ಕರ್ನೂಲ್ ಬಸ್ ದುರಂತ: ಬಾಗಿಲು ಸಿಲುಕಿಕೊಂಡಿದ್ದೇ ಹೆಚ್ಚಿನ ವಿಪತ್ತಿಗೆ ಕಾರಣ
ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ ಬಸ್ಸಿನ ಬಾಗಿಲು ತಕ್ಷಣ ತೆರೆಯದಿರುವುದು ಅವಘಡವನ್ನು ಹೆಚ್ಚಿಸಿದೆ ಎಂದು ಜಿಲ್ಲಾಧಿಕಾರಿಎ. ಸಿರಿ ಅವರು ತಿಳಿಸಿದ್ದಾರೆ. ಚಾಲಕ ಸೇರಿ ಒಟ್ಟು 41 ಜನರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಪೈಕಿ 21 ಜನರನ್ನು ಪತ್ತೆಹಚ್ಚಲಾಗಿದ್ದು, ಅಪಘಾತದಿಂದ ಪಾರಾದವರು ಸ್ಥಿರವಾಗಿದ್ದಾರೆ ಮತ್ತು ಅಪಾಯದಿಂದ ಹೊರಬಂದಿದ್ದಾರೆ.
ಹೆಚ್ಚಿನ ಪ್ರಯಾಣಿಕರು ರಾತ್ರಿ ನಿದ್ರೆಯಲ್ಲಿದ್ದಾಗ ಈ ದುರಂತ ಸಂಭವಿಸಿದ್ದರಿಂದ ಅನೇಕರು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬಸ್ಸಿನ ಬಾಗಿಲು ಸಿಲುಕಿಕೊಂಡಿದ್ದು ಹಾಗೂ ಕೆಲವು ತಂತಿಗಳು ತುಂಡಾಗಿದ್ದರಿಂದ ಬಸ್ಸಿನ ಬಾಗಿಲು ತಕ್ಷಣ ತೆರೆಯಲಿಲ್ಲ. ಇದರ ಪರಿಣಾಮವಾಗಿ, ಪ್ರಯಾಣಿಕರಿಗೆ ಬೇಗನೆ ಹೊರಬರಲು ಸಾಧ್ಯವಾಗದೆ ಹೆಚ್ಚಿನ ಸಾವು-ನೋವು ಸಂಭವಿಸಿತು ಎಂದು ಅವರು ತಿಳಿಸಿದ್ದಾರೆ.
ಅಪಘಾತದಲ್ಲಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತು. ಕೆಲವು ವರದಿಗಳ ಪ್ರಕಾರ, ಶಾರ್ಟ್ ಸರ್ಕ್ಯೂಟ್‌ನಿಂದ ಬಾಗಿಲು ಜಾಮ್ ಆಗಿ ಸಿಲುಕಿಕೊಂಡಿತ್ತು. ನಿದ್ರೆಯಲ್ಲಿದ್ದ ಪ್ರಯಾಣಿಕರು ಎಚ್ಚರಗೊಳ್ಳುವಷ್ಟರಲ್ಲಿ ಬೆಂಕಿ ವ್ಯಾಪಿಸಿತ್ತು ಮತ್ತು ಬಾಗಿಲು ತೆರೆಯದ ಕಾರಣ ಕೆಲವರು ಕಿಟಕಿ ಗಾಜುಗಳನ್ನು ಒಡೆದು ಪ್ರಾಣ ಉಳಿಸಿಕೊಂಡಿದ್ದಾರೆ. ದುರಂತದಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು ಹೈದರಾಬಾದ್‌ಗೆ ಸೇರಿದವರು ಎಂದು ಡಿ.ಸಿ. ಸಿರಿ ತಿಳಿಸಿದ್ದಾರೆ. ಪೊಲೀಸರು ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

