INDIA ALLIANCE RALLY | ದೇಶ ಉಳಿಸಿ, ಮುನ್ನಡೆಸಲು ಕೈಜೋಡಿಸಿ: ಸುನೀತಾ ಕೇಜ್ರಿವಾಲ್‌ ಕರೆ

ಇಂಡಿಯಾ ಮೈತ್ರಿಕೂಟ ದೆಹಲಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಜಾಪ್ರಭುತ್ವ ಉಳಿವಿಗಾಗಿ ರ್‍ಯಾಲಿಯಲ್ಲಿ ಕೇಜ್ರಿವಾಲ್‌ ಪತ್ನಿ ಸುನೀತಾ ಕೇಜ್ರಿವಾಲ್‌ ಕೂಡಾ ಭಾಗವಹಿಸಿದ್ದು, ಅವರು ಇದೇ ಮೊದಲ ಬಾರಿಗೆ ರಾಜಕೀಯ ಕಾರ್ಯಕ್ರಮವೊಂದರಲ್ಲಿ ಮೊದಲ ಭಾಷಣ ಮಾಡಿದ್ದಾರೆ.

Update: 2024-03-31 14:14 GMT

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿರುವ ಕ್ರಮದ ವಿರುದ್ಧ ಇಂಡಿಯಾ ಮೈತ್ರಿಕೂಟ ದೆಹಲಿ ರಾಮಲೀಲಾ ಮೈದಾನದಲ್ಲಿ ಭಾನುವಾರ ʼಲೋಕತಂತ್ರ ಬಚಾವೋʼ ರ್‍ಯಾಲಿಯನ್ನು ನಡೆಸಿದ್ದು, ಮಿತ್ರಪಕ್ಷಗಳ ನಾಯಕರು ಪಾಲ್ಗೊಂಡಿದ್ದರು.

ರ್‍ಯಾಲಿಯಲ್ಲಿ ಕೇಜ್ರಿವಾಲ್‌ ಪತ್ನಿ ಸುನೀತಾ ಕೇಜ್ರಿವಾಲ್‌ ಕೂಡಾ ಭಾಗವಹಿಸಿದ್ದು, ಅವರು ಇದೇ ಮೊದಲ ಬಾರಿಗೆ ರಾಜಕೀಯ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಿದ್ದಾರೆ.

ಕೇಜ್ರಿವಾಲ್‌ ಬೆಂಬಲಿಸಿ ನೆರೆದಿರುವ ಭಾರೀ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಸುನಿತಾ ಅವರು, “ಅರವಿಂದ್‌ ಕೇಜ್ರಿವಾಲ್‌ ಅವರನ್ನು ಶಾಶ್ವತವಾಗಿ ಬಂಧನದಲ್ಲಿಡಲು ಸಾಧ್ಯವಿಲ್ಲ. ಭಾರತದ ಜನತೆ ಅರವಿಂದ್ ಕೇಜ್ರಿವಾಲ್ ಜೊತೆ ನಿಂತಿದ್ದಾರೆ. ಭಾರತ ಮಾತೆ ನೋವಿನಲ್ಲಿದ್ದಾರೆ” ಎಂದು ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಾರ್ವತ್ರಿಕ ಚುನಾವಣೆಗೆ ಮುನ್ನ ಪ್ರತಿಪಕ್ಷಗಳನ್ನು ಗುರಿಯಾಗಿಸಿ ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ ಎಂದು ಅವರು ಟೀಕಿಸಿದರು.

''ನಾನು ನಿಮ್ಮಿಂದ ಮತ ಕೇಳುತ್ತಿಲ್ಲ. ಚುನಾವಣೆಯಲ್ಲಿ ಯಾರನ್ನೋ ಸೋಲಿಸಲು ಸಹಾಯ ಮಾಡಿ ಎಂದು ನಾನು ಕೇಳುತ್ತಿಲ್ಲ. ಈ ದೇಶವನ್ನು ಮುಂದಕ್ಕೆ ಕೊಂಡೊಯ್ಯಲು ಕೈಜೋಡಿಸಿ ಎಂದು ನಾನು 140 ಕೋಟಿ ಭಾರತೀಯರನ್ನು ಕೇಳುತ್ತಿದ್ದೇನೆ” ಎಂದು ಸುನೀತಾ ಹೇಳಿದರು.

