
ಬೇಸಿಗೆಗೂ ಮುನ್ನ ಗ್ರಾಹಕರಿಗೆ ಬಿಸಿ ಮುಟ್ಟಿಸಿದ ಎಸಿ ದರ: ಶೇ. 5 ರಿಂದ 15ರಷ್ಟು ಬೆಲೆ ಏರಿಕೆ
2025ರಲ್ಲಿ ಅಕಾಲಿಕ ಮಳೆಯಿಂದಾಗಿ ಎಸಿ ಮಾರುಕಟ್ಟೆ ಕೊಂಚ ಮಂಕಾಗಿತ್ತು. ಆದರೆ, 2024ರಲ್ಲಿ ಉಂಟಾದ ತೀವ್ರ ಬಿಸಿಗಾಳಿಯಿಂದಾಗಿ ದಾಖಲೆಯ ಮಾರಾಟವಾಗಿತ್ತು.
ದೇಶದಲ್ಲಿ ಬೇಸಿಗೆಯ ಬಿಸಿಲು ಹೆಚ್ಚಾಗುತ್ತಿರುವಂತೆಯೇ, ಹವಾನಿಯಂತ್ರಕ (ಏರ್ ಕಂಡಿಷನರ್ - AC) ಉತ್ಪಾದನಾ ಕಂಪನಿಗಳು ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿವೆ. ಕಚ್ಚಾ ವಸ್ತುಗಳ ಬೆಲೆ ಏರಿಕೆ ಮತ್ತು ಪೂರೈಕೆ ಸರಪಳಿಯ ವೆಚ್ಚ ಹೆಚ್ಚಾಗಿರುವುದರಿಂದ ಪ್ರಮುಖ ಎಸಿ ತಯಾರಕ ಕಂಪನಿಗಳು ತಮ್ಮ ಉತ್ಪನ್ನಗಳ ದರವನ್ನು ಶೇಕಡಾ 5 ರಿಂದ 15 ರಷ್ಟು ಹೆಚ್ಚಿಸಿವೆ. ಫೆಬ್ರವರಿಯಿಂದ ಏಪ್ರಿಲ್ ನಡುವಿನ ಅವಧಿಯಲ್ಲಿ ಈ ಹೊಸ ದರಗಳು ಜಾರಿಗೆ ಬರಲಿದ್ದು, ಬೇಸಿಗೆಯ ಬೇಡಿಕೆ ಹೆಚ್ಚಾಗುವ ಮುನ್ನವೇ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.
ಪ್ರಮುಖವಾಗಿ ತಾಮ್ರದಂತಹ ಕಚ್ಚಾ ವಸ್ತುಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿರುವುದು ದರ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಕುಸಿತ ಕಂಡಿರುವುದು, ಜಾಗತಿಕ ಅನಿಶ್ಚಿತತೆಗಳಿಂದಾಗಿ ಸರಕು ಸಾಗಣೆ ವೆಚ್ಚ ಹೆಚ್ಚಳ ಮತ್ತು ಇಂಧನ ದಕ್ಷತೆಯ ಹೊಸ ಮಾನದಂಡಗಳ ಅಳವಡಿಕೆಯಿಂದಾಗಿ ಉತ್ಪಾದನಾ ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ. ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ ಜಾರಿಗೆ ತಂದಿರುವ ಹೊಸ ನಿಯಮಗಳ ಪ್ರಕಾರ 5-ಸ್ಟಾರ್ ಎಸಿಗಳು ಶೇ. 10ರಷ್ಟು ಹೆಚ್ಚು ಇಂಧನ ದಕ್ಷತೆ ಹೊಂದಿರಬೇಕಾಗಿದ್ದು, ಇದು ಕೂಡ ಎಸಿಗಳ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ. ಈ ಆರ್ಥಿಕ ಹೊರೆಯನ್ನು ಸರಿದೂಗಿಸಲು ಬೇರೆ ದಾರಿಯಿಲ್ಲದೆ ಕಂಪನಿಗಳು ಬೆಲೆ ಏರಿಕೆಯ ಮೊರೆ ಹೋಗಿವೆ.
