ಉತ್ತರಾಖಂಡದಲ್ಲಿ ಮಳೆ: ಮೂವರು ಸಾವು, 6 ಮಂದಿಗೆ ಗಾಯ

Update: 2024-08-01 06:52 GMT
ಹರಿದ್ವಾರ ಜಿಲ್ಲೆಯ ಭರ್ಪುರ್ ಗ್ರಾಮದಲ್ಲಿ ಮಳೆಗೆ ಕುಸಿದ ಮನೆ.

ಉತ್ತರಾಖಂಡದ ಹರಿದ್ವಾರ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಮನೆ ಕುಸಿದು ಮೂವರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ ಆರು ಮಂದಿ ಗಾಯಗೊಂಡಿದ್ದಾರೆ.

ತೆಹ್ರಿ ಜಿಲ್ಲೆಯ ಘನ್ಸಾಲಿ ಪ್ರದೇಶದ ಹಳ್ಳಿಯೊಂದರಲ್ಲಿ ಮೇಘಸ್ಫೋಟದ ನಂತರ ಕುಟುಂಬವೊಂದು ನಾಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹರಿದ್ವಾರ ಜಿಲ್ಲೆಯ ರೂರ್ಕಿ ಬಳಿಯ ಭರ್‌ಪುರ್ ಗ್ರಾಮದಲ್ಲಿ ಭಾರೀ ಮಳೆಯಿಂದ ಮನೆ ಕುಸಿದು, ಮೂವರು ಅವಶೇಷಗಳಡಿಯಲ್ಲಿ ಸಾವನ್ನಪ್ಪಿದ್ದಾರೆ ಮತ್ತು ಅರ್ಧ ಡಜನ್‌ಗಿಂತಲೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಘಟನೆಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿಥೋರಗಢ ಜಿಲ್ಲೆಯ ತಲ್ಲಾ ಗ್ರಾಮದಲ್ಲೂ ಮನೆಗಳು ಕುಸಿದಿವೆ. ಆದರೆ, ಯಾವುದೇ ಪ್ರಾಣ ಹಾನಿಯಾಗಿಲ್ಲ.

ಮುಳುಗಿದ ಹರಿದ್ವಾರ: ಹರಿದ್ವಾರದಲ್ಲಿ ಕೆಲವು ಗಂಟೆ ಕಾಲ ಸುರಿದ ಧಾರಾಕಾರ ಮಳೆ ಇಡೀ ನಗರವನ್ನು ಮುಳುಗಿಸಿತು. ಖಾರ್ಖಾರಿ ಪ್ರದೇಶದ ಸುಖಿ ನದಿಯಲ್ಲಿ ಕವಾಡಿಗಳ ಟ್ರಕ್ ಕೊಚ್ಚಿಕೊಂಡು ಹೋಯಿತು. ಆದರೆ, ಕವಾಡಿಗಳು ಇರಲಿಲ್ಲ. ಪಡಿತರ ಮತ್ತು ಅವರ ವಾಪಸಿಗೆ ಅಗತ್ಯ ವಸ್ತುಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. 

ಜೂನ್ 25 ರಂದು ಹಠಾತ್ ಪ್ರವಾಹದಿಂದ ನದಿ ಪಾತ್ರದಲ್ಲಿ ನಿಂತಿದ್ದ ಸುಮಾರು ಒಂದು ಡಜನ್ ನಾಲ್ಕು ಚಕ್ರದ ವಾಹನಗಳು ಕೊಚ್ಚಿಹೋಗಿದ್ದವು. ಭೂಪತ್ವಾಲಾ, ಹರಿದ್ವಾರ, ನಯಾ ಹರಿದ್ವಾರ, ಕಂಖಾಲ್ ಮತ್ತು ಜ್ವಾಲಾಪುರದ ಹಲವು ಕಾಲೋನಿಗಳು ಮತ್ತು ಮಾರುಕಟ್ಟೆಗಳು ಜಲಾವೃತಗೊಂಡಿವೆ.

Tags:    

Similar News