ಕಾಲ್ತುಳಿತ ದುರಂತಗಳು ಬಿಜೆಪಿ ಆಡಳಿತದಲ್ಲೂ ಸಂಭವಿಸಿವೆ: ಅಂಕಿಅಂಶ ಸಹಿತ ವಿಪಕ್ಷಗಳಿಗೆ ತಿರುಗೇಟು ನೀಡಿದ ಸಿಎಂ

ಚಿನ್ನಸ್ವಾಮಿ ಸ್ಟೇಡಿಯಮ್​ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ವಿಪಕ್ಷಗಳು ನಡೆಸುತ್ತಿರುವ ವಾಗ್ದಾಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಅಂಕಿಅಂಶಗಳ ಸಹಿತ ತಿರುಗೇಟು ನೀಡಿದರು. ಇಂತಹ ದುರಂತಗಳು ಕೇವಲ ನಮ್ಮ ಅವಧಿಯಲ್ಲಿ ನಡೆದಿಲ್ಲ, ಬಿಜೆಪಿ ಆಡಳಿತದಲ್ಲಿದ್ದ ರಾಜ್ಯಗಳಲ್ಲೂ ಈ ಹಿಂದೆ ಭೀಕರ ಕಾಲ್ತುಳಿತಗಳು ಸಂಭವಿಸಿವೆ ಎಂದು ಅವರು ಉದಾಹರಣೆಗಳ ಸಮೇತ ವಿವರಿಸಿದರು.

ಚರ್ಚೆಯ ವೇಳೆ ಮಾತನಾಡಿದ ಸಿಎಂ, "ಸಾಮಾನ್ಯವಾಗಿ ಮೂರು ಸಂದರ್ಭಗಳಲ್ಲಿ ಕಾಲ್ತುಳಿತಗಳು ಸಂಭವಿಸುತ್ತವೆ. ಧಾರ್ಮಿಕ ಕಾರ್ಯಕ್ರಮಗಳು, ಕ್ರೀಡಾಕೂಟ ಅಥವಾ ಶೋಕಾಚರಣೆಯಂತಹ ಸಂದರ್ಭಗಳಲ್ಲಿ, ಹಾಗೂ ಜನರಲ್ಲಿ ಭಯ ಹುಟ್ಟಿದಾಗ ಅವರು ದಿಕ್ಕಾಪಾಲಾಗಿ ಓಡುವಾಗ ಇಂತಹ ದುರಂತಗಳು ನಡೆಯುತ್ತವೆ," ಎಂದು ವಿವರಿಸಿದರು.

ದೇಶದಲ್ಲಿ ನಡೆದ ಹಿಂದಿನ ದುರಂತಗಳನ್ನು ಸದನದ ಗಮನಕ್ಕೆ ತಂದ ಅವರು, "ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ಸುಮಾರು ಇಪ್ಪತ್ತು ಕಾಲ್ತುಳಿತದ ಘಟನೆಗಳು ನಡೆದಿವೆ. 2008ರಲ್ಲಿ ಹಿಮಾಚಲ ಪ್ರದೇಶದ ನೈನಾ ದೇವಿ ದೇವಸ್ಥಾನದಲ್ಲಿ ನಡೆದ ಕಾಲ್ತುಳಿತದಲ್ಲಿ 162 ಮಂದಿ ಮೃತಪಟ್ಟಿದ್ದರು. ಆಗ ಅಲ್ಲಿ ಅಧಿಕಾರದಲ್ಲಿದ್ದುದು ಬಿಜೆಪಿ ಸರ್ಕಾರ. ಅದೇ ರೀತಿ, ರಾಜಸ್ಥಾನದ ಜೋಧ್ಪುರದಲ್ಲಿ ನಡೆದ ದುರಂತದಲ್ಲಿ 250 ಅಮಾಯಕರು ಪ್ರಾಣ ಕಳೆದುಕೊಂಡಾಗ, ಅಲ್ಲಿ ವಸುಂಧರಾ ರಾಜೆ ನೇತೃತ್ವದ ಬಿಜೆಪಿ ಸರ್ಕಾರವೇ ಇತ್ತು. 2012ರಲ್ಲಿ ಉತ್ತರಾಖಂಡದ ಹರಿದ್ವಾರದಲ್ಲಿ 20 ಮಂದಿ ಸಾವಿಗೀಡಾದಾಗಲೂ ಅಲ್ಲಿ ಬಿಜೆಪಿ ಆಡಳಿತವೇ ಇತ್ತು," ಎಂದು ಸಿಎಂ ಸಿದ್ದರಾಮಯ್ಯ ಅಂಕಿಅಂಶಗಳನ್ನು ಮುಂದಿಟ್ಟರು. 

Read More
Next Story