ದರ ಪರಿಷ್ಕರಣೆ ಮಾಡಿದ ಕಂಪನಿಗಳು
ಮಾರುಕಟ್ಟೆಯ ಪ್ರಮುಖ ಕಂಪನಿಗಳು ವಿವಿಧ ಮಾದರಿಗಳ ಆಧಾರದ ಮೇಲೆ ದರವನ್ನು ಪರಿಷ್ಕರಿಸಿವೆ. ಡೈಕಿನ್ ಕಂಪನಿಯು ಏಪ್ರಿಲ್‌ನಿಂದ ಶೇ. 12 ರಷ್ಟು ಬೆಲೆ ಹೆಚ್ಚಿಸಲು ನಿರ್ಧರಿಸಿದೆ. ಟಾಟಾ ಸಮೂಹದ ವೋಲ್ಟಾಸ್ ಕಂಪನಿ ಶೇ. 5 ರಿಂದ 15 ರಷ್ಟು ದರ ಹೆಚ್ಚಳ ಮಾಡುವುದಾಗಿ ಪ್ರಕಟಿಸಿದೆ. ಬ್ಲೂ ಸ್ಟಾರ್ ಕಂಪನಿಯು ಫೆಬ್ರವರಿ ಮಧ್ಯದಲ್ಲೇ ಶೇ. 8 ರಿಂದ 10 ರಷ್ಟು ಬೆಲೆ ಏರಿಕೆ ಮಾಡಿದೆ. ಆದರೆ, ಹಳೆಯ ದಾಸ್ತಾನು ಇನ್ನೂ ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ ಗ್ರಾಹಕರಿಗೆ ತಕ್ಷಣವೇ ಇದರ ಬಿಸಿ ತಟ್ಟಿಲ್ಲ. ಎಲ್ಜಿ ಎಲೆಕ್ಟ್ರಾನಿಕ್ಸ್ 3-ಸ್ಟಾರ್ ಮಾದರಿಗಳಿಗೆ ಶೇ. 7 ಮತ್ತು 5-ಸ್ಟಾರ್ ಮಾದರಿಗಳಿಗೆ ಶೇ. 9 ರಿಂದ 10 ರಷ್ಟು ದರ ಹೆಚ್ಚಿಸಿದೆ. ಅದೇ ರೀತಿ ಹೈಯರ್ ಕಂಪನಿಯು ಮಾರ್ಚ್‌ನಿಂದ ಶೇ. 5 ರಿಂದ 8 ರಷ್ಟು ಹಾಗೂ ಮಿತ್ಸುಬಿಷಿ ಶೇ. 5 ರಷ್ಟು ದರವನ್ನು ಏರಿಕೆ ಮಾಡಿವೆ.
ಭರ್ಜರಿ ಮಾರಾಟದ ನಿರೀಕ್ಷೆಯಲ್ಲಿ ಮಾರುಕಟ್ಟೆ
2025ರಲ್ಲಿ ಅಕಾಲಿಕ ಮಳೆಯಿಂದಾಗಿ ಎಸಿ ಮಾರುಕಟ್ಟೆ ಕೊಂಚ ಮಂಕಾಗಿತ್ತು. ಆದರೆ, 2024ರಲ್ಲಿ ಉಂಟಾದ ತೀವ್ರ ಬಿಸಿಗಾಳಿಯಿಂದಾಗಿ ದಾಖಲೆಯ ಮಾರಾಟವಾಗಿತ್ತು. 2026ರ ಬೇಸಿಗೆಯಲ್ಲೂ ತೀವ್ರ ತಾಪಮಾನ ಇರಲಿದ್ದು, ಬೆಲೆ ಏರಿಕೆಯ ನಡುವೆಯೂ ಎಸಿ ಮಾರಾಟದಲ್ಲಿ ಕನಿಷ್ಠ ಶೇ. 15 ರಷ್ಟು ವೃದ್ಧಿಯಾಗುವ ನಿರೀಕ್ಷೆಯನ್ನು ಉದ್ಯಮದ ತಜ್ಞರು ವ್ಯಕ್ತಪಡಿಸಿದ್ದಾರೆ. ಹೊಸ ಮಾದರಿಯ ಎಸಿಗಳು ಹೆಚ್ಚು ವಿದ್ಯುತ್ ಉಳಿತಾಯ ಮಾಡಲಿವೆ ಹಾಗೂ ಜಿಎಸ್‌ಟಿ ದರವನ್ನು ಶೇ. 28 ರಿಂದ 18ಕ್ಕೆ ಇಳಿಸಿರುವುದರಿಂದ ಗ್ರಾಹಕರಿಗೆ ಬೆಲೆ ಏರಿಕೆಯ ಹೊರೆ ಕೊಂಚ ಮಟ್ಟಿಗೆ ತಗ್ಗಲಿದೆ ಎಂದು ಎಲ್ಜಿ ಸೇರಿದಂತೆ ಪ್ರಮುಖ ಕಂಪನಿಗಳು ವಿಶ್ವಾಸ ವ್ಯಕ್ತಪಡಿಸಿವೆ. ಪ್ರಸ್ತುತ ಭಾರತದ ಎಸಿ ಮಾರುಕಟ್ಟೆಯು ಸುಮಾರು 13.5 ದಶಲಕ್ಷ ಯುನಿಟ್‌ಗಳಷ್ಟಿದ್ದು, ತೀವ್ರ ಪೈಪೋಟಿಯ ನಿರೀಕ್ಷೆಯಿದೆ.

