ಝುಲಾಸಾನ್ ಎನ್ನುವುದು ಕೇವಲ 7 ಸಾವಿರ ಜನರಿರುವ ಪುಟ್ಟ ಹಳ್ಳಿ. ಆದರೆ, ಬಾಹ್ಯಾಕಾಶದವರೆಗೂ ತಲುಪಿರುವ ಸುನೀತಾ ವಿಲಿಯಮ್ಸ್ ಗೆ ನಮ್ಮ ನೆಲದ ನಂಟಿದೆ ಎನ್ನುವುದೇ ಈ ಹಳ್ಳಿಯ ಜನರಿಗೆ ಹೆಮ್ಮೆಯ ಸಂಗತಿ. ಇಲ್ಲಿ ಸುನೀತಾರ ಪೂರ್ವಿಕರ ಮನೆಯಿದೆ. ಜೊತೆಗೆ, ಅವರ ತಾತನ ಸ್ಮರಣಾರ್ಥ ಒಂದು ಗ್ರಂಥಾಲಯವನ್ನೂ ಇಲ್ಲಿ ನಿರ್ಮಿಸಲಾಗಿದೆ. ಹಾಗಂತ ಸುನೀತಾ ಅವರು ಇಲ್ಲಿನ ನಂಟನ್ನು ಕಳೆದುಕೊಂಡಿಲ್ಲ. ತಾವು ಬಾಹ್ಯಾಕಾಶ ವಿಜ್ಞಾನಿಯಾಗಿ, ಗಗನಯಾತ್ರಿಯಾಗಿ ಯಶಸ್ಸಿನ ಉತ್ತುಂಗಕ್ಕೆ ಏರಿದ ಬಳಿಕವೂ 1972, 2007 ಮತ್ತು 2013ರಲ್ಲಿ ಸುನೀತಾ ಝುಲಾಸಾನ್ ಗ್ರಾಮಕ್ಕೆ ಬಂದಿದ್ದರು. ಇಲ್ಲಿನ ಶಾಲೆಗೆ ದೇಣಿಗೆಯನ್ನೂ ನೀಡಿದ್ದರು.
2024ರಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತಲುಪಿದ ಸುನೀತಾ ಅವರು ಸದ್ಯಕ್ಕೆ ಭೂಮಿಗೆ ಮರಳಲಾರರು ಎಂಬ ಸುದ್ದಿಗಳು ಬರತೊಡಗಿದಾಗ ಈ ಹಳ್ಳಿಯ ಜನರೂ ನೊಂದಿದ್ದರು. ಸುನೀತಾರ ಸುರಕ್ಷಿತ ಆಗಮನಕ್ಕಾಗಿ ಈ ಹಳ್ಳಿಯ ಜನ ಅಂದಿನಿಂದಲೂ ನಿತ್ಯ ಪ್ರಾರ್ಥನೆ ಮಾಡುತ್ತಿದ್ದಾರೆ. ತಮ್ಮ ಭರವಸೆಯ ಪ್ರತೀಕವಾಗಿ ಊರಿನಲ್ಲಿ ದೀಪವೊಂದನ್ನು ಹಚ್ಚಿಟ್ಟು, ಅದು ಆರದಂತೆ ನೋಡಿಕೊಂಡಿದ್ದಾರೆ. ಈಗ ಸುನೀತಾ ಭೂಮಿಯತ್ತ ಪ್ರಯಾಣ ಆರಂಭಿಸಿರುವುದು, ಈ ಗ್ರಾಮಸ್ಥರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.