ದೆಹಲಿ ಸ್ಫೋಟದ ಎಫೆಕ್ಟ್: ಉತ್ತರ ಪ್ರದೇಶದಲ್ಲಿ ಹೈ ಅಲರ್ಟ್
ದೆಹಲಿಯ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿ ಸಂಭವಿಸಿದ ಭೀಕರ ಕಾರ್ ಸ್ಫೋಟದ ಬೆನ್ನಲ್ಲೇ, ನೆರೆಯ ಉತ್ತರ ಪ್ರದೇಶ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ರಾಜ್ಯದಾದ್ಯಂತ ಭದ್ರತೆಯನ್ನು ತೀವ್ರಗೊಳಿಸುವಂತೆ ಡಿಜಿಪಿ ಅವರು ಎಲ್ಲಾ ಹಿರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಈ ಕುರಿತು ಸುದ್ದಿ ಸಂಸ್ಥೆ ANI ಗೆ ಮಾಹಿತಿ ನೀಡಿದ ಉತ್ತರ ಪ್ರದೇಶದ ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಅಮಿತಾಭ್ ಯಶ್, "ದೆಹಲಿ ಘಟನೆಯ ಹಿನ್ನೆಲೆಯಲ್ಲಿ, ಉತ್ತರ ಪ್ರದೇಶದ ಎಲ್ಲಾ ಸೂಕ್ಷ್ಮ ಧಾರ್ಮಿಕ ಸ್ಥಳಗಳು, ಸೂಕ್ಷ್ಮ ಜಿಲ್ಲೆಗಳು ಮತ್ತು ರಾಜ್ಯದ ಗಡಿ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು ಸೂಚನೆ ನೀಡಲಾಗಿದೆ," ಎಂದು ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ಭದ್ರತಾ ಏಜೆನ್ಸಿಗಳನ್ನು ಕಟ್ಟೆಚ್ಚರದಿಂದ ಇರುವಂತೆ ಆದೇಶಿಸಲಾಗಿದ್ದು, ಎಲ್ಲಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಅಲರ್ಟ್ ಸಂದೇಶ ರವಾನಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ಮತ್ತು ತಪಾಸಣೆಯನ್ನು ತೀವ್ರಗೊಳಿಸುವಂತೆ ಲಕ್ನೋದಿಂದ ಆದೇಶ ಹೊರಡಿಸಲಾಗಿದೆ. ದೆಹಲಿಗೆ ಹೊಂದಿಕೊಂಡಿರುವ ಉತ್ತರ ಪ್ರದೇಶದ ಗಡಿಗಳಲ್ಲಿ ವಾಹನಗಳ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ.

