ಆಂಬುಲೆನ್ಸ್  ಒಳಗಿನ ಜೀವಗಳ ಗೋಲ್ಡನ್ ಅವರ್ ತಪ್ಪಿಸುವ ರಾಷ್ಟ್ರೀಯ ಹೆದ್ದಾರಿ
x

ಆಂಬುಲೆನ್ಸ್ ಒಳಗಿನ ಜೀವಗಳ 'ಗೋಲ್ಡನ್ ಅವರ್' ತಪ್ಪಿಸುವ ರಾಷ್ಟ್ರೀಯ ಹೆದ್ದಾರಿ

ಹೃದಯಾಘಾತ, ಅಪಘಾತದ ತೀವ್ರಗಾಯ, ಹೆರಿಗೆ ನೋವು ಇತ್ಯಾದಿ ಕಾಣಿಸಿಕೊಂಡಾಗ ಮೊದಲ ಒಂದು ಗಂಟೆ (Golden Hour) ಬಹಳ ಮುಖ್ಯವಾಗುತ್ತದೆ. ಕನಿಷ್ಠ ಪ್ರಥಮ ಚಿಕಿತ್ಸೆ ನೀಡಿದರೂ ಸಾಧ್ಯವಾದಷ್ಟು ಬೇಗ ಸುಸಜ್ಜಿತ ಆಸ್ಪತ್ರೆಗೆ ಕಳುಹಿಸಲೇಬೇಕಾಗುತ್ತದೆ. ಆದರೆ, ಆರೋಗ್ಯ ವ್ಯವಸ್ಥೆಯ ಪ್ರಧಾನ ಕೇಂದ್ರ (ಹಬ್‌) ಎನಿಸಿಕೊಂಡಿರುವ ಮಂಗಳೂರಿಗೆ ಹೋಗುವ ಪ್ರಯಾಣದ ಅವಧಿಯೇ ಅತಿಯಾಗಿ ಹೆಚ್ಚಿದೆ


ರಸ್ತೆ ಸರಿಯಾಗಿರುತ್ತಿದ್ದರೆ ಖಂಡಿತ ಅವರನ್ನು ಬದುಕಿಸಬಹುದಿತ್ತು..., ರಸ್ತೆ ಗುಂಡಿಗಳಲ್ಲಿ ಆಂಬುಲೆನ್ಸ್‌ ಸಾಗುವಾಗ ಆ ಗರ್ಭಿಣಿಯ ಚೀರಾಟ ಇನ್ನೂ ಕೇಳುತ್ತಿದೆ... ಸಾಮಾನ್ಯ ರಸ್ತೆ ಇದ್ದರೆ ಪುತ್ತೂರಿನಿಂದ ಮಂಗಳೂರಿಗೆ 30, 35 ನಿಮಿಷಗಳ ಒಳಗೆ ತಲುಪಬಲ್ಲೆ. ಈಗ ಹೇಳಲಾಗದು. ರೋಗಿ ಕೊನೆಯುಸಿರೆಳೆದಾಗ ಸಾಕಷ್ಟು ಆರೋಪಗಳನ್ನೂ ಕೇಳಬೇಕಾಗಿ ಬಂದಿದೆ.

- ಇದು ಪುತ್ತೂರು- ಮಂಗಳೂರು ಮಾರ್ಗ ಮಧ್ಯೆ ಸಂಚರಿಸುವ ಆಂಬುಲೆನ್ಸ್‌ ಚಾಲಕರ ನೋವು.

