ಕಾಂಗ್ರೆಸ್ ನಿಂದ ವೈಚಾರಿಕ, ಜನಪರ ಪ್ರಣಾಳಿಕೆ

ಆದರೆ, ಸಿಎಎ,ಒಪಿಎಸ್‌ ಕುರಿತು ಮೌನ;

Update: 2024-04-06 08:02 GMT

ಕಾಂಗ್ರೆಸ್ ಪಕ್ಷ ಶುಕ್ರವಾರ 2024 ರ ಲೋಕಸಭೆ ಚುನಾವಣೆಗೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ಅದರ ಗುರಿಯಾಗಿದೆ ಮತ್ತು ʻಕೆಲಸ, ಸಂಪತ್ತು ಮತ್ತು ಕಲ್ಯಾಣʼದ ಮೂಲಕ ದೇಶದ ಆರ್ಥಿಕತೆಯನ್ನು ಪ್ರಚೋದಿಸುವ ಪ್ರತಿಜ್ಞೆ ಮಾಡಲಾಗಿದೆ. 

'ನ್ಯಾಯ ಪತ್ರ' (ನ್ಯಾಯಕ್ಕಾಗಿ ದಾಖಲೆ) ಶೀರ್ಷಿಕೆಯ ಪ್ರಣಾಳಿಕೆಯು 25 ಭರವಸೆಗಳನ್ನು ಪ್ರೇರಕ ಶಕ್ತಿಯಾಗಿ ಹೊಂದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಣಿಪುರದಿಂದ ಮಹಾರಾಷ್ಟ್ರಕ್ಕೆ ಭಾರತ್ ಜೋಡೋ ನ್ಯಾಯ್ ಯಾತ್ರೆ ಅವಧಿಯಲ್ಲಿ ಘೋಷಿಸಿದ್ದರು. 25 ಖಾತರಿಗಳನ್ನು ಐದು ನ್ಯಾಯದ ಆಧಾರ ಸ್ತಂಭಗಳ ಅಡಿಯಲ್ಲಿ ಸಮಾನವಾಗಿ ವಿಂಗಡಿಸಲಾಗಿದೆ; ಮಹಿಳೆಯರು (ನಾರಿ), ಯುವಜನರು (ಯುವ), ರೈತರು (ಕಿಸಾನ್), ಕಾರ್ಮಿಕರು (ಶ್ರಮಿಕ್) ಮತ್ತು ಭಾಗಿದಾರ( ಹಿಸ್ಸೆದಾರಿ)ರ ಸಮಾನ ಭಾಗವಹಿಸುವಿಕೆ. 

ಸಾಮಾಜಿಕ-ಆರ್ಥಿಕ ಜಾತಿ ಗಣತಿ, 30 ಲಕ್ಷ ಸರ್ಕಾರಿ ಖಾಲಿ ಹುದ್ದೆಗಳ ಭರ್ತಿ, ಮೀಸಲು ಮೇಲಿನ ಶೇ. 50 ಮಿತಿ ತೆಗೆದುಹಾಕುವುದು, ಶಿಷ್ಯವೇತನದೊಂದಿಗೆ ಅಪ್ರೆಂಟಿಸ್‌ಶಿಪ್ ಹಕ್ಕು ಕಾನೂನು ಜಾರಿ ಭರವಸೆಗಳನ್ನು ಒಳಗೊಂಡಿದೆ. ಬಡ ಕುಟುಂಬದ ಒಬ್ಬ ಮಹಿಳೆಗೆ ವಾರ್ಷಿಕ ಒಂದು ಲಕ್ಷ ರೂ. ಆರ್ಥಿಕ ನೆರವು, ಕನಿಷ್ಠ ಬೆಂಬಲ ಬೆಲೆ (MSP) ಖಾತ್ರಿ ಕಾಯಿದೆ, ಆರೋಗ್ಯ ಹಕ್ಕು ಮತ್ತು ನಗರ ಉದ್ಯೋಗ ಖಾತ್ರಿ ಕಾನೂನು ಮತ್ತು ಸ್ಟಾರ್ಟ್‌ ಅಪ್‌ ಗಳಿಗೆ 5,000 ಕೋಟಿ ಕಾಪು ನಿಧಿ ಸ್ಥಾಪಿಸುವುದು ಸೇರಿದೆ. 

