
ಬೆಂಗಳೂರಿನಲ್ಲಿ 8 ಲಕ್ಷ ಚದರ ಅಡಿಯ ಬೃಹತ್ ಟೆಕ್ ಸೆಂಟರ್ ಆರಂಭಿಸಿದ 'ಏರ್‌ಬಸ್'
ವಿಮಾನಯಾನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಹುಟ್ಟುಹಾಕಲು ಏರ್‌ಬಸ್ ನಿರ್ಧರಿಸಿದ್ದು, ಬೆಂಗಳೂರಿನ ಈ ಕೇಂದ್ರವು ಜಾಗತಿಕ ಮಟ್ಟದಲ್ಲಿ ಕಂಪನಿಯ ಪ್ರಮುಖ ಶಕ್ತಿ ಕೇಂದ್ರವಾಗಿ ಹೊರಹೊಮ್ಮುವ ನಿರೀಕ್ಷೆಯಿದೆ.
ಜಾಗತಿಕ ವಿಮಾನ ತಯಾರಿಕಾ ದೈತ್ಯ 'ಏರ್‌ಬಸ್' (Airbus) ತನ್ನ ಭಾರತೀಯ ಕಾರ್ಯಾಚರಣೆಯನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಮಾರ್ಚ್ 6 ರಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೃಹತ್ 'ಜಾಗತಿಕ ಸಾಮರ್ಥ್ಯ ಕೇಂದ್ರ'ವನ್ನು (Global Capability Centre - GCC) ಉದ್ಘಾಟಿಸಿದೆ. ಭಾರತದಲ್ಲಿ ಏರ್‌ಬಸ್ ಸಂಸ್ಥೆಯ ವಾರ್ಷಿಕ ಬಿಡಿಭಾಗಗಳ ಖರೀದಿ (sourcing) ಮೌಲ್ಯವು ಬರೋಬ್ಬರಿ 1.5 ಬಿಲಿಯನ್ ಡಾಲರ್ (ಸುಮಾರು 12,000 ಕೋಟಿ ರೂ.) ಗಡಿ ದಾಟಿದ ಬೆನ್ನಲ್ಲೇ ಈ ಬೃಹತ್ ತಂತ್ರಜ್ಞಾನ ಕೇಂದ್ರ ತಲೆಎತ್ತಿರುವುದು ದೇಶದ ಆರ್ಥಿಕತೆಗೆ ಕೊಡುಗೆ ನೀಡಲಿದೆ.
ಬೆಂಗಳೂರಿನಲ್ಲಿ ಆರಂಭವಾಗಿರುವ ಈ ನೂತನ 'ಏರ್‌ಬಸ್ ಇಂಡಿಯಾ ಜಿಸಿಸಿ' ಬರೋಬ್ಬರಿ 8,00,000 ಚದರ ಅಡಿಯಷ್ಟು (8 ಲಕ್ಷ ಚ.ಅಡಿ) ವಿಶಾಲವಾದ ಕ್ಯಾಂಪಸ್ ಅನ್ನು ಹೊಂದಿದೆ. ಈ ಅತ್ಯಾಧುನಿಕ ತಂತ್ರಜ್ಞಾನ ಕೇಂದ್ರವು ಏಕಕಾಲದಲ್ಲಿ ಸುಮಾರು 5,000 ಉದ್ಯೋಗಿಗಳಿಗೆ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸುವ ಬೃಹತ್ ಸಾಮರ್ಥ್ಯವನ್ನು ಹೊಂದಿದೆ. ಭಾರತದಲ್ಲಿ ತನ್ನ ಇಂಜಿನಿಯರಿಂಗ್, ಡಿಜಿಟಲ್ ಹಾಗೂ ಖರೀದಿ (procurement) ಸಾಮರ್ಥ್ಯವನ್ನು ವಿಸ್ತರಿಸುವ ಕಾರ್ಯತಂತ್ರದ ಭಾಗವಾಗಿ ಏರ್‌ಬಸ್ ಈ ಹೆಜ್ಜೆ ಇಟ್ಟಿದೆ.
ಎಂಜಿನಿಯರಿಂಗ್ ಮತ್ತು ಡಿಜಿಟಲ್ ಕೇಂದ್ರ
ಈ ನೂತನ ಜಿಸಿಸಿ ಕೇಂದ್ರವು ಕೇವಲ ಕಚೇರಿ ಮಾತ್ರವಲ್ಲದೆ, ಏರ್‌ಬಸ್‌ನ ಭವಿಷ್ಯದ ಆವಿಷ್ಕಾರಗಳ ಪ್ರಮುಖ ಕೇಂದ್ರವಾಗಿ (Hub) ಕಾರ್ಯನಿರ್ವಹಿಸಲಿದೆ. ವಿಮಾನಯಾನ ಕ್ಷೇತ್ರದ ಸಂಕೀರ್ಣ ಇಂಜಿನಿಯರಿಂಗ್ ವಿನ್ಯಾಸಗಳು, ಡಿಜಿಟಲ್ ರೂಪಾಂತರ ಪ್ರಕ್ರಿಯೆಗಳು, ಗ್ರಾಹಕ ಸೇವೆಗಳು ಹಾಗೂ ಬಿಡಿಭಾಗಗಳ ಖರೀದಿ ಕಾರ್ಯಗಳು ಇಲ್ಲಿಂದಲೇ ನಡೆಯಲಿವೆ. ಭಾರತದ ಅಪಾರ ತಾಂತ್ರಿಕ ಪ್ರತಿಭೆಗಳನ್ನು ಬಳಸಿಕೊಂಡು ವಿಮಾನಯಾನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಹುಟ್ಟುಹಾಕಲು ಏರ್‌ಬಸ್ ನಿರ್ಧರಿಸಿದ್ದು, ಬೆಂಗಳೂರಿನ ಈ ಕೇಂದ್ರವು ಜಾಗತಿಕ ಮಟ್ಟದಲ್ಲಿ ಕಂಪನಿಯ ಪ್ರಮುಖ ಶಕ್ತಿ ಕೇಂದ್ರವಾಗಿ ಹೊರಹೊಮ್ಮುವ ನಿರೀಕ್ಷೆಯಿದೆ.

