Prashant Kishor: ರಾಜಕೀಯ ಕಾರ್ಯತಂತ್ರ ನಿಪುಣ ಪ್ರಶಾಂತ್‌ ಕಿಶೋರ್‌ ಬಂಧನ

Prashant Kishor: ಮಹಾತ್ಮ ಗಾಂಧಿ ಪ್ರತಿಮೆಯ ಬಳಿಯ ನಿರ್ಬಂಧಿತ ಸ್ಥಳವಾದ ಗಾಂಧಿ ಮೈದಾನದಲ್ಲಿ ಆಮರಣ ಉಪವಾಸ ನಡೆಸಿದ್ದಕ್ಕಾಗಿ ಪಾಟ್ನಾ ಪೊಲೀಸರು ಕಿಶೋರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.;

Update: 2025-01-06 05:09 GMT
ಪ್ರಶಾಂತ್‌ ಕಿಶೋರ್‌.

ಬಿಪಿಎಸ್ಸಿ ಪರೀಕ್ಷೆಯನ್ನು ರದ್ದುಗೊಳಿಸಲು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ರಾಜಕೀಯ ಕಾರ್ಯತಂತ್ರ ನಿಪುಣ ಪ್ರಶಾಂತ್‌ ಕಿಶೋರ್‌ ಅವನ್ನು ಸೋಮವಾರ (ಜನವರಿ 6) ರಂದು ಪಾಟ್ನಾದ ಗಾಂಧಿ ಮೈದಾನದಿಂದ ಪೊಲೀಸರು ಬಂಧಿಸಿದ್ದಾರೆ. ಅವರು ಅಲ್ಲಿ ಆಮರಣಾಂತ ಉಪವಾಸ ನಡೆಸುತ್ತಿದ್ದರು. ಜನ್ ಸುರಾಜ್ ಪಕ್ಷದ ಸಂಸ್ಥಾಪಕರಾಗಿರುವ ಪ್ರಶಾಂತ್ ಕಿಶೋರ್ ಜನವರಿ 2ರಿಂದ ಪ್ರತಿಭಟನೆ ನಡೆಸುತ್ತಿದ್ದರು.

ಸೋಮವಾರ ಬೆಳಗ್ಗೆ ಪೊಲೀಸ್ ಸಿಬ್ಬಂದಿ ಅವರನ್ನುಬಂಧಿಸಿ ಅವರ ಬೆಂಬಲಿಗರನ್ನು ಪ್ರತಿಭಟನಾ ಸ್ಥಳದಿಂದ ಬೇರೆ ಕಡೆಗೆ ಸಾಗಿಸಿದ್ದಾರೆ. ಕಿಶೋರ್ ಅವರ ಬೆಂಬಲಿಗರ ಪ್ರಕಾರ, ಪೊಲೀಸರು ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಪಾಟ್ನಾ ಎಮ್ಸ್‌ಗೆ ಕರೆದೊಯ್ದಿದ್ದಾರೆ.

ಧರಣಿ ಕಾನೂನು ಬಾಹಿರ: ಪೊಲೀಸರು

"ಹೌದು, ಗಾಂಧಿ ಮೈದಾನದಲ್ಲಿ ಧರಣಿ ಕುಳಿತಿದ್ದ ಕಿಶೋರ್ ಮತ್ತು ಅವರ ಬೆಂಬಲಿಗರನ್ನು ಸೋಮವಾರ ಬೆಳಿಗ್ಗೆ ಪೊಲೀಸರು ಬಂಧಿಸಿದ್ದಾರೆ. ಅವರನ್ನು ಈಗ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ಸಿಂಗ್ ತಿಳಿಸಿದ್ದಾರೆ.

ಧರಣಿ "ಕಾನೂನುಬಾಹಿರ" ಎಂದು ಸಿಂಗ್ ಹೇಳಿದ್ದು, ಅವರು ನಿರ್ಬಂಧಿತ ಸ್ಥಳದ ಬಳಿ ಧರಣಿ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಮಹಾತ್ಮ ಗಾಂಧಿ ಪ್ರತಿಮೆಯ ಬಳಿಯ ನಿರ್ಬಂಧಿತ ಸ್ಥಳವಾದ ಗಾಂಧಿ ಮೈದಾನದಲ್ಲಿ ಆಮರಣ ಉಪವಾಸ ನಡೆಸಿದ್ದಕ್ಕಾಗಿ ಪಾಟ್ನಾ ಪೊಲೀಸರು ಕಿಶೋರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ರಾಹುಲ್, ತೇಜಸ್ವಿಗೆ ಬೆಂಬಲ ನೀಡುವಂತೆ ಕಿಶೋರ್ ಮನವಿ

ಭಾನುವಾರ, ಪ್ರಶಾಂತ್‌ ಕಿಶೋರ್‌ ಪ್ರತಿಭಟನೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಬೆಂಬಲ ಕೋರಿದ್ದರು.

