‘ಭಾಗ್ಯ’ಗಳ ಬೆನ್ನೇರಿ 200 ದಿನ ಪೂರೈಸಿದ ಸಿದ್ದರಾಮಯ್ಯ
x

‘ಭಾಗ್ಯ’ಗಳ ಬೆನ್ನೇರಿ 200 ದಿನ ಪೂರೈಸಿದ ಸಿದ್ದರಾಮಯ್ಯ

ಯಾವುದೇ ಚುನಾಯಿತ ಸರ್ಕಾರದ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಕೇವಲ ಇನ್ನೂರು ದಿನಗಳು ತೀರಾ ಅಲ್ಪಾವಧಿ. ಆದರೆ ರಾಜಕೀಯವಾಗಿ ಮತ್ತು ಆಡಳಿತಾತ್ಮಕವಾಗಿ ಹಲವು ಸವಾಲುಗಳನ್ನು ಎದುರಿಸುತ್ತಾ ತಂತಿ ಮೇಲಿನ ನಡಿಗೆಯಂತೆ ಸರ್ಕಾರವನ್ನು ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ಪಾಲಿಗೆ ಈ ಇನ್ನೂರು ದಿನಗಳ ಆಡಳಿತ ಕೂಡ ಒಂದು ದೊಡ್ಡ ಸಾಧನೆಯೇ.


ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆರು ತಿಂಗಳನ್ನು ಪೂರೈಸಲಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ತಮ್ಮ ಎರಡನೇ ಅವಧಿಯ ಮೊದಲ 100 ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣವಾದ ಐದು ಚುನಾವಣಾ ಪೂರ್ವ ಭರವಸೆಗಳ ಜಾರಿಯ ನಿಟ್ಟಿನಲ್ಲಿ ಗಣನೀಯ ಸಾಧನೆ ಮಾಡಿ ಸಿದ್ದರಾಮಯ್ಯ ಜನಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಆದರೆ, ನಂತರದ ನೂರು ದಿನಗಳ ವಿಷಯದಲ್ಲಿ ಮಾತ್ರ ಅವರು ಹತ್ತಾರು ಸಮಸ್ಯೆ- ಸವಾಲುಗಳ ನಡುವೆ ಬೇಯುತ್ತಿದ್ದಾರೆ.

ಬ್ರಾಂಡ್ ಕಾಂಗ್ರೆಸ್

ಯಾವುದೇ ಚುನಾಯಿತ ಸರ್ಕಾರದ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು 200 ದಿನಗಳು ತುಂಬಾ ಕಡಿಮೆ ಅವಧಿಯಾಗಿದ್ದರೂ, ಸಿದ್ದರಾಮಯ್ಯ ತಮ್ಮ ರಾಜಕೀಯ ಚಾಣಾಕ್ಷತೆ ಮತ್ತು ಅನುಭವದ ಮೇಲೆ ಎದುರಾದ ಪ್ರತಿ ಬಿಕ್ಕಟ್ಟನ್ನು ಅತ್ಯಂತ ಮುತ್ಸದ್ಧಿತನದಿಂದ ನಿಭಾಯಿಸಿದರು. ಆ ಮೂಲಕ ‘ಬ್ರ್ಯಾಂಡ್ ಕಾಂಗ್ರೆಸ್ʼ, ವಾಸ್ತವವಾಗಿ ‘ಬ್ರಾಂಡ್ ಸಿದ್ದರಾಮಯ್ಯʼ ಎಂಬುದನ್ನು ಕಟ್ಟಿ ನಿಲ್ಲಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಆದರೆ ಕಾಂಗ್ರೆಸ್ಸಿನಲ್ಲೇ ಇರುವ ಸಿದ್ದರಾಮಯ್ಯ ಅವರ ವಿರೋಧಿಗಳ ಪ್ರಕಾರ, ರಾಜ್ಯದ ಆಡಳಿತವನ್ನು ಹದ್ದಬಸ್ತಿನಲ್ಲಿಡುವ ಮೂಲಕ ಆಡಳಿತ ಯಂತ್ರಕ್ಕೆ ಬಿಸಿಮುಟ್ಟಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರ ಪ್ರಯತ್ನ ಸಾಲದು. ಅವರು ಇನ್ನಷ್ಟು ಬಿಗಿ ಆಡಳಿತ ನೀಡಬೇಕಿತ್ತು.