ಪಂಚ ನ್ಯಾಯವೇ ಕೇಂದ್ರ ಬಿಂದು: 

ಪಂಚ ನ್ಯಾಯ ಭರವಸೆಗಳಿಗೆ ಕಾಂಗ್ರೆಸ್ ಹೈಕಮಾಂಡ್ ಮತ್ತು ಪಕ್ಷದ ಇತರ ಪ್ರಚಾರಕರು ಒತ್ತು ನೀಡುವ ನಿರೀಕ್ಷೆಯಿದೆ. ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಹಣದುಬ್ಬರದಿಂದ ಬಸವಳಿದ ಮತದಾರರನ್ನು ತಲುಪುತ್ತವೆ ಎಂದು ಕಾಂಗ್ರೆಸ್ ಭಾವಿಸಿದೆ.

ಪ್ರಣಾಳಿಕೆಯು ಕೆಲವು ಮೂಲಭೂತ, ಕೆಲವು ಜನಪರ ಮತ್ತು ಇತರ ಸಾಂವಿಧಾನಿಕ ಭರವಸೆಗಳನ್ನು ಹೊಂದಿದ್ದು, ಪಕ್ಷವನ್ನು ಅಧಿಕಾರಕ್ಕೆ ತಂದರೆ ಈಡೇರಿಸುವುದಾಗಿ ಹೇಳಿದೆ ಆದರೆ, ಪೌರತ್ವ ತಿದ್ದುಪಡಿ ಕಾಯಿದೆ ಅಥವಾ ಹಳೆಯ ಪಿಂಚಣಿ ಯೋಜನೆ(ಒಪಿಎಸ್) ಬಗ್ಗೆ ಗಾಢ ಮೌನ ತಳೆದಿದೆ.

ಸಿಎಎ ಬಗ್ಗೆ ಮೌನ: ವಿವಾದಾತ್ಮಕ ಸಿಎಎಯನ್ನು ರದ್ದುಪಡಿಸುತ್ತದೆಯೇ ಅಥವಾ ಸೂಕ್ತ ತಿದ್ದುಪಡಿ ಮಾಡುತ್ತದೆಯೇ ಎಂಬುದನ್ನು ಪ್ರಣಾಳಿಕೆ ವಿವರಿಸುವುದಿಲ್ಲ. ಬಂಗಾಳ, ಅಸ್ಸಾಂ ಮತ್ತು ಕೇರಳ ರಾಜ್ಯಗಳಲ್ಲಿ ಈ ಧ್ರುವೀಕರಣದ ಕಾನೂನನ್ನು ಕಾಂಗ್ರೆಸ್ ಮತ್ತು ಎಡ ಪಕ್ಷಗಳು ತೀವ್ರವಾಗಿ ಟೀಕಿಸಿವೆ. ಎರಡು ಕಾರಣಗಳಿಂದಾಗಿ ಕಾಂಗ್ರೆಸ್ ಈ ಬಗ್ಗೆ ಪ್ರಸ್ತಾಪಿಸಿಲ್ಲ.ಮೊದಲಿಗೆ, ಸಿಎಎ ಸುಪ್ರೀಂ ಕೋರ್ಟ್‌ನಲ್ಲಿದೆ. ನ್ಯಾಯಾಲಯದಲ್ಲಿರುವ ವಿಷಯದ ಬಗ್ಗೆ ಆಶ್ವಾಸನೆ ನೀಡುವುದು ಸಮರ್ಪಕವಲ್ಲ. ಎರಡನೆಯದಾಗಿ, ಸಿಎಎ ಪ್ರಸ್ತಾಪಿಸಿದಲ್ಲಿ ಕೋಮು ಧ್ರುವೀಕರಣಕ್ಕೆ ಬಿಜೆಪಿಗೆ ಮತ್ತಷ್ಟು ಪ್ರಚೋದನೆ ನೀಡಿದಂತೆ ಆಗಲಿದೆ.

