
ತಿರುವನಂತಪುರದಲ್ಲಿ ಬಿಜೆಪಿ ಮ್ಯಾಜಿಕ್: ಕೇರಳದ ತಳಮಟ್ಟದಲ್ಲಿ ನಡೆಯಲಿಲ್ಲ ಪಕ್ಷದ ಗಿಮಿಕ್
ಕೇಸರಿ ಪಕ್ಷದ ಎನ್.ಡಿ.ಎ. ಮೈತ್ರಿಕೂಟ 2025ರ ಈ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿನ ಮತಗಳ ಹಂಚಿಕೆಯು 2024ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಶೇ.3.4ರಷ್ಟು ಕುಸಿತ ಕಂಡಿದೆ.
ಇತ್ತೀಚೆಗೆ ತಾನೇ ನಡೆದ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ದಶಕಗಳಿಂದ ಎಡಪಕ್ಷಗಳ ಭದ್ರಕೋಟೆಯಾಗಿದ್ದ ತಿರುವನಂತಪುರ ಮಹಾನಗರ ಪಾಲಿಕೆಯಲ್ಲಿ ಭಾರೀ ಜಯ ಸಾಧಿಸುವ ಮೂಲಕ ಭಾರತೀಯ ಜನತಾ ಪಕ್ಷ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದೆ. ಕೇವಲ ಒಂದು ಸ್ಥಾನದಿಂದ ಕೇಸರಿ ಪಕ್ಷದ ಬಹುಮತಕ್ಕೆ ಭಂಗ ಬಂದಿದೆಯಾದರೂ ರಾಜ್ಯದ ಸಾಂಪ್ರದಾಯಿಕ ಎದುರಾಳಿಗಳಾದ ಎಲ್.ಡಿ.ಎಫ್. ಮತ್ತು ಯುಡಿಎಫ್ ಪರಸ್ಪರ ಕೈಜೋಡಿಸದೇ ಇರಲು ನಿರ್ಧರಿಸುವುದರಿಂದ ಬಿಜೆಪಿಗೆ ವರದಾನವಾಗಿ ಪರಿಣಮಿಸಿದೆ.
ಇದರೊಂದಿಗೆ ರಾಜ್ಯದ ರಾಜಧಾನಿಯಲ್ಲಿಯೇ ಮೊದಲ ಬಾರಿಗೆ ಮೇಯರ್ ಪಟ್ಟ ಅಲಂಕರಿಸುವ ಸದಾವಕಾಶ ಬಿಜೆಪಿಗೆ ದಕ್ಕಿದಂತಾಗಿದೆ.
ಇದೇ ಟ್ರೆಂಡ್ ಏನಾದರೂ ಮುಂದುವರಿದರೆ ಇತ್ತೀಚಿನ ಚುನಾವಣೆಗಳಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಯು 26 ಪಂಚಾಯತ್ ಗಳು, ಎರಡು ಪುರಸಭೆಗಳು ಮತ್ತು ಒಂದು ಮಹಾನಗರ ಪಾಲಿಕೆಯಲ್ಲಿ ಆಡಳಿತ ನಡೆಸುವ ಅವಕಾಶ ಗಿಟ್ಟಿಸುವ ಸಾಧ್ಯತೆಗಳು ನಿಚ್ಚಳವಾಗಿವೆ.
ಆದರೆ ಈ ಕಥೆಗೆ ಇನ್ನೊಂದು ಮುಖವೂ ಇದೆ. ದಕ್ಷಿಣದ ಈ ರಾಜ್ಯದ ಪ್ರಮುಖ ಸ್ಥಳೀಯ ಸಂಸ್ಥೆಯಲ್ಲಿ ಬಿಜೆಪಿ ಐತಿಹಾಸಿಕವಾಗಿ ಆಡಳಿತದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದರೂ ಕೂಡ ಆ ಪಕ್ಷದ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್.ಡಿ,ಎ)ಕ್ಕೆ ಇದೊಂದು ಎಚ್ಚರಿಕೆಯ ಗಂಟೆಯೂ ಹೌದು. ಒಂದು ಕಡೆ ಪಕ್ಷ ಗೆಲುವಿನ ಸಂಭ್ರಮದಲ್ಲಿ ಬೀಗುತ್ತಿದ್ದರೆ ಇನ್ನೊಂದು ಕಡೆ ಪಕ್ಷದ ಸಂಘಟನಾತ್ಮಕ ಮಿತಿಗಳು ಮತ್ತು ಸವಾಲುಗಳು ಈ ಫಲಿತಾಂಶದ ಮೂಲಕ ಬಹಿರಂಗಗೊಂಡಿವೆ.