ಕರಾವಳಿ, ಮಲೆನಾಡಿನಲ್ಲಿ ಹೇರಳವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಉಕ್ಕಿ ಹರಿಯುತ್ತಿರುವ ತೊರೆಗಳಿಂದಾಗಿ, ತೆವಳುತ್ತಾ ಸಾಗುತ್ತಿದ್ದ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ (75) ಕಾಮಗಾರಿ ಇನ್ನಷ್ಟು ಹದಗೆಟ್ಟಿದೆ. ಜತೆಗೆ, ಮಂಗಳೂರು ಸಂಪರ್ಕಿಸುವ ಕಲ್ಕಡ್ಕ, ಮಾಣಿ, ಬಂಟ್ವಾಳದವರೆ ರಸ್ತೆ ಎಲ್ಲಿ ಎಂದು ಹುಡುಕುವಂತಾಗಿದೆ, ಹಾಗೂ ಜನ ಪರದಾಡುವಂತಾಗಿದೆ! ಹಾಗಾದರೆ ಹೆಲ್ತ್‌ ಹಬ್‌ ಎಂದೇ ಪರಿಗಣಿಸಲ್ಪಟ್ಟಿರುವ ಕರಾವಳಿ ನಗರ ಮಂಗಳೂರಿಗೆ ರೋಗಿಗಳನ್ನು ಕರೆದೊಯ್ಯುವ ಆಂಬುಲೆನ್ಸ್‌ಗಳ ಸ್ಥಿತಿ ಹೇಗಿರಬೇಡ?

ಪುತ್ತೂರು, ಸುಳ್ಯ, ಮಡಿಕೇರಿ ಭಾಗಗಳಿಂದ ಮಂಗಳೂರಿಗೆ ಪ್ರತಿದಿನ ಸುಮಾರು 50 ಕ್ಕೂ ಹೆಚ್ಚು ಆಂಬುಲೆನ್ಸ್‌ಗಳು ಓಡಾಡುತ್ತಿವೆ. ಉನ್ನತಮಟ್ಟದ ಚಿಕಿತ್ಸಾ ಸೌಲಭ್ಯಗಳು, ತುರ್ತು ಚಿಕಿತ್ಸೆಗಳು ಬೇಕಾದಲ್ಲಿ ಆಂಬುಲೆನ್ಸ್‌ಗಳು ಮಂಗಳೂರು ಕಡೆಗೆ ಅಥವಾ ಮಂಗಳೂರಿನಿಂದ ಬೆಂಗಳೂರಿಗೆ ಶರವೇಗದಲ್ಲಿ ಸಂಚರಿಸುವ ಮಾರ್ಗವಿದು. ಈಗ ಹಾಗಲ್ಲ. ಆಂಬುಲೆನ್ಸ್‌ನ ಒಳಗೆ ಮಲಗಿದ ರೋಗಿಯ ಆಯಸ್ಸು ಅದೃಷ್ಟ ಮತ್ತು ಪ್ರಯಾಣದ ಅವಧಿಯ ಮೇಲೆ ನಿಂತಿದೆ.

ಸರಾಸರಿ ಗಂಟೆಗೆ 80-90 ಕಿಲೋಮೀಟರ್‌ಗಳ ವೇಗದಲ್ಲಿ ಸಂಚರಿಸುವ ಮತ್ತು ಸಂಚರಿಸಬೇಕಾದ ಆಂಬುಲೆನ್ಸ್‌ಗಳ ವೇಗ ಈ ಮಾರ್ಗದಲ್ಲಿ 35ರಿಂದ 40 ಕಿಲೋಮೀಟರ್‌ಗೆ ಇಳಿದಿದೆ.

ಪುತ್ತೂರಿನಿಂದ ಹೊರಟ ಆಂಬುಲೆನ್ಸ್‌ಗಳು ಕಲ್ಲಡ್ಕದವರೆಗೆ ಹೇಗೋ ಧಾವಿಸಿ ಬರುತ್ತವೆ. ಆ ಬಳಿಕ ವಾಹನ ಕುಂಟುತ್ತಾ, ತೆವಳುತ್ತಾ ಸಾಗಲೇಬೇಕು. ಎಷ್ಟೇ ಸೈರನ್‌ ಬಾರಿಸಿದರೂ ಎದುರಿಗಿರುವ ವಾಹನಗಳು ಬದಿಗೆ ಸರಿಯುವುದು ಅಸಾಧ್ಯ. ಏಕೆಂದರೆ, ಫುಟ್‌ಪಾತ್‌ ಆಗಲಿ, ರಸ್ತೆಯಂಚಿನ ಜಾಗವೆಂದಾಗಲಿ ಇಲ್ಲವೇ ಇಲ್ಲ. ಕಲ್ಲಡ್ಕ, ಮಾಣಿ, ಬಿ.ಸಿರೋಡ್‌ ಸಮೀಪಿಸುವವರೆಗೆ ಇದೇ ದುರವಸ್ಥೆ!


