![ದಲಿತ ಸಿಎಂ ಕೂಗು ಮುನ್ನಲೆಗೆ: ಕಾಂಗ್ರೆಸ್‌ಗೆ ಆತಂಕ ದಲಿತ ಸಿಎಂ ಕೂಗು ಮುನ್ನಲೆಗೆ: ಕಾಂಗ್ರೆಸ್‌ಗೆ ಆತಂಕ](https://karnataka.thefederal.com/h-upload/2024/01/02/425199-whatsapp-image-2024-01-02-at-33741-pm.webp)
ದಲಿತ ಸಿಎಂ ಕೂಗು ಮುನ್ನಲೆಗೆ: ಕಾಂಗ್ರೆಸ್‌ಗೆ ಆತಂಕ
ದಲಿತ ಆಕಾಂಕ್ಷಿಗಳ ಪಟ್ಟಿಯಲ್ಲಿ ಹಿರಿಯ ನಾಯಕ ಡಾ ಜಿ ಪರಮೇಶ್ವರ್ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಹೆಸರುಗಳು ಮುಂಚೂಣಿಯಲ್ಲಿವೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೇವಲ ಆರೇ ತಿಂಗಳಲ್ಲಿ ಪಕ್ಷದೊಳಗೆ ನಾಯಕತ್ವದ ಬಿಕ್ಕಟ್ಟು ತಲೆ ಎತ್ತಿದೆ. ದಲಿತ ಮುಖ್ಯಮಂತ್ರಿ ಬೇಡಿಕೆ ಹೆಚ್ಚುತ್ತಿವೆ. ಅದರಲ್ಲೂ ದಲಿತ ಆಕಾಂಕ್ಷಿಗಳ ಪಟ್ಟಿಯಲ್ಲಿ ಹಿರಿಯ ನಾಯಕ ಡಾ ಜಿ ಪರಮೇಶ್ವರ್ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಹೆಸರುಗಳು ಮುಂಚೂಣಿಯಲ್ಲಿವೆ.
2011ರ ಜನಗಣತಿಯ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆಯ 17.5 ಪ್ರತಿಶತದಷ್ಟು ದಲಿತರಿದ್ದು, ಅವರಲ್ಲೂ ಪ್ರಬಲ ರಾಜಕೀಯ ನಾಯಕರು ಇದ್ದಾರೆ. ಆದರೆ ಈವರೆಗೂ ದಲಿತ ಸಮುದಾಯದಿಂದ ಯಾರೊಬ್ಬರೂ ಮುಖ್ಯಮಂತ್ರಿಯಾಗಿಲ್ಲ. ದಲಿತರಿಗೆ ಸಿಎಂ ಸ್ಥಾನ ನೀಡಲು ಹಿಂದೇಟು ಹಾಕಲು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಪ್ರಾಬಲ್ಯವೇ ಕಾರಣ ಎಂದು ಹೇಳಲಾಗುತ್ತದೆ.
ಲಿಂಗಾಯತರು ಮತ್ತು ಒಕ್ಕಲಿಗರು ದಶಕಗಳಷ್ಟು ಹಳೆಯದಾದ ಜಾತಿ ಗಣತಿಯನ್ನು ಉಲ್ಲೇಖಿಸಿ ಕಳೆದ ಆರು ದಶಕಗಳಿಂದ ಉನ್ನತ ಹುದ್ದೆಯನ್ನು ಆಕ್ರಮಿಸಿಕೊಂಡಿದ್ದಾರೆ. ಅಲ್ಲದೆ, ಇಬ್ಬರು ಬ್ರಾಹ್ಮಣ ಸಮುದಾಯದ ನಾಯಕರಾದ ಆರ್ ಗುಂಡೂರಾವ್ ಮತ್ತು ರಾಮಕೃಷ್ಣ ಹೆಗಡೆ ಕೂಡ ಮುಖ್ಯಮಂತ್ರಿಗಳಾಗಿದ್ದರು. ಲಿಂಗಾಯತ-ಒಕ್ಕಲಿಗರೇ ಮುಖ್ಯಮಂತ್ರಿಯಾಗಬೇಕು ಎನ್ನುವ ಅಲಿಖಿತ ನಿಯಮವನ್ನು ಇತರೆ ಹಿಂದುಳಿದ ವರ್ಗ (ಒಬಿಸಿ)ಯನ್ನು ಪ್ರತಿನಿಧಿಸುವ ಸಿದ್ದರಾಮಯ್ಯ ಬ್ರೇಕ್ ಮಾಡಿದರು.
ಕಾಂತರಾಜ್ ಆಯೋಗದ ಜಾತಿ ಗಣತಿ ವರದಿಯ ಸೋರಿಕೆಯಾದ ಭಾಗದಲ್ಲಿ, ದಲಿತರು ಈಗ ರಾಜ್ಯದ ಜನಸಂಖ್ಯೆಯ 19.5 ಪ್ರತಿಶತ, ಲಿಂಗಾಯತರು ಮತ್ತು ಒಕ್ಕಲಿಗರು ಕ್ರಮವಾಗಿ 14 ಮತ್ತು 11 ಶೇ.ರಷ್ಟು ಇದ್ದಾರೆ ಎಂದು ಹೇಳಲಾಗಿದೆ.