ನಗರದ ವಾರ್ಡ್-ಗಳು ಮತ್ತು ಗ್ರಾಮ ಪಂಚಾಯ್ತಿಗಳಲ್ಲಿ ಅದು ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದೇನೋ ನಿಜ. ಆದರೆ ಮೈತ್ರಿಕೂಟದ ಮತಗಳ ಹಂಚಿಕೆ ಮಾತ್ರ ಶೇ.15.73ಕ್ಕೆ ಕುಸಿದಿದೆ. 2024ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ. ಆ ಚುನಾವಣೆಯಲ್ಲಿ ಮೈತ್ರಿಕೂಟವು ಶೇ.19.14ರಷ್ಟು ಮತಗಳನ್ನು ಮತ್ತು ಒಂದು ಸ್ಥಾನವನ್ನೂ ಗಳಿಸುವ ಮೂಲಕ ತಾನು ಸಾಂಪ್ರದಾಯಿಕವಾಗಿ ಅಷ್ಟೇನೂ ಪ್ರಬಲವಾಗಿರದ ರಾಜ್ಯವೊಂದರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ತಳಮಟ್ಟದ ವಿಸ್ತರಣೆಯಲ್ಲಿ ವಿಫಲ
ಇದರಿಂದ ಸ್ಪಷ್ಟವಾಗಿ ವ್ಯಕ್ತವಾಗುವ ಸಂಗತಿ ಏನೆಂದರೆ ರಾಷ್ಟ್ರೀಯವಾಗಿ ಉಂಟಾಗಿರುವ ಲಾಭಗಳು ಸ್ಥಳೀಯ ಮಟ್ಟದಲ್ಲಿ ಪ್ರತಿಫಲಿಸುತ್ತಿಲ್ಲ ಎಂಬುದು. ಪಕ್ಷದ ಸಾಂಸ್ಥಿಕ ವ್ಯಾಪ್ತಿಯು ವಿಸ್ತರಿಸಿದ್ದರೂ ಕೂಡ ತಳಮಟ್ಟದಲ್ಲಿ ಅದರ ಚುನಾವಣಾ ವಿಸ್ತರಣೆಗೆ ಭಂಗವುಂಟಾಗಿದೆ ಎಂಬುದು ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಿಂದ ವೇದ್ಯವಾಗುತ್ತದೆ.
ಕೇರಳ ರಾಜಕೀಯ ರಂಗದಲ್ಲಿ ಒಂದು ಪರಿಚಿತ ಮಾದರಿಯನ್ನು ಈ ಫಲಿತಾಂಶದಿಂದ ವ್ಯಕ್ತವಾಗುತ್ತದೆ. ರಾಷ್ಟ್ರೀಯ ಚುನಾವಣೆಗಳಲ್ಲಿ ಅದು ಗಳಿಸಿದ ಲಾಭ ಸ್ಥಳೀಯ ಚುನಾವಣೆಯಲ್ಲಿ ಕಂಡುಬಂದಿಲ್ಲ. ಅದು ಅದೇ ರೀತಿಯ ಮತ ಕ್ರೋಢೀಕರಣವಾಗಿ ಬದಲಾಗುವುದೂ ಇಲ್ಲ. ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಬಿಜೆಪಿ ತನ್ನನ್ನು ತಾನು ಮೂರನೇ ಶಕ್ತಿಯಾಗಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೂ ಕೂಡ 2025ರ ಈ ಚುನಾವಣೆ ಫಲಿತಾಂಶವು ಸ್ಥಳೀಯವಾಗಿ ಅದರ ಮತದಾರರ ಸಂಖ್ಯೆಯು ಒಂದು ನಿರ್ದಿಷ್ಟ ಮಿತಿಯನ್ನು ಮೀರಿ ಮುಂದೆ ಸಾಗಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ.
ಈ ಕುಸಿತದ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಕಳೆದ ಒಂದು ದಶಕದ ಅವಧಿಯಲ್ಲಿ ಕೇರಳದಲ್ಲಿ ಬಿಜೆಪಿಯ ಚುನಾವಣಾ ಪಥವನ್ನು ಪತ್ತೆ ಮಾಡುವುದು ಮುಖ್ಯವಾಗುತ್ತದೆ.
