ಹರಿಯಾಣ ಬಿಜೆಪಿ ಸರ್ಕಾರಕ್ಕೆ ಮುಳುವಾಗಲಿರುವ 'ರಿವರ್ಸ್ ಆಪರೇಷನ್ ಕಮಲ': ಕಾಂಗ್ರೆಸ್ ಎಚ್ಚರಿಕೆ ನಡೆ

Update: 2024-05-08 08:12 GMT

ಹರ್ಯಾಣದ ನಯಾಬ್ ಸಿಂಗ್ ಸೈನಿ ನೇತೃತ್ವದ ಸರ್ಕಾರಕ್ಕೆ ಮೂವರು ಸ್ವತಂತ್ರ ಶಾಸಕರು ಮಂಗಳವಾರ ತಡರಾತ್ರಿ (ಮೇ 7) ತಮ್ಮ ಬೆಂಬಲ ಹಿಂಪಡೆದಿದ್ದಾರೆ. ಇದು ಬಿಜೆಪಿಗೆ ಪರಾಭವದ ಭೀತಿ ಮತ್ತು ಕಾಂಗ್ರೆಸ್‌ಗೆ ಧೈರ್ಯ ತುಂಬಿದ ಅನಿರೀಕ್ಷಿತ ಬದಲಾವಣೆಯಾಗಿದೆ.

ಹರಿಯಾಣ ಅಸೆಂಬ್ಲಿಯಲ್ಲಿ 90 ಶಾಸಕರಿದ್ದು, ಮಾಜಿ ಮುಖ್ಯಮಂತ್ರಿ ಎಂ.ಎಲ್. ಖಟ್ಟರ್ ಮತ್ತು ಸ್ವತಂತ್ರ ಶಾಸಕ ರಂಜಿತ್ ಚೌತಾಲಾ ಅವರ ರಾಜೀನಾಮೆಯಿಂದ ಬಲ 88ಕ್ಕೆ ಇಳಿದಿದೆ. ಇವರಿಬ್ಬರು ಕರ್ನಾಲ್ ಮತ್ತು ಹಿಸಾರ್ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಇದರಿಂದ ಬಹುಮತಕ್ಕೆ 45 ಶಾಸಕರ ಬೆಂಬಲ ಬೇಕಿದೆ. ಹರಿಯಾಣ ಲೋಕಿತ್ ಪಕ್ಷದ ಗೋಪಾಲ್ ಕಾಂಡ, ಸ್ವತಂತ್ರ ಶಾಸಕರಾದ ರಾಕೇಶ್ ದೌಲ್ತಾಬಾದ್, ಬಲರಾಜ್ ಕುಂದು ಮತ್ತು ನಯನ್ ಪಾಲ್ ರಾವತ್ ಅವರ ಬೆಂಬಲದಿಂದ ಬಿಜೆಪಿಯು ಪ್ರಸ್ತುತ 44 ಶಾಸಕರ ಬೆಂಬಲ ಹೊಂದಿದೆ. ಕಾಂಗ್ರೆಸ್‌ನ ಶಾಸಕರ ಸಂಖ್ಯೆ 33(ಈಗ ಪಕ್ಷ ಬದಲಾಯಿಸಿದ ಮೂವರು ಸ್ವತಂತ್ರರು ಸೇರಿದಂತೆ). 

ಇದರಿಂದ ಸೈನಿ ಸರ್ಕಾರ ಬಹುಮತ ಕಳೆದುಕೊಂಡಿದೆ. ಆದರೆ, ಸರ್ಕಾರಕ್ಕೆ ಯಾವುದೇ ಬೆದರಿಕೆ ಇಲ್ಲ ಎಂದು ಸಿಎಂ ಪ್ರತಿಪಾದಿಸಿದ್ದಾರೆ. ಬಿಜೆಪಿ ಮೂಲಗಳು ಹೇಳುವಂತೆ, ʻದುಷ್ಯಂತ್ ಚೌಟಾಲಾ ಅವರ ಜನನಾಯಕ ಜನತಾ ಪಕ್ಷದ ಕನಿಷ್ಠ ನಾಲ್ವರು ಶಾಸಕರು ಸೈನಿ ಅವರಿಗೆ ಅಗತ್ಯವಿದ್ದಲ್ಲಿ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆʼ. 