ಕಳೆದ ಮೇ ತಿಂಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ದಲಿತ ನಾಯಕರು, ವಿಶೇಷವಾಗಿ ಡಾ ಪರಮೇಶ್ವರ್ ಅವರು ಮುಖ್ಯಮಂತ್ರಿ ಸ್ಥಾನಕ್ಕಾಗಿ ತಮ್ಮ ಹಕ್ಕು ಚಲಾಯಿಸಿದ್ದರು. ಆದರೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವಿನ ಭಾರಿ ಪೈಪೋಟಿಯಿಂದಾಗಿ ದಲಿತ ಸಿಎಂ ಕೂಗು ಗಟ್ಟಿಯಾಗಿ ಕೇಳಿಬರಲಿಲ್ಲ. ಆದರೆ ದಲಿತ ಮುಖ್ಯಮಂತ್ರಿಯ ಕೂಗು ಮಾತ್ರ ನಿಂತಿಲ್ಲ. ಇದೀಗ ಈ ಸಾಲಿಗೆ ಯುವನಾಯಕ ಪ್ರಿಯಾಂಕ್ ಖರ್ಗೆ ಸೇರ್ಪಡೆಯಾಗಿದ್ದಾರೆ. ಸಿದ್ದರಾಮಯ್ಯ ಅವರು ಭರವಸೆ ನೀಡಿದಂತೆ ಜಾತಿಗಣತಿಯನ್ನು ಒಪ್ಪಿಕೊಂಡರೆ ಮತ್ತು ಸೋರಿಕೆಯಾದ ವರದಿಯ ದತ್ತಾಂಶವು ಸರಿ ಎಂದು ಸಾಬೀತಾದರೆ, ದಲಿತರು ಇತರ ಸಮುದಾಯಗಳ ಮೇಲೆ ಹಿಡಿತ ಸಾಧಿಸುತ್ತಾರೆ.
ಕರ್ನಾಟಕದ 28 ಲೋಕಸಭಾ ಸ್ಥಾನಗಳ ಪೈಕಿ ಕನಿಷ್ಠ 20 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದರೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸರ್ಕಾರದ ಮುಂದಿನ ಅವಧಿಗೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಅವರ ಬೆಂಬಲಿಗರು ಭಾವಿಸಿದ್ದಾರೆ. ಈ ಸಾಧ್ಯತೆಯಿಂದ ದಲಿತ ಮುಖಂಡ ಪರಮೇಶ್ವರ್ ಅವರು ಅಸಮಾಧಾನಗೊಂಡಿದ್ದಾರೆ.
ಒಂದು ಕಾಲದಲ್ಲಿ ಸಿದ್ದರಾಮಯ್ಯ ಅವರಿಗೆ ಬಹಳ ಆಪ್ತರಾಗಿದ್ದ ಬಿ.ಕೆ.ಹರಿಪ್ರಸಾದ್ ಅವರು ಇದೀಗ ದಲಿತರ ವಿಚಾರ ಪ್ರಸ್ತಾಪಿಸಿ ಡಾ ಪರಮೇಶ್ವರ್ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಪರಮೇಶ್ವರ್‌ಗೆ ಉಪಮುಖ್ಯಮಂತ್ರಿ ಸ್ಥಾನ ನಿರಾಕರಿಸಿದ್ದೇಕೆ? ಸರ್ಕಾರದಲ್ಲಿ ದಲಿತರಿಗೆ ಸೂಕ್ತ ಪ್ರಾತಿನಿಧ್ಯ ಇಲ್ಲ ಎಂದು ಹರಿಪ್ರಸಾದ್ ಟೀಕಿಸಿದ್ದಾರೆ.
ಮತ್ತೊಂದೆಡೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಕೂಡ ಕಣಕ್ಕೆ ಇಳಿದಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್ ನಿರ್ದೇಶನ ನೀಡಿದರೆ ಮುಖ್ಯಮಂತ್ರಿ ಪಟ್ಟಕ್ಕೇರುತ್ತೇನೆ ಎಂದು ಹೇಳಿದ್ದಾರೆ.
ದಲಿತರು, ಒಬಿಸಿಗಳು, ವಿಶೇಷವಾಗಿ ವಾಲ್ಮೀಕಿ ಸಮುದಾಯವೂ ಅಸಮಾಧಾನಗೊಂಡಿದೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಉನ್ನತ ಸ್ಥಾನ ನೀಡುವಂತೆ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ. ಈ ಬಗ್ಗೆ ಸತೀಶ್ ಜಾರಕೀಹೊಳಿ ಹೆಚ್ಚಿನ ಆಸಕ್ತಿ ತೋರಿಲ್ಲ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಸಿದ್ದರಾಮಯ್ಯ ಸರ್ಕಾರಕ್ಕೆ ಆರು ತಿಂಗಳು ತುಂಬುವ ಹೊತ್ತಿಗೆ ಕಾಂಗ್ರೆಸ್ ಒಳಗೆ ದಲಿತ ಸಿಎಂ ಬೇಡಿಕೆ ಮತ್ತೆ ತಲೆ ಎತ್ತಿದೆ. ಲೋಕಸಭಾ ಚುನಾವಣೆ ಇನ್ನಾರು ತಿಂಗಳಲ್ಲಿ ಇರುವುದರಿಂದ ಬಹುತೇಕ ಈ ಬೇಡಿಕೆ ಇನ್ನಷ್ಟು ಜೋರಾಗುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. ಜೊತೆಗೆ ಚುನಾವಣೆ ವೇಳೆ ಇದು ಕಾಂಗ್ರೆಸ್ ವಿರುದ್ಧ ಪ್ರತಿಪಕ್ಷಗಳ ಪಾಲಿಗೆ ಒಂದು ಅಸ್ತ್ರವಾಗಿಯೂ ಬಳಕೆಯಾಗುವ ಸಾಧ್ಯತೆಯೂ ಇದೆ.