2014ರ ಲೋಕಸಭಾ ಚುನಾವಣೆಯಲ್ಲಿ ಎನ್.ಡಿ.ಎ. ದೇಶದ ಬಹುಭಾಗದಲ್ಲಿ ಭರ್ಜರಿ ಗೆಲುವನ್ನು ದಾಖಲಿಸಿತಾದರೂ ಕೇರಳದ ರಾಜಕೀಯ ವ್ಯವಸ್ಥೆಯಲ್ಲಿ ಬಿಜೆಪಿ ಒಂದು ಅಂಚನ್ನು ದಾಟಿ ಮುಂದೆ ಹೋಗಲು ಸಾಧ್ಯವಾಗಲೇ ಇಲ್ಲ. ಅದರ ಮತಗಳ ಪಾಲು ಕೂಡ ಕೇವಲ ಎರಡಂಕಿಯಲ್ಲಿ ಲಗಾಟಿ ಹೊಡೆದಿತ್ತು. ಒಂದು ಕ್ಷೇತ್ರವನ್ನೂ ಗೆಲ್ಲಲು ಅದರಿಂದ ಸಾಧ್ಯವಾಗಲಿಲ್ಲ. ಕೇರಳದ ರಾಜಕೀಯವು ಎಲ್.ಡಿ,ಎಫ್ ಮತ್ತು ಯುಡಿಎಫ್ ಗಳ ಪರ್ಯಾಯ ಶಕ್ತಿಯಿಂದಲೇ ರೂಪುಗೊಂಡಿತ್ತು ಎಂಬುದು ಸ್ಪಷ್ಟ. ಬಿಜೆಪಿ ಇಲ್ಲಿ ಸಾಮಾಜಿಕ ಆಳ ಮತ್ತು ಸಾಂಘಿಕ ವ್ಯಾಪ್ತಿ ಎರಡನ್ನೂ ಹೊಂದಿರಲಿಲ್ಲ.
ಆದರೆ ಕಳೆದ ಒಂದು ದಶಕದಲ್ಲಿ ಕೇರಳದಲ್ಲಿ ಎನ್.ಡಿ.ಎ ಮೈತ್ರಿಕೂಟದ ಮತಗಳ ಪಾಲಿನಲ್ಲಿ ಕ್ರಮೇಣ ಏರಿಕೆಯಾಗಿದ್ದು ದಿಟ. ಲೋಕಸಭಾ ಚುನಾವಣೆಯಲ್ಲಿ ಈ ಏರಿಕೆಯ ಸ್ಪಷ್ಟ ಚಿತ್ರ ಸಿಕ್ಕಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಶೇ.10.82ರಿಂದ ಆರಂಭವಾದ ಎನ್.ಡಿ.ಎ ಸಾಧನೆಯು 2015ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇ.13.3ಕ್ಕೆ ಜಿಗಿದಿತ್ತು. ಇದು ತಳಮಟ್ಟದಲ್ಲಿ ಆಗಿರುವ ಬಲವರ್ಧನೆಯನ್ನು ತೋರಿಸುತ್ತದೆ.
ಮತ ಪ್ರಮಾಣದ ತೂಗುಯ್ಯಾಲೆ
2016ರಲ್ಲಿ ವಿಧಾನಸಭಾ ಚುನಾವಣೆ ನಡೆದಾಗ ಈ ಮತ ಹಂಚಿಕೆಯು ಶೇ.11.3ಕ್ಕೆ ಕುಸಿದಿತ್ತು. ನಂತರ 2019ರ ಲೋಕಸಭಾ ಚುನಾವಣೆಯಲ್ಲಿ 15.64ಕ್ಕೆ ಏರಿಕೆ ಕಂಡಿತ್ತು. 2020ರಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಾಗ ಶೇ.15.01ರಷ್ಟು ಮತ ಹಂಚಿಕೆಯೊಂದಿಗೆ ಬಹುಮಟ್ಟಿಗೆ ತನ್ನ ಸ್ಥಿತಿಯನ್ನು ಕಾಯ್ದುಕೊಳ್ಳುವಲ್ಲಿ ಅದು ಯಶಸ್ವಿಯಾಗಿತ್ತು. ಆದರೆ 2021ರ ವಿಧಾನಸಭಾ ಚುನಾವಣೆಯಲ್ಲಿ ಇದು ಮತ್ತೆ ಶೇ.12.4ಕ್ಕೆ ಇಳಿಯಿತು. 2024ರ ಲೋಕಸಭಾ ಚುನಾವಣೆಯಲ್ಲಿ ಶೇ.19ಕ್ಕಿಂತ ಹೆಚ್ಚು ಮತಗಳು ಅದಕ್ಕೆ ದಕ್ಕಿದ್ದು ಒಂದು ದೊಡ್ಡ ಮಟ್ಟಿನ ಮತಗಳ ಶಿಫ್ಟ್. ಅದಕ್ಕೆ ಹೋಲಿಸಿದರೆ 2025ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇದು ಮೂರಕ್ಕೂ ಹೆಚ್ಚು ಪಾಯಿಂಟ್ ಕುಸಿದಿದ್ದು ಗಮನಾರ್ಹ ಅಂಶ.
