x

ನುಸುಳುಕೋರರಿಗೆ ಪೊಲೀಸರ ಬಲೆ, ಖಾದ್ಯಗಳ ಕರಾಳ ಮುಖ ಬಯಲು, ಸೋಮವಾರ ಖಾತೆ ಹಂಚಿಕೆ ಫೈನಲ್?

ಬಾಂಗ್ಲಾ ವಲಸಿಗರ ವಿರುದ್ಧ ಬೆಂಗಳೂರು ಪೊಲೀಸರು ಆಪರೇಷನ್ ಮುಕ್ತಾ ಕೈಗೊಂಡಿದ್ದಾರೆ. ಹೋಟೆಲ್​ಗಳ ಮೇಲೆ ಆಹಾರ ಸುರಕ್ಷತಾ ದಾಳಿ ನಿರಂತರ; ಖಾತೆ ಹಂಚಿಕೆಗೆ ದೆಹಲಿಯಲ್ಲಿ ಚರ್ಚೆ ನಡೆಯಲಿದೆ.


Click the Play button to hear this message in audio format

ರಾಜ್ಯ ರಾಜಧಾನಿ ಬೆಂಗಳೂರು ತನ್ನ ಅಭಿವೃದ್ಧಿಶೀಲ ಆರ್ಥಿಕತೆಯಿಂದಾಗಿ ದೇಶಾದ್ಯಂತ ಲಕ್ಷಾಂತರ ಮಂದಿಯನ್ನು ಆಕರ್ಷಿಸುತ್ತದೆ. ಆದರೆ, ಈ ಅವಕಾಶಗಳ ನಡುವೆ ನುಸುಳಿರುವ ಅಕ್ರಮ ಬಾಂಗ್ಲಾದೇಶಿ ವಲಸಿಗರು ರಾಷ್ಟ್ರೀಯ ಭದ್ರತೆಗೆ ಸವಾಲಾಗಿ ಪರಿಣಮಿಸಿದ್ದಾರೆ. ಬೆಂಗಳೂರಿನ ವೈಟ್‌ಫೀಲ್ಡ್ ವಿಭಾಗದ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯು ಈ ಸಮಸ್ಯೆಯ ಗಂಭೀರತೆಯನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ.

ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚಲು ಬೆಂಗಳೂರು ಪೊಲೀಸರು ಆಪರೇಷನ್‌ಮುಕ್ತಾ ಹೆಸರಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರ ಸ್ಪಷ್ಟ ಸೂಚನೆಯ ಮೇರೆಗೆ, ಡಿಸಿಪಿ ಸೈದುಲು ಅಡಾವತ್ ಅವರ ನೇತೃತ್ವದಲ್ಲಿ ಈ ಬೃಹತ್ ಕಾರ್ಯಾಚರಣೆ ಜರುಗಿದೆ. ವೈಟ್‌ಫೀಲ್ಡ್ ವಿಭಾಗದ ವ್ಯಾಪ್ತಿಯ ಆರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿರುವ ಸುಮಾರು 30ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಏಕಕಾಲಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ. ಮುಖ್ಯವಾಗಿ ವರ್ತೂರು ಮತ್ತು ಸುತ್ತಮುತ್ತಲಿನ ಅಸಂಘಟಿತ ಕಾರ್ಮಿಕರು ವಾಸಿಸುವ ಶೆಡ್‌ಗಳ ಮೇಲೆ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ. ನೂರಾರು ಶೆಡ್‌ಗಳಿರುವ ನಿರ್ದಿಷ್ಟ ಪ್ರದೇಶಗಳನ್ನು ಸುತ್ತುವರಿದ ಪೊಲೀಸರು, ಅಲ್ಲಿನ ಪ್ರತಿಯೊಬ್ಬ ವ್ಯಕ್ತಿಯ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ್ದಾರೆ.

ಪೊಲೀಸರು ವಶಕ್ಕೆ ಪಡೆದ ಸುಮಾರು 40ಕ್ಕೂ ಹೆಚ್ಚು ವ್ಯಕ್ತಿಗಳ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ವೋಟರ್ ಐಡಿಗಳ ಪರಿಶೀಲನೆ ನಡೆಸಿದ್ದಾರೆ. ಕೇವಲ ದಾಖಲೆಗಳನ್ನು ನೋಡುವುದಷ್ಟೇ ಅಲ್ಲದೆ, ಅವರಿಂದ ಸ್ವಂತ ಊರು, ತಾಲೂಕು, ಪೋಸ್ಟ್ ಆಫೀಸ್ ಮತ್ತು ಅಲ್ಲಿನ ಸ್ಥಳೀಯ ಪೊಲೀಸ್ ಠಾಣೆಯ ವಿವರಗಳನ್ನು ಕೇಳಿ ಪಡೆಯಲಾಗುತ್ತಿದೆ. ಅವರು ನೀಡುವ ಮಾಹಿತಿಗೂ, ದಾಖಲೆಗಳಲ್ಲಿರುವ ವಿಳಾಸಕ್ಕೂ ತಾಳೆಯಾಗದಿದ್ದರೆ ಅಂತಹವರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗುತ್ತಿದೆ. ಈ ಪ್ರಕ್ರಿಯೆಯು ಅಕ್ರಮವಾಗಿ ಭಾರತೀಯ ದಾಖಲೆಗಳನ್ನು ಪಡೆದಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನೆರವಾಗುತ್ತದೆ.