ಬಿಜೆಪಿಯ ದೌರ್ಬಲ್ಯ ಹೆಚ್ಚಳ: ಆದರೆ, ಹರಿಯಾಣದ 10 ಲೋಕಸಭೆ ಸ್ಥಾನಗಳಿಗೆ ಮತದಾನಕ್ಕೆ ಕೆಲವೇ ವಾರಗಳ ಮೊದಲು ಮತ್ತು ವಿಧಾನಸಭೆ ಚುನಾವಣೆಗೆ ಆರು ತಿಂಗಳ ಮೊದಲು ಮೂವರು ಶಾಸಕರ ಪಕ್ಷ ತ್ಯಜಿಸುವ ನಿರ್ಧಾರವು ಬಿಜೆಪಿ ದುರ್ಬಲವಾಗುತ್ತಿರುವುದನ್ನು ತೋರಿಸುತ್ತದೆ. ಕಾಂಗ್ರೆಸ್‌ ʻರಾಷ್ಟ್ರಪತಿ ಆಳ್ವಿಕೆಯನ್ನು ಹೇರಬೇಕುʼ ಎಂದು ಒತ್ತಾಯಿಸುತ್ತಿದೆ. 2019 ರಲ್ಲಿ ಜೆಜೆಪಿ ಜೊತೆಗಿನ ಚುನಾವಣೋತ್ತರ ಮೈತ್ರಿ ನಂತರ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಬಿಜೆಪಿ, ಕಳೆದ ಕೆಲವು ತಿಂಗಳುಗಳಿಂದ ಹಲವು ಸವಾಲುಗಳನ್ನು ಎದುರಿಸುತ್ತಿದೆ. 

ಪ್ರಧಾನ ಮಂತ್ರಿಯವರ ಸ್ಪಷ್ಟವಾದ ರೈತ ವಿರೋಧಿ ನೀತಿಗಳು ಮತ್ತು ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳದ ಆರೋಪಕ್ಕೆ ಸಂಬಂ ಧಿಸಿದಂತೆ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕ್ರಮಕೈಗೊಳ್ಳಲು ನಿರಾಕರಣೆಯಿಂದ ರೈತ ಸಮುದಾಯ ಮತ್ತು ಜಾಟ್ ಸಮುದಾಯ ಕೋಪಗೊಂಡಿದೆ. ಇತ್ತೀಚೆಗೆ ಬಿಜೆಪಿ ತನ್ನ ಮಿತ್ರ ಪಕ್ಷ ಜೆಜೆಪಿಯನ್ನು ಕಳೆದುಕೊಂಡಿತು ಮತ್ತು ಮಾರ್ಚ್‌ನಲ್ಲಿ ಮುಖ್ಯಮಂತ್ರಿ ಎಂ.ಎಲ್. ಖಟ್ಟರ್ ಬದಲಿಗೆ ಸೈನಿ ಅವರನ್ನು ನೇಮಿಸುವಂತೆ ಒತ್ತಾಯ ಬಂದಿತು. ಈಗ ಮೂವರು ಸ್ವತಂತ್ರ ಶಾಸಕರ ರಾಜೀನಾಮೆಯಿಂದ ಸರ್ಕಾರ ಅಂಚಿನಲ್ಲಿ ತೇಲುತ್ತಿದೆ. 

