Mysore MUDA Scam | ಮುಖ್ಯಮಂತ್ರಿ ರಾಜೀನಾಮೆಗೆ ಬಿಜೆಪಿ ಪಟ್ಟು ಕಾಲು ಅದುರಿತೇ, ಕಳ್ಳತನ ಮಾಫಿ ಆಗುವುದೇ ಎಂದು ಛೇಡಿಸಿದ ಬಿಜೆಪಿ ನಾಯಕರು
ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದಾಗ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಅಧ್ಯಕ್ಷರು, ಸಚಿವರುಗಳು ನಾನಾ ರೀತಿಯಲ್ಲಿ ರಾಜ್ಯಪಾಲರನ್ನು ಟೀಕಿಸಿದರು. ರಾಜ್ಯಪಾಲರು ದೆಹಲಿಯ ಕೈಗೊಂಬೆ ಕುಟುಕಿದ್ದರು. ಈಗ ತಪ್ಪು ಒಪ್ಪಿಕೊಂಡ ಕಾರಣ ಸಿದ್ದರಾಮಯ್ಯ ಅವರು ರಾಜ್ಯಪಾಲರ ಕ್ಷಮೆ ಕೇಳಬೇಕು. ಅಲ್ಲದೇ ಮುಡಾ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ಬೆದರಿಕೆ ಹಾಕುತ್ತಿರುವ ವಿಷಯವೂ ತಿಳಿದುಬಂದಿದೆ, ಆದ್ದರಿಂದ ಗೃಹ ಸಚಿವರು ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸೂಕ್ತ ಭದ್ರತೆ ಒದಗಿಸಬೇಕು
ಮುಡಾ ನಿವೇಶನ ಹಂಚಿಕೆ ಪ್ರಕರಣ ಆಡಳಿತ ಪಕ್ಷ-ವಿರೋಧ ಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಜಾರಿ ನಿರ್ದೇಶಾನಲಯದ ಇಸಿಐಆರ್ ದಾಖಲಿಸಿದ ಬೆನ್ನಲ್ಲೇ ಸಿಎಂ ಕುಟುಂಬ ನಿವೇಶನಗಳ ಹಿಂತಿರುಗಿಸುವ ನಿರ್ಧಾರ ಕೈಗೊಂಡಿದೆ. ಆದರೆ, ಇದಕ್ಕೆ ಸುಮ್ಮನಾಗದ ವಿರೋಧ ಪಕ್ಷಗಳು ನಿವೇಶನ ವಾಪಸ್ ಕೊಟ್ಟರೂ ರಾಜೀನಾಮೆ ನೀಡಲೇಬೇಕು ಎಂದು ಪಟ್ಟು ಹಿಡಿದಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ(ಮುಡಾ) ನಿವೇಶನಗಳನ್ನು ಹಿಂತಿರುಗಿಸುವ ಮೂಲಕ ತಪ್ಪು ಮಾಡಿರುವುದನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಕಾನೂನಿನ ಕುಣಿಕೆಯಿಂದ ಪಾರಾಗಬೇಕೆಂಬ ಅವರ ಪ್ರಯತ್ನ ರಾಜಕೀಯ ಅನುಕಂಪ ಗಿಟ್ಟಿಸಿಕೊಳ್ಳುವ ಗಿಮಿಕ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಾನು ತಪ್ಪೇ ಮಾಡಿಲ್ಲ, ಯಾರಿಗೂ ಜಗ್ಗುವುದಿಲ್ಲ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಸಿದ್ದರಾಮಯ್ಯ ಅವರು ಈಗ ತಮ್ಮ ಪತ್ನಿಯ ಮೂಲಕ ನಿವೇಶನಗಳನ್ನು ವಾಪಸ್ ಕೊಡಿಸುವ ಡ್ರಾಮ ಮಾಡುತ್ತಿದ್ದಾರೆ. ಇಷ್ಟೊಂದು ಕಳಂಕ, ಆರೋಪ ಹೊತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದಾಗ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಅಧ್ಯಕ್ಷರು, ಸಚಿವರುಗಳು ನಾನಾ ರೀತಿಯಲ್ಲಿ ರಾಜ್ಯಪಾಲರನ್ನು ಟೀಕಿಸಿದರು. ರಾಜ್ಯಪಾಲರು ದೆಹಲಿಯ ಕೈಗೊಂಬೆ ಕುಟುಕಿದ್ದರು. ಈಗ ತಪ್ಪು ಒಪ್ಪಿಕೊಂಡ ಕಾರಣ ಸಿದ್ದರಾಮಯ್ಯ ಅವರು ರಾಜ್ಯಪಾಲರ ಕ್ಷಮೆ ಕೇಳಬೇಕು. ಅಲ್ಲದೇ ಮುಡಾ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ಬೆದರಿಕೆ ಹಾಕುತ್ತಿರುವ ವಿಷಯವೂ ತಿಳಿದುಬಂದಿದೆ, ಆದ್ದರಿಂದ ಗೃಹ ಸಚಿವರು ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸೂಕ್ತ ಭದ್ರತೆ ಒದಗಿಸಬೇಕು ಎಂದು ವಿಜಯೇಂದ್ರ ಒತ್ತಾಯಿಸಿದರು.