ರೆಸ್ಟೋರೆಂಟ್‌ಗಳ ಮೇಲೆ ಕಾರ್ಯಾಚರಣೆ

ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಹೊಟೇಲ್‌ಮೇಲೆ ಕಾರ್ಯಾಚರಣೆ ಮುಂದುವರಿಸಿರುವ ಆರೋಗ್ಯ ಇಲಾಖೆಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಭಾಗದ ಅಧಿಕಾರಿಗಳು ದಾಳಿ ಕಾರ್ಯವನ್ನು ಮುಂದುವರಿಸಿದ್ದಾರೆ. ಮೆಕ್‌ಡೋನಾಲ್ಡ್‌, ಕೆಎಫ್‌ಸಿಯಂತಹ ರೆಸ್ಟೋರೆಂಟ್‌ಗಳ ಮೇಲೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಬೆಂಗಳೂರಿನ ಹೊರವಲಯದ ಹೊಸಕೋಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಪ್ರಮುಖ ಕೋಲ್ಡ್ ಚೈನ್ ಸಪ್ಲೈಸ್ ಮತ್ತು ಆಹಾರ ಸಂಗ್ರಹಣಾ ಘಟಕಗಳ ಮೇಲೆ ವಿಶೇಷ ತಪಾಸಣೆ ನಡೆಸಲಾಯಿತು. ನಾಗರಿಕರ ಆರೋಗ್ಯದ ದೃಷ್ಟಿಯಿಂದ ಈ ದಾಳಿ ಅತ್ಯಂತ ಮಹತ್ವದ್ದಾಗಿದ್ದು, ಆಹಾರ ಪದಾರ್ಥಗಳ ಸಂಗ್ರಹಣೆ, ಅವುಗಳ ಅವಧಿ ಮತ್ತು ಪರವಾನಗಿ ನಿಯಮಗಳ ಪಾಲನೆಯನ್ನು ಪರಿಶೀಲನೆ ನಡೆಸಲಾಗಿದೆ.

ಹೊಸಕೋಟೆಯಲ್ಲಿರುವ ಈ ಘಟಕವು ಪ್ರಮುಖ ಪೂರೈಕೆದಾರನಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿನ ತಪಾಸಣೆಯ ವೇಳೆ ಕೆಲವು ಮಹತ್ವದ ಲೋಪಗಳು ಕಂಡುಬಂದಿವೆ. ತಪಾಸಣೆಯ ವೇಳೆ ಬಳಕೆಯ ಅವಧಿ ಮುಗಿಯುವ ಹಂತದಲ್ಲಿರುವ ಸಾಕಷ್ಟು ಆಹಾರ ಪದಾರ್ಥಗಳನ್ನು ಪತ್ತೆ ಹಚ್ಚಲಾಗಿದೆ. ಕಾನೂನುಬದ್ಧ ಪ್ರಕ್ರಿಯೆಗಳನ್ನು ಅನುಸರಿಸಿ ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟಕದ ಪರವಾನಗಿ ನವೀಕರಣ ಮತ್ತು ಅಸ್ತಿತ್ವದಲ್ಲಿರುವ ಆಹಾರ ಸುರಕ್ಷತಾ ನಿಯಮಾವಳಿಗಳ ಪಾಲನೆಯಲ್ಲಿ ವ್ಯತ್ಯಯ ಕಂಡುಬಂದ ಹಿನ್ನೆಲೆಯಲ್ಲಿ, ಆಡಳಿತ ಮಂಡಳಿಗೆ 'ಸುಧಾರಣಾ ನೋಟಿಸ್' ನೀಡಲಾಗಿದೆ. ತಕ್ಷಣವೇ ಮಾರ್ಪಾಡುಗಳನ್ನು ಮಾಡಿಕೊಳ್ಳಲು ಸೂಚಿಸಲಾಗಿದೆ. ಈ ಸಂಸ್ಥೆಯು ಕೆಎಫ್‌ಸಿ ಸೇರಿದಂತೆ ದೇವಯಾನಿ ಇಂಟರ್‌ನ್ಯಾಷನಲ್ ಲಿಮಿಟೆಡ್‌ಗೆ ಆಹಾರ ಪೂರೈಕೆ ಮಾಡುತ್ತದೆ ಎಂಬುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ನಾಳೆ ಸಿಎಂ, ಕೆಪಿಸಿಸಿ ಅಧ್ಯಕ್ಷ ದೆಹಲಿಗೆ

