ಬಿಜೆಪಿಯಿಂದ ಸೌಗತ್-ಎ-ಮೋದಿ, ರಂಜಾನ್ ಹಬ್ಬಕ್ಕೆ 32 ಲಕ್ಷ ಮುಸ್ಲಿಮರಿಗೆ ಕಿಟ್ ವಿತರಣೆ
x

ಬಿಜೆಪಿಯಿಂದ 'ಸೌಗತ್-ಎ-ಮೋದಿ', ರಂಜಾನ್ ಹಬ್ಬಕ್ಕೆ 32 ಲಕ್ಷ ಮುಸ್ಲಿಮರಿಗೆ ಕಿಟ್ ವಿತರಣೆ

ಸೌಗತ್-ಎ-ಮೋದಿ' ಎಂಬ ಈ ಅಭಿಯಾನದ ಮೂಲಕ ದೇಶಾದ್ಯಂತ 32 ಲಕ್ಷ ಬಡ ಮುಸ್ಲಿಮರಿಗೆ ಈದ್ ಮತ್ತು ಇತರ ಹಬ್ಬಗಳನ್ನು ಆಚರಿಸಲು ವಿಶೇಷ ಕಿಟ್‌ಗಳನ್ನು ವಿತರಣೆ ಮಾಡಲಾಗುತ್ತದೆ.


ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಆರ್ಥಿಕವಾಗಿ ದುರ್ಬಲ ಮುಸ್ಲಿಂ ಕುಟುಂಬಗಳಿಗೆ ಕಿಟ್ ವಿತರಣೆ ಮಾಡುವ ಕಾರ್ಯಕ್ರಮವೊಂದನ್ನು ಬಿಜೆಪಿ ಮಂಗಳವಾರ (ಮಾರ್ಚ್ 25, 2025) ಪ್ರಾರಂಭಿಸಿದೆ. ಈ ಅಭಿಯಾನವನ್ನು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಬೆಂಬಲ ಪಡೆಯುವ ಪ್ರಯತ್ನವೆಂದು ವಿಶ್ಲೇಷಿಸಲಾಗಿದೆ.

'ಸೌಗತ್-ಎ-ಮೋದಿ' ಎಂಬ ಈ ಅಭಿಯಾನದ ಮೂಲಕ ದೇಶಾದ್ಯಂತ 32 ಲಕ್ಷ ಬಡ ಮುಸ್ಲಿಮರಿಗೆ ಈದ್ ಮತ್ತು ಇತರ ಹಬ್ಬಗಳನ್ನು ಆಚರಿಸಲು ವಿಶೇಷ ಕಿಟ್‌ಗಳನ್ನು ವಿತರಣೆ ಮಾಡಲಾಗುತ್ತದೆ. ಈ ಅಭಿಯಾನವು ದಕ್ಷಿಣ-ಪೂರ್ವ ದೆಹಲಿಯ ನಿಜಾಮುದ್ದೀನ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ನೇತೃತ್ವದಲ್ಲಿ ಆರಂಭಗೊಂಡಿತು.

ಕಿಟ್‌ಗಳಲ್ಲಿ ಏನಿವೆ?

ಈ ಕಿಟ್‌ಗಳಲ್ಲಿ ಆಹಾರ ಪದಾರ್ಥಗಳ ಜೊತೆಗೆ ಬಟ್ಟೆಗಳು, ಶ್ಯಾವಿಗೆ , ಖರ್ಜೂರ, ಒಣ ಹಣ್ಣುಗಳು ಮತ್ತು ಸಕ್ಕರೆ ಸೇರಿವೆ. ಮಹಿಳೆಯರ ಕಿಟ್‌ಗಳಲ್ಲಿ ಹೊಲಿಸುವ ಬಟ್ಟೆ ಇರಲಿದ್ದರೆ, ಪುರುಷರ ಕಿಟ್‌ಗಳಲ್ಲಿ ಕುರ್ತಾ-ಪೈಜಾಮಾ ಇದೆ. ವರದಿಯ ಪ್ರಕಾರ, ಪ್ರತಿ ಕಿಟ್‌ನ ಬೆಲೆ ಸುಮಾರು ರೂ. 500 ರಿಂದ ರೂ. 600 ರೂಪಾಯಿ.