ಹೂಡಾ ಕೈವಾಡ?: ಸ್ವತಂತ್ರ ಶಾಸಕರಾದ ಧರಂಪಾಲ್ ಗೊಂಡರ್, ರಣಧೀರ್ ಗೊಲ್ಲೆನ್ ಮತ್ತು ಸೋಮವೀರ್ ಸಾಂಗ್ವಾನ್ ಅವರ ರಾಜೀನಾಮೆಯು ಬಿಜೆಪಿಯನ್ನು ಮುಜುಗರಕ್ಕೀಡು ಮಾಡಿದೆ ಮತ್ತು ಹರ್ಯಾಣದ ಏಕೈಕ ನಾಯಕ ಎಂದು ಸಾಧಿಸಲು ಹೊರಟಿರುವ ವಿರೋಧ ಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡಾಗೆ ಬಲ ತುಂಬಿದೆ. ಹೂಡಾ ಮೂರನೇ ಅವಧಿಗೆ ಸಿಎಂ ಆಗಿ ಮರಳಲು ಶ್ರಮಿಸು ತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಅವರು ತಮ್ಮ ವಿರೋಧಿ, ಮಾಜಿ ಕೇಂದ್ರ ಸಚಿವೆ ಕುಮಾರಿ ಸೆಲ್ಜಾ ಅವರನ್ನು ಹರಿಯಾಣ ಕಾಂಗ್ರೆಸ್ ಮುಖ್ಯಸ್ಥ ಸ್ಥಾನದಿಂದ ಬದಲಿಸಿ, ತಮ್ಮ ನಿಷ್ಠಾವಂತ ಉದಯ್ ಭಾನ್ ಅವರನ್ನು ನೇಮಿಸುವಲ್ಲಿ ಯಶಸ್ವಿಯಾದರು. ಸೆಲ್ಜಾ ಮತ್ತು ಇನ್ನಿತರ ಹೂಡಾ ಪ್ರತಿಸ್ಪರ್ಧಿಗಳಾದ ಮಾಜಿ ಸಚಿವ ಕಿರಣ್ ಚೌಧರಿ ಮತ್ತು ರಾಜ್ಯಸಭೆ ಸದಸ್ಯ ರಣದೀಪ್ ಸುರ್ಜೇವಾಲಾ ಅವರ ವಿರೋಧದ ನಡುವೆಯೂ ಲೋಕಸಭೆ ಚುನಾವಣೆಗೆ ತಮ್ಮ ಬೆಂಬಲಿಗರಿಗೆ ಟಿಕೆಟ್‌ ನೀಡುವಲ್ಲಿ ಯಶಸ್ವಿಯಾದರು.

ಮಂಗಳವಾರ ಬಿಜೆಪಿಯನ್ನು ತೊರೆದ ಮೂವರು ಸ್ವತಂತ್ರ ಶಾಸಕರು ಕೂಡ ಹೂಡಾ ಅವರ ಸಮ್ಮುಖದಲ್ಲಿ ಪತ್ರಿಕಾಗೋ‌ಷ್ಠಿ ನಡೆಸಿದ್ದು, ರೋಹ್ಟಕ್‌ನ ಕಾಂಗ್ರೆಸ್‌ನ ಜಾಟ್ ನಾಯಕನ ಪ್ರಾಬಲ್ಯವನ್ನು ತೋರಿಸುತ್ತದೆ. ರೋಹ್ಟಕ್‌ನಲ್ಲಿ ಮಾತನಾಡಿದ ಮೂವರು ಶಾಸಕರು, ʻಕಾಂಗ್ರೆಸ್‌ಗೆ ಬೆಂಬಲ ನೀಡುತ್ತೇವೆ ಮತ್ತು ಇಂಡಿಯ ಒಕ್ಕೂಟ (ಕಾಂಗ್ರೆಸ್ ಒಂಬತ್ತು ಮತ್ತು ಎಎಪಿ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದೆ) ರಾಜ್ಯದ 10 ಸ್ಥಾನಗಳಲ್ಲಿ ಜಯ ಗಳಿಸಲಿದೆʼ ಎಂದು ಘೋಷಿಸಿದರು.ಹೂಡಾ, ʻರಾಷ್ಟ್ರಪತಿ ಆಳ್ವಿಕೆ ಹೇರಬೇಕು ಮತ್ತು ಬಿಜೆಪಿ ಪ್ರತಿ ರಂಗದಲ್ಲಿ ವಿಫಲವಾಗಿದೆʼ ಎಂದು ಟೀಕಿಸಿದರು.