2014-2025ರ ಒಂದು ದಶಕದ ಅವಧಿಯಲ್ಲಿ ಕೇಸರಿ ಪಕ್ಷವು ತನ್ನ ಕಾರ್ಯಕರ್ತರ ನೆಲೆಯನ್ನು ವಿಸ್ತರಿಸಲು, ಬೂತ್ ಮಟ್ಟದ ಸಮಿತಿಗಳನ್ನು ಬೆಳೆಸಲು ಮತ್ತು ಉನ್ನತ ಮಟ್ಟದ ಪ್ರಚಾರದ ಮೂಲಕ ತನ್ನ ಅಸ್ತಿತ್ವವನ್ನು ಹೆಚ್ಚಿಸಲು ಶತಾಯಗತಾಯ ಪ್ರಯತ್ನ ಮಾಡಿತು. ಸತತ ಚುನಾವಣೆಗಳಲ್ಲಿ ಕಾಣಿಸಿಕೊಂಡಿರುವ ಮತ ಹಂಚಿಕೆಯಲ್ಲಿನ ಏರಿಕೆಯುವ ಇದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. 2019ರ ಲೋಕಸಭಾ ಚುನಾವಣೆಯ ವೇಳೆಗೆ ಬಿಜೆಪಿ ತನ್ನ ಮತಗಳ ಸಂಖ್ಯೆಯನ್ನು ಗಣನೀಯವಾಗಿ ಸುಧಾರಿಸಿಕೊಂಡಿತು ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಸಂಸದೀಯ ಪ್ರಾತಿನಿಧ್ಯವನ್ನು ಪಡೆದುಕೊಳ್ಳುವಲ್ಲಿ ಅದು ವಿಫಲವಾದರೂ ಕೂಡ ರಾಜ್ಯದಲ್ಲಿ ತಾನು ಮೂರನೇ ಶಕ್ತಿ ಎಂಬುದನ್ನು ತೋರಿಸುವಲ್ಲಿ ಯಶಸ್ವಿಯಾಯಿತು.
ಧೀರ್ಘಕಾಲದ ಗ್ರಹಿಕೆಗೆ ಬ್ರೇಕ್
2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಸಿಕ್ಕಿದ್ದು ಮಹತ್ವದ ತಿರುವು. ಬಿಜೆಪಿ ತನ್ನ ಮೊದಲ ಲೋಕಸಭಾ ಸ್ಥಾನವನ್ನು ಗೆದ್ದುಕೊಳ್ಳುವ ಮೂಲಕ ಕೇರಳದಲ್ಲಿ ಎನ್.ಡಿ.ಎ ಮತ ಹಂಚಿಕೆ ಪ್ರಮಾಣವು ಶೇ.19ಕ್ಕಿಂತ ಹೆಚ್ಚಿನ ಹಂತಕ್ಕೆ ಪುಟಿಯಿತು. ಏನೇ ಆದರೂ ಕೇರಳದಲ್ಲಿ ಬಿಜೆಪಿಗೆ ಸಾಂಸ್ಥಿಕವಾಗಿ ಗೆಲುವು ಸಾಧ್ಯವಿಲ್ಲ ಎಂಬ ಧೀರ್ಘಕಾಲದ ಗ್ರಹಿಕೆಯನ್ನು ಅದು ಬ್ರೇಕ್ ಮಾಡಿತು. ರಾಜ್ಯದಲ್ಲಿ ಪಕ್ಷವು ದೊಡ್ಡ ರಾಜಕೀಯ ಬದಲಾವಣೆಯ ಹೊಸ್ತಿಲಲ್ಲಿದೆ ಎಂಬ ನಿರೀಕ್ಷೆಗಳನ್ನು ಈ ಫಲಿತಾಂಶ ಹುಟ್ಟುಹಾಕಿತು.
