ಖರ್ಗೆ ಎಂಬ ಕಟ್ಟಾ ಕಾಂಗ್ರೆಸ್‌ ನಿಷ್ಠೆಯ ಕಟ್ಟಪ್ಪ!
x

ಖರ್ಗೆ ಎಂಬ ಕಟ್ಟಾ ಕಾಂಗ್ರೆಸ್‌ ನಿಷ್ಠೆಯ ಕಟ್ಟಪ್ಪ!


ಕರ್ನಾಟಕದ ಪ್ರಬುದ್ಧ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆಗೀಗ ೮೧ ವರ್ಷ. ಚುನಾವಣಾ ರಾಜಕಾರಣಕ್ಕೆ ಕಾಲಿಟ್ಟು ೫೦ ವರ್ಷ. ದೇಶದ ಪುರಾತನ ರಾಜಕೀಯ ಪಕ್ಷ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಕಳೆದ ಅಕ್ಟೋಬರ್ ೨೬ಕ್ಕೆ ಒಂದು ವರ್ಷ. ಕಾಂಗ್ರೆಸ್ ಪಕ್ಷದ ಈ ಅತ್ಯುನ್ನತ ಹುದ್ದೆಗೇರಿದ ಕರ್ನಾಟದ ಎರಡನೇ ರಾಜಕಾರಣಿ-ಮಲ್ಲಿಕಾರ್ಜುನ ಖರ್ಗೆ. ಇದಕ್ಕೆ ಮುನ್ನ ಈ ಸ್ಥಾನಕ್ಕೇರಿದವರು ಸಿದ್ದವನಹಳ್ಳೀ ನಿಜಲಿಂಗಪ್ಪ. ಹಾಗೆಯೇ ಈ ಸ್ಥಾನಕ್ಕೇರಿದ ಎರಡನೇ ದಲಿತ ರಾಜಕಾರಣಿ. ಖರ್ಗೆ ಅವರಿಗಿಂತ ಮೊದಲು, ಈ ಸ್ಥಾನಕ್ಕೇರಿದ ದಲಿತ ರಾಜಕಾರಣಿ ಬಾಬು ಜಗಜೀವನ್ ರಾಮ್.

ಇಲ್ಲಿ ಒಂದು ಸಂಗತಿಯನ್ನಂತೂ ಖಚಿತಪಡಿಸಬೇಕು. ಖರ್ಗೆ ದಲಿತ ಕಾರ್ಡನ್ನು ಬಳಸಿ ಈ ಸ್ಥಾನಕ್ಕೆ ಬಂದವರಲ್ಲ. ಅವರ ಸಚ್ಛಾರಿತ್ರ, ರಾಜಕೀಯದ ಮುತ್ಸದ್ದಿತನ, ಸಣ್ಣತನ ಕಾಣದ ಹಿರಿತನದ ರಾಜಕಾರಣ, ಗೆದ್ದರೆ ಗೆಲಬೇಕು, ಬಾಹುಬಲಿಯಂತೆ ಎಲ್ಲವನ್ನು ಬಿಟ್ಟುಕೊಡುವುದರ ಮೂಲಕ ಎನ್ನುವ ಉದಾರ ನಿಲುವಿನ ವ್ಯಕ್ತಿತ್ವದಿಂದ ಎನ್ನುವುದು ನಿರ್ವಿವಾದಿತ.

ಖರ್ಗೆ ಕುರಿತಾದ ಗ್ರಂಥ

ಇತ್ತೀಚೆಗೆ ಅವರು ಚುನಾವಣಾ ರಾಜಕಾರಣದಲ್ಲಿ ಐವತ್ತು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ: ಪೊಲಿಟಿಕಲ್ ಎಂಗೇಜ್ಮೆಂಟ್ ವಿಥ್ ಕಂಪ್ಯಾಷನ್, ಜಸ್ಟೀಸ್ ಅಂಡ್ ಇನಕ್ಲ್ಯೂಸೀವ್ ಡೆವಲಪ್ಮೆಂಟ್ ಗ್ರಂಥ ಬಿಡುಗಡೆಯಾಗಿದೆ. ಖ್ಯಾತ ಅರ್ಥಶಾಸ್ತ್ರಜ್ಞ ಶಿಕ್ಷಣ ತಜ್ಞ, ಹಾಗೂ ಬರಹಗಾರ ಡಾ. ಸುಖದೇವ್ ಥೊರಟ್ ಮತ್ತು ಚೇತನ್ ಶಿಂಧೆ, ಸಂಪಾದಿಸಿರುವ ಈ ಪುಸ್ತಕದಲ್ಲಿ ಹಲವು ಮಹನೀಯರು ಖರ್ಗೆ ಅವರನ್ನು ಕುರಿತಾದ ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸಿರುವುದನ್ನು ಸಂಪಾದಿಸಿದ್ದಾರೆ. ಜೈಪುರದ ರಾವತ್ ಪಬ್ಲಿಕೇಷನ್ಸ್ ಪ್ರಕಟಿಸಿದೆ.