ಕಳೆದುಹೋಗುವ ಗೋಲ್ಡನ್‌ ಹವರ್‌

ಹೃದಯಾಘಾತ, ಅಪಘಾತದ ತೀವ್ರಗಾಯ, ಹೆರಿಗೆ ನೋವು ಇತ್ಯಾದಿ ಕಾಣಿಸಿಕೊಂಡಾಗ ಮೊದಲ ಒಂದು ಗಂಟೆ ಬಹಳ ಮುಖ್ಯವಾಗುತ್ತದೆ. ಕನಿಷ್ಠ ಪ್ರಥಮ ಚಿಕಿತ್ಸೆ ನೀಡಿದರೂ ಸಾಧ್ಯವಾದಷ್ಟು ಬೇಗ ಸುಸಜ್ಜಿತ ಆಸ್ಪತ್ರೆಗೆ ಕಳುಹಿಸಲೇಬೇಕಾಗುತ್ತದೆ. ಆದರೆ, ಆರೋಗ್ಯ ವ್ಯವಸ್ಥೆಯ ಪ್ರಧಾನ ಕೇಂದ್ರ (ಹಬ್‌) ಎನಿಸಿಕೊಂಡಿರುವ ಮಂಗಳೂರಿಗೆ ಹೋಗುವ ಪ್ರಯಾಣದ ಅವಧಿಯೇ ಅತಿಯಾಗಿ ಹೆಚ್ಚಿದೆ.

ಹೊಂಡ-ಗುಂಡಿಗಳ ಮೇಲೆ ವೇಗ!

ಪುತ್ತೂರಿನ ಜನಪ್ರಿಯ ಆಂಬುಲೆನ್ಸ್‌ನ ಚಾಲಕ ಮುತ್ತಪ್ಪ ಕೆಲ ಘಟನೆಗಳನ್ನು ವಿಷಾದದಿಂದಲೇ ವಿವರಿಸಿದರು. ಕಲ್ಲಡ್ಕ ಸಮೀಪಿಸುತ್ತಿದ್ದಂತೆಯೇ ವಾಹನವು ರಸ್ತೆ ಗುಂಡಿಗಳಲ್ಲಿ ಸಿಲುಕಿ ಅಲುಗಾಡಲಾರಂಭಿಸುತ್ತದೆ. ರೋಗಿಗೆ ತನ್ನ ನೋವಿನ ಜೊತೆಗೆ ರಸ್ತೆಯ ಆಘಾತಗಳನ್ನೂ ತಡೆದುಕೊಳ್ಳಬೇಕಾದ ಸ್ಥಿತಿಯಿದೆ. ಹೆಚ್ಚು ಕಡಿಮೆ ಎಲ್ಲ ಸಂದರ್ಭಗಳಲ್ಲೂ ರೋಗಿಗಳು ವಾಹನದ ಒಳಗೆ ಜೋರಾಗಿ ಚೀರಾಡುತ್ತಲೇ ಇರುತ್ತಾರೆ. ನಮಗೆ ಮರುಕ ಹುಟ್ಟುತ್ತದಾದರೂ ಎಲ್ಲಿಯೂ ನಿಲ್ಲಿಸಿ ವಿಳಂಬ ಮಾಡುವುದಿಲ್ಲ. ವಾಹನದ ಕಾಳಜಿ, ನಮ್ಮ ಜೀವ ಯಾವುದನ್ನೂ ಲೆಕ್ಕಿಸದೇ ಗಮ್ಯ ತಲುಪಿಸುತ್ತೇವೆ. ಹಾಗಿದ್ದೂ ನನ್ನ ವಾಹನದೊಳಗೆ 3 ವರ್ಷಗಳಲ್ಲಿ ಸುಮಾರು 4, 5 ರೋಗಿಗಳು ಮೃತಪಟ್ಟದ್ದಿದೆ. ಇನ್ನು ಕೆಲವರು ಆಸ್ಪತ್ರೆಗೆ ತಲುಪಿದ ಕ್ಷಣ ಅಥವಾ 10 ನಿಮಿಷಗಳ ಒಳಗೆ ಕಣ್ಣುಮುಚ್ಚಿದ್ದು ಇದೆ. ಆಗ ವೈದ್ಯರು ಹೇಳಿದ್ದು, ʼಐದು ನಿಮಿಷವಾದರೂ ಮುಂಚಿತವಾಗಿ ಬಂದಿದ್ದರೆ ಪ್ರಾಣ ಉಳಿಸಬಹುದಿತ್ತುʼ. ಆಗ ರೋಗಿಯ ಕಡೆಯವರು ಆಂಬುಲೆನ್ಸ್‌ ಚಾಲಕರ ಮೇಲೆ ಆರೋಪಿಸಿದ್ದಿದೆ. ನನ್ನಿಂದಾಗಿ ವಿಳಂಬವಾಯಿತು ಎಂಬೆಲ್ಲಾ ಮಾತುಗಳನ್ನು, ಆರೋಪಗಳನ್ನು ಕೇಳಿಸಿಕೊಂಡಿದ್ದೇನೆ. ರಸ್ತೆಯ ಸ್ಥಿತಿಯನ್ನು ಎಲ್ಲರಿಗೂ ಪ್ರತ್ಯೇಕವಾಗಿ ವಿವರಿಸಲಿಕ್ಕಾಗುತ್ತದೆಯೇ? ಅದು ನೇರ ಕಣ್ಣಿಗೆ ಕಾಣುವ ವಿಚಾರ ಎಂದು ಬೇಸರಿಸುತ್ತಾರೆ. ಇದೇ ಮಾತು ಜನಪ್ರಿಯ ಆಂಬುಲೆನ್ಸ್‌ನ ವಿಜಿ, ಸರ್ಕಾರಿ ಆಸ್ಪತ್ರೆಯ 108 ಆಂಬುಲೆನ್ಸ್‌ ಚಾಲಕ ಸುರೇಶ್‌ ಅವರದ್ದು.