ಕಾಂಗ್ರೆಸ್‌ನ ಪ್ರಣಾಳಿಕೆ ಕರಡು ಸಮಿತಿ ನೇತೃತ್ವ ವಹಿಸಿರುವ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ʻಕೇಂದ್ರ ಎನ್‌ಪಿಎಸ್ ಅನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಿದೆ. ಪರಿಶೀಲನೆ ಪೂರ್ಣಗೊಂಡ ನಂತರ ಒಪಿಎಸ್-ಎನ್‌ಪಿಎಸ್ ಕುರಿತು ಕಾಂಗ್ರೆಸ್ ತನ್ನ ನಿಲುವು ಪ್ರಕಟಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇವಿಎಂ ವಿರುದ್ಧ ಸಮತೂಕದ ನಿಲುವು: ಐದು ವರ್ಷಗಳ ಹಿಂದೆ ಪೇಪರ್ ಬ್ಯಾಲೆಟ್ ವ್ಯವಸ್ಥೆಗೆ ಮರಳಲು ಪ್ರತಿಪಾದಿಸಿದ್ದ ಕಾಂಗ್ರೆಸ್‌, ಈ ಬಾರಿ ಹೆಚ್ಚು ಸೂಕ್ಷ್ಮವಾದ ನಿಲುವು ತೆಗೆದುಕೊಂಡಿದೆ. 2024ರ ಪ್ರಣಾಳಿಕೆ ʻಇವಿಎಂನ ದಕ್ಷತೆ ಮತ್ತು ಬ್ಯಾಲೆಟ್ ಪೇಪರ್‌ನ ಪಾರದರ್ಶಕತೆಯನ್ನುಒಳಗೊಳ್ಳುವಂತೆ ಚುನಾವಣೆ ಕಾನೂನುಗಳಿಗೆ ತಿದ್ದುಪಡಿ ತರುತ್ತದೆʼ ಎಂದು ಹೇಳಿದೆ. ಇವಿಎಂ ಬಳಕೆಯನ್ನು ಕಾಂಗ್ರೆಸ್ ಬೆಂಬಲಿಸುತ್ತದೆ; ಆದರೆ, ಮತದಾರರು ʻಪರಿಶೀಲಿ ಸಬಹುದಾದ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಘಟಕದಲ್ಲಿ ಚೀಟಿಯನ್ನು ಇರಿಸಲುʼ ಅವಕಾಶ ಮಾಡಿಕೊಡುವ ಮೂಲಕ ಶೇ 100 ಮತಗಳನ್ನು ವಿವಿಪ್ಯಾಟ್‌ ಚೀಟಿಗಳಿಗೆ ಹೊಂದಿಕೆ ಮಾಡಬಹುದು ಎನ್ನುತ್ತದೆ. 

ಮುಂದಿನ ಎರಡು ತಿಂಗಳುಗಳಲ್ಲಿ ಪ್ರಚಾರ ವೇಗ ಪಡೆದುಕೊಳ್ಳಲಿದ್ದು,ಕಾಂಗ್ರೆಸ್ ನಿರ್ಣಾಯಕ ವಿಷಯಗಳ ಬಗ್ಗೆ ವಿವೇಕಯುತ ಆಯ್ಕೆಯನ್ನು ಮಾಡಿಕೊಳ್ಳಬಹುದು.

