ವಿವಾದಾತ್ಮಕ ಹೇಳಿಕೆ: ಸ್ಯಾಮ್ ಪಿತ್ರೋಡಾ ರಾಜೀನಾಮೆ

ಜನಾಂಗೀಯ ದ್ವೇಷದ ಹೇಳಿಕೆ: ಬಿಜೆಪಿ ಖಂಡನೆ

Update: 2024-05-09 08:17 GMT

ಪೂರ್ವ ಭಾರತೀಯರನ್ನು ಚೀನಿಯರು ಮತ್ತು ದಕ್ಷಿಣ ಭಾರತೀಯರನ್ನು ಆಫ್ರಿಕನ್ನರೊಂದಿಗೆ ಹೋಲಿಸುವ ಮೂಲಕ ವಿವಾದ ಸೃಷ್ಟಿಸಿದ್ದ ಸ್ಯಾಮ್ ಪಿತ್ರೋಡಾ, ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್‌ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಅವರು ಎಕ್ಸ್‌ ನಲ್ಲಿ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ್ದಾರೆ. 

ʻಸ್ಯಾಮ್ ಪಿತ್ರೋಡಾ ಅವರು ಸ್ವಂತ ಇಚ್ಛೆಯಿಂದ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಅಧ್ಯಕ್ಷರು ಸಮ್ಮತಿ ನೀಡಿದ್ದಾರೆʼ ಎಂದು ರಮೇಶ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ʻದಿ ಸ್ಟೇಟ್ಸ್‌ಮನ್‌ʼಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ ದೇಶದ ವೈವಿಧ್ಯತೆಯನ್ನು ಹೊಗಳುವ ಭರದಲ್ಲಿ, ʻಪೂರ್ವದಲ್ಲಿ ವಾಸಿಸುವವರು ಚೀನಿಯರನ್ನು ಹೋಲುತ್ತಿದ್ದರೂ ಮತ್ತು ದಕ್ಷಿಣದಲ್ಲಿರುವವರು ಆಫ್ರಿಕನ್ನರೊಂದಿಗೆ ಗುಣಲಕ್ಷಣಗಳನ್ನು ಹಂಚಿಕೊಂಡಿದ್ದರೂ, ದೇಶ ಏಕತೆಯನ್ನು ಸಾಧಿಸಿದೆʼ ಎಂದು ಪ್ರತಿಕ್ರಿಯಿಸಿದ್ದರು. ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಬಿಜೆಪಿ ಪಿತ್ರೋಡಾ ವಿರುದ್ಧ ವರ್ಣಭೇದ ನೀತಿಯ ಆರೋಪ ಹೊರಿಸಿತು. ಹೇಳಿಕೆ ʻದುರದೃಷ್ಟಕರʼ ಎಂದ ಕಾಂಗ್ರೆಸ್, ಅಂತರ ಕಾಯ್ದುಕೊಂಡಿದೆ.

ಬಿಜೆಪಿಯಿಂದ ದಾಳಿ: ಬಿಜೆಪಿಯು ಗಾಂಧಿ ಕುಟುಂಬದೊಂದಿಗೆ ಪಿತ್ರೋಡಾ ಅವರ ನಿಕಟ ಸಂಬಂಧವನ್ನು ಉಲ್ಲೇಖಿಸಿ, ಕಾಂಗ್ರೆಸ್‌ನ ನಿಲುವು ಅರ್ಥಹೀನ ಎಂದು ತಳ್ಳಿಹಾಕಿದೆ. ಪ್ರಧಾನಿ ಮೋದಿ ಅವರು ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ನಡೆದ ಸಮಾರಂಭಗಲ್ಲಿ ʻಯುಎಸ್ ಮೂಲದ ತತ್ತ್ವಜ್ಞಾನಿ ಮತ್ತು ಶೆಹಜಾದ ಅವರ ಚಿಕ್ಕಪ್ಪ ಭಾರತೀಯರ ಜನಾಂಗೀಯ ವಿಭಜನೆಯಿಂದ ತಮಗೆ ಕೋಪ ಬಂದಿದೆʼ ಎಂದು ಹೇಳಿದರು. ದ್ರೌಪದಿ ಮುರ್ಮು ಅವರ ಅಧ್ಯಕ್ಷೀಯ ಚುನಾವಣೆಗೆ ಕಾಂಗ್ರೆಸ್‌ನ ವಿರೋಧವನ್ನು ಜೋಡಣೆ ಮಾಡಿ, ರಾಷ್ಟ್ರಪತಿಯವರ ಕಪ್ಪು ಚರ್ಮದಿಂದಾಗಿ ಅವರನ್ನು ʻಆಫ್ರಿಕನ್ʼ ಎಂಬಂತೆ ನೋಡಿದೆʼ ಎಂದು ಹೇಳಿದರು. 