ಈ ಹಿನ್ನೆಲೆಯಲ್ಲಿ ಮೊನ್ನೆ ಮೊನ್ನೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ರಾಷ್ಟ್ರೀಯ ನಾಯಕರು ನೀಡಿದ್ದು ಶೇ.25ರಷ್ಟು ಮತ ಹಂಚಿಕೆಯ ಗುರಿ. ಆದರೆ ಅದನ್ನು ಸಾಧಿಸಲು ಪಕ್ಷದ ಸ್ಥಳೀಯ ನಾಯಕರಿಗೆ ಸಾಧ್ಯವಾಗಲಿಲ್ಲ.
ಎನ್‌ಡಿಎ ಮತ ಹಂಚಿಕೆ ಪ್ರಮಾಣವು ಶೇ. 15.73ಕ್ಕೆ ಸೀಮಿತಗೊಂಡಿದ್ದರಿಂದ ಬಿಜೆಪಿಯು ತನ್ನ ಹಿಂದಿನ ಸ್ಥಳೀಯ ಚುನಾವಣಾ ಪ್ರದರ್ಶನದ ಮಟ್ಟಕ್ಕೆ ಮರಳಿದಂತಾಗಿದೆ. ಇದನ್ನೇನು ದೊಡ್ಡ ಕುಸಿತವೆಂದು ಪರಿಗಣಿಸಬೇಕಾದ ಅಗತ್ಯವಿಲ್ಲದೇ ಇದ್ದರೂ ಕೂಡ, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಂಡುಬಂದ ಅಲೆ ಈ ಬಾರಿ ಸ್ಥಳೀಯ ಸಮಸ್ಯೆಗಳು ಮತ್ತು ಆಡಳಿತದ ದಾಖಲೆಗಳ ಆಧಾರದ ಮೇಲೆ ನಡೆದ ಚುನಾವಣೆಯಲ್ಲಿ ಮುಂದುವರಿಯಲಿಲ್ಲ ಎಂಬುದರ ಸ್ಪಷ್ಟ ಸೂಚನೆಯಾಗಿದೆ.
ಹೆಚ್ಚಿನ ವಾರ್ಡ್‌ಗಳನ್ನು ಗೆದ್ದ ಎನ್‌ಡಿಎ
ಸ್ಥಾನಗಳನ್ನು ಗೆಲ್ಲುವ ವಿಷಯವನ್ನು ಗಮನಿಸಿದರೆ ಬಿಜೆಪಿ ಇನ್ನೂ ಸಾಧಾರಣ ಪ್ರಗತಿಯನ್ನು ತೋರಿಸಬಹುದಾಗಿದೆ. 2020ರ ಚುನಾವಣೆಯಲ್ಲಿ 1,597 ವಾರ್ಡ್‌ಗಳನ್ನು ಗೆದ್ದಿದ್ದ ಎನ್‌ಡಿಎ, 2025ರ ಸ್ಥಳೀಯ ಚುನಾವಣೆಯಲ್ಲಿ 1,919 ವಾರ್ಡ್‌ಗಳಲ್ಲಿ ವಿಜಯ ಸಾಧಿಸಿದೆ. ಅಲ್ಲದೆ, ಕಳೆದ ಬಾರಿ 19 ಗ್ರಾಮ ಪಂಚಾಯಿತಿಗಳಲ್ಲಿ ಬಹುಮತ ಹೊಂದಿದ್ದ ಮೈತ್ರಿಕೂಟ, ಈ ಬಾರಿ ಅದನ್ನು 26 ಪಂಚಾಯಿತಿಗಳಿಗೆ ಹೆಚ್ಚಿಸಿಕೊಂಡಿದೆ.
ಈ ಅಂಕಿಅಂಶಗಳು ಸಾಂಸ್ಥಿಕವಾಗಿ ಪಕ್ಷವು ಬಲಗೊಳ್ಳುತ್ತಿರುವುದಕ್ಕೆ ಸೂಚನೆಯಾಗಿದೆ. ವಿಶೇಷವಾಗಿ ಪಕ್ಷವು ಹೆಚ್ಚಿನ ಗಮನ ಹರಿಸಿದ್ದ ನಗರ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಈ ಬೆಳವಣಿಗೆ ಕಂಡುಬಂದಿದೆ. ಆದಾಗ್ಯೂ, ವಾರ್ಡ್‌ಗಳ ಸಂಖ್ಯೆಯಲ್ಲಿನ ಈ ಸುಧಾರಣೆಯು ಹೆಚ್ಚಿನ ಮತ ಹಂಚಿಕೆಯಾಗಿ ಪರಿವರ್ತನೆಯಾಗಿಲ್ಲ.