2020ರ ಫೆಬ್ರುವರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ 4.30 ಗಂಟೆಗಳಲ್ಲಿ ತುರ್ತು ಚಿಕಿತ್ಸೆಗಾಗಿ 40 ದಿನಗಳ ಮಗುವನ್ನು ಆಂಬುಲೆನ್ಸ್‌ ಮೂಲಕ ಕರೆತಂದ ದಾಖಲೆ ನೆನಪಿರಬಹುದು. ಈಗ ಅದು ಸಾಧ್ಯವೇ ಎಂದು ಕೇಳಿದರೆ ರಸ್ತೆಯ ಸ್ಥಿತಿ, ಅದರಲ್ಲೂ ಮಾಣಿ, ಕಲ್ಲಡ್ಕ ಪ್ರದೇಶದ ಚಿತ್ರಣ ಗೊತ್ತಿರುವ ಯಾವ ಚಾಲಕರೂ ತಕ್ಷಣಕ್ಕೆ ಒಪ್ಪುವ ಮನಸ್ಥಿತಿಯಲ್ಲಿಲ್ಲ.

ಆರೋಗ್ಯದ ಹಬ್‌ ಸಂಪರ್ಕ ಕಡಿತ

ಮಡಿಕೇರಿ, ಸುಳ್ಯ, ಕೇರಳ ಗಡಿಭಾಗದ ಜನರಿಗೆ ಆರೋಗ್ಯದ ಹಬ್‌ ಆಗಿರುವುದು ಮಂಗಳೂರು. ಎಲ್ಲ ಆರ್ಥಿಕ ಚಟುವಟಿಕೆಗಳ ಮಾರ್ಗವೂ ಹೌದು. ಘಟ್ಟ-ಕರಾವಳಿಯನ್ನು ಬೆಸೆಯುವ ಈ ಮಾರ್ಗದ ಕಾಮಗಾರಿ ಇಷ್ಟೊಂದು ನಿಧಾನಗತಿ ಏಕೆ ಎಂದು ಕೇಳಿದರೆ ಯಾರ ಬಳಿಯೂ ಸ್ಪಷ್ಟ ಉತ್ತರ ಸಿಗುವುದಿಲ್ಲ. ಈಗ ಮಳೆಗಾಲ. ಕಾಮಗಾರಿ ವೇಗಪಡೆಯುವುದು ಕಷ್ಟ. ಆದರೆ, ಮೂರು ವರ್ಷಗಳಿಂದ ಇದೇ ಸ್ಥಿತಿ ಇದೆ. ಬೆಂಗಳೂರು ಮೈಸೂರು ನಡುವೆ ಸುಮಾರು 112 ಕಿಲೋಮೀಟರ್‌ ಮಾರ್ಗದ ದಶಪಥ ಕಾಮಗಾರಿ ಮೂರುವರೆ ವರ್ಷಗಳಲ್ಲಿ ಮುಗಿದಿತ್ತು. ಆದರೆ, ಬೆಂಗಳೂರು-ಮಂಗಳೂರು ನಡುವಿನ ಅಡ್ಡಹೊಳೆ-ಬಿಸಿರೋಡ್‌ವರೆಗಿನ 48 ಕಿಲೋಮೀಟರ್‌ ಉದ್ದದ (ಪ್ಯಾಕೇಜ್‌ 2) ಚತುಷ್ಪಥ ಮತ್ತು ಫ್ಲೈ ಓವರ್‌ ಕಾಮಗಾರಿ ಇನ್ನೂ ಕೆಸರು-ಮಣ್ಣು, ಜಲ್ಲಿಕಲ್ಲುಗಳ ರಾಶಿಯ ನಡುವೆಯೇ ಇದೆ. ಮೂರು ವರ್ಷ ಚಾಲಕರು, ಜನರು ಇದನ್ನು ಸಹಿಸಿಕೊಂಡಿದ್ದಾರೆ. ಈ ಮಾರ್ಗ, ಚಾರ್ಮಾಡಿ, ಅತ್ತ ಬೈಂದೂರು ಬಳಿ ರಾಷ್ಟ್ರೀಯ ಹೆದ್ದಾರಿ 66 ಬಂದ್‌ ಆದರೆ, ಕರಾವಳಿ ಭಾಗ ಅಕ್ಷರಶಃ ದ್ವೀಪವೇ ಸರಿ.

