ಸಂಸತ್ತಿನಲ್ಲಿ ಮಾಧ್ಯಮದ ಮೇಲಿನ ನಿರ್ಬಂಧ ಕೊನೆಗೊಳಿಸಿ: ರಾಹುಲ್

Update: 2024-07-29 13:27 GMT

ನವದೆಹಲಿ, ಜುಲೈ 29: ಸಂಸತ್ತಿನ ಆವರಣದಲ್ಲಿ ಮಾಧ್ಯಮಗಳ ಮೇಲೆ ಹೇರಿರುವ ನಿರ್ಬಂಧಗಳನ್ನು ತೆಗೆದುಹಾಕುವಂತೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸೋಮವಾರ ಮನವಿ ಮಾಡಿದ್ದಾರೆ.

ʻನಿರ್ಬಂಧಕ್ಕೆ ಒಳಗಾಗಿರುವ ಮಾಧ್ಯಮಗಳಿಗೆ ಪಾಲ್ಗೊಳ್ಳುವ ಅವಕಾಶ ನೀಡುವಂತೆ ನಿಮ್ಮನ್ನು ವಿನಂತಿಸುತ್ತೇನೆ,ʼ ಎಂದು ಲೋಕಸಭೆಯಲ್ಲಿ ರಾಹುಲ್‌ ಗಾಂಧಿ ಹೇಳಿದರು.

ಸಂಸತ್ ಭವನದ ಪ್ರವೇಶ ಮತ್ತು ನಿರ್ಗಮನ ದ್ವಾರದ ಬಳಿ ಮಾಧ್ಯಮದವರು ಸಂಸದರ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದರು. ಆದರೆ, ಈಗ ಅವರನ್ನು ಅವರಿಗಾಗಿ ರೂಪಿಸಿದ ಆವರಣಕ್ಕೆ ಸೀಮಿತಗೊಳಿಸಲಾಗಿದೆ.

ಸಂಸತ್ತಿನ ಕಾರ್ಯವಿಧಾನಗಳ ನಿಯಮಗಳನ್ನು ರಾಹುಲ್‌ ಅವರಿಗೆ ನೆನಪಿಸಿದ ಬಿರ್ಲಾ, ಇಂಥ ವಿಷಯಗಳನ್ನು ತಮ್ಮೊಂದಿಗೆ ವೈಯಕ್ತಿಕ ವಾಗಿ ಚರ್ಚಿಸಬೇಕು ಮತ್ತು ಸದನದಲ್ಲಿ ಪ್ರಸ್ತಾಪಿಸಬಾರದು ಎಂದು ಹೇಳಿದರು.

ರಾಹುಲ್ ಗಾಂಧಿ, ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒಬ್ರಿಯಾನ್, ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಮತ್ತು ಶಿವಸೇನಾ-ಯುಬಿಟಿ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಮಾಧ್ಯಮ ಪ್ರತಿನಿಧಿಗಳನ್ನು ಭೇಟಿಯಾದರು.

ʻಇದು ಸೆನ್ಸಾರ್‌ಶಿಪ್. ಇದು ಸ್ವೀಕಾರಾರ್ಹವಲ್ಲ. ಈ ಹೋರಾಟದಲ್ಲಿ ನಾವು ನಿಮ್ಮೊಂದಿಗೆ ಇದ್ದೇವೆ,ʼ ಎಂದು ಒಬ್ರಿಯಾನ್ ಹೇಳಿದರು.

ಆನಂತರ ಓಂ ಬಿರ್ಲಾ ಅವರು ಪತ್ರಕರ್ತರ ಗುಂಪನ್ನು ಭೇಟಿ ಮಾಡಿ, ಅವರ ಕುಂದುಕೊರತೆಗಳನ್ನು ಪರಿಹರಿಸಲಾಗುವುದು. ಕರ್ತವ್ಯವನ್ನು ನಿರ್ವಹಿಸಲು ಉತ್ತಮ ಸೌಲಭ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

Tags:    

Similar News