ಪಿಡಿಒ ಪರೀಕ್ಷೆ ಅವಾಂತರ | ಪ್ರತಿಭಟನೆ ನಡೆಸಿದ 12 ಮಂದಿ ವಿರುದ್ಧ ಎಫ್‌ಐಆರ್
ಭಾನುವಾರ ನಡೆದ ಪಿಡಿಒ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಮಾಡಿ ಸಿಂಧನೂರಿನ ಪರೀಕ್ಷಾ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದ್ದ ಹುದ್ದೆ ಆಕಾಂಕ್ಷಿಗಳ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಭಾನುವಾರ(ನ.17) ಸಿಂಧನೂರಿನ ಸರ್ಕಾರಿ ಪದವಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿ ಪರೀಕ್ಷೆ ಬಹಿಷ್ಕರಿಸಿ ಪರೀಕ್ಷಾರ್ಥಿಗಳು ಪ್ರತಿಭಟನೆ ನಡೆಸಿ ಗಲಾಟೆ ಮಾಡಿದ್ದರು. ಆ ಹಿನ್ನೆಲೆಯಲ್ಲಿ 12 ಮಂದಿ ಪರೀಕ್ಷಾರ್ಥಿಗಳ ವಿರುದ್ಧ ಸಿಂಧನೂರು ಟೌನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಪರೀಕ್ಷಾ ಮೇಲ್ವಿಚಾರಕ ಬಸವರಾಜ ತಡಕಲ್ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಪರೀಕ್ಷಾರ್ಥಿಗಳಾದ ಪಶುಪರಿ, ಬಾಬು, ಅಯ್ಯನಗೌಡ, ವೆಂಕಟೇಶ್ ಮತ್ತು ಅಮಿತ್ ಸೇರಿದಂತೆ ಒಟ್ಟು 12 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಸಿಂಧನೂರು ಟೌನ್ ಠಾಣೆಯ ಪೊಲೀಸರು ಆ ಸಂಬಂಧ ಎಫ್ಐಆರ್ ದಾಖಲಿಸಿದ್ದಾರೆ.
ಆರೋಪಿತರ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿರುವುದು, ಪ್ರಚೋದನೆ, ರಸ್ತೆ ತಡೆದು ಸಾರ್ವಜನಿಕರಿಗೆ ತೊಂದರೆ ನೀಡಿರುವ ಆರೋಪದಡಿ ವಿವಿಧ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ. ಪ್ರಮುಖವಾಗಿ ಪಶುಪತಿ ಎಂಬ ವ್ಯಕ್ತಿಯೇ ಗಲಾಟೆಯ ಸೂತ್ರದಾರ ಎಂದೂ ಎಫ್ಐಆರ್ನಲ್ಲಿ ಹೇಳಲಾಗಿದೆ.
ಸಿಂಧನೂರು ಪರೀಕ್ಷಾ ಕೇಂದ್ರದ ಕೊಠಡಿ ಸಂಖ್ಯೆ 05 ರಲ್ಲಿದ್ದ ಅಭ್ಯರ್ಥಿ ಪಶುಪತಿ, “ಪ್ರಶ್ನೋತ್ತರದ ಬುಕ್ ಲೆಟ್ ನೀಡುವ ವೇಳೆ ನಮ್ಮ ಎದುದೇ ಕವರ್ ಸೀಲ್ ಓಪನ್ ಮಾಡಿಲ್ಲ. ಮೊದಲೇ ಓಪನ್ ಮಾಡಿದ್ದೀರಿ” ಎಂದು ಪರೀಕ್ಷಾ ಸಂಯೋಜಕರೊಂದಿಗೆ ವಾಗ್ವಾದ ನಡೆಸಿದ. ಅಲ್ಲದೆ, ಇತರೆ ಪರೀಕ್ಷಾ ಕೊಠಡಿಗಳಿಗೂ ಹೋಗಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎಂದು ಎಲ್ಲರನ್ನು ಸೇರಿಸಿ ಗಲಾಟೆಗೆ ಕುಮ್ಮಕ್ಕು ನೀಡಿದ ಎಂದು ಆರೋಪಿಸಲಾಗಿದೆ. ಹೀಗಾಗಿ ಪಶುಪತಿಯನ್ನು ಬಂಧಿಸಿ ಠಾಣಾ ಜಾಮೀನಿನ ಮೇಲೆ ಪೊಲೀಸರು ಬಿಟ್ಟಿದ್ದಾರೆ.
ಇನ್ನು ಪಿಡಿಒ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಅಭ್ಯರ್ಥಿಗಳು ಕುಷ್ಟಗಿ- ಸಿಂಧನೂರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಭೇಟಿ ನೀಡಿದ್ದರು.