ಪ್ರಣಾಳಿಕೆ 25 ನ್ಯಾಯ ಖಾತರಿಗಳನ್ನು ದಾಟಿ ಮುಂದೆ ಹೋಗಿದೆ. ಮಾರ್ಚ್ 20 ರಂದು ಫೆಡರಲ್ ಮೊದಲ ಬಾರಿಗೆ ವರದಿ ಮಾಡಿದಂತೆ , ನ್ಯಾಯಪತ್ರಗಳು ಜಾತಿ, ಲಿಂಗ ಮತ್ತು ವರ್ಗವನ್ನು ಮೀರಿದ ವಿಶಾಲವಾದ ಕಾಳಜಿಗಳ ಬಗ್ಗೆ ಗಮನ ಹರಿಸಿದೆ. ಉದಾಹರಣೆಗೆ, ಸಂವಿಧಾನವನ್ನು ದುರ್ಬಲಗೊಳಿಸಲು ಬಿಜೆಪಿ ನಡೆಸಿದ ಪ್ರಯತ್ನಗಳು, ಕಾರ್ಯಾಂಗದ ಅತಿಕ್ರಮಣ, ನ್ಯಾಯಾಂಗ ಮತ್ತು ಇತರ ಸಾಂವಿಧಾನಿಕ ಸಂಸ್ಥೆಗಳು ಅಥವಾ ಒಕ್ಕೂಟಕ್ಕೆ ಸಂಬಂಧಿಸಿದ ಸಮಸ್ಯೆಗಳು. ಇವುಗಳಲ್ಲಿ ಪ್ರತಿಯೊಂದಕ್ಕೂ ಕಾಂಗ್ರೆಸ್ ಪ್ರಣಾಳಿಕೆ ತನ್ನದೇ ಆದ ಪರಿಹಾರಗಳನ್ನು ನೀಡುತ್ತದೆ.

ಒಕ್ಕೂಟಕ್ಕೆ ಸಂಬಂಧಿಸಿದ ಅಧ್ಯಾಯದಲ್ಲಿ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ, ಪಾಂಡಿಚೇರಿಗೆ ರಾಜ್ಯದ ಸ್ಥಾನಮಾನ, ಜಮ್ಮು ಮತ್ತು ಕಾಶ್ಮೀರದ ರಾಜ್ಯದ ಮರುಸ್ಥಾಪನೆ, ಲಡಾಖ್‌ಗೆ ಸಂವಿಧಾನದ ಆರನೇ ಪರಿಶಿಷ್ಟ ಅನ್ವಯಿಸುವುದು ಮತ್ತಿತರ ಭರವಸೆಗಳಿವೆ. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರ ಆಡಳಿತಾತ್ಮಕ ಅತಿಕ್ರಮಣ ಅಂತ್ಯಗೊಳಿಸುವ ಉಲ್ಲೇಖವಿದೆ. ಬಿಜೆಪಿ/ಎನ್‌ಡಿಎ ಸರ್ಕಾರದ ದ್ವಂದ್ವ ಸೆಸ್ ರಾಜ್ ಅಂತ್ಯಗೊಳಿಸಿ ಹೊಸ ಕಾನೂನು ಜಾರಿ ಮೂಲಕ ʻಒಟ್ಟು ತೆರಿಗೆ ಆದಾಯದಲ್ಲಿ ಕೇಂದ್ರೀಯ ಸೆಸ್ ಮತ್ತು ಹೆಚ್ಚುವರಿ ಶುಲ್ಕಗಳನ್ನು ಶೇ.5ಕ್ಕೆ ಮಿತಿಗೊಳಿಸುವ ಭರವಸೆ ನೀಡಿದೆ.