ಯುಡಿಎಫ್- ಎಲ್‌ಡಿಎಫ್ ಪ್ರಾಬಲ್ಯ
ಇದಕ್ಕೆ ವ್ಯತಿರಿಕ್ತವಾಗಿ, ಯುಡಿಎಫ್ ಶೇ.40.7ರಷ್ಟು ಮತ ಹಂಚಿಕೆಯೊಂದಿಗೆ ಸ್ಥಳೀಯ ಚುನಾವಣೆಯಲ್ಲಿ ಸ್ಪಷ್ಟ ಮುನ್ನಡೆ ಸಾಧಿಸಿದ್ದರೆ, ಎಲ್‌ಡಿಎಫ್ ಶೇ.35.7ರಷ್ಟು ಮತಗಳನ್ನು ಪಡೆದಿದೆ. ಒಟ್ಟಾರೆಯಾಗಿ, ಈ ಎರಡು ಸಾಂಪ್ರದಾಯಿಕ ರಂಗಗಳು ಶೇ.75ಕ್ಕಿಂತ ಹೆಚ್ಚು ಮತದಾರರನ್ನು ತಮ್ಮೊಂದಿಗೆ ಉಳಿಸಿಕೊಂಡಿವೆ, ಇದು ತಳಮಟ್ಟದ ಸಂಸ್ಥೆಗಳಲ್ಲಿ ಅವುಗಳ ಪ್ರಾಬಲ್ಯವನ್ನು ಮತ್ತೆ ಸಾಬೀತುಪಡಿಸಿದಂತಾಗಿದೆ.
2025ರ ಸ್ಥಳೀಯ ಚುನಾವಣೆಯ ಪ್ರಮುಖ ಲಕ್ಷಣವೆಂದರೆ ಬಿಜೆಪಿಯ ಬೃಹತ್ ಪ್ರಮಾಣದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಪಕ್ಷವು ಒಟ್ಟು ಕಣಕ್ಕಿಳಿಸಿದ ಅಭ್ಯರ್ಥಿಗಳ ಸಂಖ್ಯೆ 19,262. ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ ಇದು ಹೆಚ್ಚು. ಕಾಂಗ್ರೆಸ್ 17,497 ಮತ್ತು ಸಿಪಿಐ(ಎಂ) 14,802 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಬಿಜೆಪಿಯ ಈ ಪ್ರಮಾಣದ ಪಾಲ್ಗೊಳ್ಳುವಿಕೆಯು ಅದರ ಸಾಂಸ್ಥಿಕ ಆತ್ಮವಿಶ್ವಾಸ ಮತ್ತು ಸಾಧ್ಯವಾದಷ್ಟು ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಕಾರ್ಯತಂತ್ರಕ್ಕೆ ಸಾಕ್ಷಿಯಾಗಿದೆ.
ಆದರೂ, ಅನೇಕ ಕಡೆ ಈ ವ್ಯಾಪಕ ಪ್ರಮಾಣದ ಸ್ಪರ್ಧೆಯ ತಂತ್ರವು ಸೀಮಿತ ಫಲಿತಾಂಶಗಳನ್ನಷ್ಟೇ ನೀಡಿತು. ಬಿಜೆಪಿ ಅಭ್ಯರ್ಥಿಗಳು ಬಹುತೇಕ 3ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು; ಇದು ಪಕ್ಷಕ್ಕೆ ನಿಷ್ಠಾವಂತ ಮತದಾರರ ನೆಲೆಯನ್ನು ಗಟ್ಟಿಗೊಳಿಸಿದೆ ಎಂಬುದು ನಿಜವಾದರೂ ಗೆಲುವಿನ ಎತ್ತರಕ್ಕೇರಲು ಸಾಧ್ಯವಾಗಲಿಲ್ಲ. ಈ ಮಾದರಿಯು ಒಟ್ಟಾರೆ ಮತ ಹಂಚಿಕೆಯ ಮೇಲೆ ಪಕ್ಷದ ಪ್ರಯತ್ನಗಳ ಪ್ರಭಾವವನ್ನು ತಗ್ಗಿಸಿತು. ಜೊತೆಗೆ ಗಟ್ಟಿಯಾದ ಸಾಮಾಜಿಕ ತಳಹದಿ ಇಲ್ಲದ ವಿಸ್ತರಣೆಗೂ ಒಂದು ಮಿತಿಯಿದೆ ಎಂಬುದನ್ನು ಎತ್ತಿ ತೋರಿಸಿತು.