ಸಿಎಂ ಸಿದ್ದರಾಮಯ್ಯ ಅವರ ಭ್ರಷ್ಟಾಚಾರಕ್ಕೆ ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಕೂಡ ಕುಮ್ಮಕ್ಕು ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಾಲ್ಮೀಕಿ ಹಗರಣ, ಎಸ್ಸಿಪಿ/ಟಿಎಸ್ಪಿ ಅನುದಾನ ದುರುಪಯೋಗ, ಮುಡಾ ಹಗರಣದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಸರ್ಕಾರದ ದುರಾಡಳಿತ ಖಂಡಿಸಿ, ಸಿಎಂ ರಾಜೀನಾಮೆಗೆ ಒತ್ತಾಯಿಸಿ ಮೈಸೂರು ಚಲೋ, ವಿಧಾನಸಭೆ ಅಧಿವೇಶನದಲ್ಲಿ ಅಹೋರಾತ್ರಿ ಧರಣಿ, ಪಾದಯಾತ್ರೆ ಮಾಡಿದ ಪರಿಣಾಮ ಈಗ ಸಿಎಂ ತಪ್ಪು ಒಪ್ಪಿಕೊಂಡಿದ್ದಾರೆ. ಹಾಗಾಗಿ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ಸಿಗರಿಂದಲೇ ಒತ್ತಡ
ಸಿಎಂ ರಾಜೀನಾಮೆ ನೀಡಬೇಕೆಂಬುದು ನಮ್ಮ ಒತ್ತಾಯ. ವಿಪರ್ಯಾಸವೆಂದರೆ ಅವರದ್ದೇ ಪಕ್ಷದಲ್ಲಿ ಸಿಎಂ ರಾಜೀನಾಮೆ ನೀಡಲಿದ್ದಾರೆ ಎಂಬ ವಿಶ್ವಾಸ ಮೂಡಿದೆ. ಸಿದ್ದರಾಮಯ್ಯ ಅವರ ಆಪ್ತರಾದ ಎಚ್.ಸಿ.ಮಹದೇವಪ್ಪ ಅವರೇ ಈ ಮಾತನ್ನು ಒಪ್ಪಿಕೊಂಡಿದ್ದಾರೆ. ನಂತರದಲ್ಲಿ ಡಿ.ಕೆ.ಶಿವಕುಮಾರ್-ಜಿ.ಪರಮೇಶ್ವರ್ ಅವರ ರಹಸ್ಯ ಸಭೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗಳು ಇದನ್ನು ಪುಷ್ಠೀಕರಿಸುತ್ತವೆ. ಆದ್ದರಿಂದ ಇನ್ನಾದರೂ ಬಂಡತನ ಬಿಟ್ಟು ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಕೆಳಗಿಳಿಯಬೇಕು ಎಂದರು.
ಈ ಹಿಂದೆ ಸಿದ್ದರಾಮಯ್ಯ ಅವರು ಐದು ವರ್ಷ ಆಡಳಿತ ನಡೆಸಿದ್ದಾಗ ತಮ್ಮ ಭ್ರಷ್ಟಾಚಾರ ಮುಚ್ಚಿಹಾಕಲು ಲೋಕಾಯುಕ್ತ ಸಂಸ್ಥೆಯ ಹಲ್ಲು ಕಿತ್ತರು. ಅದರ ಬದಲಾಗಿ ಎಸಿಬಿಯನ್ನು ಜಾರಿಗೆ ತಂದು, ತಮಗೆ ಬೇಕಾದ ಅಧಿಕಾರಿಗಳನ್ನು ನೇಮಕ ಮಾಡಿದರು. ಪಾದದರ್ಶಕ ಆಡಳಿತ ನೀಡಿದ್ದೇವೆ ಎಂದು ಬಿಂಬಿಸಿಕೊಂಡು ಬಚಾವಾದರು.
