Farmers Protest | ರೈತರ ದೆಹಲಿ ಚಲೋ: ಭಾರೀ ಪ್ರತಿಭಟನೆಗೆ ಸ್ತಬ್ಧವಾದ ರಾಜಧಾನಿ

ಭಾರತೀಯ ಕಿಸಾನ್ ಪರಿಷತ್ (ಬಿಕೆಪಿ) ನೇತೃತ್ವದಲ್ಲಿ ಕನಿಷ್ಠ 20 ಜಿಲ್ಲೆಗಳ ಇತರ ರೈತ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಚಲೋ ಪ್ರತಿಭಟನೆ ಕರೆ ನೀಡಿವೆ.

Update: 2024-12-02 11:53 GMT
Delhi- Noida

ರೈತರ 'ದೆಹಲಿ ಚಲೋ' ಮೆರವಣಿಗೆ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯ ಪ್ರಯಾಣಿಕರು ಸೋಮವಾರ (ಡಿಸೆಂಬರ್ 2) ದೆಹಲಿ-ನೋಯ್ಡಾ ಗಡಿಯಲ್ಲಿ ಭಾರಿ ಸಂಚಾರ ದಟ್ಟಣೆ ಎದುರಿಸಬೇಕಾಯಿತು.

ರೈತರ ಪ್ರತಿಭಟನಾ ಮೆರವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಅನೇಕ ಕಡೆ ಬ್ಯಾರಿಕೇಡ್​ಗಳನ್ನು ಅಳವಡಿಸಿದ್ದ ಕಾರಣ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಹೀಗಾಗಿ ಟ್ರಾಫಿಕ್ ಜಾಮ್ ಮಿತಿ ಮೀರಿದ್ದವು.

ಭಾರತೀಯ ಕಿಸಾನ್ ಪರಿಷತ್ (ಬಿಕೆಪಿ) ನೇತೃತ್ವದಲ್ಲಿ ಕನಿಷ್ಠ 20 ಜಿಲ್ಲೆಗಳ ಇತರ ರೈತ ಗುಂಪುಗಳು ವಿವಿಧ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿದ್ದವು. ಚಳಿಗಾಲದ ಅಧಿವೇಶನವನ್ನು ಗಮನದಲ್ಲಿ ಇಟ್ಟುಕೊಂಡು ರೈತರು ಈ ಮೆರವಣಿಗೆ ಆಯೋಜಿಸಿದ್ದರು.

ಸುದ್ದಿ ಸಂಸ್ಥೆ ಎಎನ್ಐ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಚಿಲ್ಲಾ ಗಡಿಯಲ್ಲಿ ಕಾರುಗಳು ನಿಧಾನವಾಗಿ ಚಲಿಸುತ್ತಿರುವುದನ್ನು ಕಾಣಬಹುದು. ದೆಹಲಿ-ನೋಯ್ಡಾ ಡೈರೆಕ್ಟ್ (ಡಿಎನ್​ಡಿ ) ಫ್ಲೈವೇಯಲ್ಲಿ ಕನಿಷ್ಠ 10 ಪಥಗಳಲ್ಲಿನ ಎಲ್ಲಾ ವಾಹನಗಳು ನಿಂತಲ್ಲೇ ನಿಂತಿದ್ದವು.

ಪೊಲೀಸ್ ಮುನ್ನೆಚ್ಚರಿಕೆ

ಗಡಿಯಲ್ಲಿ ತಪಾಸಣೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಚ್ಚುವರಿ ಪೊಲೀಸ್ ಆಯುಕ್ತ (ಪೂರ್ವ) ಸಾಗರ್ ಸಿಂಗ್ ಕಲ್ಸಿ ಮಾತನಾಡಿ, "ನಾವು ಪೂರ್ವ ದೆಹಲಿ ಗಡಿಗಳಲ್ಲಿ ಸಾಕಷ್ಟು ವ್ಯವಸ್ಥೆಗಳನ್ನು ಮಾಡಿದ್ದೇವೆ. ಗಲಭೆ ವಿರೋಧಿ ಸಾಧನಗಳು ಸೇರಿದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ನಾವು ಕಣ್ಗಾವಲಿಗಾಗಿ ಡ್ರೋನ್​ಗಳನ್ನು ಬಳಸುತ್ತಿದ್ದೇವೆ. ಸುಗಮ ವಾಹನ ಸಂಚಾರಕ್ಕೆ ಸಂಚಾರ ಪೊಲೀಸರೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಗ್ರೇಟರ್ ನೋಯ್ಡಾದ ನಿವಾಸಿ ಅಪ್ರಜಿತಾ ಸಿಂಗ್ ಎಂಬುವರು ಚಿಲ್ಲಾ ಗಡಿಯಲ್ಲಿ ಹಾಕಲಾಗಿರುವ ಬ್ಯಾರಿಕೇಡ್​ಗಳು ಪ್ರಯಾಣಿಕರಿಗೆ ಸಮಸ್ಯೆ ಉಂಟು ಮಾಡುತ್ತಿವೆ ಎಂದು ಹೇಳಿದ್ದಾರೆ.