ನಗರ ಮತ್ತು ಗ್ರಾಮೀಣದ ಅಂತರ
ಬಿಜೆಪಿಗಿರುವ ಬೆಂಬಲದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಸದ ಸ್ಪಷ್ಟ ವಿಭಜನೆ ಇರುವುದನ್ನು ಈ ಫಲಿತಾಂಸ ಬಹಿರಂಗಪಡಿಸಿದೆ. ಮಧ್ಯಮ ವರ್ಗದ ಮತದಾರರು ಮತ್ತು ಯುವಜನರಲ್ಲಿ ಪಕ್ಷದ ಆಕರ್ಷಣೆ ಬಲವಾಗಿರುವ ನಗರ ಮತ್ತು ದೊಡ್ಡ ಪಟ್ಟಣಗಳಲ್ಲಿ ಪಕ್ಷವು ತುಲನಾತ್ಮಕವಾಗಿ ಉತ್ತಮ ಪ್ರದರ್ಶನ ನೀಡಿದೆ. ನಗರ ಪಾಲಿಕೆಗಳಲ್ಲಿನ ಅದರ ಸಾಧನೆಯು, ಕೇರಳದಲ್ಲಿ ಬಿಜೆಪಿಯ ಬೆಳವಣಿಗೆ ಹೆಚ್ಚು ನಗರ ಕೇಂದ್ರಿತವಾಗಿದೆ ಎಂಬ ಅಭಿಪ್ರಾಯವನ್ನು ಮತ್ತೆ ಗಟ್ಟಿಗೊಳಿಸಿದೆ.
ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿಗೆ ಈಗಲೂ ಪ್ರಬಲ ಪ್ರತಿರೋಧವಿದೆ ಎಂಬುದು ಕೂಡ ಸ್ಪಷ್ಟವಾಗಿ ಕಂಡುಬಂದಿದೆ. ಸಿಪಿಐ(ಎಂ)ನ ಸಾಂಸ್ಥಿಕ ಶಕ್ತಿ ಮತ್ತು ಕಾಂಗ್ರೆಸ್‌ನ ಸಾಂಪ್ರದಾಯಿಕ ಮತ ಬ್ಯಾಂಕ್‌ಗಳು ಈ ಪ್ರದೇಶಗಳಲ್ಲಿ ತಮ್ಮ ಪ್ರಾಬಲ್ಯವನ್ನು ಈಗಲೂ ಉಳಿಸಿಕೊಂಡಿವೆ. ಈ ಜಾಲಗಳನ್ನು ಭೇದಿಸಲು ಬಿಜೆಪಿಗೆ ಸಾಧ್ಯವಾಗದೇ ಇರುವುದು, ರಾಜ್ಯಾದ್ಯಂತ ಅದರ ಮತ ಹಂಚಿಕೆಯನ್ನು ಹೆಚ್ಚಿಸಲು ಪ್ರಮುಖ ಅಡ್ಡಿಯಾಗಿದೆ ಎಂದರೆ ಅಚ್ಚರಿಯಲ್ಲ.
ಫಲಿತಾಂಶವನ್ನು ನಿರ್ಧರಿಸಿದ ಮತ್ತೊಂದು ಅಂಶವೆಂದರೆ ಸ್ಥಳೀಯ ಚುನಾವಣೆಗಳ ಸ್ವರೂಪ. ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸ್ಥಳೀಯ ಆಡಳಿತದ ಮೌಲ್ಯಮಾಪನ, ಕಲ್ಯಾಣ ಯೋಜನೆಗಳ ರೀಚ್ ಮತ್ತು ಅಭ್ಯರ್ಥಿಗಳ ವೈಯಕ್ತಿಕ ಪರಿಚಯದಿಂದ ಹೆಚ್ಚು ಪ್ರಭಾವಿತವಾಗಿರುತ್ತವೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಗುವ ರಾಷ್ಟ್ರೀಯ ವಿಚಾರಗಳು ಮತ್ತು ನಾಯಕತ್ವದ ಅಂಶಗಳು ಈ ಸ್ಥಳೀಯ ಮಟ್ಟದ ಸ್ಪರ್ಧೆಗಳಲ್ಲಿ ಅಷ್ಟಾಗಿ ಪ್ರಾಮುಖ್ಯತೆ ಪಡೆಯುವುದಿಲ್ಲ.