ಅದೃಷ್ಟದ ಹಿಮ್ಮುಖ ನಡೆ: 2019 ರ ಲೋಕಸಭೆ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಿರುವ ಕಾಂಗ್ರೆಸ್‌, ರಾಜ್ಯದ 10 ಕ್ಷೇತ್ರಗಳಲ್ಲಿ ಉತ್ತಮ ಸಾಧನೆಯ ಭರವಸೆ ಹೊಂದಿದೆ. ಗೊಂಡರ್, ಸಾಂಗ್ವಾನ್ ಮತ್ತು ಗೊಲ್ಲೆನ್ ಅವರ ಸೇರ್ಪಡೆಯಿಂದ ಬಿಜೆಪಿಗೆ ಹಿನ್ನಡೆಯಾಗಿದೆ. ಅನಿಲ್ ವಿಜ್ ಮುಂತಾದ ಹಿರಿಯ ಸಚಿವರನ್ನು ಕೈಬಿಟ್ಟು ಸಚಿವ ಸಂಫುಟ ರಚಿಸಿದಾಗಿನಿಂದ ಪಷದಲ್ಲಿ ವಿರೋಧ ಎದುರಿಸುತ್ತಿದೆ.ಕೃಷಿ ಸಂಕಷ್ಟ, ರೈತರು ಮತ್ತು ಮಹಿಳಾ ಕುಸ್ತಿಪಟುಗಳ ಬಗ್ಗೆ ಮೋದಿ ಮತ್ತು ಮಾಜಿ ಸಿಎಂ ಖಟ್ಟರ್ ಅವರ ನಿರಾಸಕ್ತಿ (ಎಲ್ಲರೂ ಜಾಟ್ ಸಮುದಾಯದವರು), ನಿರುದ್ಯೋಗ ಹೆಚ್ಚಳ ಮತ್ತು ಯುವಜನರಲ್ಲಿ ಅಗ್ನಿವೀರ್ ಯೋಜನೆಯ ಕುಖ್ಯಾತಿ ಇವೆಲ್ಲ ಬಿಜೆಪಿಯನ್ನು ಕಾಡಲಿವೆ. 

ಹೂಡಾ ಅವರ ಪುತ್ರ ಮತ್ತು ರೋಹ್ಟಕ್‌ನ ಕಾಂಗ್ರೆಸ್ ಅಭ್ಯರ್ಥಿ ದೀಪೇಂದರ್ ಹೂಡಾ ದ ಫೆಡರಲ್‌ ಜೊತೆ ಮಾತನಾಡಿ, ʻಬಿಜೆಪಿ ಹರಿಯಾಣವನ್ನು ಹಾಳು ಮಾಡಿದೆ. ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ದೇಶವನ್ನು ಹಿಂದಕ್ಕೆ ಕರೆದೊಯ್ದಿವೆ. ಬಿಜೆಪಿ ಬೆಂಬಲಿಗರು ಕೂಡ ಈ ವಾಸ್ತವ ಅರಿತುಕೊಳ್ಳುತ್ತಿದ್ದಾರೆ. ಸ್ವತಂತ್ರ ಶಾಸಕರು ಅಧಿಕಾರದಲ್ಲಿರುವ ಪಕ್ಷವನ್ನು ಬೆಂಬಲಿಸುವುದು ಸಹಜ. ಇದರಿಂದ ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ನೆರವು ಸಿಗುತ್ತದೆ ಎಂದು ಅವರು ಭಾವಿಸುತ್ತಾರೆ. ಆದರೆ, ಹರಿಯಾಣದಲ್ಲಿ ಯಾರೂ ಬಿಜೆಪಿ ನೆರಳಿನಲ್ಲಿ ನಿಲ್ಲಲು ಬಯಸುತ್ತಿಲ್ಲʼ ಎಂದರು.