ಕಾಂಗ್ರೆಸ್ ಅನ್ನು ಮುನ್ನಡೆಸಲು ಖರ್ಗೆ ಸೂಕ್ತ ವ್ಯಕ್ತಿ

ಪುಸ್ತಕ ಬಿಡುಗಡೆ ಮಾಡಿದ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು; ಭಾರತದ ಆತ್ಮಕ್ಕಾಗಿ ನಡೆದಿರುವ ಈ ಐತಿಹಾಸಿಕ ಸಂಘರ್ಷದಲ್ಲಿ ಕಾಂಗ್ರೆಸ್ ಅನ್ನು ಮುನ್ನಡೆಸಲು ಖರ್ಗೆ ಸೂಕ್ತ ವ್ಯಕ್ತಿ, ಎಂದಿರುವುದು ಖರ್ಗೆ ಅವರು ರಾಜಕಾರಣದ ಮಾನವೀಯ ಜಗತ್ತಿನಲ್ಲಿ ಏರಿರುವ ಎತ್ತರಕ್ಕೆ ಸಾಕ್ಷಿ.

ದೇಶದ ಇತರ ನಾಯಕರು ಹೇಳಿದ ಮಾತುಗಳನ್ನು ಗಮನಿಸಿ: ಮುಂಬರುವ ೨೦೨೪ರ ಲೋಕಸಭಾ ಚುನಾವಣೆಗೆ ಖರ್ಗೆ ಪ್ರತಿಪಕ್ಷಗಳ ಬಣವನ್ನು ಯಶಸ್ಸಿನತ್ತ ಮುನ್ನಡೆಸುವ ಗುರುತರ ಜವಾಬ್ದಾರಿ ಹೊತ್ತಿದ್ದಾರೆ ಎಂದಿದ್ದಾರೆ ಡಿಎಂಕೆಯ ಲೋಕಸಭಾ ನಾಯಕ ಟಿ.ಆರ್. ಬಾಲು. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಐಎನ್‌ಡಿಐಎ (ಇಂಡಿಯಾ) ಬಣವನ್ನು ಮುನ್ನಡೆಸುವ ಹೊಣೆಗಾರಿಕೆ ಖರ್ಗೆ ಮೇಲಿದೆ ಎಂದಿದ್ದಾರೆ ಸಿಪಿಐ(ಎಂ)ನ ಸೀತಾರಾಮ್ ಯಚ್ಚೂರಿ. ಈ ಮಾತುಗಳನ್ನೇ ಹಲವು ನಾಯಕರು, ವಿವಿಧ ರೀತಿಯಲ್ಲಿ ಹೇಳಿದ್ದಾರೆ. ಇದಕ್ಕಿಂತ ಗೌರವದ ಸಂಗತಿ ಮತ್ತೇನಿದೆ?

ಖರ್ಗೆ ಅವರನ್ನು ಕರ್ನಾಟಕ ರಾಜಕಾರಣದ ಅಜಾತಶತೃ ಎಂದರೆ ತಪ್ಪಾಗಲಿಕ್ಕಿಲ್ಲ. ಅವರನ್ನು ರಾಜಕೀಯ ಕಾರಣಕ್ಕಾಗಿ, ಕಾಂಗ್ರೆಸ್‌ನಲ್ಲಿ ಇರುವ ಕಾರಣದಿಂದ ಟೀಕಿಸಬಹುದೇ ಹೊರತು, ಅವರನ್ನು ಅವರ ವ್ಯಕ್ತಿತ್ವವನ್ನು ಅವರ ಸಾಮಾಜಿಕ ನಿಲುವುಗಳನ್ನು, ಸಮಾಜದ ಬಗ್ಗೆ ಅವರಿಗಿರುವ ಕಳಕಳಿಯನ್ನು, ಅವರು ನಂಬಿರುವ ಮಾನವೀಯ ಮೌಲ್ಯಗಳ ಬಗ್ಗೆ ಅವರಿಗಿರುವ ಬದ್ಧತೆಯನ್ನು ಪ್ರಶ್ನಿಸುವವರು ಇರಲಾರರು.