ಮತದಾರರ ಮೇಲೆ ಪರಿಣಾಮ: ಮತದಾರರ ಮೇಲೆ ನೇರ ಪರಿಣಾಮ ಬೀರುವ ಸಾಮರ್ಥ್ಯವಿರುವ ವಿಷಯಗಳ ಮೇಲೆ ಗಮನ ಹರಿಸಿದೆ. ಎಲ್ಲಾ ಶಿಕ್ಷಣ ಸಾಲಗಳ ರೈಟ್ಆಫ್ (ಮಾರ್ಚ್ 15, 2024 ರವರೆಗೆ ಪಾವತಿಸದ ಬಡ್ಡಿ ಸೇರಿದಂತೆ ಬಾಕಿ ಮೊತ್ತ), ಕೋವಿಡ್‌ ನಿಂದಾಗಿ ಏಪ್ರಿಲ್ 1, 2020 ರಿಂದ ಜೂನ್ 30, 2021 ರವರೆಗೆ ಪರೀಕ್ಷೆಗಳನ್ನು ಬರೆಯಲು ಸಾಧ್ಯವಾಗದವರಿಗೆ ಒಮ್ಮೆ ಪರಿಹಾರ, ಶಿಕ್ಷಣ ಹಕ್ಕು ಕಾಯಿದೆಗೆ ತಿದ್ದುಪಡಿ(ಸಾರ್ವಜನಿಕ ಶಾಲೆಗಳಲ್ಲಿ ಒಂದರಿಂದ ಹನ್ನೆರಡನೇ ತರಗತಿಯವರೆಗಿನ ಉಚಿತ ಶಿಕ್ಷಣ), ಕಾಲೇಜು ಮತ್ತು ಶಾಲೆ ಕ್ಯಾಂಪಸ್‌ಗಳಲ್ಲಿ ಉಚಿತ ಮತ್ತು ಅನಿಯಮಿತ ಇಂಟರ್ನೆಟ್ ಸೌಲಭ್ಯದೊಂದಿಗೆ 9 ರಿಂದ 12ನೇI ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಮೊಬೈಲ್ ಫೋನ್‌ ವಿತರಣೆ, ಬದಿಗೊತ್ತಲ್ಪಟ್ಟ ಸಮುದಾಯಗಳಿಗೆ ಮೆಟ್ರಿಕ್ ಪೂರ್ವ ಮತ್ತು ಉನ್ನತ ಶಿಕ್ಷಣ ವಿದ್ಯಾರ್ಥಿವೇತನ ಮತ್ತು ವಿದೇಶದಲ್ಲಿ ವ್ಯಾಸಂಗಕ್ಕೆ ಮೌಲಾನಾ ಆಜಾದ್ ಶಿಷ್ಯವೇತನ ಮತ್ತು 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿಭಾವಂತ ಕ್ರೀಡಾ ವ್ಯಕ್ತಿಗಳಿಗೆ ತಿಂಗಳಿಗೆ 10,000 ರೂ. ಕ್ರೀಡಾ ವಿದ್ಯಾರ್ಥಿವೇತನದ ಪರಿಚಯಿಸುವುದಾಗಿ ಹೇಳಿದೆ.

ಕ್ರೀಡಾ ಸಂಸ್ಥೆಗಳು ಮತ್ತು ಆಯ್ಕೆ: ಮಾಜಿ ಡಬ್ಲ್ಯುಎಫ್‌ಐ ಮುಖ್ಯಸ್ಥ ಮತ್ತು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಶರಣ್ ಸಿಂಗ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಾಕ್ಷಿ ಮಲಿಕ್ ಮತ್ತು ಇತರ ಮಹಿಳಾ ಕುಸ್ತಿಪಟುಗಳು ನಡೆಸಿದ ಪ್ರತಿಭಟನೆ ಇನ್ನೂ ಹಸಿರಾಗಿದೆ. ಪಕ್ಷ ಅಧಿಕಾರಕ್ಕೆ ಬಂದರೆ ಪ್ರತ್ಯೇಕ ಶಾಸನ ಜಾರಿಗೊಳಿಸಲಾಗುತ್ತದೆ. ಕ್ರೀಡಾ ಒಕ್ಕೂಟಗಳು ನೋಂದಣಿಗೆ ಒಲಿಂಪಿಕ್ ಚಾರ್ಟರ್‌ನ ಸಂಪೂರ್ಣ ಅನುಸರಣೆ ಮಾಡಬೇಕು ಮತ್ತು ತಾರತಮ್ಯ, ಪಕ್ಷಪಾತ, ಲೈಂಗಿಕ ಕಿರುಕುಳ, ನಿಂದನೆ, ಅಮಾನತು ಇತ್ಯಾದಿ ವಿರುದ್ಧ ನ್ಯಾಯ ಒದಗಿಸಬೇಕು.