ತಮ್ಮ ಭಾಷಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಪತ್ರವನ್ನು ಓದಿದ ಅವರು, ಅದರಲ್ಲಿ ಕೇಜ್ರಿವಾಲ್ ಜನರಿಗೆ‌ ನೀಡಿದ ಆರು ಭರವಸೆಗಳನ್ನು ಘೋಷಿಸಿದರು.

"ಮೊದಲನೆಯದಾಗಿ, ದೇಶಾದ್ಯಂತ ಯಾವುದೇ ವಿದ್ಯುತ್ ಕಡಿತ ಇರುವುದಿಲ್ಲ. ಎರಡನೆಯದಾಗಿ, ದೇಶದಾದ್ಯಂತ ಬಡವರಿಗೆ ವಿದ್ಯುತ್ ಉಚಿತವಾಗಿರುತ್ತದೆ. ಮೂರನೆಯದಾಗಿ, ಪ್ರತಿ ಗ್ರಾಮವು ಉತ್ತಮ ಶಾಲೆಯನ್ನು ಹೊಂದುತ್ತದೆ, ಅಲ್ಲಿ ಸಮಾಜದ ಎಲ್ಲಾ ವರ್ಗಗಳ ಮಕ್ಕಳು ಗುಣಮಟ್ಟದ ಶಿಕ್ಷಣವನ್ನು ಪಡೆಯುತ್ತಾರೆ. ನಾಲ್ಕನೆಯದಾಗಿ, ಪ್ರತಿ ಹಳ್ಳಿಯು ಮೊಹಲ್ಲಾ ಕ್ಲಿನಿಕ್ ಅನ್ನು ಹೊಂದಿರುತ್ತದೆ, ಪ್ರತಿ ಜಿಲ್ಲೆಯೂ ಸರ್ಕಾರಿ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯನ್ನು ಹೊಂದಿರುತ್ತದೆ. ಐದನೆಯದಾಗಿ, ಸ್ವಾಮಿನಾಥನ್ ವರದಿಯ ಪ್ರಕಾರ ರೈತರಿಗೆ ಉತ್ತಮ ಕನಿಷ್ಠ ಬೆಂಬಲ ಬೆಲೆ ಸಿಗುತ್ತದೆ. ಆರನೆಯದಾಗಿ ಹಲವು ವರ್ಷಗಳಿಂದ ದೆಹಲಿಯ ಜನತೆಗೆ ಅನ್ಯಾಯವಾಗುತ್ತಿದೆ. ಈ ಅನ್ಯಾಯವನ್ನು ಕೊನೆಗಾಣಿಸುತ್ತೇವೆ. ದೆಹಲಿ ಜನತೆಗೆ ರಾಜ್ಯ ಸ್ಥಾನಮಾನ ಸಿಗಲಿದೆ. ನಾವು ಐದು ವರ್ಷಗಳಲ್ಲಿ ಈ ಎಲ್ಲಾ ಭರವಸೆಗಳನ್ನು ಪೂರೈಸುತ್ತೇವೆ” ಎಂದು ಕೇಜ್ರಿವಾಲ್‌ ಸಂದೇಶವನ್ನು ಓದಿ ಹೇಳಿದರು.

ಸದ್ಯ ಕೇಜ್ರಿವಾಲ್‌ ಅವರು ಅಬಕಾರಿ ನೀತಿ ಹಗರಣದ ಆರೋಪದ ಮೇಲೆ ಇಡಿ ಬಂಧನದಲ್ಲಿದ್ದಾರೆ.

Tags:    

Similar News