ಮುಂದಿನ ಫೆಬ್ರುವರಿಗೆ ಗಡುವು

ಕಳೆದ ಫೆಬ್ರುವರಿಯಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಸಭೆಯಲ್ಲಿ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್‌ ಜಾವೇದ್‌ ಅಜ್ಮಿ ಅವರು ನೀಡಿದ ಮಾಹಿತಿಯಂತೆ, ʼರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬರುವ ಕಲ್ಲಡ್ಕ ಫ್ಲೈ ಓವರ್‌ನ ಶೇ ೩೮ರಷ್ಟು ಕಾಮಗಾರಿ ಮುಗಿದಿದೆ. ಮುಂದಿನ ವರ್ಷ ಫೆಬ್ರುವರಿ ವೇಳೆಗೆ ಇಡೀ ಯೋಜನೆಯನ್ನು ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆʼ ಎಂದಿದ್ದರು. ಮಾರ್ಚ್‌ನಿಂದ ಜೂನ್‌ ಮೊದಲವಾರದವರೆಗೆ ಚುನಾವಣಾ ನೀತಿ ಸಂಹಿತೆ, ಕಡತ ವಿಲೇವಾರಿ ವಿಳಂಬ ಇತ್ಯಾದಿ ಹತ್ತಾರು ಕಾರಣಗಳು ಸೇರಿ ಕಾಮಗಾರಿ ವಿಳಂಬವಾಯಿತು. ಜೂನ್‌ ಮಧ್ಯಭಾಗದಿಂದ ಸೆಪ್ಟೆಂಬರ್‌ವರೆಗೆ ಮಳೆಯ ಕಾರಣದಿಂದ ಕಾಮಗಾರಿ ವೇಗ ಪಡೆಯುವುದು ಕಷ್ಟ. ಅಲ್ಲದೇ ಕರಾವಳಿ, ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಾಮಗಾರಿ ನಡೆಸಬೇಕಾದರೆ ಹವಾಮಾನ, ಪರಿಸರ ವ್ಯವಸ್ಥೆ, ಮಣ್ಣಿನ ಗುಣ ಎಲ್ಲವನ್ನೂ ನೋಡಿಕೊಂಡು ಮುಂದುವರಿಯಬೇಕಾಗುತ್ತದೆ ಎನ್ನುತ್ತಾರೆ ಸಿವಿಲ್‌ ಎಂಜಿನಿಯರಿಂಗ್‌ ಕ್ಷೇತ್ರದ ಪರಿಣತರು.