ಕೆಂಪಣ್ಣ ಆಯೋಗದ ವರದಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಗುರುತರ ಆರೋಪ ಉಲ್ಲೇಖವಾಗಿದ್ದರೂ ಸುಮ್ಮನಿದ್ದರು. ಮತ್ತೆ ಭ್ರಷ್ಟಾಚಾರ ರಹಿತ ಆಡಳಿತದ ಹೆಸರಲ್ಲಿ ಅಧಿಕಾರಕ್ಕೆ ಬಂದು ಈಗ ಸಿಕ್ಕಿಬಿದ್ದಿದ್ದಾರೆ ಎಂದರು.
ಮುಡಾ ಹಗರಣದಲ್ಲಿ ತಮ್ಮ ಪತ್ನಿ ಬಿ.ಎಂ.ಪಾರ್ವತಿಯವರಿಗೆ ೧೪ ನಿವೇಶನ ಹಂಚಿಕೆ ಮಾಡಿದ ಪ್ರಕರಣದ ಜೊತೆಗೆ ಸುಮಾರು ೫೦೦೦ ಕೋಟಿ ಮೌಲ್ಯದ ಮುಡಾ ನಿವೇಶನಗಳನ್ನು ತಮ್ಮ ಹಿಂಬಾಲಕರು, ರಾಜಕೀಯ ಪುಡಾರಿಗಳು, ರಿಯಲ್ ಎಸ್ಟೇಟ್ ನವರಿಗೆ ಕೊಡಿಸಿದ್ದಾರೆ ಎಂದು ಆರೋಪಿಸಿದರು.
ಕಳ್ಳತನ ಮಾಫಿ ಆಗುವುದೇ-ಆರ್.ಅಶೋಕ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರು ತಾವು ಪಡೆದಿದ್ದ 14 ನಿವೇಶನಗಳನ್ನು ಮುಡಾಗೆ ಹಿಂತಿರುಗಿಸಿದರೂ ಸಿಎಂ ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕದ್ದ ಮಾಲನ್ನು ವಾಪಸ್ ಕೊಟ್ಟ ತಕ್ಷಣ ಕಳ್ಳತನ ಮಾಫಿ ಆಗುಬಿಡುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಮುಡಾ ಹಗಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾನೂನು ಕುಣಿಕೆ ಬಿಗಿಯಾಗುತ್ತಿದ್ದಂತೆ ತಮ್ಮ ಪತ್ನಿ ಹೆಸರಲ್ಲಿ ಪಡೆದಿದ್ದ ನಿವೇಶನಗಳನ್ನು ಹಿಂತಿರುಗಿಸಲು ನಿರ್ಧರಿಸಿದ್ದಾರೆ. ನಾನು ತಪ್ಪೇ ಮಾಡಿಲ್ಲ ಎನ್ನುತ್ತಿದ್ದವರು ಈಗ ತಪ್ಪು ಒಪ್ಪಿಕೊಂಡು ಸತ್ಯಕ್ಕೆ ಶರಣಾಗಿರುವುದು ನಮ್ಮ ಹೋರಾಟಕ್ಕೆ ಸಿಕ್ಕ ಮತ್ತೊಂದು ಜಯ ಎಂದಿದ್ದಾರೆ.