ಎಲ್ಲರಿಗೂ ಒಳ್ಳೆಯರಾಗುವ ಪ್ರಯತ್ನ

ಕಳೆದ 100 ದಿನಗಳಲ್ಲಿ, ಸಿದ್ದರಾಮಯ್ಯಗೆ ಸ್ವಪಕ್ಷೀಯರು ಭಿನ್ನಮತೀಯರು ಮತ್ತು ವಿರೋಧ ಪಕ್ಷಗಳು ಒಡ್ಡಿರುವ ಬಿಕ್ಕಟ್ಟುಗಳನ್ನು ಎದುರಿಸುವ ದೊಡ್ಡ ಸವಾಲು ಎದುರಿಗಿತ್ತು. ಅದರಲ್ಲೂ ಅವರ 'ರಾಜಕೀಯ ವಿರೋಧಿ' ಎಚ್ ಡಿ ಕುಮಾರಸ್ವಾಮಿ ಅವರು ಒಡ್ಡುತ್ತಿದ್ದ ಸವಾಲುಗಳನ್ನು ಎದುರಿಸಬೇಕಿತ್ತು. ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ (ಡಿಸಿಎಂ) ಡಿ ಕೆ ಶಿವಕುಮಾರ್ ಅವರೊಂದಿಗಿನ ಪ್ರೀತಿ ಮತ್ತು ದ್ವೇಷದ ಸಂಬಂಧವು ರಾಜಕೀಯ ವಲಯಗಳಲ್ಲಿ ರಹಸ್ಯವಾಗಿಲ್ಲವಾದರೂ, ಇಬ್ಬರೂ ಒಟ್ಟಾಗಿ ಸಾರ್ವಜನಿಕವಾಗಿ ತಮ್ಮಿಬ್ಬರ ನಡುವೆ ಸಂಘರ್ಷವಿಲ್ಲ ಎಂಬ ಚಿತ್ರಣವನ್ನು ನೀಡುವ ಪ್ರಯತ್ನ ನಡೆಸಿದ್ದಾರೆ. ಅಧಿಕಾರ ಅನುಭವಿಸುವ ಕಾರಣಕ್ಕೆ ಅವರಿಬ್ಬರ ನಡುವಿನ ಢಾಳಾಗಿ ಕಾಣುವ ಭಿನ್ನಾಭಿಪ್ರಾಯಗಳು ರಾಜಿ ಮಾಡಿಕೊಂಡಿವೆ ಎಂಬುದು ಈ ಪ್ರೀತಿ-ದ್ವೇಷದ ನಂಟಿನ ಬಹಿರಂಗ ಸತ್ಯವಾಗಿದೆ.

