“ಕೇಂದ್ರ ಸರ್ಕಾರವು ದೇಶದ ಪ್ರಗತಿಗಾಗಿ ಬಜೆಟ್ ಮಂಡಿಸಿಲ್ಲ, ಮೋದಿ ಸರ್ಕಾರವನ್ನು ಉಳಿಸಲು ಈ ಬಜೆಟ್ ಅನ್ನು ಮಂಡಿಸಿದೆ” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

ಈ ಬಗ್ಗೆ ಎಕ್ಸ್‌ ಪೋಸ್ಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ, “ಮೋದಿ ಸರ್ಕಾರಕ್ಕೆ ‘ಕಾಪಿಕ್ಯಾಟ್ ಬಜೆಟ್’ ಮೂಲಕ ಕಾಂಗ್ರೆಸ್‌ನ ನ್ಯಾಯಪತ್ರವನ್ನು (ಪ್ರಣಾಳಿಕೆ) ಸರಿಯಾಗಿ ನಕಲಿಸಲು ಸಾಧ್ಯವಾಗಲಿಲ್ಲ” ಎಂದು ಲೇವಡಿ ಮಾಡಿದ್ದಾರೆ.

“ಎನ್‌ಡಿಎ ಸರ್ಕಾರ ಉಳಿಸಿಕೊಳ್ಳಲು ಮೋದಿ ಸರ್ಕಾರವು ಬಜೆಟ್ ಮೂಲಕ ತನ್ನ ಮಿತ್ರ ಪಕ್ಷಗಳನ್ನು ವಂಚಿಸುತ್ತಾ ಅರೆಬೆಂದ ರೇವಡಿಗಳನ್ನು ಹಂಚುತ್ತಿದೆ. ದೇಶದ ಪ್ರಗತಿಗಾಗಿ ಅಲ್ಲ, ‘ಮೋದಿ ಸರ್ಕಾರ ಉಳಿಸುವ’ ಬಜೆಟ್ ಇದಾಗಿದೆ” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಹಾಗೆಯೇ ಸುಮಾರು ಹತ್ತು ಅಂಶಗಳನ್ನು ಉಲ್ಲೇಖಿಸಿದ್ದಾರೆ.

“ವಾರ್ಷಿಕವಾಗಿ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಸಮಸ್ಯೆಯನ್ನು ಎದುರಿಸುತ್ತಿರುವ ಯುವಜನರಿಗೆ ಹತ್ತು ವರ್ಷಗಳ ನಂತರ ಸೀಮಿತ ಘೋಷಣೆಗಳನ್ನು ಮಾಡಲಾಗಿದೆ. ರೈತರ ಬಗ್ಗೆ ಕೇವಲ ಮೇಲ್ನೋಟದ ಮಾತುಗಳಿದೆ. ಒಂದೂವರೆ ಪಟ್ಟು ಎಂಎಸ್‌ಪಿ, ಆದಾಯವನ್ನು ದ್ವಿಗುಣಗೊಳಿಸುವುದು ಮೊದಲಾದವುಗಳು. ಎಲ್ಲವೂ ಚುನಾವಣಾ ವಂಚನೆಯಾಗಿದೆ. ಈ ಸರ್ಕಾರಕ್ಕೆ ಗ್ರಾಮೀಣ ವೇತನ ಹೆಚ್ಚಿಸುವ ಯಾವುದೇ ಇರಾದೆ ಇಲ್ಲ” ಎಂದು ಆರೋಪಿಸಿದರು.

“ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಮಧ್ಯಮ ವರ್ಗ ಮತ್ತು ಗ್ರಾಮೀಣ ಬಡವರಿಗೆ ಕಾಂಗ್ರೆಸ್-ಯುಪಿಎ ಜಾರಿಗೆ ತಂದಂತಹ ಕ್ರಾಂತಿಕಾರಿ ಯೋಜನೆ ಇಲ್ಲ. ಬದಲಾಗಿ ‘ಬಡವರು’ ಎಂಬ ಪದವು ತನ್ನನ್ನು ತಾನು ಬ್ರಾಂಡ್ ಮಾಡಿಕೊಳ್ಳುವ ಸಾಧನವಾಗಿ ಮಾರ್ಪಟ್ಟಿದೆ” ಎಂದು ಟೀಕಿಸಿದರು.

“ಮಹಿಳೆಯರ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸುವಂತಹ, ಮಹಿಳೆಯರು ಅಧಿಕವಾಗಿ ಉದ್ಯೋಗ ಕ್ಷೇತ್ರದಲ್ಲಿ ಭಾಗಿಯಾಗಲು ಅವಕಾಶ ನೀಡುವಂತಹ ಯಾವುದೇ ಯೋಜನೆಗಳು ಈ ಬಜೆಟ್‌ನಲ್ಲಿಲ್ಲ. ಬದಲಾಗಿ ಸರ್ಕಾರವು ಹಣದುಬ್ಬರದ ವಿಚಾರದಲ್ಲಿ ಮತ್ತೆ ತನಗೆ ತಾನು ಏಟು ಮಾಡಿಕೊಳ್ಳುತ್ತಿದೆ. ಜನರು ಕಷ್ಟಪಟ್ಟು ದುಡಿದ ಹಣವನ್ನು ಲೂಟಿ ಮಾಡಿ ತನ್ನ ಬಂಡವಾಳಶಾಹಿ ಸ್ನೇಹಿತರಿಗೆ ಹಂಚುತ್ತಿದೆ” ಎಂದು ದೂರಿದರು.