"ಆ ಜಂಕ್ಷಣ್​ ದಾಟಲು ನನಗೆ ಸುಮಾರು ಒಂದು ಗಂಟೆ ಬೇಕಾಯಿತು. ದೆಹಲಿ-ನೋಯ್ಡಾ ಗಡಿಯ ಎರಡೂ ಬದಿಗಳಲ್ಲಿ ಪೊಲೀಸರು ಬ್ಯಾರಿಕೇಡ್​ಗಳನ್ನು ಹಾಕಿದ್ದಾರೆ. ಇದು ಸಂಚಾರ ದಟ್ಟಣೆಗೆ ಕಾರಣವಾಯಿತು. ವಿಶೇಷವಾಗಿ ನೋಯ್ಡಾದಿಂದ ದೆಹಲಿಗೆ ಹೋಗುವ ಕ್ಯಾರೇಜಿಯಲ್ಲಿ ಸಮಸ್ಯೆ ಉಂಟಾಗಿದೆ, '' ಎಂದು ಅವರು ಹೇಳಿದ್ದಾರೆ.

ಭಾನುವಾರವೇ ನೋಯ್ಡಾ ಪೊಲೀಸರು ಸಂಚಾರ ಸಲಹೆ ಪ್ರಕಟಿಸಿದ್ದರು. ರಸ್ತೆ ಸಂಚಾರ ನಿರ್ಬಂಧಗಳು ಮತ್ತು ತಿರುವುಗಳ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಿದ್ದರು.

ವಿವಿಧ ಬೇಡಿಕೆಗಳಿಗೆ ಆಗ್ರಹ

ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ಬ್ಯಾನರ್​ಗಳ ಅಡಿಯಲ್ಲಿ ರೈತರು ಹೊಸದಾಗಿ ಜಾರಿಗೆ ಬಂದ ಕೃಷಿ ಕಾನೂನುಗಳ ಅಡಿಯಲ್ಲಿ ಖಾತರಿ ಪರಿಹಾರ ಮತ್ತು ಪ್ರಯೋಜನಗಳು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಹಿಂದಿನ ಭೂಸ್ವಾಧೀನ ಕಾಯ್ದೆಯಡಿ ಶೇ.10ರಷ್ಟು ನಿವೇಶನ ಹಂಚಿಕೆ ಮತ್ತು ಶೇ.64.7ರಷ್ಟು ಪರಿಹಾರವನ್ನು ಮಾರುಕಟ್ಟೆ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಬಿಕೆಪಿ ನಾಯಕ ಸುಖ್ಬೀರ್ ಖಲೀಫಾ ನೇತೃತ್ವದ ಮೊದಲ ಗುಂಪು ಡಿಸೆಂಬರ್ 2 ರಂದು ಮಧ್ಯಾಹ್ನ ನೋಯ್ಡಾದ ಮಹಾ ಮಾಯಾ ಫ್ಲೈಓವರ್ ಕೆಳಗೆ ತಮ್ಮ ಪ್ರಯಾಣ ಪ್ರಾರಂಭಿಸಲಿದೆ.

ನಾವು ದೆಹಲಿಗೆ ನಮ್ಮ ಮೆರವಣಿಗೆಗೆ ಸಿದ್ಧರಾಗಿದ್ದೇವೆ. ಡಿಸೆಂಬರ್ 2ರಂದು, ನಾವು ಮಧ್ಯಾಹ್ನ ನೋಯ್ಡಾದ ಮಹಾ ಮಾಯಾ ಫ್ಲೈಓವರ್ ಕೆಳಗೆ ಒಟ್ಟುಗೂಡುತ್ತೇವೆ ಮತ್ತು ಹೊಸ ಕೃಷಿ ಕಾನೂನುಗಳಿಗೆ ಅನುಗುಣವಾಗಿ ಪರಿಹಾರ ಮತ್ತು ಪ್ರಯೋಜನಗಳನ್ನು ಒತ್ತಾಯಿಸಲು ಮುಂದುವರಿಯುತ್ತೇವೆ " ಎಂದು ಖಲೀಫಾ ಭಾನುವಾರ ಹೇಳಿದ್ದಾರೆ. 

Tags:    

Similar News