ಕದ್ದ ಮಾಲನ್ನು ಹಿಂತಿರುಗಿಸಿದ ಕೂಡಲೇ ಕಳ್ಳ ನಿರಪರಾಧಿ ಆಗಿಬಿಡುತ್ತಾನೆಯೇ , ಕಳ್ಳತನ ಮಾಫಿ ಆಗಿಬಿಡುತ್ತದೆಯೇ?, ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಈಗಲಾದರೂ ಸಿದ್ದರಾಮಯ್ಯ ಅವರಿಗೆ ತಪ್ಪಿನ ಅರಿವಾಗಿದೆಯಲ್ಲ ಎಂಬುದೇ ಸಮಾಧಾನಕರ ವಿಷಯ. ಆದರೆ, ಅಡಿಕೆಗೆ ಹೋದ ಮಾನ ಆನೆಗೂ ಬರುವುದಿಲ್ಲ ಸಿದ್ದರಾಮಯ್ಯನವರೇ, ನೀವು ತನಿಖೆಗೆ ಎದುರಿಸಲೇಬೇಕು. ನಿಷ್ಪಕ್ಷಪಾತ ಹಾಗೂ ಪಾರದರ್ಶಕ ತನಿಖೆಗಾಗಿ ಸಿಎಂ ಸ್ಥಾನದಿಂದ ಕೆಳಗಿಳಿಯಲೇಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಬಸವರಾಜ ಬೊಮ್ಮಾಯಿ ಅವರು, ಮುಡಾ ಸೈಟ್ ವಾಪಸ್ ಕೊಡುವ ಮೂಲಕ ಸಿಎಂ ಸಿದ್ದರಾಮಯ್ಯ ಮತ್ತಷ್ಟು ಸಂಕಷ್ಟವನ್ನು ಮೈಮೇಲೆ ಎಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಈ ಕೆಲಸವನ್ನು ಅವರು ಮೊದಲೇ ಮಾಡಬೇಕಿತ್ತು. ಆಗಲೇ ಹೈಕೋರ್ಟ್ ನ್ಯಾಯಮೂರ್ತಿಗಳ ಮೂಲಕ ತನಿಖೆ ಮಾಡಿಸಿದ್ದರೆ ಮುಗಿದು ಹೋಗುತ್ತಿತ್ತು. ಸಿದ್ದರಾಮಯ್ಯ ಅವರ ಪ್ರಾಮಾಣಿಕತೆ ಬಗ್ಗೆ ಪ್ರಶ್ನೆ ಬರುತ್ತಿರಲಿಲ್ಲ. ಆದರೆ ಆಗ ಸಮರ್ಥನೆ ಮಾಡಿಕೊಂಡರು. ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟು, ಪ್ರಕರಣ ದಾಖಲಾಗಿ, ತನಿಖೆ ನಡೆದಿದೆ.
ಈಗ ವಾಪಸ್ ಮಾಡಿರುವುದರಿಂದ ಹಲವಾರು ಪ್ರಶ್ನೆಗಳು ಉದ್ಭವಿಸಿವೆ ಸೈಟ್ ವಾಪಸ್ ಮಾಡುವ ಮೂಲಕ ಮತ್ತಷ್ಟು ಜಟಿಲ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಎಫ್ಐಆರ್ ಆದ ಮೇಲೆ ತನಿಖೆ ಆಗಲೇಬೇಕು. ಒಂದು ಕಡೆ ಲೋಕಾಯುಕ್ತ ತನಿಖೆ ನಡೆದಿದೆ. ಮತ್ತೊಂದು ಕಡೆ ಇಡಿ ಎಫ್ ಐ ಆರ್ ಮಾಡಿಕೊಂಡು ತನಿಖೆ ಮಾಡುತ್ತಿದೆ. ಮೊದಲು ಕಾಂಗ್ರೆಸ್ ನಾಯಕರು ತಪ್ಪೇ ನಡೆದಿಲ್ಲ ಅನ್ನುತ್ತಿದ್ದರು. ಈಗ ಸೈಟ್ ವಾಪಸ್ ಕೊಟ್ಟು ತಪ್ಪಾಗಿದೆ ಅನ್ನುವುದನ್ನು ಒಪ್ಪಿಕೊಂಡಂತಾಗಿದೆ ಎಂದರು.
ಹಿಂದೆ ಯಡಿಯೂರಪ್ಪ ಸೈಟ್ ವಾಪಸ್ ಮಾಡಿದಾಗ ಇದೇ ಸಿದ್ದರಾಮಯ್ಯ ಏನು ಹೇಳಿದ್ದರು ನೆನಪಿಸಿಕೊಳ್ಳಲಿ, ಆಗ ಯಡಿಯೂರಪ್ಪ ಸೈಟ್ ವಾಪಸ್ ಮಾಡುವ ಮೂಲಕ ತಪ್ಪನ್ನು ಒಪ್ಪಿಕೊಂಡಿದ್ದಾರೆ ಅಂತ ಹೇಳಿದ್ದರು. ಈಗ ಇದೇ ಮಾತು ಸಿದ್ದರಾಮಯ್ಯ ಅವರಿಗೂ ಅನ್ವಯ ಆಗುತ್ತದೆ. ಸೈಟ್ ವಾಪಸ್ ನೊಂದಿಗೆ ಅಕ್ರಮ ಆಗಿರುವುದನ್ನು ಒಪ್ಪಿಕೊಂಡಿದ್ದಾರೆ ಸೈಟು ಹಂಚಿಕೆ ಕಾನೂನುಬಾಹಿರವಾಗಿ ಆಗಿದೆ ಅನ್ನುವುದನ್ನು ಅವರೇ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ಶರಣಾಗತಿನಾ ಅಥವಾ ಡ್ಯಾಮೇಜ್ ಕಂಟ್ರೋಲಾ?
ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರು 14 ನಿವೇಶನಗಳನ್ನು ಹಿಂದಿರುಗಿಸಲು ನಿರ್ಧರಿಸಿರುವುದು ಸಿದ್ದರಾಮಯ್ಯ ಅವರ ಸೌಮ್ಯ ಶರಣಾಗತಿಯೇ ಅಥವಾ ಡ್ಯಾಮೇಜ್ ಕಂಟ್ರೋಲ್ ಮಾಡುವ ಪ್ರಯತ್ನವೇ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದ್ದಾರೆ.
ಮುಡಾದಿಂದ ಪರಿಹಾರವಾಗಿ ಪಡೆದ ನಿವೇಶಗಳನ್ನು ಹಿಂತಿರುಗಿಸುತ್ತಿರುವುದೇಕೆ, ಅಧಿಕಾರ ದುರುಪಯೋಗ ಹಾಗೂ ಭ್ರಷ್ಟಾಚಾರ ನಡೆಸಿರುವುದು ಇದರಿಂದ ಸಾಬೀತಾಗುತ್ತಿದೆ. ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸುತ್ತಿದ್ದಂತೆ ಕಾಲು ಅದುರಿತೇ ಎಂದು ಕಿಚಾಯಿಸಿದ್ದಾರೆ. ಇಷ್ಟೆಲ್ಲ ಬೆಳವಣಿಗೆಗಳ ಬಳಿಕವೂ ಸಿಎಂ ಸ್ಥಾನದಲ್ಲಿ ಮುಂದುವರಿಯುವುದು ಸರಿಯಲ್ಲ. ಕೂಡಲೇ ರಾಜೀನಾಮೆ ನೀಡಿ ಎಂದು ಟ್ವೀಟರ್ ಮೂಲಕ ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು, ಈಗ ನಿವೇಶನ ವಾಪಸ್ ಕೊಟ್ಟರೆ ಪ್ರಯೋಜನವಿಲ್ಲ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕುಟುಂಬ ರಾಜಕಾರಣ ಮಾಡುವ ಎಲ್ಲ ರಾಜಕಾರಣಿಗಳಿಗೆ ಇದು ಒಂದು ಪಾಠ. ಇನ್ನು ಮುಂದಾದರೂ ಎಚ್ಚರಿಕೆಯಿಂದ ಹೆಜ್ಜೆ ಇಡಿ, ಸಿಕ್ಕಿಹಾಕಿಕೊಂಡ ಮೇಲೆ ಕಣ್ಣೀರು ಹಾಕಿ ಪ್ರಯೋಜನವಿಲ್ಲ ಎಂದಿದ್ದಾರೆ.
ಸಿದ್ದರಾಮಯ್ಯ ಅವರ ಪತ್ನಿ ಬಗ್ಗೆ ವೈಯಕ್ತಿಕವಾಗಿ ಮರುಕ ಇದೆ. ರಾಜಕೀಯವಾಗಿ ಎಲ್ಲಿಯೂ ಕಾಣಿಸಿಕೊಂಡವರಲ್ಲ. ಆದರೆ ಈಗ ನ್ಯಾಯಾಲಯದ ಕಟಕಟೆಗೆ ಬಂದು ನಿಲ್ಲುವ ಪರಿಸ್ಥಿತಿ ಎದುರಾಗಿದೆ. ನ್ಯಾಯಾಲಯ ವಿಚಾರಣೆಗೆ ಅನುಮತಿ ನೀಡಿದ ಮೇಲೆ ನಿವೇಶನ ವಾಪಸ್ ಕೊಟ್ಟರೆ ಒಪ್ಪುವುದಿಲ್ಲ. ಮುಡಾದಿಂದ ಪಡೆದ ನಿವೇಶನಗಳಿಗೆ ಸಿದ್ದರಾಮಯ್ಯ ಅವರು 62 ಕೋಟಿ ರೂ. ಕೇಳಿದಾಗಲೇ ಅವರ ಮೇಲಿದ್ದ ಗೌರವ ನೆಲಕಚ್ಚಿತು ಎಂದು ಹೇಳಿದರು.