ಕುಮಾರಸ್ವಾಮಿ ವಿರುದ್ಧ ಕಾರ್ಯತಂತ್ರ

ಈಗ ಪರಸ್ಪರ ಕೈಜೋಡಿಸಿರುವ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ಗಳು ಸಿದ್ದರಾಮಯ್ಯ ಅವರ ಪುತ್ರ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರನ್ನು ವರ್ಗಾವಣೆ ಮತ್ತು ನೇಮಕಾತಿ ದಂದೆಯ ಆರೋಪದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದು, ಸಿದ್ದರಾಮಯ್ಯ ಅವರ ಎರಡನೇ 100 ದಿನಗಳ ಅಂತ್ಯದಲ್ಲಿ ಯತೀಂದ್ರ ವಿರುದ್ಧ ಹೊಸ ಆರೋಪದ ಪ್ರಯೋಗ ಮಾಡಿವೆ. ಬಿಜೆಪಿ ಜೊತೆಗಿನ ಮೈತ್ರಿಯ ಬಳಿಕ ಎಚ್ ಡಿ ಕುಮಾರಸ್ವಾಮಿ ಇನ್ನಷ್ಟು ಹುಮ್ಮಸ್ಸಿನಲ್ಲಿರುವಂತೆ ಕಾಣುತ್ತಿದ್ದು, ನಿಜವಾದ ಪ್ರತಿಪಕ್ಷ ನಾಯಕನಂತೆ ವರ್ತಿಸುತ್ತಿದ್ದಾರೆ. ಹೊಸ ಉಮೇದಿನೊಂದಿಗೆ ಸದನದ ಒಳಹೊರಗೆ ಸಿದ್ದರಾಮಯ್ಯ ವಿರುದ್ಧ ಟೀಕಾಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಆದರೆ, ಚಾಣಾಕ್ಷ ಸಿದ್ದರಾಮಯ್ಯ, ಬಹಳ ಎಚ್ಚರಿಕೆಯಿಂದ ಮತ್ತು ಸಂಯಮದಿಂದ ಕುಮಾರಸ್ವಾಮಿಯವರಿಗೆ ಅವರದೇ ವರಸೆಯಲ್ಲಿ ತಿರುಗೇಟು ನೀಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಅಂತಹ ಮರ್ಮಾಘಾತದ ತಿರುಗೇಟಿಗೆ ಒಂದು ಉದಾಹರಣೆ ಎಂದರೆ, ‘ವಿದ್ಯುತ್ ಕಳ್ಳತನ’ ಪ್ರಕರಣದಲ್ಲಿ ಕುಮಾರಸ್ವಾಮಿ ಅವರಿಗೆ ಮುಜುಗರ ಉಂಟುಮಾಡಿದ್ದು.

ಸಿದ್ದರಾಮಯ್ಯ ಸರ್ಕಾರವು ಖಾತರಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಒಂದು ಮಟ್ಟದ ಫೀಲ್‌ ಗುಡ್‌ ಅಲೆ ಇದೆ. ಐದು ಭಾಗ್ಯ ಯೋಜನೆಗಳಲ್ಲಿ ಕೆಲವು ಆರಂಭದ ತೊಡಕುಗಳಿವೆ. ಈ ತೊಡಕುಗಳನ್ನು ಸರ್ಕಾರ ಎಷ್ಟು ಬೇಗ ಪರಿಹರಿಸಿಕೊಂಡು, ಎಲ್ಲಾ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಏಕೆಂದರೆ ಲೋಕಸಭೆಗೆ ಚುನಾವಣೆಗೆ ಕೇವಲ ಆರು ತಿಂಗಳಷ್ಟೇ ಬಾಕಿ ಇದೆ. ಮುಂದಿನ ವರ್ಷ ಲೋಕಸಭೆಗೆ ನಡೆಯಲಿರುವ ನಿರ್ಣಾಯಕ ಚುನಾವಣೆಗೆ ಮುನ್ನ ಕಾಂಗ್ರೆಸ್‌ ತನ್ನ ನೆಲೆಯನ್ನು ವಿಸ್ತಿರಿಸಿಕೊಳ್ಳಬೇಕಿದೆ. ಅದಕ್ಕೆ ಈ ಐದು ಗ್ಯಾರಂಟಿ ಯೋಜನೆಗಳು ಒಂದು ಪ್ರಬಲ ಅಸ್ತ್ರ. ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಈ ಯೋಜನೆಗಳು ತನ್ನ ಬೆಂಬಲಿಗರ ನೆಲೆಯನ್ನು ವಿಸ್ತರಿಸಲಿವೆ ಎಂಬುದು ಕಾಂಗ್ರೆಸ್‌ ಲೆಕ್ಕಾಚಾರ.