ಬೆಂಕಿಯಲ್ಲಿ ಅರಳಿದ ಹೂವು

೧೯೪೭ರಲ್ಲಿ ಭಾರತ ಸ್ವತಂತ್ರ್ಯಗಳಿಸಿದಾಗ ಭಾರತದ ಒಕ್ಕೂಟಕ್ಕೆ ಸೇರದ ಹೈದರಾಬಾದಿನ ನಿಜಾಮರ ಸೈನ್ಯ ನಡೆಸಿದ ಮಾರಣ ಹೋಮಕ್ಕೆ ತುತ್ತಾದ ನೂರಾರು ಕುಟುಂಬಗಳಲ್ಲಿ ಖರ್ಗೆ ಅವರ ಕುಟುಂಬ ಕೂಡ ಒಂದು. ನಿಜಾಮರ ಸೈನ್ಯ ಖರ್ಗೆ ಕುಟುಂಬ ವಾಸಿಸುತ್ತಿದ್ದ ಗುಡಿಸಲಿಗೆ ಬೆಂಕಿ ಇಟ್ಟಾಗ ಅದರಲ್ಲಿ ದಹಿಸಿ ಹೋದವರು ಅವರ ತಾಯಿ ಹಾಗೂ ಕುಟುಂಬದ ಸದಸ್ಯರು. ಕರ್ನಾಟಕ ಅದೃಷ್ಟವೋ ಏನೋ! ಅಂದು ಮಲ್ಲಿಕಾರ್ಜುನ ಖರ್ಗೆ ಅವರ ತಂದೆ ಮಾಪಣ್ಣ ಮಗು ಮಲ್ಲಿಕಾರ್ಜುನನ್ನು ಎತ್ತಿಕೊಂಡು ಹೊರಗೆ ಹೋದ ಕಾರಣ. ಈ ಖರ್ಗೆ ನಮಗೆ ದಕ್ಕಿದರು. ಅಗ್ನಿಯಿಂದ ಆಗ ಪಾರಾದರೂ, ಖರ್ಗೆ ಬದುಕಿನ ಬೆಂಕಿಯಲ್ಲಿ ಬೆಂದು ಅರಳಿ ಹೂವಾದರು.

ಸೋಲಿಲ್ಲದ ಸರದಾರ

ವಿದ್ಯಾರ್ಥಿಯಾಗಿರುವಾಗಲೇ ಸಾಮಾಜಿಕ ಕಾರಣಗಳಿಗಾಗಿ ಹೋರಾಟದಲ್ಲಿ ತೊಡಗಿಸಿಕೊಂಡವರು ಖರ್ಗೆ. ಕಾರ್ಮಿಕ ಮುಖಂಡರಾಗಿ ಕಾರ್ಮಿಕರ ಹಿತಕಾಪಾಡುವಲ್ಲಿ ನೆರವಾದವರು. ಅವರು ಕೇಂದ್ರದಲ್ಲಿ ಕಾರ್ಮಿಕ ಖಾತೆಯನ್ನು ನಿರ್ವಹಿಸುವಾಗ ಅವರು ಪತ್ರಕರ್ತರಿಗೆ ಅವರ ವೇತನ ಆಯೋಗ ವರದಿಯನ್ನು ಜಾರಿಗೆ ತರಲು ನಡೆಸಿದ ಯತ್ನವನ್ನು ಯಾವ ಪತ್ರಕರ್ತರೂ ಮರೆಯಲು ಸಾಧ್ಯವೇ ಇಲ್ಲ. ಅವರು ಕಾಂಗ್ರೆಸ್ ಸೇರಿದ್ದು ೧೯೬೯ರಲ್ಲಿ. ಅಂದಿನಿಂದ ಇಂದಿನವರೆಗೂ ಕಾಂಗ್ರೆಸ್‌ಗೆ ಅವರದು ಅಚಲ ನಿಷ್ಠೆ. ಹಾಗೆಂದು ಕಾಂಗ್ರೆಸ್ ಕೂಡ ಅವರನ್ನು ಅತ್ಯಂತ ಗೌರವ, ಅಭಿಮಾನಗಳಿಂದ ನಡೆಸಿಕೊಂಡಿದೆ.

