆ. ಇದು ಕೇವಲ ಮಧ್ಯಂತರ ಒಪ್ಪಂದವಾಗಿದ್ದು, ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (BTA) ಏರ್ಪಡುವ ಸಾಧ್ಯತೆಯಿದೆ.

ಈ ಒಪ್ಪಂದವು ಚೀನಾ ಅಥವಾ ಇತರ ತೃತೀಯ ರಾಷ್ಟ್ರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಭಾರತ ಮತ್ತು ಅಮೆರಿಕದ ಆರ್ಥಿಕ ಭದ್ರತೆಯನ್ನು ಬಲಪಡಿಸುವ ಉದ್ದೇಶ ಹೊಂದಿದೆ.

Next Story