ಹರಿಪ್ರಸಾದ್ ಪರಿಣಾಮ

ಸಿದ್ದರಾಮಯ್ಯ ಅವರ ಮೊದಲ ೧೦೦ ದಿನಗಳು ಪಕ್ಷದೊಳಗಿನ ಆಂತರಿಕ ಭಿನ್ನಮತ, ಗುಂಪುಗಾರಿಕೆಯ ವಿಷಯದಲ್ಲಿ ದೊಡ್ಡ ಬೆಳವಣಿಗೆಗಳಿಲ್ಲದೆ, ಆತಂಕವಿಲ್ಲದೆ ಕಳೆದುಹೋದವು. ಆದರೆ, ಈ ಎರಡನೇ ನೂರು ದಿನದ ಅವಧಿಯ ಹೊತ್ತಿಗೆ ಹತ್ತು ಹಲವು ಕಡೆಯಿಂದ ಆಂತರಿಕ ಭಿನ್ನಮತ, ಗುಂಪುಗಾರಿಕೆಗಳು ಬಲಿತುಕೊಂಡವು.

ಆ ಪೈಕಿ ವಿಧಾನ ಪರಿಷತ್‌ ಸದಸ್ಯ ಹಾಗೂ ಎಐಸಿಸಿ ಮಟ್ಟದಲ್ಲಿ ಪ್ರಭಾವಿಯಾಗಿರುವ ಬಿ ಕೆ ಹರಿಪ್ರಸಾದ್‌ ಅವರ ಬಂಡಾಯ ಪ್ರಮುಖವಾದುದು. ಸಿದ್ದರಾಮಯ್ಯ ಅವರನ್ನು ದಲಿತ ವಿರೋಧಿ ಎಂದು ಟೀಕಿಸಿದ ಬಿ ಕೆ ಹರಿಪ್ರಸಾದ್, ಕಾಂಗ್ರೆಸ್‌ ಹಿರಿಯ ನಾಯಕ ಡಾ.ಜಿ. ಪರಮೇಶ್ವರ್ ಅವರಿಗೆ ಡಿಸಿಎಂ ಹುದ್ದೆ ನಿರಾಕರಿಸಿರುವುದರ ಹಿಂದಿನ ತಾರ್ಕಿಕತೆ ಏನು ಎಂದು ಪ್ರಶ್ನಿಸಿದ್ದರು. ರಾಜ್ಯ ಸರ್ಕಾರದ ಪ್ರಮುಖ ಸ್ಥಾನದಲ್ಲಿರುವ ದಲಿತರಿಗೆ ಪ್ರಾತಿನಿಧ್ಯದ ಕೊರತೆಯ ಬಗ್ಗೆ ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಅವರು ಬಹಿರಂಗ ಟೀಕೆ ಮಾಡಿದ್ದರು.

ಮೂವರು ಡಿಸಿಎಂ; ಒಂದು ರಾಜಕೀಯ ದಾಳವೇ?

ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಅಧಿಕಾರದ ಪೈಪೋಟಿ ಇಲ್ಲ; ಪ್ರತಿಸ್ಪರ್ಧೆ ಇಲ್ಲ ಎಂಬ ಸಂದೇಶ ನೀಡಲು ಆ ಇಬ್ಬರೂ ನಾಯಕರು ಎಷ್ಟೇ ಪ್ರಯತ್ನಪಟ್ಟರೂ, ಅವರ ಬೆಂಬಲಿಗರ ನಡುವೆ ಮಾತ್ರ ಭಾರೀ ಪೈಪೋಟಿ ಹಾದಿಬೀದಿಯ ಸಂಗತಿಯಾಗಿದೆ.