ಸೋಲಿಲ್ಲದ ಸರದಾರನ ೩೭೧ (ಜೆ) ವಿಶೇಷ ಸ್ಥಾನಮಾನ

೧೯೭೨ರಲ್ಲಿ ಮೊದಲಬಾರಿಗೆ ಗುರುಮಿಠಕಲ್ ಕ್ಷೇತ್ರದಿಂದ ಆಯ್ಕೆಯಾಗಿ ವಿಧಾನ ಸಭೆಯನ್ನು ಪ್ರವೇಶಿಸಿದ ಖರ್ಗೆ ೨೦೦೮ರವರೆಗೆ ಒಂಭತ್ತು ಬಾರಿ ಆ ಕ್ಷೇತ್ರದಿಂದ ಜಯಗಳಿಸಿ ಸೋಲಿಲ್ಲದ ಸರದಾರ ಎನ್ನಿಸಿಕೊಂಡವರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ, ಹಲವು ಮುಖ್ಯಮಂತ್ರಿಗಳ ಸಂಪುಟದಲ್ಲಿ ಸಚಿವರಾಗಿ ಪ್ರತಿಪಕ್ಷದ ನಾಯಕರಾಗಿ, ಕೇಂದ್ರದಲ್ಲಿ ಸಚಿವರಾಗಿ, ಕರ್ನಾಟಕದ ರಾಜಕಾರಣದಲ್ಲಿ ತಮ್ಮ ವಿಶಿಷ್ಟ ಛಾಪು ಮೂಡಿಸಿದವರು ಖರ್ಗೆ.

೧೯೯೦ರಲ್ಲಿ ಎಸ್. ಬಂಗಾರಪ್ಪ ಅವರ ಸಂಪುಟದಲ್ಲಿ ಕಂದಾಯ ಸಚಿವರಾಗಿ, ಗ್ರಾಮೀಣ ಅಭಿವೃದ್ಧಿ ಸಚಿವರಾಗಿ ಭೂ ಸುಧಾರಣಾ ಕಾಯ್ದೆಯನ್ನು ಶಾಸನವಾಗಿಸಿ, ಭೂರಹಿತರನ್ನು ಉಳುವವನೆ ಹೊಲದೊಡೆಯ ಎಂದವರು ಖರ್ಗೆ. ಕರ್ನಾಟಕದ ಇತಿಹಾಸದಲ್ಲಿ ಇದೊಂದ ಐತಿಹಾಸಿಕ Wಟನೆ. ಹಾಗೆಯೇ ಹೈದರಾಬಾದ್-ಕರ್ನಾಟಕ ಪ್ರದೇಶದ ಪ್ರತಿನಿಧಿಯಾಗಿ ಅಲ್ಲಿನ ಜನರಿಗೆ ೩೭೧ (ಜೆ) ಅಧಿನಿಯಮದಡಿಯಲ್ಲಿ ಈ ಭಾಗದ ಆರು ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ತಂದುಕೊಟ್ಟ ಕೀರ್ತಿ ಅವರದು. ಕರ್ನಾಟಕಕ್ಕೆ ಅವರು ನೀಡಿದ ಕೊಡುಗೆಯನ್ನು ಕನ್ನಡಿಗರು ಎಂದೂ ಮರೆಯಲಾರರು. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಅವರು ಸೋತಾಗ ಅವರ ವಿರೋಧಿಗಳ ಕಣ್ಣಲ್ಲೂ ನೀರು ಬಂದದ್ದು ಸುಳ್ಳಲ್ಲ. ಆದರೆ ಕಾಂಗ್ರೆಸ್ ಹೈ ಕಮಾಂಡ್ ಖರ್ಗೆ ಅವರ ಸೇವೆಯನ್ನು ಮರೆಯಲಿಲ್ಲ. ಅವರನ್ನು ರಾಜ್ಯಸಭೆಗೆ ಕರೆಸಿಕೊಂಡಿತು. ಹಾಗೂ ನಂತರದ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ, ರಾಷ್ಟ್ರ ಕಾಂಗ್ರೆಸ್ ನಾಯಕರೂ ಆದರು.

