ಅನಾಥ ಮಕ್ಕಳ ಭವಿಷ್ಯಕ್ಕೆ ಸರ್ಕಾರದ ವಿಶೇಷ ಪ್ರಾವಿಜನ್; ಎಸ್‌ಸಿ, ಎಸ್ಟಿ ಪಟ್ಟಿಗೆ ಸೇರಿಸಲು ಸಚಿವೆ ಹೆಬ್ಬಾಳ್ಕರ್ ಒತ್ತಾಯ
ಕರ್ನಾಟಕ ರಾಜ್ಯದ ಅನಾಥ ಮಕ್ಕಳಿಗೆ ವಿಶೇಷ ಪ್ರಾತಿನಿಧ್ಯ ನೀಡುವಂತೆ ಶಾಸಕಿ ನಯನಾ ಮೋಟಮ್ಮ ಅವರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಉನ್ನತ ವ್ಯಾಸಂಗಕ್ಕೆ ಜಾತಿ ಪ್ರಮಾಣಪತ್ರ ಇಲ್ಲದೆ ತೊಂದರೆ ಅನುಭವಿಸುತ್ತಿರುವ 12ಸಾವಿರ ಅನಾಥ ಮಕ್ಕಳ ಪರಿಸ್ಥಿತಿಯನ್ನು ವಿವರಿಸಿ, ಅವರಿಗೆ ವಿಶೇಷ ಪ್ರಾವಿಜನ್ ಮಾಡುವಂತೆ ಕೋರಿದರು. ಈ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಧ್ಯಪ್ರವೇಶಿಸಿ, "ಅನಾಥ ಮಕ್ಕಳಿಗೆ ಸರ್ಕಾರವೇ ತಾಯಿ-ತಂದೆ. ಆದ್ದರಿಂದ, ಅವರಿಗೆ ವಿಶೇಷ ಪ್ರಾವಿಜನ್ ಮಾಡಬೇಕು ಮತ್ತು ಸಾಧ್ಯವಾದರೆ ಎಸ್ಸಿ, ಎಸ್ಟಿ ಪಟ್ಟಿಗೆ ಸೇರಿಸಬೇಕು" ಎಂದು ಸಮಾಜ ಕಲ್ಯಾಣ ಸಚಿವ ಮಹಾದೇವಪ್ಪ ಅವರಿಗೆ ಮನವಿ ಮಾಡಿದರು.
ಈ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ನರೇಂದ್ರ ಸ್ವಾಮಿ, "ಅನಾಥ ಮಕ್ಕಳನ್ನು ಎಸ್ಸಿ, ಎಸ್ಟಿ ಪಟ್ಟಿಗೆ ಸೇರಿಸಲು ಬರುವುದಿಲ್ಲ, ಅದಕ್ಕಾಗಿ ಕೇಂದ್ರ ಸರ್ಕಾರ ಹೊಸ ಪ್ರಾವಿಜನ್ ಮಾಡಬೇಕು" ಎಂದು ಹೇಳಿದರು. ಇದಕ್ಕೆ ಸ್ಪೀಕರ್ ಖಾದರ್, "ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡೋಣ" ಎಂದು ಪ್ರತಿಕ್ರಿಯಿಸಿದರು.
ಹೆಬ್ಬಾಳ್ಕರ್ ಅವರು ಮತ್ತೊಮ್ಮೆ ಮಾತನಾಡಿ, "ಅನಾಥ ಮಕ್ಕಳು ನಮಗೆ ಸಿಕ್ಕ ದಿನವನ್ನೇ ಅವರ ಜನ್ಮದಿನಾಂಕ ಎಂದು ಪರಿಗಣಿಸುತ್ತೇವೆ. ಆದ್ದರಿಂದ, ಅವರಿಗೆ ಒಂದು ವಿಶೇಷ ಕ್ಯಾಟಗರಿ ಮಾಡಬೇಕು" ಎಂದು ಒತ್ತಾಯಿಸಿದರು. ಸ್ಪೀಕರ್ ಖಾದರ್ ಅವರು, "ಇದು ಗಂಭೀರವಾದ ವಿಚಾರ. ಸರ್ಕಾರ ಇದರ ಜವಾಬ್ದಾರಿ ತೆಗೆದುಕೊಂಡು ಕೇಂದ್ರಕ್ಕೆ ಶಿಫಾರಸು ಮಾಡಬೇಕು" ಎಂದು ಸೂಚಿಸಿದರು.