ಈ ಗಡುವುಗಳೇನೋ ಮುಂದಕ್ಕೆ ಹೋಗುತ್ತಿವೆ. ಅಷ್ಟರೊಳಗೆ ಇಲ್ಲವಾಗುವ ಜೀವಗಳನ್ನು ರಕ್ಷಿಸುವುದು ಹೇಗೆ ಎಂಬ ಪ್ರಶ್ನೆ ವೈದ್ಯರು ಮತ್ತು ನಾಗರಿಕರದ್ದು.


ವಿಪರೀತ ಏರಿದ ನಿರ್ವಹಣಾ ವೆಚ್ಚ

ಈ ಭಾಗದಲ್ಲಿ ಸಣ್ಣ ಗಾತ್ರದ (ಓಮ್ನಿ, ಇಕೊ, ವಿಂಗರ್‌) ಆಂಬುಲೆನ್ಸ್‌ಗಳೇ ಹೆಚ್ಚು ಇವೆ. ರಸ್ತೆಯ ಆಘಾತಗಳನ್ನು ಹೆಚ್ಚು ತಡೆದುಕೊಳ್ಳುವ ಶಕ್ತಿ ಈ ವಾಹನಗಳಿಗಿಲ್ಲ. ಆಂಬುಲೆನ್ಸ್‌ ಸಹಿತ ಈ ಮಾರ್ಗದಲ್ಲಿ ನಿತ್ಯ ಸಂಚರಿಸುವ ವಾಹನಗಳ ನಿರ್ವಹಣಾ ವೆಚ್ಚ ವಿಪರೀತ ಏರಿದೆ. ನಿಗದಿತ ಗೇರ್‌ನ ಒಳಗೆ ವೇಗ ಮಿತಿ ಹಾಕಿಕೊಂಡು ವಾಹನ ಓಡಿಸಬೇಕಾಗುತ್ತದೆ. ವಾಹನದ ಗಿಯರ್‌ ಬಾಕ್ಸ್‌ ಬೇಗನೆ ದುರಸ್ತಿಗೆ ಬರುತ್ತದೆ. ಕ್ಲಚ್‌ ಪ್ಲೇಟ್‌, ಸ್ಪ್ರಿಂಗ್‌ ಪ್ಲೇಟ್‌ ಕಳಚಿಕೊಳ್ಳುವುದಕ್ಕೆ ಲೆಕ್ಕವಿಲ್ಲ. ವೀಲ್‌ ಅಲೈನ್‌ಮೆಂಟ್‌ ನಿರಂತರವಾಗಿ ಮಾಡಬೇಕು. ಮೈಲೇಜ್‌ ಮೇಲೆ ಅಡ್ಡಪರಿಣಾಮ ಉಂಟಾಗಿದೆ ಎನ್ನುತ್ತಾರೆ ಬಸ್‌ ಆಪರೇಟರ್‌ ಶಂಭೂರಿನ ರವಿರಾಜ್‌.

ವಿಳಂಬದಿಂದಾಗಿ ಒಂದೆಡೆ ಕಾಮಗಾರಿಯ ವೆಚ್ಚ, ಇತ್ತ ಇಂಧನ, ಮಾನವ ಸಂಪನ್ಮೂಲ ಹಾಗೂ ಅನಾವಶ್ಯಕ ನಿರ್ವಹಣಾ ವೆಚ್ಚ ಎಲ್ಲವೂ ಸೇರಿ ದೊಡ್ಡ ಪ್ರಮಾಣದ ರಾಷ್ಟ್ರೀಯ ನಷ್ಟಕ್ಕೆ ಒಂದು ಹೆದ್ದಾರಿ ಕಾಮಗಾರಿ ಕಾರಣವಾಗಿದೆ.

Read More
Next Story