ಬ್ರೂನೈ ಪ್ರವಾಸ| ಪ್ರಧಾನಿಗೆ ಸ್ವಾಗತ, ಗೌರವ ವಂದನೆ

Update: 2024-09-03 11:20 GMT

ಬಂದರ್ ಸೆರಿ ಬೆಗವಾನ್: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ರಾಷ್ಟ್ರಗಳ ಪ್ರವಾಸದ ಮೊದಲ ಹಂತವಾಗಿ ಬ್ರೂನೈಗೆ ಮಂಗಳವಾರ ಆಗಮಿಸಿದ್ದಾರೆ. ಅವರನ್ನು ಸಿಂಹಾಸನ ಏರಲಿರುವ ರಾಜಕುಮಾರ ಅಲ್ ಮುಹ್ತಾದಿ ಬಿಲ್ಲಾ ಅವರು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಮೋದಿ ಅವರಿಗೆ ಗೌರವವಂದನೆ ನೀಡಲಾಯಿತು. 

ಮೋದಿ ಅವರು ದ್ವಿಪಕ್ಷೀಯ ಮಾತುಕತೆಗೆ ಬ್ರೂನೈಗೆ ಪ್ರಯಾಣಿಸಿದ ಮೊದಲ ಭಾರತೀಯ ಪ್ರಧಾನಿ. ಐತಿಹಾಸಿಕ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸುಲ್ತಾನ್ ಹಾಜಿ ಹಸನಲ್ ಬೊಲ್ಕಿಯಾ ಮತ್ತು ರಾಜಮನೆತನದ ಇತರ ಸದಸ್ಯರೊಂದಿಗಿನ ಸಭೆಯನ್ನು ಎದುರು ನೋಡುತ್ತಿರುವುದಾಗಿ ಅವರು ಹೇಳಿದರು. 

ʻಪ್ರಧಾನಿ ನರೇಂದ್ರ ಮೋದಿ ಅವರಿಗೆ ಬ್ರೂನೈಗೆ ವಿಧ್ಯುಕ್ತ ಸ್ವಾಗತ. ಅವರನ್ನು ರಾಜಕುಮಾರ ಹಾಜಿ ಅಲ್ ಮುಹ್ತಾದಿ ಬಿಲ್ಲಾ ಅವರು ಆತ್ಮೀಯವಾಗಿ ಬರಮಾಡಿಕೊಂಡರು,ʼ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. 

ʻಇದೊಂದು ವಿಶೇಷ ಭೇಟಿ. ಏಕೆಂದರೆ, ಇದು ಭಾರತೀಯ ಪ್ರಧಾನಿಯೊಬ್ಬರ ಮೊದಲ ದ್ವಿಪಕ್ಷೀಯ ಭೇಟಿ. ಉಭಯ ದೇಶಗಳ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 40 ನೇ ವರ್ಷ ಆಚರಣೆ ಹಿನ್ನೆಲೆಯಲ್ಲಿ ಈ ಭೇಟಿ ನಡೆಯುತ್ತಿದೆ,ʼ ಎಂದು ಬರೆದಿದ್ದಾರೆ. 

ಸಿಂಗಾಪುರ ಭೇಟಿ: ಬುಧವಾರ ಸಿಂಗಾಪುರಕ್ಕೆ ತೆರಳಲಿರುವ ಪ್ರಧಾನಿ ಅವರು ಅಧ್ಯಕ್ಷ ಥರ್ಮನ್ ಷಣ್ಮುಗರತ್ನಂ, ಪ್ರಧಾನಿ ಲಾರೆನ್ಸ್ ವಾಂಗ್, ಹಿರಿಯ ಸಚಿವರಾದ ಲೀ ಸೀನ್ ಲೂಂಗ್ ಮತ್ತು ಗೋ ಚೋಕ್ ಟಾಂಗ್ ಅವರನ್ನು ಭೇಟಿಯಾಗಲಿದ್ದಾರೆ. 

ʻಎರಡೂ ದೇಶಗಳು ಪೂರ್ವದೆಡೆಗೆ ಕ್ರಿಯೆ ನೀತಿ ಮತ್ತು ಇಂಡೋ ಪೆಸಿಫಿಕ್ ವಿಷನ್‌ನ ಪ್ರಮುಖ ಪಾಲುದಾರರು. ಬ್ರೂನೈ, ಸಿಂಗಾಪುರ ಭೇಟಿಗಳು ನಮ್ಮ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸುತ್ತದೆ ಎಂಬ ವಿಶ್ವಾಸವಿದೆ,ʼ ಎಂದು ಮೋದಿ ಹೇಳಿದರು.

Tags:    

Similar News