ಬಿಹಾರದಲ್ಲಿ ಭರ್ಜರಿ ಗೆಲುವಿನ ನಂತರ, ಪಶ್ಚಿಮ ಬಂಗಾಳಕ್ಕೆ ಕಣ್ಣೆತ್ತಿದ ಬಿಜೆಪಿ
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಜಯ ಸಾಧಿಸುತ್ತಿದೆ. ಈ ಹಿನ್ನೆಲೆ 2026ರಲ್ಲಿ ಮತಚಲಾಯಿಸಬೇಕಿರುವ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳವೇ ತಮ್ಮ ಮುಂದಿನ ರಾಜಕೀಯ ಗುರಿಯೆಂದು ಬಿಜೆಪಿ ಇಂದು ಸ್ಪಷ್ಟಪಡಿಸಿದೆ. ಎಣಿಕೆ ಹಂತದಲ್ಲೇ ರಾಷ್ಟ್ರೀಯ ಜನತಾಂತ್ರಿಕ ಮೈತ್ರಿ (ಎನ್‌ಡಿಎ) ಸ್ಪಷ್ಟ ಜಯದತ್ತ ಸಾಗುತ್ತಿರುವಂತೆ ಕಂಡಾಗ, ಬಿಜೆಪಿ ನಾಯಕ ಹಾಗೂ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಈ ಗೆಲುವು ಎನ್‌ಡಿಎ ಸರ್ಕಾರದ ನವಿರಾದ ನಂಬಿಕೆಯ ಪ್ರತಿಬಿಂಬವಾಗಿದೆ ಮತ್ತು ಪಶ್ಚಿಮ ಬಂಗಾಳದ ಮೇಲೆ ನೇರ ಪರಿಣಾಮ ಬೀರುವ ಗೆಲುವು ಇದು ಎಂದು ಹೇಳಿದ್ದಾರೆ.
ಎನ್‌ಡಿಎ ಸರ್ಕಾರ ಮಾಡುತ್ತಿರುವ ಕೆಲಸಗಳ ಪ್ರಭಾವವೇ ಈ ಚುನಾವಣಾ ಫಲಿತಾಂಶ ತೋರಿಸಿದೆ. ವಿಶೇಷವಾಗಿ ಯುವ ಉದ್ಯೋಗ ಮತ್ತು ಮಹಿಳೆಯರ ಆರ್ಥಿಕ ಸಬಲೀಕರಣ ಕ್ಷೇತ್ರಗಳಲ್ಲಿ ಸರ್ಕಾರ ಕೈಗೊಂಡ ಕ್ರಮಗಳು ಒಳ್ಳೆಯ ಪ್ರತಿಫಲ ನೀಡಿವೆ. ನಿತೀಶ್ ಕುಮಾರ್ ಹಾಗೂ ಬಿಹಾರ ಬಿಜೆಪಿ ಘಟಕ ಯುವಕರಿಗೆ ಅವಕಾಶಗಳನ್ನು ನಿರ್ಮಿಸುವಲ್ಲಿ ಮತ್ತು ಮಹಿಳೆಯರಿಗೆ ಸ್ವಂತ ಉದ್ಯಮ ಪ್ರಾರಂಭಿಸಲು ನೆರವಾಗುವಲ್ಲಿ ಮಾಡಿದ ಕೆಲಸವೇ ಮತದಾರರ ಮನೋಭಾವವನ್ನು ರೂಪಿಸಿದೆ ಎಂದು ಅವರು ಅಭಿಪ್ರಾಯಪಟ್ಟರು.
ಆದೇ ಸಂದರ್ಭದಲ್ಲಿ ಲಾಲು ಪ್ರಸಾದ್ ಯಾದವ್ ಅವರ “ವಿನಾಶಕಾರಿ 15 ವರ್ಷಗಳ” ಆಡಳಿತವನ್ನು ಅವರು ತೀವ್ರವಾಗಿ ವಿಮರ್ಶಿಸಿದರು. ಅದು ಬಿಹಾರದ ಪ್ರಗತಿಗೆ ತಡೆಯಾಯಿತು ಎಂದು ಆರೋಪಿಸಿ, ಈ ಬಾರಿ ಮತದಾರರು ಆ ಆಡಳಿತ ಶೈಲಿಯನ್ನೇ ತಿರಸ್ಕರಿಸಿ, ಅಭಿವೃದ್ಧಿಗೆ ಒತ್ತು ನೀಡುವ ಎನ್‌ಡಿಎ ಮಾದರಿಯನ್ನು ಆರಿಸಿಕೊಂಡಿದ್ದಾರೆ ಎಂದು ಹೇಳಿದರು.