ಇನ್ನೂ ಭದ್ರವಾಗಬೇಕಿದೆ ನೆಲೆ
ಇದರ ಪರಿಣಾಮವಾಗಿ, ತ್ರಿಶೂರು ಲೋಕಸಭಾ ಕ್ಷೇತ್ರದ ಗೆಲುವು ಮತ್ತು 2024ರಲ್ಲಿ ಬಿಜೆಪಿ ತೋರಿದ ಸುಧಾರಿತ ಪ್ರದರ್ಶನವು ರಾಜ್ಯಾದ್ಯಂತ ಕಂಡುಬಂದ ರಾಜಕೀಯ ಬದಲಾವಣೆ ಎನ್ನುವುದಕ್ಕಿಂತ ನಿರ್ದಿಷ್ಟ ಕ್ಷೇತ್ರಗಳಿಗೆ ಸೀಮಿತವಾದ ಯಶಸ್ಸಿನಂತೆ ಕಾಣುತ್ತಿದೆ. ಕೇರಳದ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯು ಚುನಾವಣಾಯನ್ನು ಸಜ್ಜುಗೊಳಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ; ಆದರೆ 2025ರ ಫಲಿತಾಂಶಗಳು ಬಿಜೆಪಿ ಈ ವ್ಯವಸ್ಥೆಯೊಳಗೆ ಇನ್ನೂ ಭದ್ರವಾಗಿ ನೆಲೆಸಬೇಕಿದೆ ಎಂಬುದರ ಸೂಚನೆಯಾಗಿದೆ.
ಹಾಗಂತ ಮತ ಹಂಚಿಕೆಯಲ್ಲಿನ ಇಳಿಕೆಯು ಬೆಳವಣಿಗೆಯ ಹಿಮ್ಮುಖ ಚಲನೆ ಎಂದು ಭಾವಿಸಬೇಕಾಗಿಲ್ಲ. ಬದಲಿಗೆ ಒಂದು 'ವಿರಾಮ' ಎಂದು ವಿಶ್ಲೇಷಿಸಬಹುದು. ಬಿಜೆಪಿ 2014ಕ್ಕಿಂತ ಮೊದಲಿಗಿದ್ದ ಅಲ್ಪ ಮತಗಳ ಸ್ಥಿತಿಯನ್ನು ಮೀರಿ ಬೆಳೆದಿದೆ ಮತ್ತು ಈಗ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇ.15ರಿಂದ 16ರಷ್ಟು ಸ್ಥಿರವಾದ ಮತದಾರರ ನೆಲೆಯನ್ನು ಹೊಂದಿದೆ. ಆದರೆ, ತನ್ನ ಸಾಮಾಜಿಕ ಮೈತ್ರಿ ಮತ್ತು ಗ್ರಾಮೀಣ ರೀಚ್ ಅನ್ನು ಮರುರೂಪಿಸದೆ, ಪಕ್ಷವು ಈ ಮಿತಿಯನ್ನು ಮೀರಿ ಬೆಳೆಯಲು ಸಾಧ್ಯವೇ ಎಂಬುದು ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ.
ಕೇರಳವು ಮುಂದಿನ ವಿಧಾನಸಭಾ ಮತ್ತು ಸಂಸದೀಯ ಚುನಾವಣೆಗಳತ್ತ ಮುಖ ಮಾಡಿರುವ ಈ ಸಮಯದಲ್ಲಿ, ತಳಮಟ್ಟದ ರಾಜಕೀಯವೇ ಫಲಿತಾಂಶವನ್ನು ನಿರ್ಧರಿಸುತ್ತದೆ ಎಂಬುದನ್ನು ಪಕ್ಷ ಗಮನಿಸಬೇಕಾಗಿದೆ. ಈ ರಾಜ್ಯದಲ್ಲಿ ರಾಷ್ಟ್ರೀಯ ಅಲೆಯನ್ನು ಶಾಶ್ವತ ಸ್ಥಳೀಯ ಬೆಂಬಲವನ್ನಾಗಿ ಪರಿವರ್ತಿಸುವ ಸವಾಲನ್ನು ಬಿಜೆಪಿ ಈಗ ಎದುರಿಸುತ್ತಿದೆ. ಇನ್ನು ಕೆಲವೇ ತಿಂಗಳಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇದು ಪಕ್ಷದ ಮುಂದಿನ ದೊಡ್ಡ ಪರೀಕ್ಷೆಯಾಗಲಿದೆ.