ಡಿ ಕೆ ಶಿವಕುಮಾರ್ ಬೆಂಬಲಿಗರಾದ ವಿಜಯಾನಂದ ಕಾಶಪ್ಪನವರ್ ಮತ್ತು ರವಿಕುಮಾರ್ ಗೌಡ ಅವರು ಎರಡೂವರೆ ವರ್ಷಗಳ ನಂತರ ನಾಯಕತ್ವ ಬದಲಾವಣೆಯ ಬಗ್ಗೆ ಹೇಳಿಕೆಗಳನ್ನು ತೇಲಿಬೀಡುತ್ತಲೇ ಇದ್ದರು. ಆದರೆ, ಸಹಕಾರ ಸಚಿವ ರಾಜಣ್ಣ ಅವರು ಸಚಿವ ಸಂಪುಟದಲ್ಲಿ ಇನ್ನೂ ಮೂವರು ಡಿಸಿಎಂಗಳನ್ನು ಸೇರಿಸಿಕೊಳ್ಳುವ ಆಲೋಚನೆಯನ್ನು ತೇಲಿಬಿಟ್ಟರು. ಸಚಿವ ರಾಜಣ್ಣ ಈ ಕುರಿತು ಬಹಿರಂಗ ಹೇಳಿಕೆ ನೀಡಿದ್ದರೂ, ವಾಸ್ತವವಾಗಿ ಅಂತಹದ್ದೊಂದು ಪ್ರಸ್ತಾಪ ಸ್ವತಃ ಸಿದ್ದರಾಮಯ್ಯ ಅವರ ಆಪ್ತ ವಲಯದ ರಾಜಕೀಯ ದಾಳವೇ ಆಗಿತ್ತು ಎಂಬುದು ರಾಜಕೀಯ ಪಂಡಿತರ ವಾದ. ಎರಡೂವರೆ ವರ್ಷಗಳ ಬಳಿಕ ತಾವೇ ಮುಖ್ಯಮಂತ್ರಿ ಎಂದು ಡಿ ಕೆ ಶಿವಕುಮಾರ್ ತಮ್ಮ ಬೆಂಬಲಿಗರ ಮೂಲಕ ಪ್ರಚುರಪಡಿಸುತ್ತಿರುವುದಕ್ಕೆ ಚೆಕ್ಮೇಟ್ ಕೊಡಲು ಸ್ವತಃ ಮುಖ್ಯಮಂತ್ರಿಗಳ ಆಪ್ತ ವಲಯ ಈ ಮೂವರು ಡಿಸಿಎಂ ಪ್ರಸ್ತಾಪವನ್ನು ತೇಲಿಬಿಟ್ಟಿದೆ. “ಈ ಕ್ರಮವು ಸಿದ್ದರಾಮಯ್ಯನವರ ಉತ್ತರಾಧಿಕಾರಿ ತಾವೇ ಎಂದು ಗುರುತಿಸಿಕೊಂಡಿರುವ ಡಿ ಕೆ ಶಿವಕುಮಾರ್ ಅವರನ್ನು ಹತಾಶೆಗೊಳಿಸಲು ಸಿದ್ದರಾಮಯ್ಯ ಪ್ರಯೋಗಿಸಿದ ಚಾಣಾಕ್ಷ ರಾಜಕೀಯ ತಂತ್ರ” ಎಂಬುದು ರಾಜಕೀಯ ಪಂಡಿತರ ವಿಶ್ಲೇಷಣೆ.

ಡಿನ್ನರ್ ಡಿಪ್ಲೊಮಸಿ

ಸದ್ಯ ಸಿದ್ದರಾಮಯ್ಯ ವಿರೋಧಿ ಬಣದ ದನಿಯಂತೆ ಕೆಲಸ ಮಾಡುತ್ತಿರುವ ಬಿ ಕೆ ಹರಿಪ್ರಸಾದ್, ದಲಿತ ಸಿಎಂ ನೆಪದಲ್ಲಿ ಡಾ ಪರಮೇಶ್ವರ್ ದಾಳ ಉರುಳಿಸಿದರೆ, ಅದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕೂಡ ದನಿ ಸೇರಿಸಿದರು. ಡಿಸಿಎಂ ಶಿವಕುಮಾರ್‌ ಅವರು ಬೆಳಗಾವಿ ರಾಜಕಾರಣಕ್ಕೆ ಸಂಬಂಧಿಸಿದ ವಿಷಯದಲ್ಲಿ ಮೂಗು ತೂರಿಸಿದ್ದನ್ನೇ ನೆಪವಾಗಿಟ್ಟುಕೊಂಡು ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿ ಮಠಾಧೀಶರ ಮೂಲಕ ಪರೋಕ್ಷವಾಗಿ ಡಿಸಿಎಂ ಹುದ್ದೆಗೆ ತಮ್ಮ ಹಕ್ಕು ಚಲಾಯಿಸಿದರು.

