
ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ 'ಟೈಟಾನಿಯಂ ಟೆಕ್ ಪಾರ್ಕ್'ನಲ್ಲಿ ಏರ್‌ಬಸ್ ಇಂಡಿಯಾ 1,51,710 ಚದರ ಅಡಿಯ ಬೃಹತ್ ಹೆಚ್ಚುವರಿ ಕಚೇರಿ ಸ್ಥಳವನ್ನು ಹೊಸದಾಗಿ ಗುತ್ತಿಗೆಗೆ ಪಡೆದುಕೊಂಡಿದೆ.
ಬೆಂಗಳೂರಿನಲ್ಲಿ ಏರ್‌ಬಸ್ ಉದ್ಯಿಮ ವಿಸ್ತರಣೆ: ವೈಟ್‌ಫೀಲ್ಡ್‌ನಲ್ಲಿ 1.5 ಲಕ್ಷ ಚದರ ಅಡಿ ಕಚೇರಿ ಸ್ಥಳ ಬಾಡಿಗೆಗೆ
ಈ ಹೊಸ ಗುತ್ತಿಗೆಯೊಂದಿಗೆ, ಏರ್‌ಬಸ್ ಸಂಸ್ಥೆಯು ತನ್ನ ಗ್ಲೋಬಲ್ ಕ್ಯಾಪಬಿಲಿಟಿ ಸೆಂಟರ್‌ನ (GCC) ಒಟ್ಟು ಕಚೇರಿ ವಿಸ್ತೀರ್ಣವನ್ನು ಸುಮಾರು 800,000 ಚದರ ಅಡಿಗೆ ಹೆಚ್ಚಿಸಿಕೊಂಡಿದೆ.
ಪ್ರಮುಖ ವಿಮಾನಯಾನ ಮತ್ತು ಏರೋಸ್ಪೇಸ್ ಸಂಸ್ಥೆಯಾದ ಏರ್‌ಬಸ್ (Airbus) ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ 'ಟೈಟಾನಿಯಂ ಟೆಕ್ ಪಾರ್ಕ್'ನಲ್ಲಿ ಏರ್‌ಬಸ್ ಇಂಡಿಯಾ 1,51,710 ಚದರ ಅಡಿಯ ಬೃಹತ್ ಹೆಚ್ಚುವರಿ ಕಚೇರಿ ಸ್ಥಳವನ್ನು ಹೊಸದಾಗಿ ಗುತ್ತಿಗೆಗೆ ಪಡೆದುಕೊಂಡಿದೆ. ಎಂಟು ವರ್ಷಗಳ ಗುತ್ತಿಗೆ ಅವಧಿಗೆ ಈ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಇದಕ್ಕಾಗಿ ಸಂಸ್ಥೆಯು ಪ್ರತಿ ತಿಂಗಳು ಭಾರಿ ಮೊತ್ತದ, ಅಂದರೆ 97.09 ಲಕ್ಷ ರೂಪಾಯಿ ಬಾಡಿಗೆ ಪಾವತಿಸಲಿದೆ.
ಭಾರತದಲ್ಲಿ ಬೃಹತ್ ಉದ್ಯೋಗ ಸೃಷ್ಟಿಯ ಗುರಿ
ಈ ಹೊಸ ಗುತ್ತಿಗೆಯೊಂದಿಗೆ, ಏರ್‌ಬಸ್ ಸಂಸ್ಥೆಯು ತನ್ನ ಗ್ಲೋಬಲ್ ಕ್ಯಾಪಬಿಲಿಟಿ ಸೆಂಟರ್‌ನ (GCC) ಒಟ್ಟು ಕಚೇರಿ ವಿಸ್ತೀರ್ಣವನ್ನು ಸುಮಾರು 800,000 ಚದರ ಅಡಿಗೆ ಹೆಚ್ಚಿಸಿಕೊಂಡಿದೆ. ಇದು ಭಾರತದಲ್ಲಿ ಕಂಪನಿಯ ಭವಿಷ್ಯದ ಬೃಹತ್ ಬೆಳವಣಿಗೆಯ ಯೋಜನೆಗಳಿಗೆ ಪೂರಕವಾಗಿದೆ. ಪ್ರಸ್ತುತ, ಏರ್‌ಬಸ್‌ನ ಬೆಂಗಳೂರು ಜಿಸಿಸಿಯಲ್ಲಿ ಸುಮಾರು 2,790 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹೊಸ ಕಚೇರಿ ವಿಸ್ತರಣೆಯೊಂದಿಗೆ, 2026ರ ವೇಳೆಗೆ ಭಾರತದಾದ್ಯಂತ ನೇರವಾಗಿ 5,000 ಉದ್ಯೋಗಿಗಳನ್ನು ಹೊಂದುವ ಗುರಿಯನ್ನು ಏರ್‌ಬಸ್ ಹೊಂದಿದೆ.
ಏರೋಸ್ಪೇಸ್ ಹಬ್ ಆಗಿ ಹೊರಹೊಮ್ಮುತ್ತಿರುವ ಬೆಂಗಳೂರು
ಏರ್‌ಬಸ್‌ನಂತಹ ಜಾಗತಿಕ ಏರೋಸ್ಪೇಸ್ ಜಿಸಿಸಿಗಳನ್ನು (GCC) ಆಕರ್ಷಿಸುವಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ನಗರದಲ್ಲಿರುವ ಕೌಶಲ್ಯಯುತ ಪ್ರತಿಭೆಗಳ ಭಂಡಾರ ಹಾಗೂ ಅತ್ಯುತ್ತಮ ಮೂಲಸೌಕರ್ಯಗಳು ಜಾಗತಿಕ ಕಂಪನಿಗಳ ಮೊದಲ ಆಯ್ಕೆಯಾಗಿವೆ. ಉದ್ಯಮದ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಬೆಂಗಳೂರು ನಗರವು ಈಗಾಗಲೇ 1,600 ಕ್ಕೂ ಹೆಚ್ಚು ಜಿಸಿಸಿ ಕೇಂದ್ರಗಳಿಗೆ ನೆಲೆಯಾಗಿದೆ. ಅಷ್ಟೇ ಅಲ್ಲದೆ, ಭಾರತದ ಒಟ್ಟು ಜಿಸಿಸಿ ಉದ್ಯೋಗ ಸೃಷ್ಟಿಯಲ್ಲಿ ಬೆಂಗಳೂರು ನಗರವೊಂದೇ ಬರೋಬ್ಬರಿ ಶೇಕಡಾ 40 ರಷ್ಟು ಪಾಲನ್ನು ಹೊಂದಿದೆ.

