Bangalore Development | ಡಿಕೆ ಶಿವಕುಮಾರ್ ಭೇಟಿಯಾದ ಉದ್ಯಮಿ ಮೋಹನ್‌ದಾಸ್ ಪೈ
ಉದ್ಯಮಿ ಟಿವಿ ಮೋಹನದಾಸ್ ಪೈ ಅವರು ಡಿ ಕೆ ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಶನಿವಾರ ಭೇಟಿ ಮಾಡಿ ಬೆಂಗಳೂರು ಅಭಿವೃದ್ಧಿಯ ಕುರಿತು ಸಮಾಲೋಚನೆ ನಡೆಸಿದರು.;
ಬೆಂಗಳೂರು ಅಭಿವೃದ್ಧಿ ಮತ್ತು ನಗರದ ಮೂಲಭೂತ ಸೌಕರ್ಯಗಳ ಕುರಿತು ಟೀಕಿಸಿ ಟ್ವೀಟ್ ಮಾಡಿ ಕಾಂಗ್ರೆಸ್ ಸಚಿವರ ಆಕ್ರೋಶಕ್ಕೆ ಈಡಾಗಿದ್ದ ಉದ್ಯಮಿ ಟಿವಿ ಮೋಹನದಾಸ್ ಪೈ ಅವರು ಶನಿವಾರ ದಿಢೀರನೇ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಬೆಂಗಳೂರಿನ ಸದಾಶಿವನಗರದ ಡಿಸಿಎಂ ನಿವಾಸದಲ್ಲಿ ನಡೆದ ಈ ಭೇಟಿಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ಮಾಡಲು ಅವರನ್ನು ಭೇಟಿಯಾಗಿದ್ದೆ. ತಮ್ಮ ಭೇಟಿಯ ಉದ್ದೇಶವಿಷ್ಟೇ; ನಗರದ ಸರ್ವಾಂಗೀಣ ಅಭಿವೃದ್ಧಿಯಾಗಬೇಕು, ಡಿ ಕೆ ಶಿವಕುಮಾರ್ ಅವರು ಬೆಂಗಳೂರಿನ ಹೀರೋ ಆಗಬೇಕು. ಬೆಂಗಳೂರು ಭಾರತ ದೇಶದಲ್ಲೇ ಅತ್ಯಂತ ಸುಂದರವಾದ ನಗರ. ಇದು ಸ್ಟಾರ್ಟರ್ಪ್ ಗಳ ಬೀಡು, 15,000 ಡಾಲರ್ಸ್ ತಲಾ ಆದಾಯ ಹೊಂದಿರುವ ಬೆಂಗಳೂರು ದೇಶದ ಶ್ರೀಮಂತ ನಗರಗಳಲ್ಲಿ ಒಂದು ಎಂದು ಹೇಳಿದರು.
ಫುಟ್‌ಪಾತ್, ರಸ್ತೆ, ಮೆಟ್ರೋ ಅಭಿವೃದ್ಧಿ ಆಗಬೇಕು. ಇನ್ನೂ ಆರು ತಿಂಗಳಲ್ಲಿ ಅಭಿವೃದ್ಧಿ ಮಾಡುತ್ತೇನೆ ಎಂದು ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ. ಹೀಗಾಗಿ ಸಮಸ್ಯೆ ಬಗೆಹರಿಯುವ ವಿಶ್ವಾಸ ಇದೆ. ನಾವು ಬೆಂಗಳೂರಿನ ಸಮಸ್ಯೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದೇವೆ. ಕೆಲವರು ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತಾರೆ. ಕೆಲವರು ಟೀಕೆ ಮಾಡುತ್ತಾರೆ ಎಂದು ತಮ್ಮ ಟ್ವೀಟ್‌ಗೆ ಕಿಡಿಕಾರಿದ್ದ ಸಚಿವ ಪ್ರಿಯಾಂಕ್ ಖರ್ಗೆ ಟೀಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ಬೆಂಗಳೂರು ಅಭಿವೃದ್ಧಿ ಕುರಿತು ಮೋಹನ್ ದಾಸ್ ಪೈ ಟೀಕೆ ವಿರುದ್ದ ಸಚಿವ ಪ್ರಿಯಾಂಕ್ ಖರ್ಗೆ, ಡಾ ಎಂ ಬಿ ಪಾಟೀಲ್ ಸೇರಿದಂತೆ ಹಲವು ಸಚಿವರು ಮುಗಿಬಿದ್ದಿದ್ದರು.
ಸಚಿವರ ಸರಣಿ ಟ್ವೀಟ್ ಬೆನ್ನಲ್ಲೇ ದಿಢೀರ್ ಬೆಳವಣಿಗೆಯಲ್ಲಿ ಮೋಹನ್ ದಾಸ್ ಪೈ ಅವರು ಶನಿವಾರ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.