ಯಾವ ಅಕ್ರಮದಲ್ಲಿಯೂ ಭಾಗಿಯಾಗಿಲ್ಲ; ಭೂಮಿ ಒತ್ತುವರಿ ಆರೋಪ ಸುಳ್ಳು ಎಂದ ಕುಮಾರಸ್ವಾಮಿ
ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ನಾನು, ಯಾವ ಅಕ್ರಮದಲ್ಲಿಯೂ ಭಾಗಿಯಾಗಿಲ್ಲ. ಭೂಮಿ ಒತ್ತುವರಿ ಎಂಬ ಆರೋಪ ಸುಳ್ಳು ಎಂದು ಕುಮಾರಸ್ವಾಮಿ ಹೇಳಿದ್ದಾರೆ.;
ಕುಮಾರಸ್ವಾಮಿ
ನಾನು ನನ್ನ ಜೀವನದಲ್ಲಿ ಯಾವ ಅಕ್ರಮವನ್ನೂ ಎಸಗಿಲ್ಲ. ನಲವತ್ತು ವರ್ಷಗಳ ಹಿಂದೆ ಕಾನೂನು ಬದ್ದವಾಗಿ ಖರೀದಿಸಿರುವ ಜಮೀನು ಇನ್ನೂ ಅದೇ ಸ್ಥಿತಿಯಲ್ಲಿದ್ದು, ಈ ಸರ್ಕಾರ ಮಾಡುತ್ತಿರುವ ಷಡ್ಯಂತ್ರದ ವಿರುದ್ಧ ನಾನು ಕಾನೂನು ವ್ಯಾಪ್ತಿಯಲ್ಲಿಯೇ ಹೋರಾಟ ಮಾಡುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಅವರು ಮಂಗಳವಾರ ದೆಹಲಿಗೆ ತೆರಳುವ ಮುನ್ನ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳ ಮಾತನಾಡಿದರು. "ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ನಾನು, ಯಾವ ಅಕ್ರಮದಲ್ಲಿಯೂ ಭಾಗಿಯಾಗಿಲ್ಲ. ಭೂಮಿ ಒತ್ತುವರಿ ಎಂಬ ಆರೋಪ ಸುಳ್ಳು. ನಾನು ಒಬ್ಬ ರೈತನಾಗಿ ಬದುಕಲು ನಾಲ್ಕು ದಶಕಗಳ ಹಿಂದೆ ಖರೀದಿಸಿರುವ ಜಮೀನು ಇದಾಗಿದೆ. ಕಾನೂನು ಪ್ರಕಾರ, ಯಾರೇ ಆಗಲಿ, ತೆರವು ಮಾಡಲು ಹೋದರೆ ಕನಿಷ್ಠ ಹದಿನೈದು ದಿನಗಳ ಮುನ್ನ ನೋಟಿಸ್ ನೀಡಬೇಕು. ಆದರೆ ನನ್ನ ವಿಚಾರದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ನೇರವಾಗಿ ಕ್ರಮ ಕೈಗೊಂಡಿದ್ದಾರೆ" ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
"ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ದಬ್ಬಾಳಿಕೆ ಎಲ್ಲರಿಗೂ ಗೊತ್ತಿದೆ. ಬೆಂಗಳೂರಿನಲ್ಲಿ ಭೂಮಿ ಲೂಟಿಗೆ ಇವರು ಕೈ ಜೋಡಿಸಿದ್ದಾರೆ. ಪ್ರಥಮ ಬಾರಿಗೆ ಇಂತಹ ಪ್ರಕರಣಕ್ಕೆ ಎಸ್‌ಐಟಿ ರಚನೆ ಮಾಡಲಾಗಿದೆ, ಇದು ಸರ್ಕಾರದ ನಿರ್ಬಂಧಿತ ನೀತಿಯ ಪ್ರದರ್ಶನವಾಗಿದೆ. ಈ ದಬ್ಬಾಳಿಕೆ ವಿರುದ್ಧ ಜನರು ಒಗ್ಗಟ್ಟಾಗಿ ನಿಂತು ಪ್ರತಿರೋಧ ತೋರಬೇಕು" ಎಂದು ಕುಮಾರಸ್ವಾಮಿ ಕಿಡಿಕಾರಿದರು.
"ನಾನು ಮಾತ್ರವೇ ಈ ಸರ್ಕಾರದ ಟಾರ್ಗೆಟ್ ಆಗಿದ್ದೇನೆ. ನನ್ನನ್ನು ದೂಷಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. 40 ವರ್ಷಗಳ ಹಿಂದೆ ಖರೀದಿಸಿದ ಜಮೀನಿಗೆ ಈಗಾಗಲೇ ನೂರಾರು ಬಾರಿ ತನಿಖೆ ನಡೆದಿದ್ದು, ಯಾವ ಅಕ್ರಮವೂ ಸಿಕ್ಕಿಲ್ಲ. ನನ್ನ ಪರಿಸ್ಥಿತಿ ಹೀಗಿದ್ದರೆ, ಸಾಮಾನ್ಯ ಜನರ ಪರಿಸ್ಥಿತಿ ಹೇಗಿರಬಹುದು?" ಎಂದು ಅವರು ಕಳವಳ ವ್ಯಕ್ತಪಡಿಸಿದರು.
"ಸತ್ಯಾಂಶಗಳನ್ನು ಮಾಧ್ಯಮಗಳು ಸರಿಯಾಗಿ ವರದಿ ಮಾಡಬೇಕು. ಜನರಿಗೆ ನಿಜ ಸ್ಥಿತಿಯನ್ನು ತಲುಪಿಸಬೇಕು. ನಾನು ಕಾನೂನು ವ್ಯಾಪ್ತಿಯಲ್ಲಿ ಹೋರಾಟ ಮಾಡುತ್ತೇನೆ. ಯಾರೂ ಗಾಬರಿಯಾಗಬೇಕಿಲ್ಲ" ಎಂದು ಹೇಳಿದರು.
ಕೇಂದ್ರ ಸಚಿವ ಕುಮಾರಸ್ವಾಮಿಯವರು ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿರುವ ಬಿಡದಿಗೆ ಹತ್ತಿರದ ಕೇತಗಾಹಳ್ಳಿಯಲ್ಲಿರುವ ಸರ್ವೆ ನಂಬರ್ 7, 8, 9, 10, 16, 17 ಮತ್ತು 79ರಲ್ಲಿ ತೆರವು ಕಾರ್ಯಾಚರಣೆಯು ರಾಮನಗರದ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ನಡೆಯುತ್ತಿದೆ.