J&K Polls: ನ್ಯಾಷನಲ್ ಕಾನ್ಫೆರೆನ್ಸ್- ಕಾಂಗ್ರೆಸ್ ಎಲ್ಲ 90 ಅಸೆಂಬ್ಲಿ ಸ್ಥಾನಗಳಲ್ಲಿ ಸ್ಪರ್ಧೆ
ಎನ್‌ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿಯೊಂದಿಗೆ ಚುನಾವಣಾ ಪೂರ್ವ ಅಥವಾ ಆನಂತರದ ಮೈತ್ರಿ ಸಾಧ್ಯತೆಯನ್ನು ತಳ್ಳಿಹಾಕಲಿಲ್ಲ.
ಜಮ್ಮು ಮತ್ತು ಕಾಶ್ಮೀರದ ಎಲ್ಲಾ 90 ವಿಧಾನಸಭೆ ಸ್ಥಾನಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮೈತ್ರಿ ಮಾಡಿಕೊಂಡಿವೆ ಎಂದು ಎನ್‌ಸಿ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಗುರುವಾರ (ಆಗಸ್ಟ್ 22) ಹೇಳಿದ್ದಾರೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಬ್ದುಲ್ಲಾ ಅವರ ನಿವಾಸದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ನಾಯಕರನ್ನು ಭೇಟಿ ಮಾಡಿದ ನಂತರ ಈ ಘೋಷಣೆ ಹೊರಬಿದ್ದಿದೆ.
ಮೈತ್ರಿ ಅಂತಿಮಗೊಂಡಿದೆ: ʻಮೈತ್ರಿ ಅಂತಿಮಗೊಂಡಿದ್ದು, ಇಂದು ಸಂಜೆ ಸಹಿ ಹಾಕಲಾಗುವುದು. ಎಲ್ಲ 90 ಸ್ಥಾನಗಳಲ್ಲಿ ಮೈತ್ರಿ ಇರಲಿದೆʼ ಎಂದು ಅಬ್ದುಲ್ಲಾ ಹೇಳಿದರು.
90 ಸದಸ್ಯ ಬಲದ ಜಮ್ಮು-ಕಾಶ್ಮೀರ ವಿಧಾನಸಭೆಗೆ ಸೆಪ್ಟೆಂಬರ್ 18, 25 ಮತ್ತು ಅಕ್ಟೋಬರ್ 1 ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.
ʻಸಿಪಿಐ(ಎಂ)ನ ಎಂ.ವೈ.ತರಿಗಾಮಿ ಕೂಡ ನಮ್ಮೊಂದಿಗಿದ್ದಾರೆ. ಜನರು ಕೂಡ ನಮ್ಮೊಂದಿಗಿದ್ದಾರೆ ಮತ್ತು ಜನರ ಜೀವನವನ್ನು ಸುಧಾರಿಸಲು ನಾವು ಭಾರಿ ಬಹುಮತದೊಂದಿಗೆ ಗೆಲ್ಲುತ್ತೇವೆ ಎಂದುಕೊಂಡಿದ್ದೆನೆ,ʼ ಎಂದು ಅವರು ಹೇಳಿದರು.
ರಾಜ್ಯದ ಮರುಸ್ಥಾಪನೆ: ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸುವುದು ಕಾಂಗ್ರೆಸ್ ಮತ್ತು ಇಂಡಿಯ ಒಕ್ಕೂಟದ ಆದ್ಯತೆ ಎಂಬ ರಾಹುಲ್ ಗಾಂಧಿ ಅವರ ಆಶ್ವಾಸನೆ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದ ಸ್ಥಾನಮಾನವನ್ನು ಪುನಃಸ್ಥಾಪಿಸುವ ಭರವಸೆ ವ್ಯಕ್ತಪಡಿಸಿದರು.
ʻರಾಜ್ಯ ಸ್ಥಾನಮಾನ ನಮಗೆಲ್ಲರಿಗೂ ಬಹಳ ಮುಖ್ಯ. ಈ ರಾಜ್ಯ ಕೆಟ್ಟ ದಿನಗಳನ್ನು ಕಂಡಿದೆ. ಸಂಪೂರ್ಣ ಅಧಿಕಾರವಿರುವ ರಾಜ್ಯವನ್ನು ಪುನಃಸ್ಥಾಪಿಸಲಾಗುವುದು. ಅದಕ್ಕಾಗಿ ನಾವು ಇಂಡಿಯ ಒಕ್ಕೂಟದೊಂದಿಗೆ ಒಟ್ಟಾಗಿ ನಿಲ್ಲುತ್ತೇವೆ, ಎಂದು ಹೇಳಿದರು.
ಸಾಮಾನ್ಯ ಕನಿಷ್ಠ ಕಾರ್ಯಕ್ರಮವಿಲ್ಲ: ಉಭಯ ಪಕ್ಷಗಳು ಸಾಮಾನ್ಯ ಕನಿಷ್ಠ ಕಾರ್ಯಕ್ರಮಕ್ಕೆ ಒಪ್ಪಿಕೊಂಡಿವೆಯೇ ಎಂದು ಪ್ರಶ್ನೆಗೆ,ʻ ವಿಭಜಕ ಶಕ್ತಿಗಳನ್ನು ಸೋಲಿಸಲು ಒಟ್ಟಾಗಿ ಚುನಾವಣೆ ಎದುರಿಸುವುದೇ ಸಾಮಾನ್ಯ ಕಾರ್ಯಕ್ರಮ,ʼ ಎಂದರು.
ಪಿಡಿಪಿ ಜತೆ ಮೈತ್ರಿ ಸಾಧ್ಯತೆ: ಮೆಹಬೂಬಾ ಮುಫ್ತಿ ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯೊಂದಿಗೆ ಚುನಾವಣೆ ಪೂರ್ವ ಅಥವಾ ಆನಂತರದ ಮೈತ್ರಿಯನ್ನು ಅವರು ತಳ್ಳಿಹಾಕಲಿಲ್ಲ. ʻಮೊದಲು ಚುನಾವಣೆ ನಡೆಸೋಣ.ಆನಂತರ ಬೇರೆ ವಿಷಯಗಳನ್ನು ಪರಿಶೀಲಿಸುತ್ತೇವೆ. ಯಾರಿಗೂ ಯಾವುದೇ ಬಾಗಿಲು ಮುಚ್ಚಿಲ್ಲ. ಸೀಟು ಹಂಚಿಕೆ ಮೊದಲ ಹಂತಕ್ಕೆ ಮುನ್ನ ಗೊತ್ತಾಗಲಿದೆ,ʼ ಎಂದರು.
ಚುನಾವಣೆಗೆ ಸ್ಪರ್ಧಿಸುವ ಕುರಿತು ಉತ್ತರಿಸಲು ನಿರಾಕರಿಸಿದರು. ಕಾಂಗ್ರೆಸ್ ಒಂದಿಗೆ ಮೈತ್ರಿ ಮಾತುಕತೆ ಸೌಹಾರ್ದದಿಂದ ನಡೆದಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.