ಬಿಹಾರ ಚುನಾವಣೆ: ಮತ ಎಣಿಕೆಗೆ ವ್ಯಾಪಕ ಭದ್ರತಾ ಸಿದ್ಧತೆ
ಬಿಹಾರದ 243 ಸದಸ್ಯ ಬಲದ ವಿಧಾನಸಭೆಗೆ ನಡೆದ ಚುನಾವಣೆಯ ಮತ ಎಣಿಕೆಗಾಗಿ ರಾಜ್ಯದ 38 ಜಿಲ್ಲೆಗಳಲ್ಲಿನ 46 ಕೇಂದ್ರಗಳಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ ಎಣಿಕೆ ನಡೆಯಲಿರುವ ಹಿನ್ನೆಲೆಯಲ್ಲಿ ಪಾಟ್ನಾ ನಗರದ ಶಾಲೆಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನವೆಂಬರ್ 6 ಮತ್ತು ನವೆಂಬರ್ 11 ರಂದು ಎರಡು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಹಾರವು ಐತಿಹಾಸಿಕವಾಗಿ ಶೇ. 67.13 ರಷ್ಟು ಮತದಾನವನ್ನು ದಾಖಲಿಸಿದೆ. ಒಟ್ಟು 7.45 ಕೋಟಿ ಮತದಾರರು 2,616 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸಲು ಅರ್ಹರಾಗಿದ್ದರು.
ಚುನಾವಣಾ ಆಯೋಗದ ಹೇಳಿಕೆಯ ಪ್ರಕಾರ, ಎಲ್ಲಾ 243 ವಿಧಾನಸಭಾ ಕ್ಷೇತ್ರಗಳಲ್ಲಿ ಎಣಿಕೆಗಾಗಿ ವ್ಯವಸ್ಥೆ ಮಾಡಲಾಗಿದ್ದು, 243 ಎಣಿಕೆ ವೀಕ್ಷಕರು ಮತ್ತು ಅಭ್ಯರ್ಥಿಗಳು ಅಥವಾ ಅವರ ಏಜೆಂಟರ ಸಮ್ಮುಖದಲ್ಲಿ 243 ರಿಟರ್ನಿಂಗ್ ಅಧಿಕಾರಿಗಳು ಈ ಕಾರ್ಯವನ್ನು ನಡೆಸಲಿದ್ದಾರೆ.
ಒಟ್ಟು 4,372 ಎಣಿಕೆ ಟೇಬಲ್‌ಗಳನ್ನು ಸ್ಥಾಪಿಸಲಾಗಿದೆ, ಪ್ರತಿಯೊಂದರಲ್ಲೂ ಒಬ್ಬ ಮೇಲ್ವಿಚಾರಕ, ಎಣಿಕೆ ಸಹಾಯಕ ಮತ್ತು ಮೈಕ್ರೋ-ವೀಕ್ಷಕರು ಇರಲಿದ್ದಾರೆ. ನಾಮನಿರ್ದೇಶಿತರು ನೇಮಿಸಿದ 18,000 ಕ್ಕೂ ಹೆಚ್ಚು ಎಣಿಕೆ ಏಜೆಂಟ್‌ಗಳು ಸಹ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲಿದ್ದಾರೆ ಎಂದು ಆಯೋಗ ತಿಳಿಸಿದೆ.
ಮತ ಎಣಿಕೆಯ ಸಮಯ
ಮತ ಎಣಿಕೆ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ. ಆಯೋಗದ ನಿರ್ದೇಶನದಂತೆ, ಅಂಚೆ ಮತಗಳ ಎಣಿಕೆ ಮೊದಲು ಪ್ರಾರಂಭವಾಗುತ್ತದೆ ಮತ್ತು ಇವಿಎಂಗಳ ಎಣಿಕೆ ಬೆಳಿಗ್ಗೆ 8.30 ಕ್ಕೆ ಆರಂಭವಾಗಲಿದೆ.
ಭದ್ರತಾ ವಿವರಗಳು
ಸುಗಮ ಎಣಿಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ಸಾಕಷ್ಟು ಸಂಖ್ಯೆಯ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಮತ್ತು ಬಿಹಾರ ಪೊಲೀಸ್ ಸಿಬ್ಬಂದಿಯನ್ನು ರಾಜ್ಯಾದ್ಯಂತ ನಿಯೋಜಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ರಾಜ್ಯದ ಹೊರಗಿನಿಂದ ಬಂದ 106 ಕಂಪನಿಗಳ ಭದ್ರತಾ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗಿದೆ.
ಎಣಿಕೆ ಕೇಂದ್ರಗಳಲ್ಲಿ ಎರಡು ಹಂತದ ಭದ್ರತೆಯನ್ನು ಖಚಿತಪಡಿಸಲಾಗಿದೆ. ಒಳ ಹಂತದ ಮತ ಎಣಿಕೆ ಪ್ರದೇಶಕ್ಕೆ ಸಿಎಪಿಎಫ್ ಅನ್ನು ಮತ್ತು ಹೊರ ಹಂತದಲ್ಲಿ ರಾಜ್ಯ ಪೊಲೀಸರನ್ನು ನಿಯೋಜಿಸಲಾಗಿದೆ. ಇದಲ್ಲದೆ, 24/7 ಸಿಸಿಟಿವಿ ಕಣ್ಗಾವಲು ಮತ್ತು ಇತರ ಭದ್ರತಾ ನಿಬಂಧನೆಗಳು ಜಾರಿಯಲ್ಲಿವೆ. ಚುನಾವಣೆಯಲ್ಲಿ ಬಳಸಲಾದ ಇವಿಎಂಗಳು ಮತ್ತು ವಿವಿಪ್ಯಾಟ್‌ಗಳನ್ನು ಡಬಲ್-ಲಾಕ್ ವ್ಯವಸ್ಥೆಯ ಅಡಿಯಲ್ಲಿ ಸ್ಟ್ರಾಂಗ್ ರೂಮ್‌ಗಳ ಒಳಗೆ ಮುಚ್ಚಲಾಗಿದೆ ಎಂದು ಅವರು ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