ಅಭಿಯಾನದ ಭಾಗವಾಗಿ ಬಿಜೆಪಿಯ ಅಲ್ಪಸಂಖ್ಯಾತ ವಿಭಾಗವಾದ ಮೈನಾರಿಟಿ ಮೋರ್ಚಾದ 32,000 ಕಾರ್ಯಕರ್ತರು ದೇಶಾದ್ಯಂತ 32,000 ಮಸೀದಿಗಳನ್ನು ಸಂಪರ್ಕಿಸಿ ಈ ವಿಶೇಷ ಕಿಟ್‌ಗಳನ್ನು ಫಲಾನುಭವಿಗಳಿಗೆ ತಲುಪಿಸಲಿದ್ದಾರೆ.

ಇತರ ಹಬ್ಬಗಳಿಗೂ ಉಂಟು

ಬಿಜೆಪಿ ಮೈನಾರಿಟಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ ಅವರು, ಈ ಅಭಿಯಾನವು ಈದ್ ಮಾತ್ರವಲ್ಲದೆ, ಗುಡ್ ಫ್ರೈಡೇ, ಈಸ್ಟರ್ ಮತ್ತು ನೌರೂಜ್‌ನಂತಹ ಜನರು ಆಚರಿಸುವ ಇತರ ಹಬ್ಬಗಳ ವೇಳೆಯೂ ನಡೆಯಲಿದೆ ಎಂದು ಹೇಳಿದರು. ಜಿಲ್ಲಾ ಮಟ್ಟದಲ್ಲಿ ಈದ್ ಮಿಲನ್ ಆಚರಣೆಗಳನ್ನು ಸಹ ಆಯೋಜಿಸಲಾಗುವುದು ಎಂದು ಅವರು ಹೇಳಿದರು.

ಬಿಹಾರ ಚುನಾವಣೆಯ ಹಿನ್ನೆಲೆ

ಬಿಹಾರದಲ್ಲಿ 243 ವಿಧಾನಸಭಾ ಸ್ಥಾನಗಳಿದ್ದು, ಅಕ್ಟೋಬರ್-ನವೆಂಬರ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆಯಿದೆ. ಪ್ರಸ್ತುತ, ಬಿಜೆಪಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜನತಾ ದಳ (ಯುನೈಟೆಡ್) ಮತ್ತು ಇತರ ಪ್ರಾದೇಶಿಕ ಪಕ್ಷಗಳನ್ನು ಒಳಗೊಂಡ ಎನ್‌ಡಿಎ ಒಕ್ಕೂಟವು ಆಡಳಿತದಲ್ಲಿದೆ. 2020ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ 125 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್, ಆರ್‌ಜೆಡಿ ಮತ್ತು ಇತರ ಪಕ್ಷಗಳನ್ನು ಒಳಗೊಂಡ ಮಹಾಘಟ್​ಬಂಧನ್​ 110 ಸ್ಥಾನಗಳನ್ನು ಪಡೆದಿದೆ.

ಬಿಹಾರ ಚುನಾವಣೆಯ ಮೇಲೆ ಕೇಂದ್ರೀಕರಿಸಿ ಮುಸ್ಲಿಂ ಸಮುದಾಯದಲ್ಲಿ ಬಿಜೆಪಿಯ ಪ್ರಭಾವ ಹೆಚ್ಚಿಸುವ ಉದ್ದೇಶದಿಂದ ಆರಂಭಿಸಲಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಬಿಹಾರದಲ್ಲಿ ಮುಸ್ಲಿಮರು ಒಟ್ಟು ಜನಸಂಖ್ಯೆಯ ಸುಮಾರು 16-17% ರಷ್ಟಿದ್ದು, ಕಿಶನ್‌ಗಂಜ್, ಅರಾರಿಯಾ, ಕತಿಹಾರ್, ಸೀಮಾಂಚಲ್ ಪ್ರದೇಶ ಮತ್ತು ಮಧ್ಯ ಬಿಹಾರದ ಕೆಲವು ಭಾಗಗಳಲ್ಲಿ ಗಣನೀಯ ಪ್ರಭಾವ ಹೊಂದಿದ್ದಾರೆ.

Read More
Next Story