"ಈ ಆಂದೋಲನ ರಾಜಕೀಯೇತರ. ನನ್ನ ಪಕ್ಷದ ಬ್ಯಾನರ್ ಅಡಿಯಲ್ಲಿ ನಡೆಯುತ್ತಿಲ್ಲ ಎಂದು ನಾನು ಜನರಿಗೆ ತಿಳಿಸಲು ಬಯಸುತ್ತೇನೆ. ಕಳೆದ ರಾತ್ರಿ, ಯುವಕರು 'ಯುವ ಸತ್ಯಾಗ್ರಹ ಸಮಿತಿ' (ವೈಎಸ್ಎಸ್) 51 ಸದಸ್ಯರ ವೇದಿಕೆ ರಚಿಸಿದ್ದಾರೆ. 100 ಸಂಸದರನ್ನು ಹೊಂದಿರುವ ರಾಹುಲ್ ಗಾಂಧಿ ಮತ್ತು 70 ಕ್ಕೂ ಹೆಚ್ಚು ಶಾಸಕರನ್ನು ಹೊಂದಿರುವ ತೇಜಸ್ವಿ ಯಾದವ್ ಈ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಪ್ರಶಾಂತ್‌ ಕಿಶೋರ್‌ ಮನವಿ ಮಾಡಿದ್ದರು.

"ಈ ನಾಯಕರು ನಮಗಿಂತ ದೊಡ್ಡವರು. ಅವರು ಗಾಂಧಿ ಮೈದಾನದಲ್ಲಿ ಐದು ಲಕ್ಷ ಜನರನ್ನು ಒಟ್ಟುಗೂಡಿಸಬಹುದು. ಹಾಗೆ ಮಾಡಲು ಇದು ಸಮಯ. ಯುವಕರ ಭವಿಷ್ಯ ಅಪಾಯದಲ್ಲಿದೆ. ಕೇವಲ ಮೂರು ವರ್ಷಗಳಲ್ಲಿ 87 ಬಾರಿ ಲಾಠಿ ಚಾರ್ಜ್ ಮಾಡಲು ಆದೇಶಿಸಿದ ಕ್ರೂರ ಆಡಳಿತವನ್ನು ನಾವು ಎದುರಿಸುತ್ತಿದ್ದೇವೆ" ಎಂದು ಪ್ರಶಾಂತ್‌ ಕಿಶೋರ್‌ ಹೇಳಿದ್ದಾರೆ.

ನಿತೀಶ್ ಕುಮಾರ್ ತಲೆಬಾಗಬೇಕಾಗುತ್ತದೆ

ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ದೆಹಲಿಯಲ್ಲಿ ನಡೆದ ಆಂದೋಲನದ ಉದಾಹರಣೆಯನ್ನು ಉಲ್ಲೇಖಿಸಿದ ಕಿಶೋರ್, "ಮೋದಿ ಸರ್ಕಾರವು ಹಲವಾರು ತಿಂಗಳುಗಳ ನಂತರ ಪಶ್ಚಾತ್ತಾಪ ಪಡಬೇಕಾಯಿತು. ಒಂದು ದಿನ ನಿತೀಶ್ ಕುಮಾರ್ ಸರ್ಕಾರವೂ ಇಲ್ಲಿನ ಯುವಕರ ಮುಂದೆ ತಲೆಬಾಗಬೇಕಾಗುತ್ತದೆ" ಎಂದು ಅವರು ಹೇಳಿದರು.

ಬಿಹಾರ ಲೋಕಸೇವಾ ಆಯೋಗ (ಬಿಪಿಎಸ್ಸಿ) ಡಿಸೆಂಬರ್ 13ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಹೀಗಾಗಿ ಪರೀಕ್ಷೆ ರದ್ದುಗೊಳಿಸುವಂತೆ ಒತ್ತಾಯಿಸಿ ಜನ್ ಸುರಾಜ್ ಸಂಸ್ಥಾಪಕ ಪ್ರಶಾಂತ್‌ ಕಿಶೋರ್‌ ಗುರುವಾರದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆದರೆ, ಪರೀಕ್ಷೆಯಲ್ಲಿ ಹಾಜರಾದ ಆಯ್ದ ಅಭ್ಯರ್ಥಿಗಳ ಗುಂಪಿಗೆ ಮರು ಪರೀಕ್ಷೆಗೆ ಬಿಪಿಎಸ್‌ಸಿ ಆದೇಶಿಸಿತ್ತು. ಇಲ್ಲಿನ 22 ಕೇಂದ್ರಗಳಲ್ಲಿ ಶನಿವಾರ ಮರುಪರೀಕ್ಷೆ ನಡೆದಿದೆ.

Tags:    

Similar News