ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ: ಕೇಜ್ರಿವಾಲ್ ಆಪ್ತ ಸಹಾಯಕನ ವಿರುದ್ಧ ಪ್ರಕರಣ
ಡ್ರಾಯಿಂಗ್ ರೂಮಿನಲ್ಲಿ ಕುಳಿತಿದ್ದ ತಮ್ಮ ಮೇಲೆ ಕುಮಾರ್ ಹಲ್ಲೆ ನಡೆಸಿದರು.7-8 ಬಾರಿ ಕೆನ್ನೆಗೆ ಹೊಡೆದರು. ಎದೆ, ಹೊಟ್ಟೆಗೆ ಒದ್ದರು ಎಂದು ಸ್ವಾತಿ ಮಲಿವಾಲ್ ತಮ್ಮ ದೂರಿನಲ್ಲಿ ಹೇಳಿದ್ದಾರೆ.
ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಸಹಾಯಕನ ಮೇಲೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಬಿಭವ್ ಕುಮಾರ್ ಅವರನ್ನು ಆರೋಪಿ ಎಂದು ಹೆಸರಿಸಲಾಗಿದೆ. ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಶುಕ್ರವಾರ ಸಮನ್ಸ್ ನೀಡಿದೆ.
ಮಲಿವಾಲ್ ಹೇಳಿಕೆ ದಾಖಲು: ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಎಸ್. ಕುಶ್ವಾಹಾ ನೇತೃತ್ವದ ಇಬ್ಬರು ಸದಸ್ಯರ ತಂಡವು ಮಲಿವಾಲ್ ಹೇಳಿಕೆಯನ್ನು ದಾಖಲಿಸಿಕೊಂಡ ಬಳಿಕ ಎಫ್ಐಆರ್ ದಾಖಲಾಗಿದೆ. ದೆಹಲಿಯಲ್ಲಿರುವ ಮಲಿವಾಲ್ ಅವರ ನಿವಾಸದಲ್ಲಿ ಮಧ್ಯಾಹ್ನ 1.50 ರಿಂದ ಸುಮಾರು ನಾಲ್ಕೂವರೆ ಗಂಟೆ ಕಾಲ ಹೇಳಿಕೆ ದಾಖಲಿಸಿಕೊಳ್ಳಲಾಯಿತು.
ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಮಹಿಳೆ ಮೇಲೆ ಹಲ್ಲೆ ಅಥವಾ ಬಲ ಪ್ರಯೋಗ), 506 (ಕ್ರಿಮಿನಲ್ ಬೆದರಿಕೆ), 509 (ಅವಮಾನಿಸುವ ಪದ ಬಳಕೆ ಅಥವಾ ಕ್ರಿಯೆ) ಹಾಗೂ 323(ಹಲ್ಲೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಮಂತ್ರಿ ಅವರ ಅಧಿಕೃತ ನಿವಾಸದಲ್ಲಿ ಅವರ ಆಪ್ತ ಸಹಾಯಕ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮಲಿವಾಲ್ ಪೊಲೀಸ್ ಠಾಣೆಗೆ ದೂರು ನೀಡಿದ ಎರಡು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ಅಧಿಕೃತ ಮೂಲಗಳ ಪ್ರಕಾರ, ಡ್ರಾಯಿಂಗ್ ರೂಮಿನಲ್ಲಿ ಕುಳಿತಿದ್ದ ತಮ್ಮ ಮೇಲೆ ಕುಮಾರ್ ಹಲ್ಲೆ ನಡೆಸಿದರು.7-8 ಬಾರಿ ಕೆನ್ನೆಗೆ ಹೊಡೆದರು. ಎದೆ, ಹೊಟ್ಟೆಗೆ ಒದ್ದರು. ನಾನು ಸಿಎಂ ನಿವಾಸದಿಂದ ಹೊರಗೆ ಓಡಿ, ಪೊಲೀಸರನ್ನು ಕರೆದೆ ಎಂದು ಸಂಸದೆ ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ನಡೆದಾಗ ಕೇಜ್ರಿವಾಲ್ ಮನೆಯಲ್ಲಿ ಇದ್ದರು ಎಂದು ಅವರು ಹೇಳಿದ್ದಾರೆ.
ವೈದ್ಯಕೀಯ ಪರೀಕ್ಷೆ: ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಮಲಿವಾಲ್ ಅವರ ವೈದ್ಯಕೀಯ ಪರೀಕ್ಷೆ ನಡೆಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ʻಏನಾಯಿತು ಎಂದು ಹೇಳಿಕೆ ದಾಖಲಿಸಿದ್ದೇನೆ. ಘಟನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಬಿಜೆಪಿಯನ್ನುಕೋರುತ್ತೇನೆ. ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಭಾವಿಸುತ್ತೇವೆ. ನನಗೆ ಅತ್ಯಂತ ಕೆಟ್ಟ ಅನುಭವ ಆಗಿದೆ,ʼ ಎಂದು ಮಲಿವಾಲ್ ಎಕ್ಸ್ ನಲ್ಲಿ ಬರೆದಿದ್ದಾರೆ.