ಈ ಎಲ್ಲಾ ಬೆಳವಣಿಗೆಗಳು ತಮ್ಮದೇ ಕುರ್ಚಿಯನ್ನು ಅಲುಗಾಡಿಸುವ ಸೂಚನೆ ಅರಿತ ಸಿದ್ದರಾಮಯ್ಯ, ಡಿನ್ನರ್‌ ಡಿಪ್ಲೊಮಸಿಯನ್ನು ಆರಿಸಿಕೊಂಡರು. ಪರಮೇಶ್ವರ್ ಮನೆಗೆ ಬೆಳಗಿನ ಉಪಾಹಾರಕ್ಕಾಗಿ ಭೇಟಿ ನೀಡಿದ ಅವರು, ತಮ್ಮ ಅವಧಿಯ ಕುರಿತ ಊಹಾಪೋಹಗಳಿಗೆ ತೆರೆ ಎಳೆಯಲು ಪ್ರಯತ್ನಿಸಿದರು.

ರಾಜ್ಯ ಕಾಂಗ್ರೆಸ್ಸಿನ ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ದೆಹಲಿಯ ಹೈಕಮಾಂಡ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಕೆ ಸಿ ವೇಣುಗೋಪಾಲ್ ಅವರನ್ನು ಕಳುಹಿಸಿತು. ಇಬ್ಬರೂ ಹೈಕಮಾಂಡ್‌ ಪ್ರತಿನಿಧಿಗಳು, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ಜೊತೆ ಮಾತುಕತೆ ನಡೆಸಿ, ಅಧಿಕಾರ ಹಂಚಿಕೆ, ಡಿಸಿಎಂ ಹುದ್ದೆ ಸೇರಿದಂತೆ ಪಕ್ಷದ ಆಂತರಿಕ ವಿಷಯಗಳ ಕುರಿತು ಸಾರ್ವಜನಿಕ ಹೇಳಿಕೆ ನೀಡದಂತೆ ಇಬ್ಬರೂ ನಾಯಕರಿಗೆ ಲಕ್ಷ್ಮಣ ರೇಖೆ ಎಳೆದರು.

ಒಳ್ಳೆಯ ಬರ ಎಲ್ಲರಿಗೂ ಇಷ್ಟ

ಆಡಳಿತ ಪಕ್ಷವು ಹಲವು ಆಯಾಮಗಳಲ್ಲಿ ಎದುರಾಗಿರುವ ರಾಜಕೀಯ ಸವಾಲುಗಳನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದ್ದರೂ, ಕರ್ನಾಟಕವನ್ನು ಕಾಡುತ್ತಿರುವ ಬರಗಾಲ ಮತ್ತು ರೈತರ ಸಮಸ್ಯೆಗಳನ್ನು ಕಾಂಗ್ರೆಸ್ ಸರ್ಕಾರ ನಿರ್ಲಕ್ಷಿಸುತ್ತಿದೆ. ಅಧಿಕಾರ, ಕುರ್ಚಿಯ ಒಳಬೇಗುದಿಯಲ್ಲಿ ಸರ್ಕಾರ ಮೈಮರೆತಿದ್ದು, ರಾಜ್ಯದ ಭೀಕರ ಬರ ನಿರ್ವಹಣೆಯಲ್ಲಿ ಸಂಪೂರ್ಣ ಸೋತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ.

ಆದರೆ, ಬರ ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಏನೆಲ್ಲ ಸಾಧ್ಯವೋ ಅದನ್ನು ಮಾಡಿರುವುದಾಗಿ ಹೇಳುತ್ತಿರುವ ಸಿದ್ದರಾಮಯ್ಯ, ತಮ್ಮ ಸರ್ಕಾರ ಬರದ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸಿಲ್ಲ. ಆದರೆ, ಬರ ಪರಿಹಾರ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಸಹಕಾಋ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಹಾಗಾಗಿ ರಾಜ್ಯದ ಐತಿಹಾಸಿಕ ಬರದ ವಿಷಯ ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ವಾಗ್ವಾದವಾಗಿ ಮಾರ್ಪಟ್ಟಿದೆ.

Read More
Next Story