ರಾಜ್ಯ ರಾಜಕೀಯ ವಾತಾವರಣದಲ್ಲಿ ಸಚಿವ ಸಂಪುಟದ ಖಾತೆ ಹಂಚಿಕೆ ಮತ್ತು ಸಂಪುಟ ವಿಸ್ತರಣೆಯ ವಿಚಾರವು ಇದೀಗ ತೀವ್ರ ಸ್ವರೂಪದ ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿದೆ. ಸರ್ಕಾರ ರಚನೆಯಾಗಿ ಸಮಯ ಉರುಳುತ್ತಿದ್ದರೂ, ಖಾತೆಗಳ ಹಂಚಿಕೆ ಮಾಡಲು ಸಾಧ್ಯವಾಗಿಲ್ಲ. ಸಚಿವ ಸ್ಥಾನ ಸಿಗದ ಅಸಮಾಧಾನಿತರು ಕಾಂಗ್ರೆಸ್ ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿವೆ.

ಸಚಿವ ಸಂಪುಟದ ಖಾತೆ ಹಂಚಿಕೆಯಲ್ಲಿನ ಗೊಂದಲ ಶಮನಗೊಳಿಸುವ ಉದ್ದೇಶದಿಂದ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ನಾಳೆ ದೆಹಲಿಗೆ ತೆರಳಲಿದ್ದಾರೆ. ಆಗಸ್ಟ್ 13ರಿಂದ ಆರಂಭವಾಗಲಿರುವ ವಿಧಾನಸಭೆಯ ಮುಂಗಾರು ಅಧಿವೇಶನವು ಆಡಳಿತಾರೂಢ ಸರ್ಕಾರಕ್ಕೆ ಅಗ್ನಿಪರೀಕ್ಷೆಯಾಗಿದೆ. ಅಧಿವೇಶನಕ್ಕೂ ಮುನ್ನ ಸಂಪುಟದಲ್ಲಿನ ಎಲ್ಲ ವಿವಾದಗಳನ್ನು ಬಗೆಹರಿಸಿ, ಒಂದು ಸುಸ್ಥಿರ ಆಡಳಿತವನ್ನು ನೀಡಲು ಕಾಂಗ್ರೆಸ್ ಹೈಕಮಾಂಡ್ ಸಜ್ಜಾಗಿದೆ.

ಸಚಿವರು ಬಯಸಿದ ಖಾತೆ ಮತ್ತು ಪಕ್ಷದ ಹೈಕಮಾಂಡ್ ತೀರ್ಮಾನದ ನಡುವಿನ ಸಂಘರ್ಷವನ್ನು ನಿವಾರಿಸುವುದು. ಸಚಿವ ಸ್ಥಾನ ಸಿಗದ ನಾಯಕರು ಮತ್ತು ಖಾತೆ ಹಂಚಿಕೆಯಲ್ಲಿ ಅತೃಪ್ತರಾಗಿರುವವರನ್ನು ಸಮಾಧಾನಪಡಿಸುವುದು. ಜಾತಿವಾರು ಪ್ರಾತಿನಿಧ್ಯದ ಕುರಿತು ಕೇಳಿಬರುತ್ತಿರುವ ಆರೋಪಗಳಿಗೆ ಉತ್ತರ ನೀಡುವುದು ಸೇರಿಂತೆ ಇತರೆ ವಿಷಯಗಳ ಕುರಿತು ಹೈಕಮಾಂಡ್‌ಜತೆ ಮಾತನಾಡಲು ದೆಹಲಿಗೆ ತೆರಳುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಪುಷ್ಪ ನಮನ ಸಲ್ಲಿಸಿದರು. ಬಳಿಕ ಅವರು, ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಸಿಗದ ಕುರಿತು ಪ್ರತಿಕ್ರಿಯೆ ನೀಡಿದರು. ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನ ಇದ್ದೇ ಇರುತ್ತದೆ. ನಾವು ಮಹಿಳಾ ಶಕ್ತಿಯನ್ನು ಗೌರವಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

Read More
Next Story