ಅಗ್ನಿಪಥ್ ಯೋಜನೆ ರದ್ದು, ಜಿಎಸ್‌ಟಿ ಕಾಯಿದೆಯನ್ನು ಪುನಾರಚಿಸುವ ಸಂದರ್ಭದಲ್ಲಿ ಜಿಎಸ್ಟಿ ಯಿಂದ ಕೃಷಿ ಒಳಸುರಿಗಳನ್ನು ಹೊರತುಪಡಿಸುವುದು, ಮೋದಿ ಉಪನಾಮ ಪ್ರಕರಣದಲ್ಲಿ ಲೋಕಸಭೆಯಿಂದ ರಾಹುಲ್ ಗಾಂಧಿ ಅವರ ಅನರ್ಹತೆಗೆ ಕಾರಣವಾದ ಮಾನನಷ್ಟ ಕಾಯಿದೆ ಸೇರಿದಂತೆ ಗೋಪ್ಯತೆಯ ಹಕ್ಕುಗಳಲ್ಲಿ ಹಸ್ತಕ್ಷೇಪ ಮಾಡುವ ಅಥವಾ ನಿರ್ಬಂಧಿಸುವ ಎಲ್ಲಾ ಕಾನೂನುಗಳನ್ನು ಪರಿಶೀಲಿಸುವುದಾಗಿ ಹೇಳಿದೆ. 

ಸಂವಿಧಾನದ 10ನೇ ಪರಿಶಿಷ್ಟ (ಪಕ್ಷಾಂತರ ವಿರೋಧಿ ಕಾನೂನು)ಕ್ಕೆ ತಿದ್ದುಪಡಿ ಮಾಡುವುದಾಗಿ ಹೇಳಿದೆ. ಕಳೆದ 10 ವರ್ಷಗಳಲ್ಲಿ ಬಿಜೆಪಿ ಈ ಪರಿಶಿಷ್ಟ ಬಳಸಿಕೊಂಡು ವಿವಿಧ ಕಾಂಗ್ರೆಸ್ ಸರ್ಕಾರಗಳನ್ನು ಉರುಳಿಸಿದೆ ಮತ್ತು ವಿರೋಧ ಪಕ್ಷಗಳಿಂದ ಬಿಜೆಪಿಗೆ ಪಕ್ಷಾಂತರವನ್ನು ಸುಗಮಗೊಳಿಸಿದೆ. 

ಕಳೆದ ವರ್ಷ ಸಂಸತ್ತು ಜಾರಿಗೊಳಿಸಿದ ವಿಧಾನಸಭೆಗಳು ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 33 ಮೀಸಲು ನೀಡುವ ನಾರಿ ಶಕ್ತಿ ವಂದನ್ ಅಧಿನಿಯಮ (ಮಹಿಳಾ ಮೀಸಲು ಕಾಯಿದೆ)ವು ʻಕೆಟ್ಟ ನಿಬಂಧನೆʼ ಗಳನ್ನು ಹೊಂದಿದೆ. 2029 ರ ನಂತರ ಮೀಸಲು ಜಾರಿಗೆ ತರುತ್ತದೆ. ಈ ಕೆಟ್ಟ ನಿಬಂಧನೆಗಳನ್ನು

ತೆಗೆದುಹಾಕಲಾಗುತ್ತದೆ ಮತ್ತು ತಿದ್ದುಪಡಿ ಕಾಯ್ದೆಯನ್ನು ತಕ್ಷಣ ಜಾರಿಗೆ ತರಲಾಗುತ್ತದೆ. ಮಹಿಳೆಯರಿಗೆ 1/3 ಮೀಸಲನ್ನು 2025 ರ ವಿಧಾನಸಭೆ ಚುನಾವಣೆಗೆ ಅನ್ವಯಿಸಲಾಗುತ್ತದೆ ಎಂದು ಪ್ರಣಾಳಿಕೆ ಹೇಳಿದೆ.