ಬೇರೆಬೇರೆಯವರು ಖರ್ಗೆ ಅವರ ಬಗ್ಗೆ ಏನು ಹೇಳಿದ್ದಾರೆ ಎನ್ನುವುದಕ್ಕಿಂತ, ಅವರನ್ನು ಕುರಿತು ಕರ್ನಾಟಕ ಕಾಂಗ್ರೆಸ್‌ನ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ,ಕೆ. ಶಿವಕುಮಾರ್ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ. ಸಮಚಿತ್ತ, ಶಾಂತ ಸ್ವಭಾವ, ಸದಾ ಜಾಗೃತ ಪ್ರಜ್ಞೆ, ಅಪಾರ ಅನುಭವದಿಂದ ಮಿಳಿತವಾದ ವ್ಯಕ್ತಿತ್ವ ಖರ್ಗೆ ಅವರದು. ಖರ್ಗೆ ಅವರನ್ನು ಮಹಾಭಾರತದ ವಿದುರನ ಪಾತ್ರಕ್ಕೆ ಹೋಲಿಸಿರು ಶಿವಕುಮಾರ್ ಇವರನ್ನು ಬಾಹುಬಲಿ ಚಿತ್ರಕಥೆಯ ಕಟ್ಟಪ್ಪನಿಗೆ ಹೋಲಿಸಿದ್ದಾರೆ. ಮಹಾಭಾರತದ ವಿದುರ ಎಂದರೆ ಮಹಾ ಮೇಧಾವಿ. ಸ್ಥಿತಪ್ರಜ್ಞತೆಯಳ್ಳ ಮಹಾ ವಿವೇಕಿ. ಇದೇ ರೀತಿ ಇತ್ತೀಚೆಗೆ ತೆರೆಕಂಡ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದ ಕಟ್ಟಪ್ಪ. ಕಟ್ಟಪ್ಪನಂತೆ ತನ್ನನ್ನು ನಂಬಿದ ಕಾಂಗ್ರೆಸ್‌ಗೆ ಕಟ್ಟಪ್ಪ ಎಂಬ ಖರ್ಗೆಯ ನಿಷ್ಠೆ. ವಿದುರ-ಬಾಹುಬಲಿಯ ಒಂದು ಮಿಳಿತ ಪಾಕ-ಖರ್ಗೆ ಎನ್ನುತ್ತಾರೆ, ಶಿವಕುಮಾರ್.

ವಿದುರ ಪರಂಪರೆ ಮೌಲ್ಯಗಳ ಕಟ್ಟಪ್ಪ ನಮ್ಮ ಖರ್ಗೆ. ಇದು ಅತಿಶಯೋಕ್ತಿಯಲ್ಲ. ಕಾಂಗ್ರೆಸ್ ಎಂಬ ಶಿಥಿಲ ಕಟ್ಟಡವನ್ನು ಅಪಾರ ತಾಳ್ಮೆಯಿಂ ಇಟ್ಟಿಗೆ ಮೇಲೆ ಇಟ್ಟಿಗೆ ಇಟ್ಟು ಪುನಶ್ಚೇತನ ನೀಡಿದವರು ಖರ್ಗೆ. ಚುನಾವಣಾ ಸೋಲುಗಳಿಗೂ ಪಕ್ಷದ ತಾತ್ವಿಕ ನೆಲೆಗೂ ಅರ್ಥ ಸಂಬಂಧವಿಲ್ಲ. ಬೂದಿಯಿಂದ ಎದ್ದು ಬರುವ ಫೀನಿಕ್ಸ್ ಪಕ್ಷಿಯಂತೆ, ರಾಜಸ್ಥಾನ ಮಧ್ಯ ಪ್ರದೇಶ, ಛತ್ತೀಸ್ಗಢದಲ್ಲಿ ಸೋತರೂ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿ ೨೦೨೪ ಲೋಕಸಭಾ ಮಹಾ ಸಂಗ್ರಾಮಕ್ಕೆ ಖರ್ಗೆ ಮತ್ತೆ ಸಜ್ಜಾಗುತ್ತಿದ್ದಾರೆ. ಚುನಾವಣಾ ಸೋಲುಗೆಲುವುಗಳು ಖರ್ಗೆ ಅವರನ್ನು ಹಿಗ್ಗಿಸಲಾರವು. ಹಾಗೆಯೇ ಕುಗ್ಗಿಸಲಾರವು ಕೂಡ ಎನ್ನುವುದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅನಿಸಿಕೆ.

Read More
Next Story