“ಕೃಷಿ, ಆರೋಗ್ಯ, ಶಿಕ್ಷಣ, ಸಾರ್ವಜನಿಕ ಕಲ್ಯಾಣ ಮತ್ತು ಬುಡಕಟ್ಟು ಜನಾಂಗದವರಿಗೆ ಬಜೆಟ್‌ನಲ್ಲಿ ಮೀಸಲಿಡುವುದಕ್ಕಿಂತ ಕಡಿಮೆ ಖರ್ಚು ಮಾಡಲಾಗಿದೆ. ಏಕೆಂದರೆ ಇವರುಗಳು ಬಿಜೆಪಿಗೆ ಆದ್ಯತೆಯಲ್ಲ. ಕ್ಯಾಪಿಟಲ್ ಬಜೆಟ್‌ನಲ್ಲಿ 1 ಲಕ್ಷ ಕೋಟಿ ರೂ.ಗಳಷ್ಟು ಕಡಿಮೆ ಖರ್ಚು ಮಾಡಿದ್ದರೆ ಉದ್ಯೋಗಗಳು ಹೇಗೆ ಹೆಚ್ಚಾಗುತ್ತದೆ” ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

ಇನ್ನು “ರೈಲ್ವೆ ಅಪಘಾತಗಳು ಪ್ರತಿದಿನ ನಡೆಯುತ್ತಿವೆ. ರೈಲುಗಳ ಬೋಗಿಗಳ ಸಂಖ್ಯೆ ಕಡಿಮೆಯಾಗಿದೆ. ಸಾಮಾನ್ಯ ಪ್ರಯಾಣಿಕರಿಗೆ ತೊಂದರೆಯಾಗಿದೆ. ಆದರೆ ಬಜೆಟ್‌ನಲ್ಲಿ ರೈಲ್ವೆ ಬಗ್ಗೆ ಏನನ್ನೂ ಹೇಳಿಲ್ಲ” ಎಂದು ಟೀಕಿಸಿದ್ದಾರೆ.

“ಜನಗಣತಿ ಮತ್ತು ಜಾತಿ ಗಣತಿ ಕುರಿತು ಏನನ್ನೂ ಹೇಳಿಲ್ಲ. ಆದರೆ ಇದು ಜನಗಣತಿ ಇಲ್ಲದೆ ಮಂಡಿಸುತ್ತಿರುವ ಐದನೇ ಬಜೆಟ್ ಆಗಿದೆ. ಇದು ಆಘಾತಕಾರಿ ಮತ್ತು ಅನಿರೀಕ್ಷಿತ ವೈಫಲ್ಯವಾಗಿದೆ. ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ” ಎಂದು ಹೇಳಿದ್ದಾರೆ.

ಇದನ್ನು ಓದಿದ್ದೀರಾ? ಕೇಂದ್ರ ಬಜೆಟ್ | ಬಿಹಾರ, ಆಂಧ್ರ ಪ್ರದೇಶಕ್ಕೆ ಬಂಪರ್; ಸೋಶಿಯಲ್ ಮೀಡಿಯಾದಲ್ಲಿ ಮೀಮ್ಸ್‌ಗಳು ವೈರಲ್

“2024ರ ಮೇ 20ರಂದು, ಅಂದರೆ ಚುನಾವಣೆಯ ಸಮಯದಲ್ಲಿ, ಮೋದಿ ಜಿ ಸಂದರ್ಶನವೊಂದರಲ್ಲಿ ‘ನಮ್ಮಲ್ಲಿ ಈಗಾಗಲೇ 100 ದಿನಗಳ ಕ್ರಿಯಾ ಯೋಜನೆ ಇದೆ’ ಎಂದು ಹೇಳಿಕೊಂಡಿದ್ದರು. ಎರಡು ತಿಂಗಳ ಹಿಂದೆ ಕ್ರಿಯಾ ಯೋಜನೆ ರೂಪಿಸಿದಾಗ ಕನಿಷ್ಠ ಬಜೆಟ್‌ನಲ್ಲಿಯಾದರೂ ಪ್ರಸ್ತಾಪಿಸಬಹುದಿತ್ತು. ಬಜೆಟ್‌ನಲ್ಲಿ ಯಾವುದೇ ಯೋಜನೆ ಇಲ್ಲ, ಬಿಜೆಪಿ ಮಾತ್ರ ಸಾರ್ವಜನಿಕರಿಗೆ ಮೋಸ ಮಾಡುವುದರಲ್ಲಿ ನಿರತವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read More
Next Story