ಒಳಮೀಸಲು: ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮಹಿಳೆಯರಿಗೆ ಒಳಮೀಸಲು ರೂಪಿಸುತ್ತದೆಯೇ ಎಂಬ ಬಗ್ಗೆ ಪ್ರಣಾಳಿಕೆ ಮೌನವಾಗಿದೆ. ಈ ಹಿಂದೆ ದಿ ಫೆಡರಲ್ ವರದಿ ಮಾಡಿದಂತೆ, ಪ್ರಣಾಳಿಕೆಯು ಕೆಲವು ಆಮೂಲಾಗ್ರ ನ್ಯಾಯಾಂಗ ಸುಧಾರಣೆಗಳನ್ನು ಪಟ್ಟಿ ಮಾಡಿದೆ. ಉನ್ನತ ನ್ಯಾಯಾಧೀಶರ ಆಯ್ಕೆ ಮತ್ತು ನೇಮಕಕ್ಕೆ ರಾಷ್ಟ್ರೀಯ ನ್ಯಾಯಾಂಗ ಆಯೋಗ ರಚನೆ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿನ ನ್ಯಾ ಯಾಧೀಶರನ್ನು ನೇಮಿಸುವ ಕೊಲಿಜಿಯಂ ವ್ಯವಸ್ಥೆಯ ಬದಲಾವಣೆ, ಉನ್ನತ ನ್ಯಾಯಾಂಗದಲ್ಲಿ ಮಹಿಳೆಯರು, ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಪ್ರಾತಿನಿಧ್ಯ ಹೆಚ್ಚಳದ ಭರವಸೆ ನೀಡುತ್ತದೆ. 

ಸುಪ್ರೀಂ ಕೋರ್ಟ್‌ನಲ್ಲಿ ʻಸಾಂವಿಧಾನಿಕ ನ್ಯಾಯಾಲಯʼ ಮತ್ತು ʻಅಪೀಲು ನ್ಯಾಯಾಲಯʼ ಸ್ಥಾಪನೆಯ 2019 ರ ಚುನಾವಣೆ ಭರವಸೆ ಯನ್ನು ಪ್ರಣಾಳಿಕೆ ಸಮಿತಿ ಪುನರುಜ್ಜೀವಗೊಳಿಸಿದೆ. ಏಳು ಹಿರಿಯ ನ್ಯಾಯಾಧೀಶರ ಸಾಂವಿಧಾನಿಕ ನ್ಯಾಯಾಲಯವು ಸಂವಿಧಾನದ ವ್ಯಾಖ್ಯಾನವನ್ನು ಒಳಗೊಂಡಿರುವ ಪ್ರಕರಣಗಳು ಮತ್ತು ಕಾನೂನು ಪ್ರಾಮುಖ್ಯತೆ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಇತರ ಪ್ರಕರಣಗಳನ್ನುನಿರ್ಧರಿಸುತ್ತದೆ ಹಾಗೂ ಮೂವರು ನ್ಯಾಯಮೂರ್ತಿಗಳ ಮೇಲ್ಮನವಿ ನ್ಯಾಯಾಲಯವು ಹೈಕೋರ್ಟ್ ಮತ್ತು ರಾಷ್ಟ್ರೀಯ ನ್ಯಾಯಮಂಡಳಿಗಳಿಂದ ಮೇಲ್ಮನವಿಗಳನ್ನು ಆಲಿಸುತ್ತದೆ.

ಯೋಜನಾ ಆಯೋಗದ ಪುನಃಸ್ಥಾಪನೆ, ಸಾರ್ವಜನಿಕ ಮತ್ತು ಖಾಸಗಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ವೈವಿಧ್ಯವನ್ನು ಅಳೆಯಲು, ಮೇಲ್ವಿಚಾರಣೆ ಮಾಡಲು ಮತ್ತು ಉತ್ತೇಜಿಸಲು ವೈವಿಧ್ಯತೆ ಆಯೋಗ, ಶಾಶ್ವತ ಕೃಷಿ ಹಣಕಾಸು ಆಯೋಗ ಮತ್ತು ನ್ಯಾಯಾಧೀಶರ ವಿರುದ್ಧದ ದುರ್ನಡತೆಯ ದೂರುಗಳನ್ನು ತನಿಖೆಗೆ ನ್ಯಾಯಾಂಗ ದೂರುಗಳ ಆಯೋಗದ ರಚನೆಯ ಆಶ್ವಾಸನೆ ನೀಡಿದೆ. ಜೊತೆಗೆ, ಕಲಹ ಪೀಡಿತ ಮಣಿಪುರದಲ್ಲಿ ಸಮನ್ವಯ ಆಯೋಗ ಸ್ಥಾಪಿಸುವುದಾಗಿ ಭರವಸೆ ನೀಡಿದೆ.

Tags:    

Similar News