ಕೇರಳದಲ್ಲಿ ಭೂಕುಸಿತ ಮುನ್ಸೂಚನೆಯ ಕಾರ್ಯವಿಧಾನ ದುರ್ಬಲವಾಗಿದೆ: ತಜ್ಞರ ಅಭಿಪ್ರಾಯ

ಕೇರಳದಲ್ಲಿ ಸಂಭವಿಸಿದ ಸರಣಿ ಭೂಕುಸಿತದಲ್ಲಿ ನೂರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ, ವಿಜ್ಞಾನಿಗಳು ಮತ್ತು ತಜ್ಞರು ಮಂಗಳವಾರ ಭೂಕುಸಿತ ಮುನ್ಸೂಚನೆಯ ಕಾರ್ಯವಿಧಾನ ದುರ್ಬಲವಾಗಿದೆ. ಹಾಗಾಗಿ ಸುರಕ್ಷಣೆಯ ಕಾರ್ಯ ಮಾಡಬೇಕಿದೆ ಎಂದು ಕರೆ ನೀಡಿದ್ದಾರೆ.

ಕೇಂದ್ರ ಭೂ ವಿಜ್ಞಾನ ಸಚಿವಾಲಯದ ಮಾಜಿ ಕಾರ್ಯದರ್ಶಿ ಮಾಧವನ್ ರಾಜೀವನ್ ಅವರು ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, ʻʻಹವಾಮಾನ ಇಲಾಖೆಯು ಅತಿ ಹೆಚ್ಚು ಮಳೆಯ ಬಗ್ಗೆ ಅಂದಾಜಿಸಬಹುದು, ಆದರೆ ಅದು ಭೂಕುಸಿತ ಆಗುತ್ತದೆ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಭಾರೀ ಮಳೆಯು ಪ್ರತಿ ಬಾರಿಯೂ ಭೂಕುಸಿತಕ್ಕೆ ಕಾರಣವಾಗುವುದಿಲ್ಲ. ಭೂಕುಸಿತದ ಮುನ್ಸೂಚನೆಗಾಗಿ ನಮಗೆ ಪ್ರತ್ಯೇಕ ಕಾರ್ಯವಿಧಾನದ ಅಗತ್ಯವಿದೆ. ಇದು ಕಷ್ಟಕರವಾಗಿದೆ ಆದರೆ ಕಾರ್ಯಸಾಧ್ಯವಾಗಿದೆʼʼ ಎಂದು ತಿಳಿಸಿದರು.

ಮಣ್ಣಿನ ರಚನೆ, ಮಣ್ಣಿನ ತೇವಾಂಶ ಮತ್ತು ಇಳಿಜಾರು ಸೇರಿದಂತೆ ಭೂಕುಸಿತಕ್ಕೆ ಕಾರಣವಾಗುತ್ತವೆ ಎನ್ನುವುದು ತಿಳಿದಿದೆ. ಈ ಎಲ್ಲಾ ಜ್ಞಾನವನ್ನು ಬಳಸಿಕೊಂಡು ಭೂಕುಸಿತದ ಮುನ್ಸೂಚನೆಯ ಕಾರ್ಯವಿಧಾನ ರೂಪಿಸಬಹುದು ಎಂದು ಅವರು ಹೇಳಿದರು.

ʻʻನದಿ ಪ್ರವಾಹ ಬಂದಾಗ, ನಾವು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತೇವೆ. ಭಾರೀ ಮತ್ತು ನಿರಂತರ ಮಳೆಯಾದರೆ ನಾವು ಅದೇ ಕೆಲಸವನ್ನು ಮಾಡಬಹುದು ಆದರೆ ದುರದೃಷ್ಟವಶಾತ್, ನಾವು ಅದನ್ನು ಇನ್ನೂ ಮಾಡಿಲ್ಲ. ನಮ್ಮಲ್ಲಿ ಉತ್ತಮ ಸಾಮರ್ಥ್ಯವಿರುವ ವಿಜ್ಞಾನಿಗಳಿದ್ದಾರೆ. ನಾವು ಆ ಕೆಲಸವನ್ನು ಮಾಡಬೇಕಿದೆʼʼ ಎಂದು ರಾಜೀವನ್ ಹೇಳಿದರು.

ಕೇರಳ ಇನ್‌ಸ್ಟಿಟ್ಯೂಟ್ ಆಫ್ ಲೋಕಲ್ ಅಡ್ಮಿನಿಸ್ಟ್ರೇಷನ್‌ನ ವಿಪತ್ತು ಅಪಾಯ ನಿರ್ವಹಣಾ ತಜ್ಞ ಶ್ರೀಕುಮಾರ್ಬ ಅವರು ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿ, ʻʻದಕ್ಷಿಣ ಕರಾವಳಿ ರಾಜ್ಯದ ದುರ್ಬಲವಾದ ಭೂಪ್ರದೇಶದಲ್ಲಿ ಭೂಕುಸಿತ ಉಂಟಾಗಲು ಎರಡು ಮೂರು ದಿನಗಳವರೆಗೆ 120 ಮಿಮೀಗಿಂತ ಹೆಚ್ಚಿನ ಮಳೆಯಾದರೆ ಸಾಕು, ಭೂಕುಸಿತವಾಗುತ್ತದೆʼʼ ಎಂದು ತಿಳಿಸಿದರು.

ವಯನಾಡಿನಲ್ಲಿ ಭೂಕುಸಿತ ಸಂಭವಿಸುವ ಹಲವು ಪ್ರದೇಶಗಳಿವೆ. ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವುದೊಂದೇ ನಮ್ಮಿಂದ ಸಾಧ್ಯ. ಅಂತಹ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಮುಂಗಾರು ಮಳೆಯ ಮನೆಗಳನ್ನು ಅಧಿಕಾರಿಗಳು ನಿರ್ಮಿಸಬೇಕು ಎಂದು ಶ್ರೀಕುಮಾರ್ ಹೇಳಿದರು.

Read More
Next Story