1,500 ಕ್ಕೂ ಹೆಚ್ಚು ಜನರ ರಕ್ಷಣೆ: ಪಿಣರಾಯಿ ವಿಜಯನ್
ವಯನಾಡ್ ಜಿಲ್ಲೆಯ ಭೂಕುಸಿತ ಪೀಡಿತ ಪ್ರದೇಶಗಳಿಂದ 1,500 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಮೊದಲ ಹಂತದಲ್ಲಿ, ದುರಂತದ ಸಮೀಪದ ಪ್ರದೇಶಗಳಲ್ಲಿನ 68 ಕುಟುಂಬಗಳ 206 ಜನರನ್ನು ಮೂರು ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಇದರಲ್ಲಿ 75 ಪುರುಷರು, 88 ಮಹಿಳೆಯರು ಮತ್ತು 43 ಮಕ್ಕಳು ಸೇರಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.
ಭೂಕುಸಿತದ ನಂತರ, ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ಪರಿಣಾಮವಾಗಿ ಸಿಲುಕಿಕೊಂಡಿದ್ದ 1,386 ಜನರನ್ನು ಮತ್ತು ಅವರ ಮನಗಳಲ್ಲಿ ಸಿಲುಕಿಕೊಂಡಿದ್ದವರನ್ನು ರಕ್ಷಿಸಲಾಗಿದೆ. ಇದರಲ್ಲಿ 528 ಪುರುಷರು, 559 ಮಹಿಳೆಯರು ಮತ್ತು 299 ಮಕ್ಕಳನ್ನು ಏಳು ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಇನ್ನೂರ ಒಂದು ಜನರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರಲ್ಲಿ 90 ಮಂದಿ ಪುಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.
ವಯನಾಡ್ ಜಿಲ್ಲೆಯಲ್ಲಿ ಪ್ರಸ್ತುತ 82 ಪರಿಹಾರ ಶಿಬಿರಗಳಲ್ಲಿ 8,017 ಜನರಿದ್ದಾರ ಎಂದು ವಿಜಯನ್ ಹೇಳಿದರು. ಇದರಲ್ಲಿ 19 ಗರ್ಭಿಣಿಯರು ಸೇರಿದ್ದಾರೆ. ಮಪ್ಪಾಡಿಯಲ್ಲಿ ಎಂಟು ಶಿಬಿರಗಳಿವೆ, ಅಲ್ಲಿ 421 ಕುಟುಂಬಗಳ 1,486 ಜನರು ಪುಸ್ತುತ ನೆಲೆಸಿದ್ದಾರೆ. ಪಕ್ಕದ ಮಲಪ್ಪುರಂ ಜಿಲ್ಲೆಗೆ ನದಿಯಲ್ಲಿ ತೇಲುತ್ತಿರುವ ಮೃತದೇಹಗಳನ್ನು ಪತ್ತೆ ಮಾಡಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದರು.
ರಕ್ಷಣಾ ಕಾರ್ಯಾಚರಣೆಗೆ 1,167 ಸಿಬ್ಬಂದಿಯ ತಂಡವನ್ನು ನಿಯೋಜಿಸಲಾಗಿದೆ. 10 ಠಾಣಾಧಿಕಾರಿಗಳ ನೇತೃತ್ವದಲ್ಲಿ 645 ಅಗ್ನಿ ಶಾಮಕ ದಳದವರು, 94 ಎನ್‌ಡಿಆರ್‌ಎಫ್ ಸಿಬ್ಬಂದಿ, 167 ಜಿಲ್ಲಾ ಸೈನಿಕ ಕಲ್ಯಾಣ ಕೇಂದ್ರದ ಸಿಬ್ಬಂದಿ, ಮದ್ರಾಸ್ ಎಂಜಿನಿಯರ್ ಗ್ರೂಪ್‌ನ 153 ಸಿಬ್ಬಂದಿ ಮತ್ತು ಮಂಗಳವಾರ ಆಗಮಿಸಿದ ಕೋಸ್ಟ್ ಗಾರ್ಡ್ ಸಿಬ್ಬಂದಿ ಇದರಲ್ಲಿ ಸೇರಿದ್ದಾರೆ ಎಂದು ವಿಜಯನ್ ಹೇಳಿದರು.