ಕಾಂಗ್ರೆಸ್ ಎಚ್ಚರಿಕೆ ನಡೆ: ಮಂಗಳವಾರದ ಘಟನೆ ʻದಂಗೆಗಿಂತ ಕಡಿಮೆಯದಲ್ಲʼ ಎಂದು ಒಪ್ಪಿಕೊಂಡ ಭೂಪಿಂದರ್ ಹೂಡಾ, ʻಆದರೆ, ನಾವು ಜಾಗರೂಕರಾಗಿರಬೇಕು. ಅತಿಯಾದ ಆತ್ಮವಿಶ್ವಾಸದಿಂದ ಗಂಭೀರ ಪ್ರಮಾದ ಆಗಲಿದೆ,ʼ ಎಂದರು. ಆದರೆ, ಕಾಂಗ್ರೆಸ್‌ ನಲ್ಲಿ ಎಲ್ಲವೂ ಸರಿಯಿಲ್ಲ. ಹೂಡಾ ಪಕ್ಷವನ್ನು ತನ್ನ ʻವೈಯಕ್ತಿಕ ಜಾಗೀರುʼ ಎಂದುಕೊಂಡಿದ್ದು, ಇತರ ಹಿರಿಯ ನಾಯಕರನ್ನು ಬದಿಗೆ ಸರಿಸಿದ್ದಾರೆ ಎಂಬ ದೂರುಗಳು ಇವೆ. ಹರಿಯಾಣದ ಹಿರಿಯ ನಾಯಕರಾದ ಕ್ಯಾಪ್ಟನ್ ಅಜಯ್ ಯಾದವ್ ಮತ್ತು ಕಿರಣ್ ಚೌಧರಿ ಅವರನ್ನು ಕಡೆಗಣಿಸಲಾಗಿದೆ; ಹೂಡಾ ಅವರ ಒತ್ತಡದಿಂದ ರಾಜ್ ಬಬ್ಬರ್ ಅವರನ್ನು ಗುರ್ಗಾಂವ್‌ನಿಂದ ಕಣಕ್ಕಿಳಿಸಲಾಗಿದೆ. ಟಿಕೆಟ್‌ ನಿರಾಕರಿಸಿದ್ದರಿಂದ ಬಿರೇಂದರ್ ಸಿಂಗ್ ಮತ್ತು ಅವರ ಮಗ (ಬ್ರಿಜೇಂದ್ರ ಸಿಂಗ್) ಬಿಜೆಪಿ ಸೇರಿದರು. ಈ ಅಸಮಾಧಾನವನ್ನು ಬಿಜೆಪಿ ಬಳಸಿಕೊಳ್ಳುವುದಿಲ್ಲ ಎಂದು ಭಾವಿಸುತ್ತೀರಾ?ʼ ಎಂದು ಕಾಂಗ್ರೆಸ್‌ ನಾಯಕರೊಬ್ಬರು ಹೇಳಿದರು. 

ʻಹರಿಯಾಣದಲ್ಲಿ ನಾಯಕರು ಕಾಂಗ್ರೆಸ್ ತೊರೆಯದೆ ಇರಲು, ರಾಜ್ಯದಲ್ಲಿ ಬಿಜೆಪಿ ದುರ್ಬಲವಾಗಿರುವುದು ಕಾರಣ. ಆದರೆ, ಲೋಕಸಭೆ ಚುನಾವಣೆಯಲ್ಲಿ ಪಕ್ಷ ಕಳಪೆ ಪ್ರದರ್ಶನ ನೀಡಿದರೆ, ರಾತ್ರೋರಾತ್ರಿ ಪರಿಸ್ಥಿತಿ ಬದಲಾಗುತ್ತದೆ,ʼ ಎಂದು ಅವರು ದ ಫೆಡರಲ್‌ಗೆ ತಿಳಿಸಿದರು.

Tags:    

Similar News