ʻಇಂಥ ಹೋಲಿಕೆಯನ್ನು ನೀವು ಒಪ್ಪುತ್ತೀರಾ?ʼ ಎಂದು ಕರ್ನಾಟಕ ಮತ್ತು ತೆಲಂಗಾಣದ ಕಾಂಗ್ರೆಸ್ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎ.ರೇವಂತ್ ರೆಡ್ಡಿ ಅವರನ್ನು ಪ್ರಶ್ನಿಸಿದರು. ʻಕಾಂಗ್ರೆಸ್ ಜೊತೆಗಿನ ಡಿಎಂಕೆ ಸಂಬಂಧವನ್ನು ಕಡಿದುಕೊಳ್ಳುವ ಧೈರ್ಯವಿದೆಯೇ?ʼ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಪ್ರಧಾನಿ ಪ್ರಶ್ನಿಸಿದ್ದಾರೆ.

ವಿವಾದಕ್ಕೆ ಕಾರಣವೇನು?: ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಸಲಹೆಗಾರರಾದ ಪಿತ್ರೋಡಾ, ʻಪೂರ್ವದಲ್ಲಿರುವ ಜನರು ಚೀನಿಯರಂತೆ, ಪಶ್ಚಿಮದಲ್ಲಿರುವವರು ಅರಬ್ಬರಂತೆ ಕಾಣುತ್ತಾರೆ; ಉತ್ತರದಲ್ಲಿರುವ ಜನರು ಬಿಳಿ ಮತ್ತು ದಕ್ಷಿಣದ ಜನರು ಆಫ್ರಿಕನ್ನರಂತೆ ಕಾಣುತ್ತಾರೆ. ಹೀಗಿದ್ದರೂ, ನಾವೆಲ್ಲರೂ ಸಹೋದರ ಸಹೋದರಿಯರು. ವಿವಿಧ ಭಾಷೆ, ವಿವಿಧ ಧರ್ಮ, ವಿಭಿನ್ನ ಆಚಾರ, ವಿವಿಧ ಆಹಾರ ಪದ್ಧತಿಗಳನ್ನು ಗೌರವಿಸುತ್ತೇವೆ. ಕೆಲವು ಭಿನ್ನಾಭಿಪ್ರಯಗಳ ನಡುವೆಯೂ 75 ವರ್ಷಗಳಿಂದ ಅತ್ಯಂತ ಸಂತೋಷದ ವಾತಾವರಣದಲ್ಲಿ ಬದುಕಿದ್ದೇವೆʼ ಎಂದು ಹೇಳಿದ್ದರು. 

ಈ ಹಿಂದೆ ಕಾಂಗ್ರೆಸ್‌ನ ಚುನಾವಣೆ ಪ್ರಣಾಳಿಕೆಯನ್ನು ಚರ್ಚಿಸುವಾಗ, ಅಮೆರಿಕದಲ್ಲಿ ಪಿತ್ರಾರ್ಜಿತ ತೆರಿಗೆ ಬಗ್ಗೆ ಉಲ್ಲೇಖಿಸಿದ್ದರು. ವಿವಾದಕ್ಕೆ ಕಾರಣವಾದ ಈ ಹೇಳಿಕೆಯನ್ನು ತಿರುಚಿದ ಬಿಜೆಪಿ, ʻಕಾಂಗ್ರೆಸ್‌ ಸಂಪತ್ತಿನ ಮರುಹಂಚಿಕೆಗೆ ಮುಂದಾಗಿದೆ. ನಾಗರಿಕರ ಆಸ್ತಿಯನ್ನು ಅಲ್ಪಸಂಖ್ಯಾತರಿಗೆ ಹಂಚಲಿದೆʼ ಎಂದು ವಿವಾದ ಸೃಷ್ಟಿಸಿತ್ತು. ಈ ಹೇಳಿಕೆ ಮರೆಯುವ ಮುನ್ನವೇ ಬಂದಿರುವ ಇನ್ನೊಂದು ಹೇಳಿಕೆಯಿಂದ ಪಿತ್ರೋಡಾ ರಾಜೀನಾಮೆ ನೀಡಬೇಕಾಗಿ ಬಂದಿದೆ.

Tags:    

Similar News